ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೂ ಘನತೆಯಿಂದ ಬಾಳುವ ಹಕ್ಕಿದೆ...

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ಮನಸ್ಸಿನ ಆರೋಗ್ಯವು ದೇಹದ ಆರೋಗ್ಯದಷ್ಟೇ ಮುಖ್ಯ. ಆದರೂ ಮನಸ್ಸಿನ ಸ್ವಾಸ್ಥ್ಯಕ್ಕೆ ಮನುಷ್ಯ ಅಷ್ಟೊಂದು ಮಹತ್ವ ನೀಡಿಲ್ಲ. ಮೊದಲಿನಿಂದಲೂ ಮನೋರೋಗಿಗಳನ್ನು ಸಮಾಜ ಹೀನಾಯವಾಗಿಯೇ ಕಾಣುತ್ತಿದೆ. ಅವರ ಭಾವನೆಗಳಿಗಾಗಲಿ ಅಥವಾ ಹಕ್ಕುಗಳಿಗಾಗಲಿ ನೀಡಿರುವ ಬೆಲೆ ನಗಣ್ಯ. ವ್ಯಕ್ತಿಯ ವರ್ತನೆಯಲ್ಲಿ ಸ್ವಲ್ಪ ಬದಲಾವಣೆಯಾದರೆ ಅಥವಾ ವಿಕೋಪದಿಂದ ವರ್ತಿಸಿದರೆ ಅವರನ್ನು ಮನೋರೋಗಿಗಳ ಆಶ್ರಯತಾಣಗಳಲ್ಲೋ, ಮಾನಸಿಕ ಆಸ್ಪತ್ರೆಗಳಲ್ಲೋ ಇಲ್ಲವೇ ಧಾರ್ಮಿಕ ಸ್ಥಳಗಳಲ್ಲೋ ಬಂಧಿಗಳನ್ನಾಗಿಸಲಾಗುತ್ತಿತ್ತು.

ಅಲ್ಲಿ ಆಹಾರ, ಸ್ವಚ್ಛತೆಯಂತಹ ಮೂಲಭೂತ ಸೌಕರ್ಯಗಳಿಲ್ಲದೇ, ಸರ್ಕಸ್ಸಿನ ಪ್ರಾಣಿಗಳಂತೆ ಅವರನ್ನು ಸರಪಳಿ ಬಿಗಿದು ತುಚ್ಛವಾಗಿ ನೋಡಲಾಗುತ್ತಿತ್ತು. ಒಮ್ಮೆ ಮಾನಸಿಕ ಆಸ್ಪತ್ರೆಗೆ ಹೋಗಿ ಬಂದರೆ ಮರಳಿ ಸಾಮಾನ್ಯರಂತೆ ಬದುಕುವುದು ಅಸಾಧ್ಯವೆಂಬ ಭಾವನೆ ಸಮಾಜದಲ್ಲಿತ್ತು. ರೋಗ ವಾಸಿಯಾದರೂ, ಸಮಾಜ ಅಂಟಿಸಿದ ಹುಚ್ಚ ಅಥವಾ ಮಾನಸಿಕ ವ್ಯಕ್ತಿ ಎಂಬ ಕಳಂಕ ವಾಸಿಯಾಗುತ್ತಿರಲ್ಲಿ. ನಿಮ್ಹಾನ್ಸ್‌ ಸಂಸ್ಥೆ ವಿಶ್ವಮಟ್ಟದಲ್ಲಿ ತನ್ನ ಸಾಧನೆಯಿಂದ ಎಷ್ಟೇ ಹೆಸರು ಗಳಿಸಿದ್ದರೂ ಸಾಮಾನ್ಯ ಜನರಿಗೆ ಅದಿನ್ನೂ ಹುಚ್ಚಾಸ್ಪತ್ರೆಯೇ!

ನಮ್ಮ ದೇಶದಲ್ಲಿ ಮನೋರೋಗಿಗಳ ಸಹಾಯಕ್ಕೆ ಹಾಗೂ ಮಾನಸಿಕ ಆರೋಗ್ಯ ವಿಷಯದ ನಿಯಂತ್ರಣದ ಬಗ್ಗೆ ಅನೇಕ ಕಾಯಿದೆ ಕಾನೂನುಗಳಿವೆ. ಆದರೂ, ಮಾನಸಿಕ ಆರೋಗ್ಯದ ವಿಷಯವು ಸರ್ಕಾರ, ಸಮಾಜ ಹಾಗೂ ಇತರೆ ವೈದ್ಯಕೀಯ ಕ್ಷೇತ್ರದ ತಜ್ಞರಿಂದ ಅಸಡ್ಡೆಗೊಳಪಟ್ಟಿದೆ. ಕೆಲವೊಮ್ಮೆ ಎರ್ವಾಡಿಯಂತಹ ಭೀಕರ ಘಟನೆಗಳು ಸರ್ಕಾರ ಹಾಗೂ ಸಂಘ–ಸಂಸ್ಥೆಗಳ ಕಣ್ಣು ತೆರೆಸಿ, ಮನೋರೋಗಿಗಳ ಹಕ್ಕುಗಳ ಬಗ್ಗೆ ಕೊಂಚ ಜಾಗೃತರಾಗುವಂತೆ ಮಾಡಿವೆ.

ಇಲ್ಲಿಯವರೆಗೆ ಭಾರತದಲ್ಲಿ, ಇಂಡಿಯನ್ ಲೂನಸಿ ಆಕ್ಟ್ - 1912, ಮಾನಸಿಕ ಆರೋಗ್ಯ ಕಾಯಿದೆ -1987 ಮುಂತಾದವುಗಳು, ಮಾನಸಿಕ ಆರೋಗ್ಯದ ಬಗ್ಗೆ ನೀತಿ–ನಿಯಮಗಳನ್ನು ರೂಪಿಸಿ, ನಿರ್ದೇಶನಗಳನ್ನು ಜಾರಿಗೊಳಿಸಿದ್ದವು. ಆದರೆ ಅವುಗಳ ಅನುಷ್ಠಾನ ಮಾತ್ರ ಬಹುಭಾಗ ಕಾಗದದ ಮೇಲೆಯಷ್ಟೆ ಆಗಿತ್ತು. 2007ರಲ್ಲಿ ಭಾರತವು ವಿಶ್ವಸಂಸ್ಥೆಯಲ್ಲಿ ನಡೆದ ‘ಅಂಗವೈಕಲ್ಯ ಹೊಂದಿದ ವ್ಯಕ್ತಿಗಳ ಹಕ್ಕುಗಳ ಸಮಾವೇಶ’ದಲ್ಲಿ (Convention on the Rights of Persons with Disabilities), ಅವರ ಹಕ್ಕುಗಳ ಬಗ್ಗೆ ಅಂತರರಾಷ್ಟ್ರೀಯ ಮಾನದಂಡವನ್ನು ಅನುಸರಿಸುವುದಾಗಿ ಒಪ್ಪಿಕೊಂಡಿತು.

ಹೀಗಾಗಿ ಅಂತರರಾಷ್ಟ್ರೀಯ ಕಾನೂನು, ಕಾಯಿದೆಗಳ ಪ್ರಕಾರವೇ ಭಾರತದಲ್ಲೂ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಕಾಯಿದೆಯನ್ನು ಜಾರಿಗೆ ತರುವುದು ಅವಶ್ಯಕವಾಯಿತು. ಅದರಂತೆ ಭಾರತ ಸರ್ಕಾರವು, ಮಾನಸಿಕ ಆರೋಗ್ಯ ಕ್ಷೇತ್ರದ ಎಲ್ಲ ಪಾಲುದಾರರ ಅಭಿಮತವನ್ನು  ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ಕಾನೂನು ಶಾಲೆಯ ಸಹಯೋಗದೊಂದಿಗೆ ಮಾನಸಿಕ ಆರೋಗ್ಯ ಕಾಳಜಿ ಮಸೂದೆಯ (Mental Health Care Bill) ಕರಡನ್ನು ಸಿದ್ಧಪಡಿಸಿತು.

ಆಗಸ್ಟ್‌ 2016ರಲ್ಲಿ ರಾಜ್ಯಸಭೆ ಹಾಗೂ ಏಪ್ರಿಲ್ 2017ರಲ್ಲಿ ಲೋಕಸಭೆಯು ಈ ಮಸೂದೆಯನ್ನು ಅಂಗೀಕರಿಸಿತು. ಮಾನಸಿಕ ಆರೋಗ್ಯ ಕಾಳಜಿ ಕಾಯಿದೆಯು 7ನೇ ಜುಲೈ 2018ರಿಂದ ಜಾರಿಗೆ ಬರಲಿದೆ.

ಈ ಕಾಯಿದೆಯಡಿ, ಸರ್ಕಾರವೇ ಮಾನಸಿಕ ಅಸ್ವಸ್ಥರಿಗೆ ಅವಶ್ಯಕವಿರುವ ಗುಣಮಟ್ಟದ ಚಿಕಿತ್ಸೆ ಹಾಗೂ ಇನ್ನಿತರ ಸೌಭ್ಯಗಳನ್ನು ಭೌಗೋಳಿಕ ಕ್ಷೇತ್ರಕ್ಕನುಸಾರವಾಗಿ ಒದಗಿಸಬೇಕಾಗಿದೆ.

ಏಕೆಂದರೆ ಉತ್ತಮ ಚಿಕಿತ್ಸಾ ಸೇವೆಗಳಿಗಾಗಿ ನಮ್ಮ ದೇಶದಲ್ಲಿ ಜನರು ದೂರ ದೂರದ ಊರುಗಳಿಗೆ ಹೋಗಬೇಕಾಗಿತ್ತು. ಮಾನಸಿಕ ಆರೋಗ್ಯ ಹಾಗೂ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಈ ಬಗ್ಗೆ ಇರುವ ಕಳಂಕವನ್ನು ತೊಡೆದು ಹಾಕುವುದು, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮಾನಸಿಕ ಆರೋಗ್ಯ ಪ್ರಾಧಿಕಾರಗಳನ್ನು ರಚಿಸಿ, ರೋಗಿಯ ಹಕ್ಕುಗಳು, ಮಾನಸಿಕ ಆರೋಗ್ಯ ಸಂಸ್ಥೆಗಳ ಸ್ಥಾಪನೆಗೆ ಅನುಮತಿ ಹಾಗೂ ಇನ್ನಿತರ ವಿಷಯಗಳ ನಿಯಂತ್ರಣ ಮಾಡುವುದು ಸರಕಾರದ ಆದ್ಯ ಕರ್ತವ್ಯವಾಗಿದೆ.

ನಮ್ಮ ದೇಶದಲ್ಲಿ, 1ರಿಂದ 2 ಲಕ್ಷ ಜನಸಂಖ್ಯೆಗೆ ಒಬ್ಬರು ಮನೋರೋಗ ತಜ್ಞರಿದ್ದಾರೆ. ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ವರದಿಯ ಪ್ರಕಾರ ದೇಶದಲ್ಲಿ, 11,000 ಮನೋರೋಗ ತಜ್ಞರ ಅವಶ್ಯಕತೆ ಇದ್ದು, ಆದರೆ ಸಧ್ಯಕ್ಕೆ ಕೇವಲ 4000 ತಜ್ಞರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕಾಯಿದೆಯಡಿ ಮುಂದಿನ 10 ವರ್ಷಗಳಲ್ಲಿ ಈ ಸಂಖ್ಯೆ ‌‌‌‌‌‌ತಲುಪುವ ಅಲುವಾಗಿ ಮನೋರೋಗ ತಜ್ಞರ, ಮನಃಶಾಸ್ತ್ರಜ್ಞರ, ಸಾಮಾಜಿಕ ಕಾರ್ಯಕರ್ತರ ಹಾಗೂ ಶುಶ್ರೂಶಕಿಯರ ಸಂಖ್ಯೆ ಹೆಚ್ಚಿಸಲು, ಮಾನವ ಸಂಪನ್ಮೂ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ.

ಈ ಕಾಯಿದೆಯು ವ್ಯಕ್ತಿಗೆ ತನ್ನ ರೋಗದ ಬಗ್ಗೆ ಸಂಪೂರ್ಣ ಮಾಹಿತಿ, ವೈದ್ಯಕೀಯ ದಾಖಲೆಗಳನ್ನು ಪಡೆಯುವ ಹಾಗೂ ರೋಗದ ಬಗ್ಗೆ ಗೌಪ್ಯತೆ ಕಾಡಾಡಿಕೊಳ್ಳುವ ಹಕ್ಕನ್ನು ನೀಡುತ್ತದೆ. ಇದಷ್ಟೇ ಅಲ್ಲದೇ, ಮುಂಗಡ ನಿರ್ದೇಶನದ (Advance Directive) ಮುಖಾಂತರ ತನಗೆ ಭವಿಷ್ಯದಲ್ಲಿ ಅಸ್ವಸ್ಥನಾದರೆ, ಯಾವ ಚಿಕಿತ್ಸೆ ಬೇಕು ಇಲ್ಲವೇ ಬೇಡ ಎಂಬುದನ್ನು ನಿರ್ಧರಿಸಬಹುದು.

ಭವಿಷ್ಯದಲ್ಲಿ ಅಸ್ವಸ್ಥನಾದರೆ ತನ್ನ ಪರವಾಗಿ ತನ್ನ ಚಿಕಿತ್ಸೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ನೇಮಿತ ಪ್ರತಿನಿಧಿಯನ್ನು (Nominated Representative) ನೇಮಿಸಿಕೊಳ್ಳಬಹುದಾಗಿದೆ.

ಆ ನೇಮಿತ ಪ್ರತಿನಿಧಿಯು ವೈದ್ಯರಿಗೆ, ರೋಗಿಯ ಚಿಕಿತ್ಸೆಯ ಬಗ್ಗೆ ನಿರ್ಧಾರವನ್ನು ತಿಳಿಸಬಹುದಾಗಿದೆ. ಮುಂಗಡ ನಿರ್ದೇಶನದ ಹಕ್ಕಿನ ಬಗ್ಗೆ ಮಾನಸಿಕ ಆರೋಗ್ಯ ಕ್ಷೇತ್ರದ ಪಾಲುದಾರರಲ್ಲೇ ಎರಡು ಅಭಿಪ್ರಾಯಗಳಿವೆ.

ಒಂದು ಗುಂಪು ಮುಂಗಡ ನಿರ್ದೇಶನವನ್ನು ಸ್ವಾಗತಿಸಿ, ರೋಗಿಗೆ ಚಿಕಿತ್ಸೆಯ ಆಯ್ಕೆಯಲ್ಲಿ ಸ್ವಾಯತ್ತತೆ ನೀಡುವುದರಿಂದ ಅವರ ಹಕ್ಕುಗಳನ್ನು ಕಾಪಾಡುವುದರೊಂದಿಗೆ, ಚಿಕಿತ್ಸೆಯ ಹೆಸರಲ್ಲಿ ಅವರ ಮೇಲಾಗುವ ದೌರ್ಜನ್ಯವನ್ನು ತಡೆಯಬಹುದು ಎನ್ನುತ್ತದೆ.

ಆದರೆ, ಇನ್ನೊಂದು ಗುಂಪು, ಸಾಕ್ಷರತೆಯ ಕೊರತೆ ಹಾಗೂ ಕುಟುಂಬ ಪ್ರಧಾನ ಸಮಾಜ ಹೊಂದಿರುವ ನಮ್ಮ ದೇಶದಲ್ಲಿ ರೋಗಿಯ ಆರೈಕೆಯಲ್ಲಿ ಕುಟುಂಬದ ಪಾತ್ರ ಅತಿ ಮುಖ್ಯ. ಮುಂಗಡ ನಿರ್ದೇಶನದಿಂದಾಗಿ ಕುಟುಂಬ ಸದಸ್ಯರಿಗೆ ರೋಗಿಯ ಚಿಕಿತ್ಸೆಯನ್ನು ನಿರ್ಧರಿಸುವುದರಲ್ಲಿ ಅವಕಾಶಗಳು ಕಡಿಮೆಯಾಗಿ ಆರೈಕೆಯಲ್ಲಿ ಅಸಡ್ಡೆಯಾಗಬಹುದೆಂದು ಅಭಿಮತ ವ್ಯಕ್ತಪಡಿಸುತ್ತದೆ. ಈ ಕಾಯಿದೆಯು ಅರಿವಳಿಕೆಯಿಲ್ಲದೇ ನೀಡುವಂತಹ ವಿದ್ಯುತ್‍ಕಂಪನ ಚಿಕಿತ್ಸೆಯನ್ನು (Unmodified Electroconvulsive Therapy) ನಿಷೇಧಿಸಿದೆ.

ಭಾರತದಲ್ಲಿ, ಯಾವುದೇ ಜೀವ ವಿಮೆ ಯೋಜನೆಗಳು ಮಾನಸಿಕ ಅಸ್ವಸ್ಥತೆಯನ್ನು ವಿಮೆಯ ವ್ಯಾಪ್ತಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಈ ಕಾಯಿದೆಯು ಮಾನಸಿಕ ರೋಗಗಳನ್ನು ಉಳಿದೆಲ್ಲಾ ರೋಗಗಳಂತೆ ವಿಮೆಯ ವ್ಯಾಪ್ತಿಗೆ ತರುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ರೋಗಿಯ ಹಾಗೂ ಅವರ ಕುಟುಂಬದ ಮೇಲೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.

ನಮ್ಮ ದೇಶದಲ್ಲಿ ಉತ್ತಮ ಕಾಯಿದೆ, ಕಾನೂನುಗಳಿಗೇನು ಕೊರತೆಯಿಲ್ಲ. ಆದರೆ, ಅವುಗಳ ಅನುಷ್ಠಾನ ಹಾಗೂ ಪಾಲನೆಯಲ್ಲಿ ಸರ್ಕಾರ ಹಾಗೂ ಸಾರ್ವಜನಿಕರಾದಿಯಾಗಿ ಹೆಚ್ಚು ಕಡಿಮೆ ಎಲ್ಲರೂ ವಿಫಲರಾಗಿದ್ದಾರೆ. ಮಾನಸಿಕ ಆರೋಗ್ಯ ಕಾಳಜಿ ಕಾಯಿದೆಯು, ಈ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದಾದಂತಹ ಸಾಧನವಾಗಿದೆ. ಈ ವರ್ಷದ ಆಯವ್ಯಯದಲ್ಲಿ, ಕೇಂದ್ರ ಸರ್ಕಾರವು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕೆ ಮೀಸಲಿಟ್ಟ ಮೊತ್ತ ಕೇವಲ 50ಕೋಟಿ.

1.5 ಕೋಟಿ ಜನರು ಮನೋರೋಗಿಗಳಿರುವ ದೇಶದಲ್ಲಿ ಸರ್ಕಾರ ತನ್ನ ಒಟ್ಟೂ ಆರೋಗ್ಯ ಬಜೆಟ್‍ನ ಶೇ 0.1ರಷ್ಟು ಮಾತ್ರ ಮಾನಸಿಕ ಆರೋಗ್ಯದ ಮೇಲೆ ಖರ್ಚು ಮಾಡುತ್ತಿದೆ. ಇಂತಹ ವಿಚಾರಗಳು ಮಾನಸಿಕ ಆರೋಗ್ಯ ಕಾಳಜಿ ಕಾಯಿದೆಯ ಸರಿಯಾದ ಅನುಷ್ಠಾನದ ಬಗ್ಗೆ ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತವೆ. ಅದಕ್ಕೆ ಅವಶ್ಯಕತೆಯಿರುವ ಯೋಜನೆ, ಅನುದಾನ, ಮಾನವ ಸಂಪನ್ಮೂಲ, ಇವ್ಲೆಲ್ಲಕ್ಕಿಂತ ಹೆಚ್ಚಾಗಿ ಇಚ್ಛಾಶಕ್ತಿಯನ್ನು ಸರಕಾರವು ಹೇಗೆ ಹೊಂದಿಸುತ್ತದೆ ಎಂಬುದು ಕುತೂಹಕಾರಿ ವಿಷಯ.

ಆದರೂ, ಪ್ರಗತಿಪರ ಹಾಗೂ ರೋಗಿಗಳ ಹಿತವನ್ನು ಧ್ಯೇಯವನ್ನಾಗಿಸಿಕೊಂಡು ರೂಪಿಸಲಾದ ಈ ಕಾಯಿದೆಯು ಕಾಗದದ ಮೇಲೆ ಸುಂದರಕಾವ್ಯವಾಗಿ ಉಳಿಯದೇ ವಾಸ್ತವದಲ್ಲಿ ಸಮರ್ಪಕವಾಗಿ ಜಾರಿಗೆ ಬಂದು ಸಂಬಂಧಪಟ್ಟವರ್ಲೆರಿಗೂ ಅನುಕೂಲವುಂಟು ಮಾಡುವುದೆಂಬ ಆಶಾಭಾವನೆಯೊಂದಿಗೆ ಮುನ್ನಡೆಯೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT