ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಶ್ರೀನಿವಾಸ್ ರಾಜೀನಾಮೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು/ಶಿವಮೊಗ್ಗ: ‘ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಶ್ರೀನಿವಾಸ್ ಕರಿಯಣ್ಣ (ಡಾ.ಎಸ್.ಕೆ.ಕರಿಯಣ್ಣ) ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡುವಾಗ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಆಕ್ಷೇಪಿಸಿರುವ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ಶ್ರೀನಿವಾಸ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಕೆಂಗೇರಿ ನಿವಾಸಿ ಎಂ.ಕೆ.ಬಲದೇವಕೃಷ್ಣ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿದ್ದು, ‘ಶ್ರೀನಿವಾಸ್‌, ಈ ರಿಟ್‌ ಅರ್ಜಿಯ ಅಂತಿಮ ಆದೇಶಕ್ಕೆ ಬದ್ಧವಾಗಿರಬೇಕು’ ಎಂದು ಮಧ್ಯಂತರ ಆದೇಶ ನೀಡಿದೆ.

ಪ್ರತಿವಾದಿಗಳಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆಯುಕ್ತರು ಮತ್ತು ನಿರ್ದೇಶಕರಿಗೂ ನೋಟಿಸ್ ಜಾರಿಗೆ ನ್ಯಾಯಪೀಠ ಆದೇಶಿಸಿದೆ.

ಪ್ರಕರಣವೇನು?: ‘ಹೊಸಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿದ್ದ (ಹಿರಿಯ ಸ್ಥಾನಿಕ ವೈದ್ಯಾಧಿಕಾರಿ) ಶ್ರೀನಿವಾಸ್ ಬೆಂಗಳೂರಿನ ಬೌರಿಂಗ್ ಹಾಗೂ ಲೇಡಿ ಕರ್ಜನ್‌ ಆಸ್ಪತ್ರೆಗೆ ನಿಯೋಜನೆಗೊಂಡಿದ್ದರು. ಟಿಕೆಟ್ ಘೋಷಣೆಯಾದ ಮೇಲೆ ಹಿಂದಿನ ದಿನಾಂಕ ನಮೂದಿಸಿ ಇವರು ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದ್ದರಿಂದ ಇದು ನಿಯಮಬಾಹಿರವಾಗಿದೆ’ ಎಂದು ಘೋಷಿಸುವಂತೆ ಕೋರಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ. ಬಲದೇವಕೃಷ್ಣ (ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು) ಸಲ್ಲಿಸಿರುವ ಅರ್ಜಿ ಇದಾಗಿದೆ.

ಬಲದೇವಕೃಷ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು. ಸಂದೀಪ್‌ ಪಾಟೀಲ್‌ ವಕಾಲತ್ತು ವಹಿಸಿದ್ದಾರೆ.

ಈಗಲೂ ಸರ್ಕಾರಿ ನೌಕರ: ‘ನ್ಯಾಯಾಲಯದ ಆದೇಶದ ಪ್ರಕಾರ ಶ್ರೀನಿವಾಸ್ ಈಗಲೂ ಸರ್ಕಾರಿ ನೌಕರ. ಆದೇಶದ ಪ್ರತಿಯನ್ನು ಚುನಾವಣಾ ಆಯೋಗಕ್ಕೂ ಸಲ್ಲಿಸಲಾಗಿದೆ. ಅವರ ನಾಮಪತ್ರ ತಿರಸ್ಕರಿಸುವಂತೆ ಕೋರಲಾಗಿದೆ’ ಎಂದು ಬಲದೇವಕೃಷ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT