ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪಂಪ್‌ಸೆಟ್‌ಗಳಿಗೆ 12ಗಂಟೆ ಉಚಿತ ವಿದ್ಯುತ್

ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ
Last Updated 25 ಏಪ್ರಿಲ್ 2018, 13:32 IST
ಅಕ್ಷರ ಗಾತ್ರ

ಯಾದಗಿರಿ: ‘ಇನ್ನು 18 ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಿಮ್ಮ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಅಧಿಕಾರ ಹಿಡಿದ ಮೊದಲ ದಿನ ಇಡೀ ರಾಜ್ಯದ ರೈತರ ಪಂಪ್‌ಸೆಟ್‌ಗಳಿಗೆ 12 ಗಂಟೆ ನಿರಂತರ ಉಚಿತ ವಿದ್ಯುತ್‌ ಪೂರೈಸುವ ಮಹತ್ವದ ಯೋಜನೆಯನ್ನು ಘೋಷಿಸುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಇಲ್ಲಿನ ಮುದ್ನಾಳ ಲೇಔಟ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಯಾದಗಿರಿ ಜಿಲ್ಲೆ ಘೋಷಣೆ ಮಾಡಿದವರು ನಿಮ್ಮ ಯಡಿಯೂರಪ್ಪ. ‘ವಡಗೇರಾ’ ನೂತನ ತಾಲ್ಲೂಕು ಘೋಷಣೆ ಮಾಡಿದವರು ಬಿಜೆಪಿಯ ಜಗದೀಶ್ ಶೆಟ್ಟರ್. ಎಲ್ಲವನ್ನೂ ಬಿಜೆಪಿಯೇ ಮಾಡಿದೆ. ಕಾಂಗ್ರೆಸ್‌ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ನಾವು ರಚಿಸಿರುವ ಯಾದಗಿರಿ ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯಾಗಬೇಕು. ಅದಕ್ಕಾಗಿ ಅಧಿಕಾರಕ್ಕೆ ಬಂದ ತಕ್ಷಣ ಇಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ ಮೊದಲ ಕಂತಿನಲ್ಲಿ ₹100 ಕೋಟಿ ಅನುದಾನ ಒದಗಿಸುತ್ತೇನೆ’ ಎಂದು ಆಶ್ವಾಸನೆ ನೀಡಿದರು.

‘ರಾಜ್ಯದ ಜನರ ಮೇಲೆ ಕಾಂಗ್ರೆಸ್‌ನ ಸಿದ್ದರಾಮಯ್ಯ ₹2.50 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ರಾಜ್ಯದ ಉದ್ದಗಲಕ್ಕೂ 3,800 ರೈತರು ಆತ್ಮಹತ್ಯೆ, 24 ಯುವಕರ ಕಗ್ಗೊಲೆ ಆದರೂ ಕಾಂಗ್ರೆಸ್‌ ನ್ಯಾಯ ಒದಗಿಸಿಲ್ಲ. ಸೂಕ್ತ ತನಿಖೆಗೆ ಆದೇಶಿಸಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ ಪರ್ಸೆಂಟೇಜ್ ಸರ್ಕಾರ ಅಂತಲೇ ಹೆಸರು ಮಾಡಿದೆ. ಮಠಗಳನ್ನು ನಿಯಂತ್ರಿಸಲು ಹುನ್ನಾರ ಕೂಡ ಸಿದ್ದರಾಮಯ್ಯ ನಡೆಸಿದ್ದರು’ ಎಂದು ಯಡಿಯೂರಪ್ಪ ಆರೋಪಿಸಿದರು.

‘ಐದು ವರ್ಷಗಳಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಾಂಗ್ರೆಸ್ ಸರ್ಕಾರ ₹4,012 ಕೋಟಿ ನೀಡಿದೆ. ಆದರೆ, ಖರ್ಚು ಮಾಡಿದ್ದು ಒಂದು ಸಾವಿರ ಕೋಟಿ ಮಾತ್ರ. ನೀರಾವರಿ ಅಭಿವೃದ್ಧಿ ಪ್ರತಿವರ್ಷ ₹10 ಸಾವಿರ ಕೋಟಿ ನಿಗದಿಪಡಿದಿದ್ದರೂ, ಮಾಡಿದ್ದು ಮಾತ್ರ ₹4 ಸಾವಿರ ಕೋಟಿ ಮಾತ್ರ. ನಿಗದಿತ ಅನುದಾನವನ್ನೇ ಖರ್ಚು ಮಾಡದ ಸರ್ಕಾರ ಜನರ ನಂಬಿಕೆ ಕಳೆದುಕೊಂಡಿದೆ’ ಎಂದರು.

‘ರಾಜ್ಯದಲ್ಲಿ ನೀರಾವರಿ ಅಭಿವೃದ್ಧಿಗೆ ₹1ಲಕ್ಷ ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ಮೀಸಲಿಡಲು ಚಿಂತನೆ ನಡೆಸಿದೆ. ₹5 ಸಾವಿರ ಕೋಟಿ ಆವರ್ತ ನಿಧಿ ತೆಗೆದಿರಿಸಿ ರೈತರ ಸಂಕಷ್ಟಗಳ ದಿನಗಳಲ್ಲಿ ಬೆಂಬಲ ಬೆಲೆ ನೀಡುವಂತಹ ಯೋಜನೆಯನ್ನು ಜಾರಿಗೊಳಿಸಲಾಗುವುದು. ಹತ್ತಿ ಮಾರುಕಟ್ಟೆ, ಶಾಶ್ವತ ತೊಗರಿ ಖರೀದಿ ಕೇಂದ್ರ ಸ್ಥಾಪಿಸಲಾಗುವುದು’ ಎಂದು ಹೇಳಿದರು.

‘ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ಗೂಂಡಾಗಿರಿಯನ್ನು ಪ್ರೋತ್ಸಾಹಿಸುತ್ತಿದೆ. ಇಲ್ಲಿನ  ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅವರ ಪತ್ನಿ ಮೇಲೆ ಹಲ್ಲೆ ನಡೆದಿರುವುದು ಕಾಂಗ್ರೆಸ್‌ನ ಗೂಂಡಾಗಿರಿಗೆ ಸಾಕ್ಷಿಯಾಗಿದೆ. ಪೊಲೀಸರ ನಿಷ್ಕ್ರಿಯತೆಗೆ ಕಾಂಗ್ರೆಸ್‌ ಸರ್ಕಾರ ಕಾರಣವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗುವುದು’ ಎಂದರು.

ಯಾದಗಿರಿ ಮತಕ್ಷೇತ್ರದ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ,‘ನಿರಂತರ ಅಧಿಕಾರ ಹಿಡಿಯುತ್ತಾ ಬಂದಿರುವ ಡಾ.ಎ.ಬಿ.ಮಾಲಕರಡ್ಡಿ ರಾಜಕೀಯ ನಿವೃತ್ತಿ ಘೋಷಿಸಿ ನಂತರ ಅಧಿಕಾರ ಬಿಡಲಾಗದೇ ಈಗ ದಿಢೀರ್ ಗಾಂಧಿ ಟೋಪಿ ಹಾಕಿಕೊಂಡು ಓಡಾಡುತ್ತಿದ್ದಾರೆ. ಗಾಂಧಿ ಟೋಪಿ ಹಾಕಿದ ತಕ್ಷಣ ಮನುಷ್ಯ ಸಂಭಾವಿತ ಎಂದು ಜನರು ಭಾವಿಸುತ್ತಾರೆ ಎಂಬ ಭ್ರಮೆಯಲ್ಲಿ ಮಾಲಕರಡ್ಡಿ ಇದ್ದಾರೆ’ ಎಂದು ಟೀಕಿಸಿದರು.

‘ಮಾಲಕರಡ್ಡಿ ತಮ್ಮ ಪುತ್ರ ಶಶಿಧರನ ಹೆಸರಿನಲ್ಲಿ ಬಡಾವಣೆ ಮಾಡಿದ್ದಾರೆ. ಆದರೆ, ಆ ಕಾಲೊನಿ ಕನಿಷ್ಠ ಮೂಸೌಲಭ್ಯ ಇಲ್ಲದೆ ನರಳುತ್ತಿದೆ. ಪುತ್ರನ ಹೆಸರಿನಲ್ಲಿ ಮಾಡಿರುವ ಬಡಾವಣೆಗೆ ಕನಿಷ್ಠ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲದವರು ಮತಕ್ಷೇತ್ರವನ್ನು ಹೇಗೆ ಅಭಿವೃದ್ಧಿಗೊಳಿಸಲು ಸಾಧ್ಯ. ಹಾಗಾಗಿ, ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಅವರು ಮನವಿ ಮಾಡಿದರು.

ಮಾಲೀಕಯ್ಯ ಗುತ್ತೇದಾರ, ಕೆ.ಪಿ.ನಂಜುಂಡಿ, ಬಿಜೆಪಿ ಜಿಲ್ಲಾ ಘಟಕದ ಉಸ್ತುವಾರಿ ಶಂಕ್ರಪ್ಪ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಗುರುಮಠಕಲ್‌ ಬಿಜೆಪಿ ಅಭ್ಯರ್ಥಿ ಸಾಯಿಬಣ್ಣ ಬೋರಬಂಡಾ, ಡಾ.ವೀರಬಸಂತರೆಡ್ಡಿ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಲಲಿತಾ ಅನಪೂರ, ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ್  ಇದ್ದರು.

‘ಶರಣಭೂಪಾಲರೆಡ್ಡಿಗೆ ಸೂಕ್ತ ಸ್ಥಾನಮಾನ’

ಬಿ.ಎಸ್‌.ಯಡಿಯೂರಪ್ಪ ಹೆಲಿಪ್ಯಾಡ್‌ ನಿಂದ ನೇರವಾಗಿ ಯಾದಗಿರಿ ಮತಕ್ಷೇತ್ರದ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಡಾ.ಶರಣಭೂಪಾಲರೆಡ್ಡಿ ಅವರ ಮನೆಗೆ ಭೇಟಿ ನೀಡಿ ಸಂತೈಸಿದರು. ಡಾ.ಶರಣಭೂಪಾಲರೆಡ್ಡಿ, ಪತ್ನಿ ಜತೆಗೆ ಚರ್ಚಿಸಿದ ಯಡಿಯೂರಪ್ಪ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದರು.

ಸಿ.ಎಂಗೆ ಇಂತಹ ಸ್ಥಿತಿ ಬರಬಾರದಿತ್ತು: ಬಿಎಸ್‌ವೈ

ಯಾದಗಿರಿ: ‘ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರಕ್ಕಾಗಿ ಅಲೆದಾಡುವಂತಹ ಪರಿಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿ ಐದು ವರ್ಷ ಅಧಿಕಾರ ನಡೆಸಿದ ಯಾವ ಮುಖ್ಯಮಂತ್ರಿಗೂ ಬಂದಿರಲಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗೇಲಿ ಮಾಡಿದರು.ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರಿಗೆ ಜನ ತಿರಸ್ಕರಿಸುತ್ತಾರೆ ಎಂಬ ಭಯವಿದೆ. ಹಾಗಾಗಿ, ಸುರಕ್ಷಿತ ಕ್ಷೇತ್ರ ಹುಡುಕಿ ಕೊನೆಗೆ ಬಾದಾಮಿಗೆ ಹೋಗಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಹೋದರೆ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಕಾರಿನಲ್ಲಿ ಹೋಗಿದ್ದಾರೆ. ಅದರ ಸುಳಿವು ತಿಳಿದ ನಾವು ಬಿ.ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದ್ದೇವೆ. ಸಿದ್ದರಾಮಯ್ಯಗೆ ಎರಡೂ ಕಡೆ ಸೋಲು ಖಚಿತ’ ಎಂದರು.

ನಿರಾಸೆ ತಂದಿಲ್ಲ: ‘ವರುಣಾ ಕ್ಷೇತ್ರದಲ್ಲಿ ಮಗನಿಗೆ ಟಿಕೆಟ್ ಕೈತಪ್ಪಿರುವುದಕ್ಕೆ ನನಗಾಗಲಿ, ವಿಜಯೇಂದ್ರನಿಗಾಗಲಿ ನಿರಾಸೆ ಆಗಿಲ್ಲ. ಹೈಕಮಾಂಡ್ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಮೂಲಕ ರಾಜ್ಯ ಮಟ್ಟದ ಜವಾಬ್ದಾರಿಯನ್ನು ವಹಿಸಿದೆ’ ಎಂದು ಹೇಳಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT