ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಸರ್ಕಾರದಲ್ಲೂ ಜೈಲಿಗೆ ಹೋಗಬೇಕಾದವರಿದ್ದಾರೆ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬಿಜೆಪಿ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಾರೆ. ಆದರೆ, ಅವರ ಸರ್ಕಾರದಲ್ಲೂ ಭ್ರಷ್ಟಾಚಾರ ಪ್ರಕರಣಗಳು ನಡೆದಿವೆ. ಸರಿಯಾಗಿ ತನಿಖೆ ನಡೆದಿದ್ದರೆ ಅವರ ಸರ್ಕಾರದ ಕೆಲವರು ಜೈಲಿಗೆ ಹೋಗುತ್ತಿದ್ದರು. ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಮೂಲಕ ಭ್ರಷ್ಟಾಚಾರವನ್ನು ಪೋಷಿಸಿದ್ದಾರೆ ಎಂದು ಕೇಂದ್ರ ಅಂಕಿ-ಸಂಖ್ಯೆ ಮತ್ತು ಕಾರ್ಯಕ್ರಮಗಳ ಜಾರಿ ಸಚಿವ ಡಿ.ವಿ.ಸದಾನಂದ ಗೌಡ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

l ‘ಮಿಷನ್ 150’ ಗುರಿ ಅತಿಶಯೋಕ್ತಿ ಎನಿಸದೇ? ಈ ಸಂಖ್ಯೆಯ ಗುರಿ ಮುಟ್ಟಲು ಎಷ್ಟು ದೂರ ಕ್ರಮಿಸಿದ್ದೀರಿ?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಮಿಷನ್ 150’ ಗುರಿ ನಿಗದಿ ಮಾಡುವ ಮೂಲಕ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರಲ್ಲಿ ಚೈತನ್ಯ ಮೂಡಿಸಿದ್ದಾರೆ. ಸಂಘಟನೆಯ ಬಲವೇ ಪಕ್ಷಕ್ಕಿರುವ ಅದಮ್ಯ ಶಕ್ತಿ. ದಿಲ್ಲಿ, ಬಿಹಾರದ ಚುನಾವಣೆಗಳಲ್ಲಿ ನಾವು ಸೋತ ಬಳಿಕ, ಕೇಡರ್ ಬಳಕೆಯನ್ನು ಹೆಚ್ಚು ಸುವ್ಯವಸ್ಥಿತಗೊಳಿಸಿದೆವು. ಉತ್ತರ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಗುಜರಾತ್, ತ್ರಿಪುರಾದಲ್ಲಿ ಅದ್ಭುತ ಗೆಲುವಿಗೆ ಕೇಡರ್‌ನ ಪರಿಣಾಮಕಾರಿ ಬಳಕೆಯೇ ಕಾರಣ. ರಾಜ್ಯದಲ್ಲೂ ಆರು ತಿಂಗಳಿಂದ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆ ಬಲಪಡಿಸಲಾಗಿದೆ. ಈ ಕಾರ್ಯಕರ್ತರು ಮನೆ-ಮನೆಯಲ್ಲಿರುವ ಮತದಾರರ ಮನವೊಲಿಸಿದ್ದಾರೆ. ಹೀಗಾಗಿ ‘ಮಿಷನ್ 150’ ಗುರಿ ಮೂಲಕ ಅಧಿಕಾರ ಹಿಡಿಯುವುದು ನಿಶ್ಚಿತ.

l ಜನರ ಒಲವು ಬಿಜೆಪಿ ಪರ ವ್ಯಕ್ತವಾಗುತ್ತಿಲ್ಲ ಎಂಬ ಮಾತಿದೆ. ಪರಿಸ್ಥಿತಿ ಹೀಗಿರುವಾಗ ಜನ ಬಿಜೆಪಿ ಜತೆಗೆ ಇದ್ದಾರೆ ಎಂದು ಹೇಗೆ ಹೇಳುತ್ತೀರಿ?

ಹಿಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮೂರು ಹೋಳಾಗಿತ್ತು. ಪಕ್ಷದ ಶಕ್ತಿ ಹಂಚಿ ಹೋಗಿತ್ತು. ಪರಸ್ಪರ ದ್ವೇಷ ಮಾಡುವ ಸ್ಥಿತಿಯಲ್ಲಿದ್ದೆವು. ಆದರೆ, 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷವನ್ನು ಒಗ್ಗೂಡಿಸುವ ಕೆಲಸ ಆಯಿತು. ಈಗ ಬೇರು ಮಟ್ಟದಲ್ಲಿ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡುವ ಶಕ್ತಿ ಸಂಚಯವಾಗಿದೆ. ರಾಜ್ಯದಲ್ಲಿ ನಾಯಕರ ಮಟ್ಟದಲ್ಲಿದ್ದ ವ್ಯತ್ಯಾಸಗ
ಳನ್ನು ಕೇಂದ್ರ ನಾಯಕತ್ವ ಸರಿಪಡಿಸಿದೆ. ಇವೆಲ್ಲದರ ಫಲವಾಗಿ, ರಾಜ್ಯ ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಚೈತನ್ಯ ಪುಟಿದೆದ್ದಿದೆ. ನಮ್ಮ ಶಾಸಕರು ಇಲ್ಲದ ಕಡೆಗಳಲ್ಲೂ, ನಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ 10ರಿಂದ 15 ಸಾವಿರ ಕಾರ್ಯಕರ್ತರು ಸೇರಿದ್ದರು. ಸಂಘಟನೆಗೆ ಹೊಸತನದ ಸ್ಪರ್ಶ ಸಿಕ್ಕಿರುವುದೇ ಇದಕ್ಕೆ ಕಾರಣ.

l ಪಕ್ಷದಲ್ಲಿ ಈಗಲೂ ಒಮ್ಮತ ಕಾಣುತ್ತಿಲ್ಲ. ಎದುರಿಗೆ ಒಗ್ಗಟ್ಟು ಪ್ರದರ್ಶಿಸಿದರೂ ಒಳಗೆ ಎಲ್ಲವೂ ಸರಿ ಇಲ್ಲ ಎಂಬ ಭಾವನೆ ಇದೆ. ಎಲ್ಲದಕ್ಕೂ ಕೇಂದ್ರ ನಾಯಕರನ್ನೇ ಅವಲಂಬಿಸಿದಂತಿದೆ?

ಸ್ವಲ್ಪ ಸಮಸ್ಯೆ ಇದ್ದದ್ದು ನಿಜ. ಹಿಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದ್ದರಿಂದ ಮತ್ತು ಬೇರೆ ಕಾರಣಗಳಿಂದಾಗಿ ರಾಜ್ಯ ನಾಯಕತ್ವ ಹಿನ್ನಡೆ ಅನುಭವಿಸಿತ್ತು. ಈ ಹಿನ್ನಡೆಯಿಂದ ಮುಸುಕಿದ್ದ ಸಂಕಟದ ಕಾರ್ಮೋಡ ಈಗ ದೂರ ಸರಿದಿದೆ. ನಮ್ಮ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು ಆಗಿ ಹೋಗಿದ್ದು ನಿಜ. ಆದರೆ, ಸಿದ್ದರಾಮಯ್ಯ ಅವಧಿಯ ಕೆಲಸಗಳಿಗೆ ಹೋಲಿಸಿದರೆ, ಬಿಜೆಪಿ ಅವಧಿಯಲ್ಲಿ ನೂರು ಪಾಲು ಜನಪರ ಕೆಲಸಗಳು ಆಗಿವೆ. ಇದು ನಮ್ಮ ನಾಯಕತ್ವದ ಪರವಾಗಿ ಇರುವ ಉತ್ತಮ ಅಂಶಗಳು. ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಬರುವುದರಿಂದ ಶೇ 7ರಿಂದ 8ರಷ್ಟು ಮತಗಳು ಬಿಜೆಪಿ ಪರವಾಗಿ ಸ್ವಿಂಗ್ ಆಗುತ್ತವೆ. ಇದರ ಪರಿಣಾಮ 40ರಿಂದ 50 ವಿಧಾನಸಭಾ ಕ್ಷೇತ್ರಗಳ ಮೇಲೆ ಆಗುತ್ತದೆ. ನಮ್ಮಲ್ಲಿ ಒಗ್ಗಟ್ಟು ಇದೆ. ಕೇಂದ್ರ ನಾಯಕರ ಮಾರ್ಗದರ್ಶನ
ದಲ್ಲೇ ನಡೆಯುತ್ತಿದ್ದೇವೆ.

l ಭ್ರಷ್ಟಾಚಾರದ ಆರೋಪ ಹೊತ್ತವರು ಮತ್ತು ಕಳಂಕಿತರನ್ನು ಇಟ್ಟುಕೊಂಡು ಹೇಗೆ ಚುನಾವಣೆ ಎದುರಿಸುತ್ತೀರಿ?

ನಮ್ಮ ಅವಧಿಯಲ್ಲಿ ಕೆಲವರ ಮೇಲೆ ಭ್ರಷ್ಟಾಚಾರದ ಆರೋಪಗಳು ಇದ್ದದ್ದು ನಿಜ. ಆದರೆ, ಅವು ರಾಜಕೀಯ ಪ್ರೇರಿತ ಆರೋಪಗಳು ಎನ್ನುವುದನ್ನು ನ್ಯಾಯಾಲಯಗಳೇ ತೀರ್ಮಾನ ಮಾಡಿವೆ. ನ್ಯಾಯಾಲಯಗಳು ನಿರಪರಾಧಿ ಎಂದು ತೀರ್ಪು ನೀಡಿದ ಮೇಲೂ ಅದೇ ಪ್ರಶ್ನೆಗಳನ್ನು ಕೆದಕುವುದರಲ್ಲಿ ಅರ್ಥ ಇಲ್ಲ. ಇನ್ನೊಂದು ಮುಖ್ಯವಾದ ಅಂಶವೆಂದರೆ, ನಮ್ಮ ಅವಧಿಯಲ್ಲಿ ಲೋಕಾಯುಕ್ತವನ್ನು ನಿಷ್ಕ್ರಿಯ
ಗೊಳಿಸಿರಲಿಲ್ಲ. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿ ಮೂಲೆಗುಂಪು ಮಾಡಿತು. ನ್ಯಾಯಾಂಗದಲ್ಲೂ ಹಸ್ತಕ್ಷೇಪ ಮಾಡಿತು. ಸರ್ಕಾರದ ಮೇಲೆ ಬರುವ ಭ್ರಷ್ಟಾಚಾರದ ಆರೋಪಗಳನ್ನು ಕಸದ ಬುಟ್ಟಿಗೆ ಎಸೆಯುವ ಉದ್ದೇಶಕ್ಕಾಗಿ ಎಸಿಬಿಯನ್ನು ರಚಿಸಿತು. ಅಷ್ಟೇ ಅಲ್ಲ, ರಾಜಕೀಯ ವಿರೋಧಿಗಳನ್ನು ಬಗ್ಗು ಬಡಿಯಲು ಇದನ್ನು ಬಳಸಿಕೊಂಡಿತು. ಭ್ರಷ್ಟಾಚಾರ ಕುರಿತ ಯಾವುದೇ ದೂರುಗಳು ಪ್ರಾಮಾಣಿಕವಾಗಿ ತನಿಖೆಗೆ ಒಳಪಡಲಿಲ್ಲ.

l ಚುನಾವಣೆಯಲ್ಲಿ ರಾಜ್ಯದ ನೈಜ ವಿಷಯಗಳೇ ಮರೆಯಾಗಿವೆ, ಆರೋಪ- ಪ್ರತ್ಯಾರೋಪಗಳೇ ಮುನ್ನೆಲೆಗೆ ಬಂದಿವೆಯಲ್ಲ?

ಚುನಾವಣೆಯಲ್ಲಿ ಆರೋಪ- ಪ್ರತ್ಯಾರೋಪಗಳೇ ಪ್ರಧಾನವಾಗಬಾರದು. ವಿಷಯಗಳ ಆಧಾರದಲ್ಲಿ ಚುನಾವಣೆ ನಡೆಯಬೇಕು. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿಯವರು 436 ಸಭೆಗಳನ್ನು ಮಾಡಿದ್ದರು. ಅವುಗಳಲ್ಲಿ ಯುಪಿಎ ಸರ್ಕಾರದ ವೈಫಲ್ಯ ಮತ್ತು ಭ್ರಷ್ಟಾಚಾರದ ವಿಷಯಗಳೇ ಪ್ರಧಾನವಾಗಿದ್ದವು.

l ಚುನಾವಣೆಯಲ್ಲಿ ಹಿಂದುತ್ವದ ಪ್ರತಿಪಾದನೆ ಎಷ್ಟರ ಮಟ್ಟಿಗೆ ಸರಿ?

ಬಹುಸಂಖ್ಯಾತರ ಮೇಲೆ ಸವಾರಿ ಮತ್ತು ಅಲ್ಪಸಂಖ್ಯಾತರ ಓಲೈಕೆ ನೀತಿ ಸರಿಯಲ್ಲ. ಬಹುಸಂಖ್ಯಾತರಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣ ಆಗಿದೆ. ಈ ವಿಷಯವನ್ನು ಪ್ರಸ್ತಾಪಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಹಿಂದುತ್ವ ಪ್ರತಿಪಾದನೆ ಮಾಡುವಾಗ ಹೆಚ್ಚು ಜವಾಬ್ದಾರಿಯಿಂದ ಶಬ್ದಗಳನ್ನು ಬಳಕೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT