ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಹಾಕಿ: ಚೇಂದಂಡಕ್ಕೆ ಕುಲ್ಲೇಟಿರ ಕಪ್‌

ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟ ಅಂಜಪರವಂಡ, ಉತ್ಸವಕ್ಕೆ ಸಂಭ್ರಮದ ತೆರೆ ಟ
Last Updated 21 ಮೇ 2018, 13:10 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡವ ಕುಟುಂಬಗಳ ನಡುವಿನ 22ನೇ ವರ್ಷದ ಕುಲ್ಲೇಟಿರ ಕಪ್ ಹಾಕಿ ಉತ್ಸವದಲ್ಲಿ ಚೇಂದಂಡ ಚಾಂಪಿಯನ್‌ ಆದರು. ಕಳೆದ ವರ್ಷ ಇಲ್ಲಿನ ಜನರಲ್‌ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬಿದ್ದಾಟಂಡ ಕಪ್ ಹಾಕಿ ಟೂರ್ನಿಯಲ್ಲೂ ಪ್ರಶಸ್ತಿ ಗೆದ್ದಿದ್ದ ಚೇಂದಂಡ ತಂಡವು ಎರಡನೇ ಬಾರಿಗೆ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಚೇಂದಂಡ ತಂಡದವರು 2–0 ಗೋಲುಗಳಿಂದ ಅಂಜಪರವಂಡ ತಂಡವನ್ನು ಸೋಲಿಸಿ ಮತ್ತೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮಧ್ಯಾಹ್ನ 12.10ಕ್ಕೆ ಪಂದ್ಯ ಆರಂಭಗೊಂಡಿತು. ಆರಂಭದಿಂದಲೇ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಉಭಯ ತಂಡಗಳು ಬಿರುಸಿನ ಆಟದಲ್ಲಿ ತೊಡಗಿದವು. ಚೇಂದಂಡ ತಂಡದ ಆಟಗಾರ ಚೇಂದಂಡ ಬೋಪಣ್ಣ ಆರಂಭದಲ್ಲೇ ಒಂದು ಗೋಲು ದಾಖಲಿಸುವುದರ ಮೂಲಕ ಮುನ್ನಡೆ ಸಾಧಿಸಿದರು.

ಪಂದ್ಯದ ಮೊದಲ ಅರ್ಧ ಅವಧಿಯಲ್ಲಿ ಅಂಜಪರವಂಡ ತಂಡದ ಆಟಗಾರರು ಯಾವುದೇ ಗೋಲು ದಾಖಲಿಸಲಿಲ್ಲ. ಎರಡನೇ ಅವಧಿಯಲ್ಲಿ ಚೇಂದಂಡ ಆಟಗಾರ ಒಲಿಂಪಿಯನ್ ನಿತಿನಬ್‌ ತಿಮ್ಮಯ್ಯ ಗೋಲು ಗಳಿಸಿ ಮಿಂಚಿದರು. ಚೇಂದಂಡ ತಂಡವು 2–0 ಅಂತರದಲ್ಲಿ ಮುನ್ನಡೆ ಸಾಧಿಸಿತು.
ಪಂದ್ಯದ ಕೊನೆ ಹಂತದಲ್ಲಿ ಅಂಜಪರವಂಡ ತಂಡಕ್ಕೆ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿದರೂ ಚೇಂದಂಡ ತಂಡದ ಆಟಗಾರರ ಬಿಗಿ ಹಿಡಿತದಿಂದ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಅಂಜಪರವಂಡ ತಂಡದ ಪ್ರಯತ್ನ ಹಾಗೂ ಪ್ರತಿರೋಧ ಪ್ರಯೋಜನ ಕಾರಿಯಾಗದೇ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕುಲ್ಲೇಟಿರ ಕಪ್ ಹಾಕಿ ಉತ್ಸವದಲ್ಲಿ 334 ತಂಡಗಳು ಪಾಲ್ಗೊಂಡಿದ್ದವು. ಅದರಲ್ಲಿ ಚೇಂದಂಡ ತಂಡವು 22ನೇ ಕೊಡವ ಹಾಕಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

2008ರ ಪೊನ್ನಂಪೇಟೆಯಲ್ಲಿ ನಡೆದಿದ್ದ ಅಳಮೇಂಗಡ ಕಪ್‌ ಹಾಗೂ 2013ರ ಬಾಳುಗೋಡುವಿನಲ್ಲಿ ನಡೆದ ಮಾದಂಡ ಕಪ್‌ ಮುಡಿಗೇರಿಸಿಕೊಂಡಿದ್ದ ಅಂಜಪರವಂಡ ತಂಡಕ್ಕೆ 2018ರಲ್ಲಿ ಕುಲ್ಲೇಟಿರ ಕಪ್‌ ಗೆಲ್ಲುವ ಅವಕಾಶ ಲಭಿಸಲಿಲ್ಲ. ಅಂಜಪರವಂಡ ತಂಡದ ಪರ ಆಟಗಾರ್ತಿ ಅಂಜಪರವಂಡ ವಿಷ್ಮಾ ಆಟವಾಡಿ ಪ್ರೇಕ್ಷಕರ ಗಮನ ಸೆಳೆದರು.
ಫೈನಲ್ ಪಂದ್ಯದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲ್ಲೇಟಿರ ಕುಟುಂಬದ ಪಟ್ಟೇದಾರ್‌ ಕುಲ್ಲೇಟಿರ ಎಸ್. ಮಾದಪ್ಪ ಹಾಗೂ ಕುಲ್ಲೇಟಿರ ಹಾಕಿ ಉತ್ಸವದ ಅಧ್ಯಕ್ಷ ಕುಲ್ಲೇಟಿರ ಪಿ. ಶಂಭು ಮಂದಪ್ಪ ವಹಿಸಿದ್ದರು.
ಫೈನಲ್ ಪಂದ್ಯವನ್ನು ಬೆಳ್ಳಿಸ್ಟಿಕ್ ಹಿಡಿದು ಚೆಂಡನ್ನು ಎಸೆಯುವುದರ ಮೂಲಕ ಉದ್ಘಾಟಿಸಲಾಯಿತು.

ಒಲಿಂಪಿಯನ್ ಮನಿಯಪಂಡ ಎಂ. ಸೋಮಯ್ಯ, ಎಸ್.ಪಿ. ರಾಜೇಂದ್ರ ಪ್ರಸಾದ್ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವೈ. ಕುಲಕರ್ಣಿ, ಚೇನಂಡ ಕಿಶನ್, ಹಿರಿಯ ಪತ್ರಕರ್ತ ಎಂ.ಎ. ಪೊನ್ನಪ್ಪ, ಡಿವೈಎಸ್ಪಿ ಸುಂದರರಾಜ್, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮಂಡೇರ ರವಿ ಉತ್ತಪ್ಪ, ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಕಿ ತಂಡದ ಮಾಜಿ ನಾಯಕ ಮನಿಯಪಂಡ ಎಂ. ಸೋಮಯ್ಯ, ‘ಕುಲ್ಲೇಟಿರ ಹಾಕಿ ಉತ್ಸವದ ಆಯೋಜಕರಾದ ಕುಟುಂಬಸ್ಥರು ಉತ್ಸವವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹಾಕಿ ಕ್ರೀಡೆ ಮಾತ್ರವಲ್ಲ ಕೊಡವ ಕುಟುಂಬಗಳ ಒಗ್ಗೂಡುವಿಕೆಗೆ ಸಹಕಾರಿಯಾಗಿದೆ. ಸುಮಾರು 6 ಸಾವಿರದಷ್ಟು ಕೊಡಗಿನ ಹಾಕಿ ಪಟುಗಳು ಕ್ರೀಡೆಯಲ್ಲಿ ಭಾಗವಹಿಸಿರುವುದು ವಿಶೇಷ’ ಎಂದರು.

‘2016ರ ಒಲಿಂಪಿಕ್‌ನಲ್ಲಿ ಕೊಡಗಿನವರಾದ ಎಸ್.ಕೆ. ಉತ್ತಪ್ಪ, ನಿತಿನ್ ತಿಮ್ಮಯ್ಯ, ಎಸ್‌.ವಿ. ಸುನಿಲ್ ಹಾಗೂ ರಘುನಾಥ್ ಪಾಲ್ಗೊಂಡಿದ್ದು ಜಿಲ್ಲೆಯ ಕೀರ್ತಿ ಎತ್ತಿಹಿಡಿದಿದ್ದಾರೆ’ ಎಂದರು.

ಎಸ್‌ಪಿ ರಾಜೇಂದ್ರ ಪ್ರಸಾದ್ ಮಾತನಾಡಿ, ‘22 ವರ್ಷಗಳಿಂದ ಜಿಲ್ಲೆಯ ನಾನಾ ಭಾಗಗಳಲ್ಲಿ ನಡೆದು ಬಂದಿರುವ ಹಾಕಿ ಉತ್ಸವದ ಸಿದ್ಧತೆಯು ಗುಣಮಟ್ಟವೂ ಹೆಚ್ಚುತ್ತಿದೆ’ ಎಂದರು.

ಬೆಂಗಳೂರಿನ ರೇವಾ ವಿವಿ ಕುಲಪತಿ ಕುಲಕರ್ಣಿ, ‘ಹಾಕಿ ಉತ್ಸವ ಆಯೋಜಿಸುತ್ತಿರುವ ನಾಲ್ಕು ನಾಡಿಗೆ ಟರ್ಫ್‌ ಮೈದಾನದ ಅವಶ್ಯಕತೆ ಇದೆ. ಹಾಕಿ ಕ್ರೀಡೆಗೆ ಉತ್ತೇಜನ ನೀಡಲು ಸರ್ಕಾರ ಗಮನ ಹರಿಸಬೇಕು’ ಎಂದರು.

ಹಿರಿಯ ಪತ್ರಕರ್ತ ಎಂ.ಎ. ಪೊನ್ನಪ್ಪ ಮಾತನಾಡಿ, ‘ಜಿಲ್ಲೆಗೆ ಮೂಲಸೌಕರ್ಯ, ಅಭಿವೃದ್ಧಿ ಹಾಗೂ ಹಾಕಿ ಟೂರ್ನಿ ನಡೆಸಲು ಸಹಕಾರ ನೀಡಬೇಕು. ನಾಪೋಕ್ಲುವಿನ ಕ್ರೀಡಾ ಮೈದಾನಕ್ಕೆ ಟರ್ಫ್‌ ಮೈದಾನದ ಅಗತ್ಯವಿದ್ದು, ಸರ್ಕಾರದಿಂದ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದರು. ನಾಪೋಕ್ಲು ಕೊಡವ ಸಮಾಜದ ದುಡಿಕೊಟ್ಟ್ ಪಾಟ್, ಪುಟಾಣಿ ಮಕ್ಕಳ ಮೆರವಣಿಗೆ ಕುಲ್ಲೇಟಿರ ಕುಟುಂಬಸ್ಥರ ಮೆರವಣಿಗೆ ಗಮನ ಸೆಳೆಯಿತು.ಅತಿಥಿಗಳು ವಿಜೇತ ತಂಡಗಳಿಗೆ ಪ್ರಶಸ್ತಿ ಹಾಗೂ ಟ್ರೋಫಿ ವಿತರಿಸಿದರು. ಪಂದ್ಯದಲ್ಲಿ ಜಯಗಳಿಸಿದ ಚೇಂದಂಡ ತಂಡಕ್ಕೆ ಮಧುಮಗಳ ಕೊಡವ ಸಾಂಪ್ರದಾಯಿಕ ವಸ್ತ್ರಾಭರಣ ಮತ್ತು ರನ್ನರ್ಸ್ ಅಂಜಪರವಂಡ ತಂಡಕ್ಕೆ ಮಧುಮಗನ ಕೊಡವ ಸಾಂಪ್ರದಾಯಿಕ ವಸ್ತ್ರಾಭರಣವನ್ನು ನೀಡಿ ಗೌರವಿಸಲಾಯಿತು.

ನಾಪೋಕ್ಲು: ಕುತೂಹಲದ ಪಂದ್ಯ ವೀಕ್ಷಿಸಲು ಗ್ಯಾಲರಿಯ ತುಂಬೆಲ್ಲಾ ಪ್ರೇಕ್ಷಕರು. ಚಂಡೆ, ವಾಲಗಕ್ಕೆ ಹೆಜ್ಜೆ ಹಾಕುತ್ತಿದ್ದ ಯುವಕರು... ಯಾರಿಗೆ ಈ ಬಾರಿಯ ಕೊಡವ ಕುಟುಂಬಗಳ ಹಾಕಿ ಕಪ್ ಎಂಬ ಕುತೂಹಲದಿಂದ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣಕ್ಕೆ ನಾಲ್ಕುನಾಡಿನ ವಿವಿಧೆಡೆಗಳಿಂದ ಕ್ರೀಡಾಪ್ರೇಮಿಗಳು ಆಗಮಿಸಿದ್ದರು.

11 ಗಂಟೆಗೆ ಅಂತಿಮ ಪಂದ್ಯದ ಆರಂಭಕ್ಕೆ ಕುಲ್ಲೇಟಿರ ಕುಟುಂಬದವರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಅರ್ಧಗಂಟೆಯ ಅವಧಿಯಲ್ಲಿ ಸಭಾ ಕಾರ್ಯಕ್ರಮ ನಡೆದು ಬಳಿಕ ಮಧ್ಯಾಹ್ನ 12.10ಕ್ಕೆ ಚೇಂದಂಡ ಮತ್ತು ಅಂಜಪರವಂಡ ತಂಡಗಳ ನಡುವೆ ಅಂತಿಮ ಪಂದ್ಯ ಆರಂಭಗೊಂಡಿತ್ತು. ಪಂದ್ಯದ ಆರಂಭಕ್ಕೂ ಮೊದಲು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಕತ್ತಿಯಾಟ್ ಹಾಗೂ ಪರೆಯಕಳಿ ನೃತ್ಯ ಮಾಡಿ ವೀಕ್ಷಕರನ್ನು ರಂಜಿಸಿದರು.

ಒಂದು ಗಂಟೆಯ ಪಂದ್ಯದ ಬಳಿಕ ಚೇಂದಂಡ ತಂಡವು ಕುಲ್ಲೇಟಿರ ಕಪ್ ಅನ್ನು ಎತ್ತಿ ಹಿಡಿದಾಗ ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿತು.

ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ ಕೊಡವ ಕುಟುಂಬಗಳ 22ನೇ ವರ್ಷದ ಕುಲ್ಲೇಟಿರ ಹಾಕಿ ಉತ್ಸವದ ಫೈನಲ್ ಪಂದ್ಯವು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಕ್ರೀಡಾಂಗಣದ ಎರಡೂ ಬದಿಯಲ್ಲಿ ವಾದ್ಯತಂಡದವರು ತಂಡದ ಆಟಗಾರರನ್ನು ಚಂಡೆ ಬಾರಿಸುವ ಮೂಲಕ ಪ್ರೋತ್ಸಾಹಿಸುತ್ತಿದ್ದರು. ಎರಡೂ ತಂಡಗಳ ಬೆಂಬಲಿಗರು ಕೇಕೆ ಹಾಕುತ್ತಾ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ದೇಹದಾರ್ಢ್ಯ ಪಟು ಪುಚ್ಚಿಮಾಡ ದೀಪಕ್‌ ಕಾವೇರಪ್ಪ ಅಂಗಪ್ರದರ್ಶನ ಮಾಡುತ್ತಾ ಗ್ಯಾಲರಿಯ ಸುತ್ತ ಸಾಗಿ ವೀಕ್ಷಕರನ್ನು ರಂಜಿಸಿದರು.

ಕುಲ್ಲೇಟಿರ ಹಾಕಿ ಕಪ್ ಪ್ರಶಸ್ತಿಗಳ ವಿವರ

ಸರಣಿ ಶ್ರೇಷ್ಠ ಪ್ರಶಸ್ತಿ –ಚೇಂದಂಡ ಮೋಕ್ಷಿತ್
 ಪಂದ್ಯ ಶ್ರೇಷ್ಠ ಪ್ರಶಸ್ತಿ –ಚೇಂದಂಡ ಬೋಪಣ್ಣ
 ಬೆಸ್ಟ್ ಫಾರ್ವರ್ಡ್ ಆಟಗಾರ– ಅಂಜಪರವಂಡಅ ಜತಿನ್
 ಬೆಸ್ಟ್ ಡಿಫೆಂಡರ್ –ಪರದಂಡ ಪ್ರಸಾದ್
 ಚೇಂದಿರ ತಂಡಕ್ಕೆ ಫೇರ್ ಪ್ಲೇ ಅವಾರ್ಡ್‌
 ಉದಯೋನ್ಮುಖ ತಂಡ– ಅಪ್ಪಚ್ಚೀರ
 ಬೆಸ್ಟ್ ಹಾಫ್ ಪ್ಲೇಯರ್ –ಚೆಪ್ಪುಡಿರ ಚೇತನ್
 ಉದಯೋನ್ಮುಖ ಆಟಗಾರ– ಕಾಂಡಂಡ ಕುಶಾಲಪ್ಪ
 ಉತ್ತಮ ಗೋಲ್‌ಕೀಪರ್‌– ಬೊಳ್ಯಪಂಡ ದಿಲನ್
 ಸ್ಪಿರಿಟೆಡ್ ಟೀಮ್ –ಜಬ್ಬಂಡ
 ಬೆಸ್ಟ್ ರಿವರ್ಸ್‌ ಪ್ಲೇ ಆಟಗಾರರು– ಚೇನಂಡ ತಮ್ಮಯ್ಯ, ಚೆಪ್ಪುಡಿರ ಸೋಮಣ್ಣ, ಅಂಜಪರವಂಡ ದೀಪಕ್ ಸುಬ್ಬಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT