ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಎಂಬ ‘ದೃಶ್ಯಕಾವ್ಯ’

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ದೃಶ್ಯ 1. ‘ನಾನೊಬ್ಬ ರೈತ, ನನಗೆ ಸಸಿ ನೋಡಿದರೆ ತಿಳಿಯುತ್ತದೆ ಅದು ಮುಂದಿನ ದಿನದಲ್ಲಿ ನನಗೆ ನೀಡುವ ಫಲ ಎಷ್ಟು ಎಂದು ? ಇದನ್ನು ಹೇಳಿ ಸರ್ದಾರ್‌ ವಲ್ಲಭಭಾಯ್ ಪಟೇಲ ಅವರು ಡಾ.ಬಿ.ಆರ್.ಅಂಬೇಡ್ಕರ್‌ ಅವರ ಸಂವಿಧಾನ ರಚನಾ ಸಮಿತಿಗೆ ನೀಡಲು ಸಿದ್ದಪಡಿಸಿದ್ದ ರಾಜೀನಾಮೆ ಪತ್ರವನ್ನು ಹರಿದುಹಾಕುತ್ತಾರೆ. ಆಗ ಅಂಬೇಡ್ಕರ್‌ ಅವರ ಮೊಗದಲ್ಲಿ ಕೃತಜ್ಞತಾಭಾವ ಮೂಡುತ್ತದೆ.

ದೃಶ್ಯ 2. ‘ಸರ್ದಾರ್, ಹಮ್‌ ಡೆಮಾಕ್ರಸಿ ಅಪ್ನಾಯೇ ಹೈ ತೋ, ವೋಟ್‌ ಸೇ ಕ್ಯಾ ಡರ್ನಾ, ಬಾರ್‌ ಬಾರ್ ಹಮ್‌ ವಿಪ್‌ ಮುಕಮಲ್‌ ಕರ್ನಾ ಠೀಕ್‌ ನಹೀ ಹೋಗಾ’ (ಸರ್ದಾರ್‌, ನಾವು ಪ್ರಜಾಪ್ರಭುತ್ವವನ್ನು ಒಪ್ಪಿದ್ದೇವೆ ಎಂದ ಮೇಲೆ ಮತಕ್ಕೆ ಭಯ ಏಕೆ? ಮೇಲಿಂದ ಮೇಲೆ ವಿಪ್‌ ಜಾರಿ ಮಾಡುವುದು ಸರಿ ಅನಿಸುವುದಿಲ್ಲ) ಈ ಮಾತನ್ನು ಪಂ.ಜವಾಹರಲಾಲ್‌ ನೆಹರು ಅವರು ಸರ್ದಾರ್ ವಲ್ಲಭಭಾಯ್‌ ಪಟೇಲ್‌ ಅವರಿಗೆ ಹೇಳುತ್ತಾರೆ. ಆಗ ಇಬ್ಬರ ನಡುವೆ ಕೆಲ ಕ್ಷಣದವರೆಗೂ ಮೌನ ಆವರಿಸುತ್ತದೆ.

ಸಂವಿಧಾನ ರಚನಾ ಪ್ರಕ್ರಿಯೆಗಳ ಇಂಥ ಹಲವು ದೃಶ್ಯಗಳನ್ನು ಖ್ಯಾತ ನಿರ್ದೇಶಕ ಶ್ಯಾಮ್‌ ಬೆನಗಲ್‌ ಅವರು ‘ಸಂವಿಧಾನ– ದಿ ಮೇಕಿಂಗ್ ಆಫ್‌ ಕಾನ್‌ಸ್ಟಿಟ್ಯೂಷನ್‌’ ಎಂಬ ಸರಣಿಯಲ್ಲಿ ಪೋಣಿಸಿದ್ದಾರೆ. ಇಲ್ಲಿರುವ 10 ಕಂತುಗಳಲ್ಲಿ ಸಂವಿಧಾನದ ಹಿನ್ನೆಲೆ, ಅದರ ಅಂಶ, ಅದಕ್ಕಿದ್ದ ಕಾರಣಗಳು, ಅಭಿಪ್ರಾಯಯನ್ನು ಮನಮುಟ್ಟುವಂತೆ ರೂಪಿಸಿದ್ದಾರೆ ಬೆನಗಲ್‌.

‘Bag of Borrowings’ ಎಂದು ಕರೆಯಲಾಗುವ ಸಂವಿಧಾನವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಆಶಯ, ಪಂಚವಾರ್ಷಿಕ ಯೋಜನೆಯ ಮಾದರಿ, ಆಡಳಿತ ನಿರ್ದೇಶನಾ ತತ್ವ, ಸರ್ವೋಚ್ಚ ನ್ಯಾಯಾಲಯದ ನಡಾವಳಿ ನಿಯಮಗಳ ಎರವಲು ಪಡೆಯುವಾಗ ಆದ ಚರ್ಚೆ ಈ ಸರಣಿಯಲ್ಲಿ ಕಟ್ಟಿಕೊಡಲಾಗಿದೆ. ಇದರ ನಿರ್ಮಾಣ, ನಿರ್ವಹಣೆ ಜವಾಬ್ದಾರಿಯನ್ನು ರಾಜ್ಯಸಭೆ ಚಾನೆಲ್‌ ವಹಿಸಿಕೊಂಡಿತ್ತು.

ಡಾ.ಬಿ.ಆರ್.ಅಂಬೇಡ್ಕರ್, ಆಚಾರ್ಯ ಕೃಪಲಾನಿ, ಪಂ.ಜವಾಹರಲಾಲ್‌ ನೆಹರೂ, ಪಂ.ಜಿ.ಬಿ.ಪಂತ್, ಮೌಲಾನಾ ಆಜಾದ್, ಸರ್ದಾರ್ ವಲ್ಲಾಭಭಾಯ್ ಪಟೇಲ್ , ಡಾ.ರಾಜೇಂದ್ರ ಪ್ರಸಾದ್, ಮುಖ್ಯವಾಗಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಬೆನಗಲ್ ನರಸಿಂಗ ರಾವ್, ಕೆ.ಎಂ ಮುನ್ಷಿ ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಕಲಾವಿದರು.

ನೆಹರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ದಲೀಪ್ ತಾಹಿಲ್ ಇದಕ್ಕಾಗಿ ಪಥ್ಯ ಮತ್ತು ಆಕ್ಯುಪಂಕ್ಚರ್ ಮಾಡಿಸಿಕೊಂಡಿದ್ದರಂತೆ. ಇನ್ನು ಮೌಲಾನಾ ಆಜಾದ್ ಪಾತ್ರದಲ್ಲಿ ಟಾಮ್ ಆಲ್ಟರ್ (29 ಸೆ. 2017ರಲ್ಲಿ ನಿಧನ), ಬಿ.ಆರ್.ಅಂಬೇಡ್ಕರ್ ಪಾತ್ರದಲ್ಲಿ ಸಚಿನ್ ಖಾಂಡೇಕರ್ ಕಾಣಿಸಿಕೊಂಡಿದ್ದಾರೆ. ರಾಜೇಶ್ವರಿ ಸಚ್‌ದೇವ್ ಅವರು ರಾಜಕುಮಾರಿ ಅಮೃತಾ ಕೌರ್ ಪಾತ್ರದಲ್ಲಿ, ಹನ್ಸಾ ಮೆಹ್ತಾ ಪಾತ್ರಧಾರಿಯಾಗಿ ಇಳಾ ಅರುಣ್ ಕಾಣಿಸಿಕೊಂಡಿದ್ದಾರೆ.
ಸರಣಿಯಲ್ಲಿ ಇನ್ನೊಂದು ವಿಶೇಷತೆಯೆಂದರೆ ಜನಗಣಮನ ರಾಷ್ಟ್ರಗೀತೆ. ಇದನ್ನು ಕೇಳಿದಾಗ ಅಚ್ಚರಿಯಾಗುತ್ತದೆ. ಮೂಲ ರಾಷ್ಟ್ರಗೀತೆ ಟ್ಯೂನ್‌ ಅನ್ನು ಇಲ್ಲಿ ಆಲಿಸಬಹುದು.

ಸಂವಿಧಾನ ರಚನಾ ಸಭೆ ಮುಂದೆ ಇದ್ದ ಮೂಲ ಕರಡನ್ನು ಸಿದ್ಧಪಡಿಸಿದ ಸಾಂವಿಧಾನಿಕ ಸಲಹೆಗಾರ ಬಿ.ಎನ್‌.ರಾವ್‌ ಅವರನ್ನು ಅಂಬೇಡ್ಕರ್‌ ನೆನಪಿಸಿಕೊಳ್ಳುತ, ‘ನನಗೆ ಸಂದ ಕೀರ್ತಿಯ ದೊಡ್ಡಪಾಲು ಬಿ.ಎನ್. ರಾವ್ ಅವರಿಗೆ ಸಲ್ಲಬೇಕು’ ಎನ್ನುತ್ತಾರೆ. ಅದು ಲೋಕಸಭೆಯ ಕಡತಗಳಲ್ಲಿ ದಾಖಲಾಗಿದೆ. ಹೀಗೆ ನಮಗೆ ಗೊತ್ತಿರದ ವಿಷಯಗಳ ಕುರಿತು ಶ್ಯಾಮ್‌ ಬೆನಗಲ್ ಅವರ ‘ಸಂವಿಧಾನ್‌’ ಬೆಳಕು ಚೆಲ್ಲುತ್ತದೆ ಮತ್ತು ಚಿಂತನೆಗೆ ಹಚ್ಚುತ್ತದೆ. ಇಂಥದೊಂದು ದೃಶ್ಯಕಾವ್ಯವನ್ನು ನೋಡಲು ಯೂಟ್ಯೂಬ್‌ನಲ್ಲಿ ‘SAMVIDAAN' ಎಂದು ಟೈಪಿಸಿದರೆ 10 ಕಂತುಗಳನ್ನು ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT