ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮ ಹೂಡಿಕೆಗೆ ತೆರಿಗೆ ವಿನಾಯ್ತಿ

ಏಪ್ರಿಲ್‌ 11 ರಿಂದ ಆರಂಭಿಕ ಹೂಡಿಕೆದಾರರಿಗೆ ಅನ್ವಯ: ಆದಾಯ ತೆರಿಗೆ ಇಲಾಖೆ ಮಾಹಿತಿ
Last Updated 26 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ನವೋದ್ಯಮಗಳ ಆರಂಭಿಕ ಹಂತದಲ್ಲಿ  ಬಂಡವಾಳ ತೊಡಗಿಸುವ ಹೂಡಿಕೆದಾರರಿಗೆ (ಏಂಜೆಲ್‌ ಇನ್‌ವೆಸ್ಟರ್ಸ್‌) ತೆರಿಗೆ ವಿನಾಯ್ತಿಯು ಏಪ್ರಿಲ್‌ 11 ರಿಂದ ಅನ್ವಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 56 (2) (viib) ಅಡಿಯಲ್ಲಿ ಕೆಲ ನಿಬಂಧನೆಗಳಿಗೆ ಒಳಪಟ್ಟು ಈ ತೆರಿಗೆ ವಿನಾಯ್ತಿ ನೀಡಲಾಗಿದೆ.

2016ರ ಏಪ್ರಿಲ್‌ಗೂ ಮೊದಲು ಸ್ಥಾಪನೆಯಾಗಿರುವ ಸ್ಟಾರ್ಟ್‌ಅಪ್‌ಗಳು ಈ ವಿನಾಯ್ತಿ ಪಡೆಯ ಬಹುದು. 2016ರ ಏಪ್ರಿಲ್‌ 1ರ ನಂತರ ಸ್ಥಾಪನೆ ಆಗಿರುವ ನವೋದ್ಯಮಗಳಿಗೆ ಮೂರು ವರ್ಷಗಳವರೆಗೆ ಆದಾಯ ತೆರಿಗೆ ರಿಯಾಯ್ತಿ ಪಡೆಯಲು ಅವಕಾಶ ನೀಡಲಾಗಿದೆ.

ಎರಡೂ ಬಗೆಯ ವಿನಾಯ್ತಿ ಪಡೆಯಲು ಸ್ಟಾರ್ಟ್‌ಅಪ್‌ಗಳು 8 ಸದಸ್ಯರ ಅಂತರ್‌ ಸಚಿವಾಲಯ ಮಂಡಳಿಗೆ ಮನವಿ ಮಾಡಿಕೊಳ್ಳಬೇಕಾಗುತ್ತದೆ. 2021ರ  ಏಪ್ರಿಲ್‌ವರೆಗೆ ಈ ವಿನಾಯ್ತಿ ಅನ್ವಯವಾಗಲಿದೆ.

ನವೋದ್ಯಮದಲ್ಲಿ ಹೂಡಿಕೆ ಮಾಡುವವರು ನೋಂದಾಯಿಸಿಕೊಳ್ಳದೇ ಇದ್ದರೆ (ವೆಂಚರ್‌ ಕ್ಯಾಪಿಟಲ್‌ ಆಗಿ ನೋಂದಾಯಿಸಿಕೊಂಡಿರಬಾರದು) ಅಂತಹ ಹೂಡಿಕೆಗೆ ತೆರಿಗೆ ವಿನಾಯ್ತಿ ಇರುತ್ತದೆ. ಹೂಡಿಕೆಯು ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ್ದಾಗಿದ್ದರೂ ಸಹ ಆ ಹಣಕ್ಕೆ ತೆರಿಗೆ ಇರುವುದಿಲ್ಲ.

ನವೋದ್ಯಮದ ಷೇರು ಬಂಡವಾಳ ಮತ್ತು ಷೇರಿನ ಕಂತಿನ ಮೊತ್ತವು ಬಂಡವಾಳ ಹೂಡಿಕೆಯ ನಂತರ ₹ 10 ಕೋಟಿಯನ್ನು ಮೀರಬಾರದು ಎಂದು ಹೇಳಿದೆ.

ಕಂಪನಿಗಳ ಮಾರುಕಟ್ಟೆ ಮೌಲ್ಯವು ನ್ಯಾಯೋಚಿತವಾಗಿ ಇರುವಂತೆ ಮಾಡುವ ಉದ್ದೇಶದಿಂದ ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಆದಾಯ ತೆರಿಗೆ ಕಾಯ್ದೆಯ ನಿಯಮ 11 ಯುಎ (2) (ಬಿ)ಗೆ ತಿದ್ದುಪಡಿ ತಂದಿದೆ. ಹೀಗಾಗಿ ನವೋದ್ಯಮಗಳು ವಾಣಿಜ್ಯ ಬ್ಯಾಂಕ್‌ಗಳಿಂದಲೇ ಮೌಲ್ಯಮಾಪನ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಕನಿಷ್ಠ ₹ 2 ಕೋಟಿಗಳಷ್ಟು ಸಂಪತ್ತು ಹೊಂದಿರುವ ಅಥವಾ ಮೂರು ಹಣಕಾಸು ವರ್ಷಗಳಲ್ಲಿ ಸರಾಸರಿ ₹ 25 ಲಕ್ಷ ವರಮಾನ ಗಳಿಸಿರುವ ಹೂಡಿಕೆದಾರರು ನವೋದ್ಯಮದಲ್ಲಿ ಹೂಡಿಕೆ ಮಾಡಿದರೆ ಶೇ 100 ರಷ್ಟು ತೆರಿಗೆ ವಿನಾಯ್ತಿ ಪಡೆಯಲು ಅರ್ಹರಾಗಿರುತ್ತಾರೆ.

ಕಾಯ್ದೆಯ ಸೆಕ್ಷನ್‌ 80ರ ಅನ್ವಯ ಏಳು ಅಂದಾಜು ವರ್ಷಗಳಲ್ಲಿ ಮೂರು ವರ್ಷಗಳವರೆಗೆ ಆದಾಯ ತೆರಿಗೆಯಿಂದಲೂ ವಿನಾಯ್ತಿ ಪಡೆಯಬಹುದು.

‘ನೋಂದಣಿ ಆಗಿರುವ ಹಾಗೂ ವಾಣಿಜ್ಯ ಬ್ಯಾಂಕ್‌ಗಳಿಂದ ಮೌಲ್ಯಮಾಪ‍ನ ಮಾಡಿಸಿರುವ ನವೋದ್ಯಮಗಳಲ್ಲಿನ ಹೂಡಿಕೆಗೆ ತೆರಿಗೆ ವಿನಾಯ್ತಿ ಸಿಗಲಿದೆ’ ಎಂದು ನಂಗಿಯಾ ಆ್ಯಂಡ್‌ ಕಂಪನಿಯ ಪಾಲುದಾರ ಅಮಿತ್‌ ಅಗರ್‌ವಾಲ್‌ ಹೇಳಿದ್ದಾರೆ.

‘ಕೇಂದ್ರೀಯ ನೇರ ತೆರಿಗೆ ಮಂಡಳಿ ಹೊರಡಿಸಿರುವ ಪ್ರಕಟಣೆಯು ಸ್ವಾಗತಾರ್ಹವಾಗಿದೆ. ಇದರಿಂದ ಪ್ರಾಥಮಿಕ ಹೂಡಿಕೆಯ ಬಗ್ಗೆ ನವೋದ್ಯಮಗಳಲ್ಲಿ ಮೂಡಿದ್ದ ಗೊಂದಲ ಮತ್ತು ಆತಂಕ ದೂರವಾಗಿದೆ’ ಎಂದಿದ್ದಾರೆ.

ಯಾರಿದು ಏಂಜೆಲ್‌ ಇನ್ವೆಸ್ಟರ್ಸ್‌?
ಸ್ಥಾಪನೆಗೊಂಡ ಆರಂಭಿಕ ದಿನಗಳಲ್ಲಿ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವ ಸಾಬೀತಪಡಿಸಲು ನವೋದ್ಯಮಗಳು ಪರಿಶ್ರಮ ಪಡುತ್ತಿರುವಾಗ ಅವುಗಳಲ್ಲಿ ಬಂಡವಾಳ ತೊಡಗಿಸುವವರಿಗೆ ‘ ಏಂಜೆಲ್‌ ಇನ್ವೆಸ್ಟರ್ಸ್‌’ ಎಂದು ಹೇಳುತ್ತಾರೆ. ಈ ಹೂಡಿಕೆ ಪ್ರಮಾಣ ₹ 15 ಲಕ್ಷದಿಂದ ₹ 4 ಕೋಟಿಗಳವರೆಗೆ ಇರಲಿದೆ.  ವರ್ಷವೊಂದರಲ್ಲಿ ಸಾಮಾನ್ಯವಾಗಿ 300 ರಿಂದ 400 ಸ್ಟಾರ್ಟ್‌ಅಪ್‌ಗಳು ಏಂಜೆಲ್‌ ಫಂಡಿಂಗ್‌ನ ನೆರವು ಪಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT