ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಜಾತಿ ಪ್ರಮಾಣಪತ್ರ ಅಸಿಂಧು: ಚುನಾವಣೆ ಹೊಸ್ತಿಲಲ್ಲಿ ಕ್ಷೇತ್ರ ಬದಲಿಸುವ ಸಂಕಷ್ಟ

Last Updated 25 ಏಪ್ರಿಲ್ 2018, 12:58 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ರ ಜಾತಿ ಪ್ರಮಾಣಪತ್ರ ಅಸಿಂಧುಗೊಳಿಸಿ ಹೈಕೋರ್ಟ್‌ ಬುಧವಾರ ಆದೇಶ ಹೊರಡಿಸಿದ್ದು, ಚುನಾವಣೆ ಹೊಸ್ತಿಲಲ್ಲಿ ಅವರಿಗೆ ಕ್ಷೇತ್ರ ಬದಲಿಸುವ ಸಂಕಷ್ಟ ಎದುರಾಗಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಂಜುನಾಥ್‌, ತಾವು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ ಬುಡ್ಗ ಜಂಗಮ ಜಾತಿಗೆ ಸೇರಿದವರೆಂದು ಚುನಾವಣಾ ಆಯೋಗಕ್ಕೆ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದರು.

ಹಿಂದುಳಿದ ಜಾತಿಗಳ ಪಟ್ಟಿಯಲ್ಲಿನ ಬೈರಾಗಿ ಜಾತಿಯ ಮಂಜುನಾಥ್‌ ಚುನಾವಣಾ ಆಯೋಗಕ್ಕೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಅವರ ಪ್ರತಿಸ್ಪರ್ಧಿ ಜೆಡಿಎಸ್‌ನ ಮುನಿಆಂಜಿನಪ್ಪ ತಹಶೀಲ್ದಾರ್‌ಗೆ ದೂರು ಕೊಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ತಹಶೀಲ್ದಾರ್‌, ಮಂಜುನಾಥ್‌ ಅವರು ಬುಡ್ಗ ಜಂಗಮ ಜಾತಿಗೆ ಸೇರಿಲ್ಲವೆಂದು ಜಾತಿ ಪ್ರಮಾಣಪತ್ರ ರದ್ದುಪಡಿಸಿದ್ದರು. ತಹಶೀಲ್ದಾರ್‌ ಕ್ರಮವನ್ನು ಪ್ರಶ್ನಿಸಿ ಮಂಜುನಾಥ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಐದು ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ ಬುಧವಾರಕ್ಕೆ (ಏ.25) ಅಂತಿಮ ಆದೇಶ ಕಾಯ್ದಿರಿಸಿತ್ತು. ನ್ಯಾಯಾಲಯದಲ್ಲಿ ವ್ಯತಿರಿಕ್ತ ಆದೇಶ ಬಂದರೆ ನಾಮಪತ್ರ ತಿರಸ್ಕೃತವಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕೈತಪ್ಪುತ್ತದೆ ಎಂಬ ಕಾರಣಕ್ಕೆ ಮಂಜುನಾಥ್‌, ಕೋಲಾರ ಸಾಮಾನ್ಯ ಕ್ಷೇತ್ರದಲ್ಲಿ ಮಂಗಳವಾರ (ಏ.24) ಕೊನೆ ಕ್ಷಣದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು.

ಮುಳಬಾಗಿಲು ಕ್ಷೇತ್ರದಲ್ಲಿನ ಬೇರೆ ಪಕ್ಷಗಳ ಅಭ್ಯರ್ಥಿಗಳು ಬುಧವಾರ ನಾಮಪತ್ರ ಪರಿಶೀಲನೆ ವೇಳೆ ಹೈಕೋರ್ಟ್‌ ಆದೇಶ ಪ್ರಸ್ತಾಪಿಸಿ ಮಂಜುನಾಥ್‌ರ ಜಾತಿ ಪ್ರಮಾಣಪತ್ರದ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದು, ಚುನಾವಣಾಧಿಕಾರಿಯು ನಾಮಪತ್ರ ಅಂಗೀಕಾರಕ್ಕೆ ಸಂಬಂಧಿಸಿದ ನಿರ್ಣಯವನ್ನು ಗುರುವಾರಕ್ಕೆ (ಏ.26) ಕಾಯ್ದಿರಿಸಿದ್ದಾರೆ.

ಇತ್ತ ಕೋಲಾರ ಕ್ಷೇತ್ರದಲ್ಲಿ ನಾಮಪತ್ರ ಊರ್ಜಿತವಾಗಿದೆ. ಮಂಜುನಾಥ್‌, ಮುಳಬಾಗಿಲಿನಲ್ಲಿ ನಾಮಪತ್ರ ತಿರಸ್ಕೃತವಾದರೆ ಕೋಲಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT