ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ನೌಕರಿ: ಕನಸಿಗೆ ಕತ್ತರಿ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

* ಮಿರಿಯಮ್ ಜೋರ್ಡಾನ್

ದೀಪಿಕಾ ಜಳಕಮ್ ಏಳು ವರ್ಷಗಳ ಕಾಲ ನೌಕರಿಯಿಲ್ಲದೆ ಮನೆಯಲ್ಲಿ ಕುಳಿತಿದ್ದರು. ಬೇಸರ ಮತ್ತು ಅತೃಪ್ತಿ ಅವರನ್ನು ಕಾಡುತ್ತಿತ್ತು. ಸಣ್ಣಪುಟ್ಟ ಅಗತ್ಯಕ್ಕೂ ಗಂಡನ ಮೇಲೆ ಅವಲಂಬನೆ ಅನಿವಾರ್ಯವಾಗಿತ್ತು. ತನ್ನ ವೃತ್ತಿಜೀವನದ ಆಸೆ ಛಿದ್ರಗೊಂಡಿದ್ದಕ್ಕೆ, ‘ಅವಕಾಶಗಳ ನಾಡು’ ಅಮೆರಿಕದಲ್ಲಿ ಪರಿತಪಿಸುವ ಪರಿಸ್ಥಿತಿ ಅವರದ್ದಾಗಿತ್ತು.

ಆದರೆ 2015ರಲ್ಲಿ ಇ-ಮೇಲ್ ಮೂಲಕ ನೇಮಕಾತಿ ಪತ್ರ ಬಂದಾಗ, ಜಳಕಮ್ ಅವರಿಗೆ ‘ಭಾಗ್ಯ’ವೇ ಅರಸಿ ಮನೆ ಬಾಗಿಲಿಗೆ ಬಂದಂತಾಯಿತು. ಅದೃಷ್ಟವೆಂಬುದು ಹೀಗೆ ಅನಿರೀಕ್ಷಿತವಾಗಿ ಬಂದಾಗ ಎಲ್ಲರೂ ಏನು ಮಾಡುತ್ತಾರೋ ಅವರೂ ಹಾಗೆಯೇ ಮಾಡಿದರು: ತಮ್ಮ ಅಡುಗೆ ಮನೆಯಲ್ಲಿನ ದೇವರ ಮೂರ್ತಿಗಳ ಸನ್ನಿಧಿಗೆ ತಂದು ಆ ಪತ್ರವನ್ನು ಇರಿಸಿದರು. ಅದಕ್ಕೆ ಕುಂಕುಮದ ಬೊಟ್ಟು ಇಟ್ಟು ಧನ್ಯತೆಯಿಂದ ಪ್ರಾರ್ಥನೆ ಸಲ್ಲಿಸಿದರು.

ಜೈವಿಕ ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದ ಜಳಕಮ್ ಅವರಿಗೆ ಕೆಲವೇ ವಾರಗಳಲ್ಲಿ ವಿಮಾ ಕಂಪನಿಗಳಲ್ಲಿ ಅನಲೈಸರ್ (ವಿಶ್ಲೇಷಕಿ) ಆಗಿ ನೌಕರಿ ಸಿಕ್ಕಿತು. ಆನಂತರ ಆಕೆ ಮತ್ತು ಆಕೆಯ ಪತಿಯಾದ ಸಾಫ್ಟ್‌ವೇರ್‌ ಎಂಜಿನಿಯರ್ ವಿನಯಕುಮಾರ್ ಸೇರಿ ಮನೆಯೊಂದನ್ನು ಖರೀದಿಸಿದರು. ಈ ಭಾರತೀಯ ವಲಸೆ ದಂಪತಿಯ ಆರ್ಥಿಕ ಸ್ಥಿತಿಗೆ ಭದ್ರತೆ ಇತ್ತಾದ್ದರಿಂದ 2017ರಲ್ಲಿ ಅವರು ಎರಡನೆಯ ಮಗು ಮಾಡಿಕೊಳ್ಳುವ ನಿರ್ಧಾರ ತಳೆದರು.

ಜಳಕಮ್ ದಂಪತಿಯ ಈ ಎಲ್ಲಾ ಯೋಜನೆ ಈಗ ಅತಂತ್ರಗೊಂಡಿದೆ. ಜಳಕಮ್ ಅವರಂತೆಯೇ ಕೌಶಲಪೂರ್ಣ ನೌಕರರ ಸಾವಿರಾರು ಬಾಳ ಸಂಗಾತಿಗಳಿಗೆ ನೀಡಲಾಗಿರುವ ವಿಶೇಷ ಉದ್ಯೋಗ ಪರವಾನಗಿಗಳನ್ನು ರದ್ದುಗೊಳಿಸುವ ಸಂದೇಶವನ್ನು ಅಲ್ಲಿನ ಆಡಳಿತ ರವಾನಿಸಿದೆ.

ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತವು ಕುಶಲಿಗ ಉದ್ಯೋಗಿಗಳ ಸಂಗಾತಿಗಳಿಗೆ ನೌಕರಿ ನೀಡಲು ಅವಕಾಶ ಕಲ್ಪಿಸುವ ಯೋಜನೆ ಜಾರಿಗೊಳಿಸಿತ್ತು. ಈ ಕುಶಲಿಗರಿಗೆ ನೀಡಲಾಗಿರುವ ಎಚ್-1ಬಿ ವೀಸಾಗಳನ್ನು ಕಡಿತಗೊಳಿಸುವುದಾಗಿ ಈಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಆಡಳಿತವು ಕೆಲವು ತಿಂಗಳುಗಳ ಹಿಂದೆಯೇ ಪ್ರಕಟಿಸಿತ್ತು. ಈಗ ಮುಂಬರುವ ಜೂನ್ ತಿಂಗಳಿನಲ್ಲಿ ಹೊಸ ನೀತಿ ಜಾರಿಗೊಳ್ಳುವ ನಿರೀಕ್ಷೆ ಇದೆ. ಇದರಿಂದಾಗಿ ಬಲು ಮುಖ್ಯವಾಗಿ, ತಮ್ಮ ಗಂಡಂದಿರ ಜತೆ ಅಮೆರಿಕಕ್ಕೆ ತೆರಳಿರುವ ಉನ್ನತ ಶಿಕ್ಷಣ ಹಾಗೂ ಅಪೇಕ್ಷಿತ ಕೌಶಲಗಳಿಂದ ಕೂಡಿದ ಭಾರತದ ಸಹಸ್ರಾರು ಮಹಿಳೆಯರು ತಮ್ಮ ಉದ್ಯೋಗಗಳನ್ನು ತೊರೆಯಬೇಕಾಗುತ್ತದೆ.
ಎಚ್1ಬಿ ವೀಸಾ ಮೇಲಿನ ಕಠಿಣ ಕ್ರಮವು ನಿರೀಕ್ಷೆಗೂ ಮೀರಿ ದುಷ್ಪರಿಣಾಮ ಬೀರುವುದರಿಂದ, ಅಮೆರಿಕದಾದ್ಯಂತ ಇರುವ ಸಹಸ್ರಾರು ಭಾರತೀಯ ಮೂಲದ ಕುಟುಂಬಗಳು ಇಂತಹ ಸಂಕಷ್ಟಕ್ಕೆ ಸಿಲುಕಿವೆ.

ಒಂದೆಡೆ ಅಮೆರಿಕದಲ್ಲಿ ಎಚ್-1ಬಿ ವೀಸಾಗೆ ಬೇಡಿಕೆ ಒಂದೇ ಸಮನೆ ಹೆಚ್ಚುತ್ತಿದೆ. ಸತತ 6ನೇ ವರ್ಷವಾದ 2018ರಲ್ಲಿ ಒಂದೇ ವಾರದೊಳಗೆ ಅರ್ಜಿ ಸ್ವೀಕಾರ ನಿಲ್ಲಿಸುವಷ್ಟು ಅರ್ಜಿಗಳ ಪ್ರವಾಹ ಹರಿದುಬಂತು. ಒಂದು ವರ್ಷಕ್ಕೆ ನಿಗದಿಯಾಗಿದ್ದ ಗರಿಷ್ಠ ಅರ್ಜಿಗಳು ಐದೇ ದಿನದೊಳಗೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ 85,000 ಫಲಾನುಭವಿಗಳನ್ನು ಕಂಪ್ಯೂಟರ್ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ (ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಈ ಗರಿಷ್ಠ ಮಿತಿಯಿಂದ ಹೊರತಾಗಿವೆ). ಹೀಗೆ ಅರ್ಜಿ ಹಾಕಿರುವವರಲ್ಲಿ ಭಾರತೀಯ ಮೂಲದ ಸಾಫ್ಟ್‌ವೇರ್ ಎಂಜಿನಿಯರುಗಳು ಮತ್ತು ಕಂಪ್ಯೂಟರ್ ಪ್ರೋಗ್ರಾಮರ್‍ಗಳ ಸಂಖ್ಯೆ ಬಲು ದೊಡ್ಡದಿದೆ. ಇವರ ಜತೆಗೆ, ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ಬೋಧಿಸಲು ಆಸಕ್ತಿ ಹೊಂದಿರುವವರು, ವೈದ್ಯರು ಹಾಗೂ ಇತರ ವೃತ್ತಿಪರರೂ ಸೇರಿದ್ದಾರೆ.

2017ರ ಹಣಕಾಸು ವರ್ಷದಲ್ಲಿ ಅನುಮೋದನೆಗೊಂಡ 3.65 ಲಕ್ಷ ಎಚ್-1ಬಿ ಕೋರಿಕೆ ಅರ್ಜಿಗಳ ಪೈಕಿ ಶೇ 75ರಷ್ಟು ಕೋರಿಕೆಗಳು ಭಾರತೀಯ ಮೂಲದವರಿಗೇ ಸೇರಿದ್ದವು ಎಂಬುದು ಗಮನಾರ್ಹ. ಇದು ಒಂದೆಡೆ ಸಂತಸಕ್ಕೆ ಕಾರಣವಾಗಿದ್ದರೆ ಮತ್ತೊಂದೆಡೆ ಸಮಸ್ಯೆಯನ್ನೂ ತಂದೊಡ್ಡಿದೆ. ತಾತ್ಕಾಲಿಕ ವೀಸಾ ಪಡೆದಿದ್ದ ಹತ್ತಾರು ಸಾವಿರ ಭಾರತೀಯರಿಗೆ ಅವರ ಉದ್ಯೋಗದಾತರೇ ನಂತರ ಅಮೆರಿಕದಲ್ಲಿ ಕಾಯಂ ನೆಲೆಸಲು ಬೇಕಾದ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಅಂಥವರ ಕುಟುಂಬ ಸದಸ್ಯರಿಗೆ ಇನ್ನೂ ಆ ಅನುಕೂಲ ಸಿಕ್ಕಿಲ್ಲ. ಅಪಾರ ಸಂಖ್ಯೆಯಲ್ಲಿ ‘ಗ್ರೀನ್ ಕಾರ್ಡ್’ಗಳು ಅದಾಗಲೇ ಅನುಮೋದನೆಗೊಂಡಿದ್ದರೂ ಅವನ್ನು ಈಗ ವಿತರಿಸಲಾಗದ ಪರಿಸ್ಥಿತಿ ಉಂಟಾಗಿದೆ.

ಇತರ ಬಹುತೇಕ ರಾಷ್ಟ್ರಗಳ ಉದ್ಯೋಗಸ್ಥರಿಗೆ ಅರ್ಜಿ ಸಲ್ಲಿಸಿದ ಒಂದು ಅಥವಾ ಎರಡು ವರ್ಷದಲ್ಲೇ ‘ಗ್ರೀನ್ ಕಾರ್ಡ್’ ಸಿಗುತ್ತದೆ. ಆದರೆ ಭಾರತೀಯರಿಗೆ ಇದು ಲಭ್ಯವಾಗಲು 10 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ಹಿಡಿಯುತ್ತದೆ. ಅರ್ಜಿ ಸಲ್ಲಿಸುವ ಭಾರತೀಯರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ.
ಭಾರತೀಯ ಮೂಲದ ದಂಪತಿಯ ಮಕ್ಕಳಿಗೂ ಕಾಯುವಿಕೆ ಅನಿವಾರ್ಯವಾಗಿದೆ. ಮಕ್ಕಳಿಗೆ 21 ವರ್ಷ ತುಂಬುವ ಮುನ್ನ ತಮ್ಮ ಕುಟುಂಬಕ್ಕೆ ‘ಗ್ರೀನ್ ಕಾರ್ಡ್’ ಸಿಗದಿದ್ದರೆ ಅಂತಹ ಮಕ್ಕಳು ಅಲ್ಲಿ ನೆಲೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ತಮ್ಮ ಬಾಲ್ಯ ಮತ್ತು ಹದಿಹರೆಯವನ್ನೆಲ್ಲಾ ಅಮೆರಿಕದಲ್ಲೇ ಕಳೆದಿದ್ದರೂ ಆ ರಾಷ್ಟ್ರವನ್ನು ತೊರೆಯಬೇಕಾಗುತ್ತದೆ.

ಟ್ರಂಪ್ ಆಡಳಿತದ ಈ ನಡೆಯ ಬಗ್ಗೆ ಆ್ಯಪಲ್, ಐಡಿಎಂ, ಮೈಕ್ರೊಸಾಫ್ಟ್‌ನಂತಹ ಮುಂಚೂಣಿ ಕಂಪನಿಗಳನ್ನು ಪ್ರತಿನಿಧಿಸುವ ದಿ ಇನ್‍ಫರ್ಮೇಷನ್ ಟೆಕ್ನಾಲಜಿ ಇಂಡಸ್ಟ್ರಿಯಲ್ ಕೌನ್ಸಿಲ್ ಅಸಮಾಧಾನ ಹೊರಹಾಕಿದೆ. ಇದರಿಂದಾಗಿ ಭಾರತೀಯ ಪ್ರತಿಭೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇನ್ನಿತರ ರಾಷ್ಟ್ರಗಳಿಗೆ ತೆರಳುತ್ತಾರೆ, ಅಂತಿಮವಾಗಿ ಇದು ಅಮೆರಿಕದ ವಾಣಿಜ್ಯ ಸ್ಪರ್ಧಾತ್ಮಕತೆಯನ್ನು ಇಳಿಮುಖಗೊಳಿಸುತ್ತದೆ ಎಂದು ಪ್ರತಿಪಾದಿಸಿದೆ.

ಎಚ್-1ಬಿ ವೀಸಾ ಮೇಲೆ ನ್ಯೂಜೆರ್ಸಿಗೆ ಬಂದಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಜಿಗರ್ ಮದ್ಲಾನಿ ಅವರಿಗೆ 2013ರಲ್ಲಿ ‘ಗ್ರೀನ್ ಕಾರ್ಡ್’ ಸಿಕ್ಕಿದೆ. ಆದರೆ ಅವರ ಕುಟುಂಬದ ಇತರರಿಗೆ ಇನ್ನೂ ದೊರೆತಿಲ್ಲ. ತಮ್ಮ ಪತ್ನಿ ಹೇತಾ ಮದ್ಲಾನಿ ಇಷ್ಟರಲ್ಲೇ ಇಲ್ಲಿ ಉದ್ಯೋಗ ಮಾಡುವ ಅವಕಾಶ ಕಳೆದುಕೊಳ್ಳಬಹುದೆಂಬ ಚಿಂತೆಯೂ ಅವರನ್ನು ಕಾಡುತ್ತಿದೆ. ಒಬಾಮ ಆಡಳಿತದಲ್ಲಿ ಜಾರಿಗೊಳಿಸಿದ ಎಚ್- 4ಇಎಡಿ ವೀಸಾ ನೀತಿಯಿಂದಾಗಿ ಹೇತಾ ಅವರು ಅಲ್ಲಿನ ವ್ಯಸನ ಮುಕ್ತ ಕೇಂದ್ರದಲ್ಲಿ ಫೋನ್ ಕರೆಗಳ ನಿರ್ವಾಹಕಿಯಾಗಿ ಕೆಲಸ ಮಾಡುವ ಅವಕಾಶ ಪಡೆದಿದ್ದರು. ‘ಈ ರಾಷ್ಟ್ರದಲ್ಲಿ ನನಗೆ ಮುಂಚೆ ಅಸ್ಮಿತೆ ಇರಲಿಲ್ಲ. ನಂತರ ಅದು ದಕ್ಕಿತ್ತು. ಆದರೆ ಈಗ ಅದನ್ನು ನನ್ನಿಂದ ವಾಪಸ್‌ ಪಡೆಯಲು ಆಡಳಿತ ಬಯಸಿದೆ’ ಎಂದು ಬೇಸರದಿಂದ ನುಡಿಯುತ್ತಾರೆ ಹೇತಾ. ಇದು ಇಲ್ಲಿ ನೆಲೆಸಿರುವ ಭಾರತ ಮೂಲದ ಹತ್ತಾರು ಸಹಸ್ರ ದಂಪತಿಗಳ ನೋವಿನ ದನಿಯೂ ಆಗಿದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT