ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಡಿಗೆ ಈಗ ಬಲು ದುಬಾರಿ

ದರ ಹೆಚ್ಚಳಕ್ಕಿಲ್ಲ ನಿರ್ದಿಷ್ಟ ಸೂತ್ರ; ಮೂಲ ಸೌಕರ್ಯ ಮಾತ್ರ ನಗಣ್ಯ ಎಂಬ ಆರೋಪ
Last Updated 21 ಮೇ 2018, 11:17 IST
ಅಕ್ಷರ ಗಾತ್ರ

ರಾಮನಗರ: ‘ಮೂರು ವರ್ಷದಿಂದ ಇದೇ ಮನೆಯಲ್ಲಿ ಬಾಡಿಗೆಗೆ ಇದ್ದೇವೆ. ಮೊದಲಿಗೆ ಬಾಡಿಗೆ ದರ ₹3,500 ಇತ್ತು. ಈವರೆಗೆ ಅದು ₹5,500 ವರೆಗೂ ಹೆಚ್ಚಾಗಿತ್ತು. ಈಗ ಮನೆ ಮಾಲೀಕರು ಏಕಾಏಕಿ ಬಾಡಿಗೆ ದರವನ್ನು ₹6,500ಕ್ಕೆ ಹೆಚ್ಚಿಸಿದ್ದಾರೆ. ಪ್ರಶ್ನಿಸಿದರೆ, ‘ಇದ್ದರೆ ಇರಿ. ಇಲ್ಲವಾದರೆ ಖಾಲಿ ಮಾಡಿ ಎನ್ನುತ್ತಾರೆ’...

ಇಲ್ಲಿನ ವಿವೇಕಾನಂದ ನಗರದ ನಿವಾಸಿಯೊಬ್ಬರು ಹೀಗೆ ಅಳಲು ತೋಡಿಕೊಳ್ಳುತ್ತಾರೆ. ನಗರದಲ್ಲಿ ಬಾಡಿಗೆಗೆ ಮನೆಗಳನ್ನು ಪಡೆದು ವಾಸವಿರುವ ಬಹುತೇಕರದು ಇದೇ ಸಮಸ್ಯೆ. ಬಾಡಿಗೆಗೆ ಮನೆ ದೊರಕುವುದೇ ಕಷ್ಟ ಎಂಬ ಸನ್ನಿವೇಶದಲ್ಲಿ, ಮನೆ ಸಿಕ್ಕ ಬಳಿಕವೂ ಬದುಕು ದುಬಾರಿಯಾಗುತ್ತ ಹೋಗುತ್ತಿದೆ. ‘ಇದ್ದವರಿಗೊಂದು ಮನೆ, ಇಲ್ಲದವರಿಗೆ ನೂರು’ ಎಂದು ಕವಿಯೊಬ್ಬರು ಹೇಳಿಬಿಟ್ಟರು. ಆದರೆ ಬಾಡಿಗೆ ಮನೆ ಸಹವಾಸವನ್ನು ಬಲ್ಲವರೇ ಬಲ್ಲರು ಎನ್ನುತ್ತಿದ್ದಾರೆ ನಗರದ ಜನ.

ಎಲ್ಲೆಲ್ಲಿ ಎಷ್ಟೆಷ್ಟು?: ಎರಡು ಕೋಣೆಯುಳ್ಳ ಮನೆ ಬೇಕೆನ್ನುವವರು ₹5,500ಕ್ಕೂ ಹೆಚ್ಚು ಬಾಡಿಗೆ ಕೊಡಲು ಸಿದ್ಧರಿರಬೇಕು. ಒಂದು ಕೋಣೆ ವ್ಯವಸ್ಥೆಯುಳ್ಳ ಮನೆಯಾದರೆ ಕನಿಷ್ಠ ₹4 ಸಾವಿರ ಬಾಡಿಗೆ ನೀಡಬೇಕು.

ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆ ಬಾಡಿಗೆಗೆ ಬೇಕೆನ್ನುವವರು ಕನಿಷ್ಠ ಬಾಡಿಗೆ ₹5 ಸಾವಿರದಿಂದ ₹7ಸಾವಿರ ಕೊಡಲು ಸಿದ್ಧರಿರಬೇಕು. ಇದಕ್ಕೆ ಕಡಿಮೆ ಬಾಡಿಗೆ ದರ ಮನೆ ಇಲ್ಲವೇ ಎಂದು ಕೇಳಿದರೆ ಮಾಲೀಕರ ಮೂದಲಿಕೆಯ ಮಾತುಗಳನ್ನು ಎದುರಿಸಬೇಕಾಗುತ್ತದೆ.

ಹೆಚ್ಚು ಶ್ರೀಮಂತರು ವಾಸಿಸುವ ವಿವೇಕಾನಂದ ನಗರ, ಐಜೂರು, ವಿಜಯನಗರ ಬಡಾವಣೆಗಳಲ್ಲಿ ಮನೆ ಬಾಡಿಗೆ ಆರಂಭಿಕ ದರವೇ ₹6 ಸಾವಿರ ಇದೆ. ಹೀಗಾಗಿ ಈ ಬಡಾವಣೆಗಳನ್ನು ಮಧ್ಯಮ ವರ್ಗದ ಜನ ನೆನಪಿಸಿಕೊಳ್ಳುವುದಿಲ್ಲ. ಮಂಜುನಾಥನಗರ, ಹನುಮಂತನಗರ, ಗಾಂಧಿನಗರ, ಅಗ್ರಹಾರ, ವಿನಾಯಕನಗರ ಸೇರಿದಂತೆ ಇತರ ನಗರಗಳಲ್ಲಿ ಕಡಿಮೆ ದರದಲ್ಲಿ ಮನೆಗಳು ಸಿಗುತ್ತವೆ. ಈ ಪ್ರದೇಶಗಳಲ್ಲಿ ₹3 ಸಾವಿರದಿಂದ ₹5 ಸಾವಿರದವರೆಗೆ ಬಾಡಿಗೆ ಮನೆಗಳು ದೊರೆಯುತ್ತವೆ.

ಮನೆಗಳನ್ನು ಬಾಡಿಗೆಗೆ ನೀಡುವ ಸ್ಥಿತಿಯಲ್ಲಿ ಇರುವವರ ಪೈಕಿ ಹೆಚ್ಚು ಮಂದಿ ಸರ್ಕಾರಿ ನೌಕರರು ಮತ್ತು ಉದ್ಯಮಿಗಳೇ ಆಗಿದ್ದಾರೆ. ಸುಭಿಕ್ಷ ಜೀವನವನ್ನು ನಡೆಸಲು ಬೇಕಾದ ಎಲ್ಲ ಸೌಕರ್ಯಗಳನ್ನು ಒಳಗೊಂಡಿದ್ದರೂ, ಕಡಿಮೆ ಬಾಡಿಗೆಗೆ ಮಾತ್ರ ಅವರು ಒಪ್ಪುವುದಿಲ್ಲ’ ಎಂಬುದು ಬಾಡಿಗೆದಾರರ ಅಸಮಾಧಾನವಾಗಿದೆ.

‘ಒಮ್ಮೆ ಮನೆ ಖಾಲಿಯಾಗಿ ಮತ್ತೊಬ್ಬರಿಗೆ ಬಾಡಿಗೆ ನೀಡುವ ಸನ್ನಿವೇಶ ನಿರ್ಮಾಣವಾದರೆ ಬಾಡಿಗೆ ದರವನ್ನು ಈ ಮಂದಿ ಏಕಾಏಕಿ ಸಾವಿರಗಟ್ಟಲೆ ಹೆಚ್ಚಿಸುತ್ತಾರೆ. ಅವರು ಹಾಗೆ ಮಾಡದಂತೆ ನಿಯಂತ್ರಿಸುವ ಕಾನೂನು ಇಲ್ಲವೆ?’ ಎಂಬುದು ಅವರ ಪ್ರಶ್ನೆ.

‘ಎಲ್ಲೆಲ್ಲೂ ಮನೆ ಬಾಡಿಗೆ ದರ ಹೆಚ್ಚಾಗಿದೆ ಎಂಬ ಹುಸಿ ವಾಸ್ತವವನ್ನು ಮನೆ ಮಾಲೀಕರು ಮತ್ತು ದಲ್ಲಾಳಿಗಳು ಸೃಷ್ಟಿಸುತ್ತಿರುವುದು ಮತ್ತೊಂದು ಆತಂಕಕಾರಿ ಬೆಳವಣಿಗೆ’ ಎನ್ನುತ್ತಾರೆ ವಿವೇಕಾನಂದ ನಗರದ ಚಂದ್ರಶೇಖರ್.

ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಹೀಗಾಗಿ ಮನೆ ಬಾಡಿಗೆಯೂ ಅನಿವಾರ್ಯವಾಗಿ ಹೆಚ್ಚಿಸಬೇಕಾಗಿದೆ ಎಂದು ಮನೆ ಮಾಲೀಕರು, ದಲ್ಲಾಳಿಗಳು ಪದೇ ಪದೇ ಹೇಳುವ ಮಾತು. ಆದರೆ ಆಯಾ ಬಡಾವಣೆಗಳಲ್ಲಿ ದೊರಕುವ ಸೌಲಭ್ಯಗಳು, ಮನೆಯಲ್ಲಿರುವ ಸೌಕರ್ಯ ನೋಡಿ ಬೆಲೆ ನಿಗದಿ ಮಾಡುವ ಸಹಜ ನ್ಯಾಯದ ಪ್ರಯತ್ನಗಳು ಈಗ ಮಾಯವಾಗಿವೆ. ಪ್ರತಿ ವರ್ಷವೂ ಮನೆ ಮಾಲೀಕರು ಬಾಡಿಗೆಯನ್ನು ಮನಸ್ಸಿಗೆ ಬಂದಂತೆ ಹಾಗೂ ಸ್ಪರ್ಧಾತ್ಮಕವಾಗಿ ಹೆಚ್ಚಿಸುವುದು ನಡೆಯುತ್ತಲೇ ಇದೆ.

ನೀರು ಇಲ್ಲ:  ಮನೆಯನ್ನು ಬಾಡಿಗೆಗೆ ಗ್ಯಾರಂಟಿ ಕೊಡುತ್ತೇವೆ. ಆದರೆ ನೀರು ಗ್ಯಾರಂಟಿ ಕೊಡಕ್ಕಾಗಲ್ಲ.... ಇದು ಬಹುತೇಕ ಮನೆಗಳ ಮಾಲೀಕರು ಬಾಡಿಗೆದಾರರಿಗೆ ತಪ್ಪದೇ ಈ ಮಾತನ್ನು ಹೇಳುತ್ತಾರೆ. ನಗರಸಭೆ ಸಮರ್ಪಕ
ವಾಗಿ ನಿಯಮಿತವಾಗಿ ನೀರನ್ನು ಪೂರೈಸುವುದಿಲ್ಲ. ಹೀಗಾಗಿ ಟ್ಯಾಂಕರ್‌ ನೀರನ್ನು ಖರಿದೀಸಲೇಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ನೀರಿನ ಮೊತ್ತವನ್ನು ಮಾಲೀಕರು ಬಾಡಿಗೆದಾರರೆಲ್ಲರೂ ಸೇರಿ ಭರಿಸಬೇಕಾಗುತ್ತದೆ ಎಂದು ವಿಜಯನಗರದ ಮನೆ ಮಾಲೀಕರೊಬ್ಬರು ಹೇಳುತ್ತಾರೆ.

‘ನಗರದ ಬಹುತೇಕ ಬಡಾವಣೆಗಳಲ್ಲಿ ಖಾಸಗಿ ಟ್ಯಾಂಕರ್ ನೀರನ್ನೇ ನಿತ್ಯ ಬಳಕೆಗೆ ಅವಲಂಬಿಸಿರುವುದರಿಂದ ಅದಕ್ಕೆ ಪ್ರತ್ಯೇಕ ಹಣವನ್ನು ನೀಡಬೇಕು. ನೀರಿಗಾಗಿ ತಿಂಗಳಿಗೆ ₹800 ರಿಂದ ₹1,200 ಖರ್ಚು ಮಾಡಬೇಕು’ ಎನ್ನುತ್ತಾರೆ ಹನುಮಂತನಗರದ ನಿವಾಸಿ ನಾಗಮ್ಮ.

ಬಾಡಿಗೆ ನಿಯಂತ್ರಣ ಕಾಯ್ದೆ

ಬಾಡಿಗೆ ನಿಯಂತ್ರಣ ಕಾಯ್ದೆ ಜಾರಿಯಲ್ಲಿದೆ. ಇದರ ಜಾರಿ ವಿಷಯದಲ್ಲಿ ಉಪವಿಭಾಗಾಧಿಕಾರಿಗೆ ಕೆಲವೊಂದು ಅಧಿಕಾರಗಳನ್ನು ನೀಡಲಾಗಿದೆ. ಕಾಯ್ದೆಯಲ್ಲಿ ಬಾಡಿಗೆ ದರವನ್ನು ನಿಯಂತ್ರಿಸುವ ಅವಕಾಶವಿದೆ. ಅದನ್ನು ಪರಿಶೀಲಿಸಿದ ಬಳಿಕ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

**
ಮಧ್ಯಮ ವರ್ಗದ ಕುಟುಂಬಕ್ಕೆ ಯೋಗ್ಯವಾದ ಮನೆ ಸಿಗಬೇಕಾದರೆ ತಿಂಗಳಿಗೆ ₹6 ಸಾವಿರ ಕೊಡಬೇಕು. ಬಾಡಿಗೆ ಕಡಿಮೆ ಇರುವ ಕಡೆ ಸೌಕರ್ಯವೂ ಕಡಿಮೆಯೇ
ಶಿವರಾಜು, ಐಜೂರು ನಿವಾಸಿ

–ಎಸ್. ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT