ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ಮುಕ್ತ ನಗರದಲ್ಲಿ ಎಲ್ಲೆಂದರಲ್ಲಿ ಕಸ

Last Updated 21 ಮೇ 2018, 13:12 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣ ಪಂಚಾಯಿತಿಯನ್ನು ಪ್ಲಾಸ್ಟಿಕ್‌ ಹಾಗೂ ಕಸದ ತೊಟ್ಟಿ ಮುಕ್ತ ನಗರ ಎಂದು 6 ವರ್ಷಗಳ ಹಿಂದೆಯೇ ಘೋಷಣೆ ಮಾಡಿದ್ದರೂ, ಘೋಷಣೆ ಅನುಷ್ಠಾನಗೊಳ್ಳದೆ, ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಹಾಗೂ ತ್ಯಾಜ್ಯದ ರಾಶಿ ಕಂಡುಬರುತ್ತಿದೆ. ಜನರು ಕೆಲವು ರಸ್ತೆಗಳಲ್ಲಿ ಮೂಗು ಮುಚ್ಚಿ ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಜೆಯಾಗುತ್ತಿದ್ದಂತೆ ಅಂಗಡಿ ಮುಂಗಟ್ಟುಗಳ ತ್ಯಾಜ್ಯವನ್ನು ರಸ್ತೆಯ ಪಕ್ಕದಲ್ಲಿಯೇ ಸುರಿಯುತ್ತಿದ್ದಾರೆ. ಇದನ್ನು ಬೀಡಾಡಿ ದನಗಳು ತಿಂದು, ಉಳಿದಿದ್ದನ್ನು ಹರಡಿ ಹೋಗುತ್ತಿವೆ. ಪಟ್ಟಣದ ಎಲ್ಲಡೆ ಎಗ್ಗಿಲ್ಲದೆ ಪ್ಲಾಸ್ಟಿಕ್‌ ಬಳಕೆಯಾಗುತ್ತಿದೆ. ಅಲ್ಲದೆ, ಕೆಲವು ರಸ್ತೆಗಳಲ್ಲಿರುವ ತೊಟ್ಟಿಗಳು ತುಂಬಿ ರಸ್ತೆಯಲ್ಲಿ ತ್ಯಾಜ್ಯ ಹರಡುತ್ತಿದೆ. ಸ್ವಚ್ಛ ಭಾರತದ ಕನಸು ಸಾಕಾರಗೊಳ್ಳುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.

ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್‌ ತಟ್ಟೆ ಮತ್ತು ಗ್ಲಾಸುಗಳು ಬಳಕೆಯಾಗುತ್ತಿವೆ. ಬಳಸಿದ ಪ್ಲಾಸ್ಟಿಕ್‌ ತ್ಯಾಜ್ಯ ಎಲ್ಲೆಡೆ ರಸ್ತೆ, ಚರಂಡಿಗಳಲ್ಲಿ ತುಂಬಿವೆ. ಖಾಸಗಿ ಬಸ್‌ ನಿಲ್ದಾಣದ ಸಮೀಪವಿರುವ ಶೌಚಾಲಯದ ಗಬ್ಬು ವಾಸನೆ, ಅಂಗಡಿಗಳ ಪಕ್ಕದಲ್ಲಿಯೇ ದಿನನಿತ್ಯ ಬೀಳುವ ಕಸದ ರಾಶಿಯಿಂದಾಗಿ ಪಟ್ಟಣದಲ್ಲಿ ಓಡಾಡಲೂ ಕಷ್ಟ.

ಇದರೊಂದಿಗೆ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯ ಚರಂಡಿಗಳಲ್ಲೂ ತ್ಯಾಜ್ಯ ತುಂಬಿ ಗಬ್ಬೆದ್ದು ನಾರುತ್ತಿದೆ. ಇದರ ಸ್ವಚ್ಛತೆಗೆ ಪಟ್ಟಣ ಪಂಚಾಯಿತಿ ಹೆಚ್ಚಿನ ಗಮನಹರಿಸುತ್ತಿಲ್ಲ. ಇಲ್ಲಿನ ಖಾಸಗಿ ಬಸ್‌ ನಿಲ್ದಾಣದಲ್ಲಿ ಮಾತ್ರ ಸ್ವಚ್ಛತೆಗೆ ಮುಂದಾಗುವ ಕಾರ್ಮಿಕರು ಉಳಿದೆಡೆಗಳಲ್ಲಿ ಕಾಣಸಿಗುತ್ತಿಲ್ಲ.

ಜನರು ಬಳಸಿದ ಪ್ಲಾಸ್ಟಿಕ್ ತ್ಯಾಜ್ಯಗಳು, ತಿಂಡಿ ತಿನಿಸುಗಳ ಪೊಟ್ಟಣಗಳು, ಖಾಲಿ ಸೀಸೆಗಳು, ತರಕಾರಿಯ ತ್ಯಾಜ್ಯಗಳು ಎಲ್ಲೆಂದರಲ್ಲಿ ತುಂಬಿರುವುದನ್ನು ಕಾಣಬಹುದು. ವಾಹನಗಳು ಚಲಿಸುವಾಗ ಕಸಗಳು ಚೆಲ್ಲಾಪಿಲ್ಲಿಯಾಗಿ ರಸ್ತೆ ತುಂಬಾ ಹರಡುತ್ತಿದ್ದು, ಬಸ್‌ಗಾಗಿ ಕಾಯುವ ಜನರಿಗೆ ವಾಕರಿಕೆ ಬರುವಂತಾಗಿದೆ.

‘ಲೆಕ್ಕದಲ್ಲಿ ಮಾತ್ರ ಪ್ರತಿ ವಾರ್ಡ್‌ಗೆ ಒಬ್ಬರಂತೆ ಸ್ವಚ್ಛತೆಗೆ ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ರಸ್ತೆಗಳಿಗೆ ತಿಂಗಳಿಗೊಮ್ಮೆಯೂ ಸ್ವಚ್ಛತೆಗೆ ಯಾರೂ ಬರುವುದಿಲ್ಲ’ ಎಂದು ಪವರ್‌ಹೌಸ್‌ ರಸ್ತೆ ನಿವಾಸಿಗಳು ದೂರುತ್ತಾರೆ.

‘ಚರಂಡಿಯಲ್ಲಿ ಕೊಳಚೆ ಸಂಗ್ರಹವಾಗಿದ್ದು, ಗಬ್ಬು ವಾಸನೆಯಿಂದ ಕೂಡಿದೆ. ಸಂಬಂಧಿಸಿದ ಪಟ್ಟಣ ಪಂಚಾಯಿತಿ ಜನಪ್ರತಿನಿಧಿಗಳೂ ಇತ್ತ ಗಮನ ಹರಿಸುತ್ತಿಲ್ಲ. ಇದು ಮುಂದುವರೆದಲ್ಲಿ ಕಾಯಿಲೆಗಳಿಗೆ ದಾರಿಯಾಗುತ್ತದೆ’ ಎಂಬುದು ಅವರ ಆತಂಕ.

ಶಿವಾಜಿ ರಸ್ತೆಯ ನಿವಾಸಿ ವಿಜೇತ್‌, ‘ರಸ್ತೆ ಸ್ವಚ್ಛಗೊಳಿಸುವವರು ನಾಮಕಾವಸ್ಥೆಗೆ ಮಾತ್ರ ಕೆಲಸ ಮಾಡುವುದನ್ನು ಕಾಣಬಹುದಾಗಿದೆ’ ಎಂದು ಆರೋಪಿಸುತ್ತಾರೆ.

ಮುಖ್ಯ ರಸ್ತೆಯ ಮಹದೇವ ಮಾತನಾಡಿ, ‘ಈ ಹಿಂದೆ ಪಟ್ಟಣದಲ್ಲಿ ತೊಟ್ಟಿಗಳನ್ನು ಇರಿಸಿ ಕಸ ಸಂಗ್ರಹಿಸಲಾಗುತ್ತಿತ್ತು. ಆದರೆ, ತೊಟ್ಟಿ ಮುಕ್ತ ನಗರವನ್ನಾಗಿ ಘೋಷಣೆ ಮಾಡಿ ಟ್ರ್ಯಾಕ್ಟರ್‌ ಹಾಗೂ ಲಾರಿಗಳಲ್ಲಿ ಕಸ ಸಂಗ್ರಹಿಸಲು ಪ್ರಾರಂಭ ಮಾಡಿದರು. ಕಸ ಮಾತ್ರ ಸೂಕ್ತವಾಗಿ ವಿಲೇವಾರಿಯಾಗಲಿಲ್ಲ. ಅಲ್ಲದೆ, ಕೆಲವಡೆ ಇನ್ನೂ ತೊಟ್ಟಿಗಳಿರುವುದರಿಂದ ಅದಕ್ಕೆ ಸುರಿಯುವ ಕಸ ರಸ್ತೆಯ ಮೇಲೆ ಚೆಲ್ಲಾಡಿರುತ್ತದೆ. ಇನ್ನಾದರೂ ಪಂಚಾಯಿತಿಯವರು ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ’ ಎಂದರು.

ಇಲ್ಲಿನ ಪಟ್ಟಣ ಪಂಚಾಯಿತಿಯ ಅವ್ಯವಸ್ಥೆ ಸ್ವಚ್ಛ ಭಾರತದ ಕನಸನ್ನು ಅಣಕಿಸುವಂತಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಪಂಚಾಯಿತಿಯವರು ಸೂಕ್ತ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ವಿಫಲರಾಗಿದ್ದಾರೆ.

-ಡಿ.ಪಿ. ಲೋಕೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT