ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನ ಕುಟುಂಬಕ್ಕೆ ₹5ಲಕ್ಷ

ಬೀದಿನಾಯಿಗಳ ದಾಳಿಗೆ ಬಲಿಯಾಗಿದ್ದ ಪ್ರವೀಣ್
Last Updated 2 ಸೆಪ್ಟೆಂಬರ್ 2018, 19:26 IST
ಅಕ್ಷರ ಗಾತ್ರ

ಬೆಂಗಳೂರು: ‘ಬೀದಿನಾಯಿಗಳ ದಾಳಿಗೆ ಬಲಿಯಾಗಿರುವ 11 ವರ್ಷದ ಪ್ರವೀಣನ ಕುಟುಂಬದವರಿಗೆ ಬಿಬಿಎಂಪಿ ವತಿಯಿಂದ ₹5 ಲಕ್ಷ ಪರಿಹಾರ ನೀಡಲಿದ್ದೇವೆ’ ಎಂದು ಪಾಲಿಕೆ ಸದಸ್ಯ ನಾಗರಾಜ್‌ ಹೇಳಿದರು.

‘ಬೀದಿ ನಾಯಿಗಳ ಕಡಿವಾಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕೆರೆಯ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಿದ್ದೇವೆ’ ಎಂದರು.

ವಿಭೂತಿಪುರ ಬಳಿ ಶಾಲೆಯಿಂದ ಮರಳುತ್ತಿದ್ದ ಬಾಲಕನ ಮೇಲೆ ಹತ್ತಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ ನಡೆಸಿದ್ದವು. ಮಣಿಪಾಲ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪ್ರವೀಣ್‌, ಬಹು ಅಂಗಾಂಗಗಳ ವೈಫಲ್ಯದಿಂದ ಶನಿವಾರ ರಾತ್ರಿ ಮೃತಪಟ್ಟಿದ್ದ.

ಇನ್ನೊಂದು ಮಗುವಿಗೆ ಈ ಗತಿ ಬಾರದಿರಲಿ

‘ಯಾವುದೇ ಮಗುವಿಗೆ ಭವಿಷ್ಯದಲ್ಲಿ ಇಂತಹ ಗತಿ ಬಾರದಿರಲಿ. ನಗರವು ಇನ್ನೆಂದೂ ಇಂತಹ ಘಟನೆಗೆ ಸಾಕ್ಷಿಯಾಗದಿರಲಿ’

ಬೀದಿ ನಾಯಿ ದಾಳಿಯಿಂದಾಗಿ ಮಗನನ್ನು ಕಳೆದುಕೊಂಡು ಆಘಾತಕ್ಕೊಳಗಾಗಿರುವ ತಾಯಿ ಮುರುಗಮ್ಮ ಅವರ ಆಶಯವಿದು. ಮಗನನ್ನು ನೆನೆದು ಅವರು ಕಣ್ಣೀರಾದರು.

ಬುಧವಾರ ಏಳೆಂಟು ಬೀದಿನಾಯಿಗಳು ದಾಳಿಯಿಂದಾಗಿ ಗಂಭೀರ ಗಾಯಗೊಂಡಿದ್ದ ವಿಭೂತಿಪುರದ ಬಾಲಕ ಪ್ರವೀಣ (11) ಚಿಕಿತ್ಸೆ ಫಲಿಸದೆ ಶನಿವಾರಕೊನೆಯುಸಿರೆಳೆದಿದ್ದ.

ಮಾಂಸದ ತ್ಯಾಜ್ಯವನ್ನು ಕಸವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದಲೇ ಬೀದಿನಾಯಿ ಹಾವಳಿ ಹೆಚ್ಚಾಗಿದೆ ಎಂದು ಮೃತ ಬಾಲಕನ ಪೋಷಕರು ಹಾಗೂ ಸ್ಥಳೀಯರು ದೂರಿದ್ದಾರೆ.

‘ವಿಭೂತಿಪುರದ ಕೆರೆ ಬಳಿ ಮಾಂಸದ ತ್ಯಾಜ್ಯವನ್ನು ತಂದು ಸುರಿಯುತ್ತಾರೆ. ಇವುಗಳನ್ನು ತಿನ್ನಲು ನಾಯಿಗಳು ಇಲ್ಲಿಗೆ ಬರುತ್ತವೆ. ಇನ್ನೊಬ್ಬ ಬಾಲಕ ಬೀದಿನಾಯಿ ದಾಳಿಗೆ ಬಲಿಯಾಗುವುದನ್ನು ತಪ್ಪಿಸಬೇಕಾದರೆ ಕೆರೆ ಬದಿಯಲ್ಲಿ ಅಕ್ರಮವಾಗಿ ತ್ಯಾಜ್ಯ ಹಾಕುವುದನ್ನು ತಡೆಯಬೇಕು’ ಎನ್ನುತ್ತಾರೆ ವಿಭೂತಿಪುರದ ನಿವಾಸಿಯಾದವಿಜಯ ಕುಮಾರ್‌.

ಇಲ್ಲಿ ಕಸದ ರಾಶಿ ಬಿದ್ದರೂ ಬಿಬಿಎಂಪಿಯವರು ಈ ಪ್ರದೇಶವನ್ನು ಸ್ವಚ್ಛಗೊಳಿಸುವುದಿಲ್ಲ. ಇಲ್ಲಿನ ಮನೆ ಮನೆಯಿಂದಲೂ ನಿತ್ಯ ಕಸ ಸಂಗ್ರಹಣೆ ನಡೆಯುತ್ತಿಲ್ಲ ಎಂದು ಸ್ಥಳೀಯರು ದೂರಿದರು.

ಈ ಕೆರೆಯ ಸುತ್ತ ಬೇಲಿ ಹಾಕಲು ಕ್ರಮಕೈಗೊಳ್ಳುವುದಾಗಿ ಮೇಯರ್‌ ಆರ್‌.ಸಂಪತ್‌ ರಾಜ್‌ ಅವರು ಈ ದುರ್ಘಟನೆ ನಡೆದ ಬಳಿಕ ಭರವಸೆ ನೀಡಿದ್ದಾರೆ.

ಬೀದಿ ನಾಯಿ ಹಾವಳಿ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಲು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಸೋಮವಾರ ವಿಶೇಷ ಸಭೆ ಕರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT