ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಹಿಂಸೆಯಲ್ಲಿ ನೊಂದಿದ್ದು ಸಾಕು

ಸಮುದಾಯದಲ್ಲಿ ಜಾಗೃತಿ ಮೂಡಿಸಲು ಮುಂದಾದ ಬಿಲ್ಲವ ಯೂನಿಯನ್
Last Updated 26 ಏಪ್ರಿಲ್ 2018, 12:47 IST
ಅಕ್ಷರ ಗಾತ್ರ

ಮಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಪ್ರಾತಿನಿಧ್ಯ ದೊರೆಯದೇ ಇರುವುದರಿಂದ ಈಗಾಗಲೇ ಬಿಲ್ಲವ ಸಮುದಾಯದ ಆಕ್ರೋಶ ಭುಗಿಲೆದ್ದಿದ್ದು, ಇದೀಗ ಸಮಾಜದ ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಸಭೆಯೊಂದನ್ನು ಆಯೋಜಿಸಲಾಗಿದೆ.

ಕರಾವಳಿ ಜಿಲ್ಲೆಯಲ್ಲಿ ಬಿಲ್ಲವ ಸಮುದಾಯವನ್ನು ಕೇವಲ ಹೋರಾಟ, ಪ್ರತಿಭಟನೆಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ರಾಜಕೀಯ ಪ್ರಾತಿನಿಧ್ಯ ನೀಡುವ ವಿಷಯ ಬಂದಾಗ ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನಾವು ಕೇವಲ ಹೋರಾಟಕ್ಕೆ ಮಾತ್ರ ಬೇಕು. ಟಿಕೆಟ್‌ ನೀಡುವಾಗ ಮೇಲ್ವರ್ಗದವರಿಗೆ ಮಣೆ ಹಾಕಲಾಗುತ್ತಿದೆ ಎಂಬ ಅಸಮಾಧಾನವನ್ನು ಈಗಾಗಲೇ ಬಿಲ್ಲವ ಸಮುದಾಯದ ಮುಖಂಡರು ಹೊರಹಾಕಿದ್ದಾರೆ.

ಜಿಲ್ಲೆಯಲ್ಲಿ ಬಹುಸಂಖ್ಯಾತವಾಗಿರುವ ಸಮುದಾಯಕ್ಕೆ ಇದೀಗ ನಾಯಕತ್ವ ಇಲ್ಲದಂತಾಗಿದ್ದು, ಅದರ ಪರಿಣಾಮ ವಾಗಿಯೇ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ಬಗ್ಗೆ ಪ್ರಬಲ ಹೋರಾಟ ಗಳು ಅಗತ್ಯವಾಗಿದೆ. ಅದಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಲಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಲ್ಲವ ಸಮುದಾಯವನ್ನು ಕೇವಲ ರಾಜಕೀಯ ಚಟುವಟಿಕೆಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ನೀಡುತ್ತಿರುವ ಅವಕಾಶಗಳು ಮಾತ್ರ ಅತ್ಯಂತ ಕಡಿಮೆ. ಹೀಗಾಗಿ ಮೊದಲು ಸಮಾಜದ ಜನರು ಜಾಗೃತರಾಗಬೇಕು. ಮೊದಲು ಯುವಪೀಳಿಗೆಗೆ ಅರಿವು ಮೂಡಿಸಬೇಕು. ಸಂಘಟನೆ ಹಾಗೂ ಅರಿವಿನ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಬೇಕು ಎನ್ನುವ ಕುರಿತು ಅಭಿಯಾನದ ಮೂಲಕ
ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ.

‘ಕರಾವಳಿ ಜಿಲ್ಲೆಯಲ್ಲಿ ಬಹುಸಂಖ್ಯಾತ ಬಿಲ್ಲವ ಸಮಾಜದ ಯುವಕರನ್ನು ಕೋಮು ಚಟುವಟಿಕೆಗಳಿಗೆ ಪ್ರೇರೇಪಿಸಿ, ಸಮಾಜವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಬಿಲ್ಲವರ ಸಹಾಯದಿಂದ ತಮ್ಮ ರಾಜಕೀಯ ಬದುಕನ್ನು ಗಟ್ಟಿ ಮಾಡಿಕೊಳ್ಳುತ್ತಿರುವ ಮೇಲ್ಜಾತಿಯವರ ಬಗ್ಗೆ ಜಾಗೃತಿ ಸೃಷ್ಟಿಸಲು ಈ ಸಭೆ ಏರ್ಪಡಿಸಲಾಗಿದೆ’ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್‌ ಅಧ್ಯಕ್ಷ ನವೀನಚಂದ್ರ ಸುವರ್ಣ ತಿಳಿಸಿದ್ದಾರೆ.

ಬಿಲ್ಲವ ಸಮಾಜದ ಯುವಕರು ಸಮಾಜದಲ್ಲಿ ಸಕಾರಾತ್ಮಕ ಚಿಂತನೆಯೊಂದಿಗೆ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಮಾಜದ ಮಹಿಳೆಯರು ತಮ್ಮ ಮನೆಗಳಲ್ಲಿಯೇ ಪ್ರಯತ್ನಿಸಬೇಕಾಗಿದೆ. ಯುವಕರಿಗೆ ಬಾಲ್ಯದಿಂದಲೇ ಸದ್ವಿಚಾರ ಬೋಧನೆ, ಸಾಮಾಜಿಕ ಸ್ಪಂದನೆಗೆ ಮಾರ್ಗದರ್ಶನ ನೀಡಬೇಕಾಗಿದೆ. ಈ ದಿಸೆಯಲ್ಲಿ ತಾಯಂದಿರು ಜಾಗೃತಿ ಮೂಡಿಸಲು ಪ್ರಯತ್ನಿಸಬೇಕು. ಈ ನೆಲೆಯಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮೇ 1 ರಂದು ಜಾಗೃತಿ ಸಭೆ

ಅಖಿಲ ಭಾರತ ಬಿಲ್ಲವರ ಯೂನಿಯನ್‌ ಆಶ್ರಯದಲ್ಲಿ ಬಿಲ್ಲವ ಜಾಗೃತಿ ಸಭೆಯನ್ನು ಮೇ 1 ರಂದು ನಗರದ ಕುದ್ರೋಳಿಯ ನಾರಾಯಣ ಗುರು ಕಾಲೇಜಿನ ದಾಮೋದರ ಆರ್‌. ಸುವರ್ಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಪದವಿನಂಗಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಗಣೇಶ್‌ ಬಂಗೇರ ಉದ್ಘಾಟಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಗೋಪಾಲ ಅಂಚನ್‌, ರೋಶನಿ ನಿಲಯದ ಮಾನಸಿಕ ಆರೋಗ್ಯ ವಿಭಾಗ ಮುಖ್ಯಸ್ಥೆ ಡಾ. ರಮೀಳಾ ಶೇಖರ್‌ ಭಾಗವಹಿಸಲಿದ್ದಾರೆ. ರಂಗ ನಿರ್ದೇಶಕ ಪರಮಾನಂದ ಸಾಲ್ಯಾನ್‌ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಲಿದ್ದು, ನವೀನಚಂದ್ರ ಡಿ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

**
ಹಿಂಸಾ ಚಟುವಟಿಕೆಯಲ್ಲಿ ಬಿಲ್ಲವ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಮುಂದೆ ಈ ರೀತಿ ಆಗಬಾರದು ಎಂಬ ಕಳಕಳಿಯಿಂದ ಜಾಗೃತಿ ಅಭಿಯಾನ ನಡೆಸಿದೆ
– ನವೀನಚಂದ್ರ ಡಿ. ಸುವರ್ಣ, ಅಖಿಲ ಭಾರತ ಬಿಲ್ಲವರ ಯೂನಿಯನ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT