ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಈ ವಿಷಯ ಶೇರ್ ಮಾಡಬೇಡಿ

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ಫೇಸ್‌ಬುಕ್‌ ಅನ್ನು ಖಾಸಗಿ ಡೈರಿಯಂತೆ ಪರಿಗಣಿಸಿದವರು ಸಾಕಷ್ಟು ಮಂದಿ ಇದ್ದಾರೆ. ಅಂತಹವರಿಗೆ ತಮ್ಮ ಬದುಕಿನ ಸುಖ–ದುಃಖಗಳನ್ನು ಫೇಸ್‌ಬುಕ್ಕಿನಲ್ಲಿ ಹಂಚಿಕೊಂಡರೆ ನೆಮ್ಮದಿ. ಆದರೆ ಕೆಲವೊಂದು ವಿಷಯಗಳನ್ನು ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿಕೊಳ್ಳುವಾಗ ವಿವೇಚನೆ ಅಗತ್ಯ. ಅದೇನು ತೀರಾ ಖಾಸಗಿಯಲ್ಲ, ಅದರಲ್ಲಿ ಅಂಥದ್ದೇನಿದೆ? ಎಂದು ಅನಿಸಬಹುದು. ಆದರೆ ಫೇಸ್‌ಬುಕ್‌ನಲ್ಲಿ ಶೇರ್ ಮಾಡುವ ಕೆಲವು ಸಂಗತಿಗಳು ನಮಗೆ ಅರಿವಿಲ್ಲದಂತೆ ದುರುಪಯೋಗಕ್ಕೊಳಪಡುತ್ತವೆ ಎಂಬುದು ನೆನಪಿರಲಿ...

ಮಕ್ಕಳ ನಗ್ನ ಚಿತ್ರಗಳು: ಮಕ್ಕಳು ಏನು ಮಾಡಿದರೂ ಅಪ್ಪ ಅಮ್ಮನಿಗೆ ಮುದ್ದಾಗಿಯೇ ಕಾಣಿಸುತ್ತದೆ. ಅವರ ತುಂಟಾಟ, ನಗು, ಹರಟೆ ಎಲ್ಲವನ್ನೂ ಸಾಮಾಜಿಕತಾಣಗಳಲ್ಲಿ ಹಂಚಿಕೊಂಡು ಖುಷಿಪಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಮಕ್ಕಳ ನಗ್ನಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಬೇಡಿ. ಈ ರೀತಿಯ ಚಿತ್ರಗಳು ದುರುಪಯೋಗವಾಗುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಮಗು ಹೆಣ್ಣಾಗಲೀ, ಗಂಡಾಗಲೀ ನಗ್ನವಾಗಿರುವ ಯಾವುದೇ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳಬೇಡಿ.

ಮಹಿಳೆಯರ ಸ್ತನ: ಮೊಲೆಯೂಡಿಸುವ ಚಿತ್ರಗಳು ಮತ್ತು ಶಸ್ತ್ರಕ್ರಿಯೆಗೊಳಪಟ್ಟ ಸ್ತನದ ಚಿತ್ರಗಳಿಗೆ ಮಾತ್ರ ಫೇಸ್‌ಬುಕ್‌ ಅನುಮತಿ ನೀಡುತ್ತದೆ. ಅದಲ್ಲದೆ ಬೇರೆ ಯಾವುದಾದರೂ ರೀತಿಯಲ್ಲಿ ಮಹಿಳೆಯರ ಸ್ತನಗಳನ್ನು ತೋರಿಸುವ ಚಿತ್ರಗಳನ್ನ ಅಪ್‌ಲೋಡ್‌ ಮಾಡುವಂತಿಲ್ಲ.

ಅವಮಾನಿಸುವ ಫೋಟೊ: ಲೈಂಗಿಕ ದೌರ್ಜನ್ಯಕ್ಕೊಳಗಾದ ವ್ಯಕ್ತಿಯ ಫೋಟೊ ಅಥವಾ ಅದಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಫೇಸ್‌ಬುಕ್ಕಿನಲ್ಲಿ ಶೇರ್ ಮಾಡಬೇಡಿ. ಯಾವುದೇ ಕಾರಣಕ್ಕೂ ವ್ಯಕ್ತಿ ನಿಂದನೆ ಅಥವಾ ಅವರ ಖಾಸಗಿತನಕ್ಕೆ ಧಕ್ಕೆ ತರುವ ವಿಷಯಗಳು ಸಾಮಾಜಿಕತಾಣದಲ್ಲಿ ಶೇರ್ ಮಾಡುವುದು ಬೇಡ.

ತಪ್ಪೊಪ್ಪಿಗೆ ಬೇಡ: ಕಳ್ಳತನ, ಮೋಸ ಅಥವಾ ಲೈಂಗಿಕ ದೌರ್ಜನ್ಯವೇ ಆಗಿರಲಿ. ತಾನು ಇಂಥಾ ತಪ್ಪುಗಳನ್ನು ಮಾಡಿದೆ ಎಂದು ತಪ್ಪೊಪ್ಪಿಗೆ ನಡೆಸುವ ವೇದಿಕೆಯಲ್ಲ ಸಾಮಾಜಿಕ ತಾಣ. ಈ ವಿಷಯಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳ ಬಗ್ಗೆ ಇಲ್ಲಿ ಚರ್ಚೆ ನಡೆಸಬಹುದೇ ಹೊರತು ಇಂಥಾ ಕುಕೃತ್ಯಗಳನ್ನು ಸಮರ್ಥಿಸಿಕೊಳ್ಳುವ ಬರಹಗಳನ್ನು ಹಂಚಿಕೊಳ್ಳಬೇಡಿ.

ಮಾದಕ ವಸ್ತುಗಳ ಮಾರಾಟ ಅಥವಾ ಖರೀದಿ: ಫೇಸ್‌ಬುಕ್‌ ಮೂಲಕ ಮಾದಕ ವಸ್ತುಗಳ ಮಾರಾಟ ಅಥವಾ ಖರೀದಿ ಸಲ್ಲ. ಮಾದಕ ವಸ್ತುಗಳ ಅಗತ್ಯವಿದೆ ಎಂದು ಫೇಸ್‌ಬುಕ್‌ ಮೂಲಕ ಸಂಪರ್ಕಿಸುವುದಾಗಲೀ, ಮಾರಾಟ ನಡೆಸಲು ಯತ್ನಿಸುವುದು ಕಾನೂನು ಬಾಹಿರ. ಅದೇ ವೇಳೆ ಆಯುಧಗಳ ಪ್ರದರ್ಶನಕ್ಕೂ ನಿರ್ಬಂಧವಿದೆ.

ಅಪಹಾಸ್ಯ, ಲೇವಡಿ ಬೇಡ: ಯಾವುದೇ ವ್ಯಕ್ತಿಯನ್ನು ನಿಂದಿಸಿ, ಅಪಹಾಸ್ಯ ಮಾಡುವ ಪೋಸ್ಟ್‌ಗಳು ಒಳ್ಳೆಯದಲ್ಲ. ಯಾವುದೋ ವ್ಯಕ್ತಿಯ ನ್ಯೂನತೆ, ರೋಗ ಅಥವಾ ವೈಕಲ್ಯವನ್ನು ಲೇವಡಿ ಮಾಡುವ ಪೋಸ್ಟ್‌ಗಳು ಬೇಡವೇ ಬೇಡ. ಮಹಿಳೆಯರನ್ನು ನಿಂದಿಸುವ ಪೋಸ್ಟ್‌ಗಳನ್ನು ಶೇರ್ ಮಾಡಿದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT