ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುದ್ದಾಡಿ ಮುದ್ದಾಡಿದ್ದೆಲ್ಲ ‘ಕನ್ನಡಕ್ಕಾಗಿ...’!

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಚಿತ್ರ ರೂಪುಗೊಳ್ಳುವ ಹಂತದಲ್ಲಿ ಸಾಕಷ್ಟು ಕಿತ್ತಾಡಿದ್ದೇವೆ’ ಇದು ಒಬ್ಬಿಬ್ಬರ ಮಾತಲ್ಲ, ವೇದಿಕೆಯ ಮೇಲೆ ಮೈಕ್ ಹಿಡಿದು ನಿಂತ ಬಹುತೇಕ ಎಲ್ಲರೂ ಇದೇ ಮಾತನ್ನು ಹೇಳುತ್ತಿದ್ದರು. ಇವರೇನು ಜಗಳವಾಡಿಕೊಂಡೇ ಇದ್ದರೋ ಸಿನಿಮಾ ಮಾಡಿದ್ದಾರೋ ಎಂಬ ಅನುಮಾನ ಹುಟ್ಟುವಷ್ಟರಲ್ಲಿಯೇ ಚಿತ್ರದ ಮೂರು ಹಾಡುಗಳನ್ನು ಪತ್ರಕರ್ತರಿಗೆ ತೋರಿಸಿದರು. ಹಾಗೆ ಜಗಳದ ಬಗ್ಗೆ ಪ್ರಸ್ತಾಪಿಸಿದವರೆಲ್ಲರೂ ‘ಇದೊಂದು ಆರೋಗ್ಯಕರ ಜಗಳ. ಚಿತ್ರದ ಗುಣಮಟ್ಟಕ್ಕಾಗಿ ಇದ್ದ ಭಿನ್ನಾಭಿಪ್ರಾಯ. ಇದರಿಂದಾಗಿಯೇ ಇಡೀ ಚಿತ್ರ ಚೆನ್ನಾಗಿ ಬರಲು ಸಾಧ್ಯವಾಗಿದೆ’ ಎಂಬುದನ್ನೂ ಹೇಳಲು ಮರೆಯಲಿಲ್ಲ.

ಅದು ಕುಶಾಲ್‌ ಎನ್ನುವ ಹೊಸ ಪ್ರತಿಭೆ ನಿರ್ದೇಶಿಸಿರುವ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮ. ಅಂದಹಾಗೆ ಯೋಗರಾಜ ಭಟ್‌ ಅವರು ಆರಂಭಿಸಿರುವ ‘ಪಂಚರಂಗಿ’ ಆಡಿಯೊ ಸಂಸ್ಥೆಯ ಮೂಲಕ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯ್ತು. ‘ಗುದ್ದಾಡಿ, ಮುದ್ದಾಡಿಕೊಂಡು ಮಾಡಿರುವ ಸಿನಿಮಾ ಇದು’ ಎಂದ ಯೋಗರಾಜ ಭಟ್‌ ಅವರು ಚಿಕ್ಕಣ್ಣ ಅವರನ್ನೂ ಹಾಡಿ ಹೊಗಳಿದರು. ಅರ್ಜುನ್‌ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

‘ಈ ಚಿತ್ರದಲ್ಲಿ ನಾಯಕ, ನಾಯಕಿ, ಪೋಷಕ ಪಾತ್ರಗಳು ಎಂದೆಲ್ಲ ವರ್ಗೀಕರಣ ಇಲ್ಲ. ಎಲ್ಲ ಪಾತ್ರಗಳಿಗೂ ಸಮಾನ ಅವಕಾಶ ಇದೆ’ ಎಂದರು ನಾಯಕ ಅವಿನಾಶ್‌ ಎಸ್‌. ‘ಕನ್ನಡಕ್ಕಾಗಿ ಯಾಕೆ ಒಂದನ್ನು ಒತ್ತಬೇಕು ಎನ್ನುವುದನ್ನು ತಿಳಿಯಲು ಸಿನಿಮಾ ನೋಡಿ’ ಎಂದು ತಮ್ಮದೇ ಶೈಲಿಯಲ್ಲಿ ಚಮಕ್‌ ಕೊಟ್ಟರು ಚಿಕ್ಕಣ್ಣ.  ‘ಪ್ರೇಕ್ಷಕರಷ್ಟೇ ಕುತೂಹಲದಿಂದ ನಾನೂ ಈ ಚಿತ್ರಕ್ಕಾಗಿ ಕಾತರದಿಂದ ಕಾದಿದ್ದೇನೆ. ಭಟ್ಟರ ಕಂಪನಿಯಿಂದ ಆಡಿಯೊ ಬಿಡುಗಡೆಯಾಗುತ್ತಿರುವುದು ಖುಷಿ ಕೊಟ್ಟಿದೆ’ ಎಂದರು ನಾಯಕಿ ಕೃಷಿ ತಾಪಂಡ.

‘ಚಿಕ್ಕಣ್ಣ ಮೊದಲ ಬಾರಿಗೆ ಕನ್ನಡಪರ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಎರಡು ಛಾಯೆಗಳಿವೆ’ ಎಂದು ಕುಶಾಲ್ ಅವರು ವಿವರಿಸಿದರು.

‘ಪಂಚರಂಗಿ’ ಆಡಿಯೊ ಸಂಸ್ಥೆಯಿಂದ ಹಂಸಲೇಖ ಅವರಿಗೆ ಹಾರ್ಮೋನಿಯಂ ಅನ್ನು ಕಾಣಿಕೆಯಾಗಿ ನೀಡಲಾಯ್ತು. ಅದರಲ್ಲಿ ಅವರು ಮುಂಗಾರು ಮಳೆ ಚಿತ್ರದ ಹಾಡೊಂದನ್ನು ನುಡಿಸಿ ರಂಜಿಸಿದರು. ಭಟ್ಟರು ಚಿತ್ರರಂಗದಲ್ಲಿ ಬೆಳೆದು ಬಂದ ಬಗೆಯನ್ನೂ ಅವರು ತಮ್ಮ ನೆನಪುಗಳ ಮೂಲಕ ಕಟ್ಟಿಕೊಟ್ಟರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT