ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುಕಥೆಯೆಲ್ಲವೂ ಹುಟ್ಟು ಹಾಡಾಗುತ್ತ...

Last Updated 17 ಮೇ 2018, 19:30 IST
ಅಕ್ಷರ ಗಾತ್ರ

ಹೊರಗಡೆ ಆಕಾಶ ಭೂಮಿಯ ಮೇಲೆ ಚೂಪು ಮೊಳೆಗಳಂಥ ಹನಿಗಳನ್ನು ಕುಟ್ಟುತ್ತಿದ್ದರೆ, ಕಲಾವಿದರ ಸಂಘದ ಒಳಗಡೆ ಎಲ್ಲರೂ ‘ಕಟ್ಟು ಕಥೆ’ ಕೇಳುವುದರಲ್ಲಿ ತಲ್ಲೀನರಾಗಿದ್ದರು. ಸಾಮಾನ್ಯವಾಗಿ ಇಲ್ಲದ್ದನ್ನು ಹುಟ್ಟಿಸಿ ಹೇಳುವುದನ್ನು ಕಟ್ಟು ಕಥೆ ಎಂದು ಕರೆಯುತ್ತೇವೆ.

ಆದರೆ ರಾಜ್‌ ಪ್ರವೀಣ್‌, ನೈಜ ಘಟನೆಯನ್ನೇ ಇಟ್ಟುಕೊಂಡು ಒಂದು ಸಿನಿಮಾ ಕಟ್ಟಿದ್ದಾರೆ. ಅದಕ್ಕೆ ‘ಕಟ್ಟುಕಥೆ’ ಎಂದು ಹೆಸರಿಟ್ಟಿದ್ದಾರೆ! ಈ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆಗಾಗಿ ಚಿತ್ರತಂಡದೊಂದಿಗೆ ನಿರ್ದೇಶಕ ಯೋಗರಾಜ್ ಭಟ್‌ ಮತ್ತು ಸೂರಿ ಇಬ್ಬರೂ ಹಾಜರಿದ್ದರು.

ಪದೇ ಪದೇ ವಿದ್ಯುತ್‌ ಕೈಕೊಟ್ಟು ಮಾತಿಗೆ ಅಡಚಣೆ ಆದಾಗ ರಾಜ್‌ ಪ್ರವೀಣ್‌ ಅವರ ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಈ ಆತಂಕದ ಗೆರೆಗಳಲ್ಲಿ ತಮ್ಮ ಮೊದಲ ಸಿನಿಮಾದ ನೆನಪುಗಳನ್ನು ಹೆಕ್ಕುವ ಪ್ರಯತ್ನ ಮಾಡಿದರು ಸೂರಿ.

‘ಈ ಹೊಸ ನಿರ್ದೇಶಕರ ಚಡಪಡಿಕೆಯನ್ನು ನೋಡುತ್ತಿದ್ದಾಗ ನನ್ನ ‘ದುನಿಯಾ’ ಸಿನಿಮಾದ ಪತ್ರಿಕಾಗೋಷ್ಠಿಯ ಸಂದರ್ಭ ನೆನಪಿಗೆ ಬರುತ್ತಿದೆ. ಇಂಥ ಚಡಪಡಿಕೆಯ ಗುಣ ಇರುವವರು ಒಳ್ಳೆಯ ಸಿನಿಮಾಗಳನ್ನು ಕೊಡುತ್ತಾರೆ. ಈ ಚಿತ್ರದ ಸಂದೇಶ ಚೆನ್ನಾಗಿದೆ. ನಮ್ಮಲ್ಲಿ ಸಾಕಷ್ಟು ಒಳ್ಳೆಯ ಪ್ರತಿಭೆಗಳಿವೆ. ಅವರನ್ನು ಪ್ರೋತ್ಸಾಹಿಸಿ ಚಿತ್ರರಂಗವನ್ನು ಸಮೃದ್ಧಗೊಳಿಸೋಣ. ದಯವಿಟ್ಟು ಈ ಚಿತ್ರಕ್ಕೆ ವೋಟ್‌ ಮಾಡಿ’ ಎಂದು ಚುನಾವಣೆಯ ಗಂಧವನ್ನೂ ಸೇರಿಸುವ ಪ್ರಯತ್ನ ಮಾಡಿದರು.

ಪತ್ರಿಕಾಗೋಷ್ಠಿಗೂ ಮುನ್ನ ಚಿತ್ರದ ಮೂರು ಹಾಡುಗಳನ್ನು ತೋರಿಸಲಾಯಿತು. ‘ಇಂದಿನ ನಿಜವಾದ ನಾಯಕ ಸಂಗೀತ ನಿರ್ದೇಶಕ ವಿಕ್ರಂ ಸುಬ್ರಮಣ್ಯ ಮತ್ತು ಸಾಹಿತ್ಯ ಬರೆದವರು’ ಎಂದರು ಯೋಗರಾಜ್‌ ಭಟ್‌.

ಮಾಸ್ತಿ ಅವರ ಚುರುಕು ಸಂಭಾಷಣೆಯೂ ಈ ಚಿತ್ರಕ್ಕಿದೆ. ‘ಈ ಚಿತ್ರಕ್ಕೆ ಸಂಭಾಷಣೆ ಬರೆಯಲು ನನಗೆ ಅಷ್ಟೊಂದು ಕಷ್ಟ ಎನಿಸಲಿಲ್ಲ. ಸುಲಭವಾಗಿಯೇ ಬರೆದೆ. ಆದರೆ ಸೂರಿ ಮತ್ತು ಯೋಗರಾಜ ಭಟ್‌ ಅವರಿಬ್ಬರನ್ನೂ ಈ ಕಾರ್ಯಕ್ರಮಕ್ಕೆ ಕರೆತರಲು ಸಾಕಷ್ಟು ಕಷ್ಟಪಡಬೇಕಾಯ್ತು’ ಎಂದು ತಮಾಷೆಯಾಗಿಯೇ ಹೇಳಿದರು ಮಾಸ್ತಿ.

‘ಇದೊಂದು ಮರ್ಡರ್ ಮಿಸ್ಟರಿ ಕಥೆ. ಆದರೆ ಹಾಸ್ಯವೂ ಇದೆ. ಹಾರರ್ ಅಂಶವೂ ಇದೆ. ಬೇರೆ ಬೇರೆ ಅಭಿರುಚಿಯ ಪ್ರೇಕ್ಷಕರೆಲ್ಲರೂ ಇಷ್ಟಪಡುವಂಥ ಸಿನಿಮಾ ಇದು’ ಎಂದರು ನಿರ್ದೇಶಕ ಪ್ರವೀಣ್‌.

ಮಹಾಲಕ್ಷ್ಮೀ ಸ್ಟೀಟ್ಸ್‌ ಮಾಲೀಕರಾದ ಮಹದೇವ್‌ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‘ಕೈಗೆ ದುಡ್ಡು ಸಿಕ್ಕಾಗ ಮಾತ್ರ ಬದುಕು ಸಿಹಿಯಾಗಿರುತ್ತದೆ. ಆರಂಭದಲ್ಲಿ ಜೀವನ ನಿರ್ವಹಣೆಗಾಗಿ ಸಿಹಿತಿನಿಸುಗಳ ಅಂಗಡಿ ತೆರೆದ ನಾವು ನಂತರ ಬ್ಯುಸಿನೆಸ್‌ ಅನ್ನು ವಿಸ್ತರಿಸಿದೆವು. ಈಗ ಸಿನಿಮಾ ಕ್ಷೇತ್ರದಲ್ಲಿ ಒಂದು ಸಿಹಿಯಾದ ಸಿನಿಮಾ ಮಾಡಿದ್ದೇವೆ. ಯೋಗರಾಜ ಭಟ್‌ ಅವರ ಹೆಸರಲ್ಲಿಯೇ ಇರುವ ಯೋಗ ನಮಗೂ ಒಂಚೂರು ಸಿಗಲಿ. ಹಾಗೆಯೇ ಸೂರಿ ಅವರ ಕಿರಣದಲ್ಲಿ ಒಂದಿಷ್ಟಾದರೂ ನಮಗೆ ಬರಲಿ’ ಎಂದರು ಮಹದೇವ್. ಎನ್‌. ಸವಿತಾ ಕೂಡ ಈ ಚಿತ್ರದ ನಿರ್ಮಾಣಕ್ಕೆ ಹಣ ಜೋಡಿಸಿದ್ದಾರೆ.

ಸೂರ್ಯ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರೆ, ಸ್ವಾತಿ ಕೊಂಡೆ ನಾಯಕಿಯಾಗಿ ತೆರೆಯನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT