ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

472 ಸಾಕುನಾಯಿಗಳಿಗೆ ಪರವಾನಗಿ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್‌ ಪಾರ್ಕ್‌ ಕೆನೈನ್ಸ್‌ (ಸಿಪಿಸಿ) ಹಾಗೂ ಬಿಬಿಎಂಪಿ ಆಶ್ರಯದಲ್ಲಿ ಕಬ್ಬನ್‌ ಉದ್ಯಾನದಲ್ಲಿರುವ ನಾಯಿ ಉದ್ಯಾನದಲ್ಲಿ (ಡಾಗ್‌ ಪಾರ್ಕ್‌) ಹಮ್ಮಿಕೊಂಡಿದ್ದ ‘3ನೇ ಸಾಕುನಾಯಿ ಪರವಾನಗಿ ಅಭಿಯಾನ’ದಲ್ಲಿ 472 ನಾಯಿಗಳಿಗೆ ಪರವಾನಗಿ ನೀಡಲಾಯಿತು.

ಪರವಾನಗಿ ನೀಡುವ ಸಂಬಂಧ ಪಾಲಿಕೆಯ 15 ಪಶು ವೈದ್ಯರು ಭಾಗವಹಿಸಿದ್ದರು. 700 ಮಂದಿ ನಾಯಿಗಳನ್ನು ತೆಗೆದುಕೊಂಡು ಬಂದಿದ್ದರು. ಅವರು ಗುರುತಿನ ಚೀಟಿ ಹಾಗೂ ನಾಯಿಗೆ ಆ್ಯಂಟಿ ರೇಬಿಸ್‌ ಲಸಿಕೆ ಹಾಕಿಸಿರುವ ಪ್ರಮಾಣಪತ್ರಗಳನ್ನು ವೈದ್ಯರಿಗೆ ನೀಡಿದರು. ಈ ದಾಖಲೆಗಳನ್ನು ಪರಿಶೀಲಿಸಿದ ವೈದ್ಯರು, ಪರವಾನಗಿ ನೀಡಿದರು.

115 ನಾಯಿಗಳ ಪರವಾನಗಿಯನ್ನು ನವೀಕರಿಸಲಾಯಿತು. ಮಿಟ್ಟಗನಹಳ್ಳಿಯ ಚಾರ್ಲಿ ಪ್ರಾಣಿ ಸಂರಕ್ಷಣಾ ಕೇಂದ್ರದ (ಕೇರ್‌) 53 ನಾಯಿಗಳಿಗೆ (ಕ್ರಿಕೆಟಿಗ ವಿರಾಟ್‌ ಕೊಯ್ಲಿ ದತ್ತು ಪಡೆದ 15 ನಾಯಿಗಳು ಸೇರಿ) ಪರವಾನಗಿ ನೀಡಲಾಯಿತು.

ಆ್ಯಂಟಿ ರೇಬಿಸ್‌ ಲಸಿಕೆ ಹಾಕಿಸದ ನಾಯಿಗಳಿಗೆ ಸೆಸ್ನಾ ಸಂಸ್ಥೆಯ ಡಾ.ದಿನೇಶ್‌ ಅವರು ಲಸಿಕೆ ಹಾಕಿದರು.

2015–16ರಲ್ಲಿ 150 ನಾಯಿಗಳಿಗೆ ಮಾತ್ರ ಪರವಾನಗಿ ನೀಡಲಾಗಿತ್ತು. ಆದರೆ, ಈ ಬಾರಿ ನಾಯಿಗಳ ಮಾಲೀಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

ದೆಹಲಿ, ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ಸಾಕುನಾಯಿಗಳಿಗೆ ಪರವಾನಗಿ ಪಡೆಯುವುದು ಕಡ್ಡಾಯ. ಬೆಂಗಳೂರಿನಲ್ಲಿ ಪರವಾನಗಿ ಕಡ್ಡಾಯಗೊಳಿಸುವ ಪ್ರಸ್ತಾವವನ್ನು ಪಾಲಿಕೆಯು ಸಿದ್ಧಪಡಿಸಿದ್ದು, ಇನ್ನೂ ಜಾರಿಗೊಳಿಸಿಲ್ಲ ಎಂದು ಸಿಪಿಸಿ ಸ್ವಯಂಸೇವಕಿ ಪ್ರಿಯಾ ಚೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಕುನಾಯಿಗಳು, ಮಾಲೀಕರು ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪರವಾನಗಿ ಪಡೆಯುವುದು ಅತ್ಯಗತ್ಯ. ಆ್ಯಂಟಿ ರೇಬಿಸ್‌ ಲಸಿಕೆ ಹಾಕಿಸಿದ ನಾಯಿಗಳಿಗೆ ಮಾತ್ರ ಪರವಾನಗಿ ನೀಡಲಾಗುತ್ತದೆ. ಇಂತಹ ನಾಯಿಗಳು ಬೇರೊಬ್ಬರಿಗೆ ಕಚ್ಚಿದರೂ, ದೊಡ್ಡ ಸಮಸ್ಯೆ ಆಗುವುದಿಲ್ಲ. ಹೀಗಾಗಿ, ಎಲ್ಲರೂ ಪರವಾನಗಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಿಪಿಸಿ ಸ್ವಯಂಸೇವಕಿ ಮಂಜರಿ ಚೈತನ್ಯ, ‘ಸಾಕು ನಾಯಿಗಳಿಗೆ ಪರವಾನಗಿ ಪಡೆಯುವುದು ಹಾಗೂ ನವೀಕರಿಸುವುದು ಎಲ್ಲರ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ನಾಯಿಗಳ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಕೆಲವೊಮ್ಮೆ ನಾಪತ್ತೆಯಾಗುತ್ತವೆ. ಈ ವೇಳೆ ಅವುಗಳ ಮಾಲೀಕರನ್ನು ಪತ್ತೆ ಮಾಡಲು ಕಷ್ಟವಾಗುತ್ತದೆ. ಹೀಗಾಗಿ, ನಾಯಿಗಳಿಗೆ ಟ್ಯಾಗ್‌ ಹಾಕಿಸಬೇಕು. ಬಿಲ್ಲೆಯ ಮೇಲೆ ನಾಯಿ ಹೆಸರು, ಮಾಲೀಕರ ಸಂಪರ್ಕ ವಿಳಾಸವನ್ನು ಮುದ್ರಿಸಲಾಗುತ್ತದೆ. ಅದನ್ನು ನಾಯಿಯ ಬೆಲ್ಟ್‌ಗೆ ಹಾಕಲಾಗುತ್ತದೆ’ ಎಂದು ವಿವರಿಸಿದರು.

**

ಮನುಷ್ಯರಿಗೆ ಆಧಾರ್‌ ಸಂಖ್ಯೆ ಇದ್ದಂತೆ, ಸಾಕುನಾಯಿಗಳಿಗೆ ಪರವಾನಗಿ ಅತ್ಯಗತ್ಯ.
– ಮಂಜರಿ ಚೈತನ್ಯ, ಕಬ್ಬನ್‌ ಪಾರ್ಕ್‌ ಕೆನೈನ್ಸ್‌ ಸ್ವಯಂಸೇವಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT