ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೋಜಿಗಾಗಿ ‘ಸೆನ್ಸರ್‌ ಕಾರಂಜಿ’

ವಿನೂತನ ವಿನ್ಯಾಸದ ‘ಡ್ರೈ ಡೆಕ್‌ ಫೌಂಟೇನ್‌’; ಮಹಾನಗರ ಪಾಲಿಕೆ ಕೊಡುಗೆ
Last Updated 27 ಮೇ 2018, 9:53 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಜನತೆಗೆ ಒಂದು ಸಿಹಿ ಸುದ್ದಿ. ಅತ್ಯಾಧುನಿಕ ಸೌಲಭ್ಯ ಹೊಂದಿದ ‘ಡ್ರೈ ಡೆಕ್‌ ಫೌಂಟೇನ್‌’ ಉದ್ಯಾನ ಪಾಲಿಕೆ ಹತ್ತಿರ ಶೀಘ್ರವೇ ತಲೆಯೆತ್ತಲಿದೆ. ಅಧಿಕಾರಿಗಳು ಹೇಳುವ ಪ್ರಕಾರ ಇನ್ನು ಎರಡೇ ತಿಂಗಳಲ್ಲಿ ಈ ವಿನೂತನ ಉದ್ಯಾನ ಸಾರ್ವಜನಿಕರನ್ನು ಕೈಬೀಸಿ ಕರೆಯಲಿದೆ.

ಐತಿಹಾಸಿಕ ಮಹತ್ವ ಪಡೆದ ಇಲ್ಲಿನ ಮೆಹಬೂಬ್ ಷಾ ಗುಲ್ಶನ್ ಉದ್ಯಾನದ ವ್ಯಾಪ್ತಿಯಲ್ಲೇ ಈ ಹೊಸ ಪ್ರಯೋಗ ನಡೆದಿದೆ.

ಇಲ್ಲಿ ನಿರ್ಮಿಸಲಾಗುವ ಕಾರಂಜಿಯಲ್ಲಿ ನೀರು ಕಾಣಿಸುವುದಿಲ್ಲ. ಅದರ ಬಳಿ ಯಾರಾದರೂ ಹೋದರೆ ಮಾತ್ರ ಸೆನ್ಸಾರ್‌ (ಸಂವೇದನೆ)ನಿಂದ ತಕ್ಷಣಕ್ಕೆ ಕಾರಂಜಿ ಚಿಮ್ಮುತ್ತದೆ. ಈ ಕಾರಣಕ್ಕಾಗಿಯೇ ಇದಕ್ಕೆ ‘ಡ್ರೈ ಫೌಂಟೇನ್‌ (ಒಣ ಕಾರಂಜಿ)’ ಎಂದು ಹೆಸರಿಡಲಾಗಿದೆ.

ರಾಜ್ಯ ಹಣಕಾಸು ನಿಗಮ (ಎಸ್‌ಎಫ್‌ಸಿ)ದ ವಿಶೇಷ ಅನುದಾನ ₹ 2 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ₹ 48 ಲಕ್ಷವನ್ನು ಈ ಕಾರಂಜಿಗಾಗಿಯೇ ಬಳಸಲಾಗಿದೆ. ಗಿಡಗಳು ಹಾಗೂ ಹುಲ್ಲುಹಾಸು ಬೆಳೆಸಲು ₹ 25 ಲಕ್ಷ ವೆಚ್ಚ ಮಾಡಲಾಗಿದೆ.

2 ವಿಶ್ರಾಂತಿ ಮಂಟಪ, 2 ಸಾರ್ವಜನಿಕ ಶೌಚಾಲಯ, 4 ಆಹಾರ ಮಳಿಗೆ, ಸುಮಾರು 1 ಕಿಲೊಮೀಟರ್‌ ಉದ್ದದ ವಾಕಿಂಗ್‌ ಪಾತ್‌, ಮಕ್ಕಳು ಕಾರಂಜಿಯಲ್ಲಿ ಕುಣಿದಾಡಲು ಸ್ಥಳಾವಕಾಶ, ಅಲ್ಲಿಂದ ಹೊರಬಂದ ಮೇಲೆ ಶುದ್ಧ ನೀರಿನ ಸ್ನಾನಕ್ಕೆ 4 ಶವರ್‌, ಬಟ್ಟೆ ಬದಲಾಯಿಸಿಕೊಳ್ಳಲು 4 ಕೊಠಡಿಳು–ಹೀಗೆ ಎಲ್ಲ ಅಗತ್ಯ ಸೌಲಭ್ಯಗಳೂ ಇಲ್ಲಿರಲಿವೆ ಎಂದು ಪಾಲಿಕೆ ಉಪ ಆಯುಕ್ತ ಆರ್.ಪಿ.ಜಾಧವ್‌ ಮಾಹಿತಿ ನೀಡಿದರು.

ವೃತ್ತಾಕಾರದ ಈ ಕಾರಂಜಿ 35 ಅಡಿಯ ವ್ಯಾಸ ಹೊಂದಿದೆ. ನೆಲಮಟ್ಟದಲ್ಲಿ 16 ನಳಿಕೆಗಳನ್ನು ಹಾಕಿ, ಅದರೊಳಿಗಿಂದ ನೀರು ಚಿಮ್ಮುತ್ತದೆ. ಹತ್ತಿರದಲ್ಲೇ ಪಂಪ್‌ಹೌಸ್‌ ನಿರ್ಮಿಸಲಾಗಿದ್ದು, ಅಲ್ಲಿ 9 ಸಾವಿರ ಲೀಟರ್‌ ನೀರು ಸಂಗ್ರಹವಿರುತ್ತದೆ. ಕಾರಂಜಿಯಲ್ಲಿ ಚಿಮ್ಮಿದ ನೀರು ಮರಳಿ ಪಂಪ್‌ಹೌಸ್‌ಗೆ ಹೋಗಿ ಶುದ್ಧೀಕರಣಗೊಂಡು ಮತ್ತೆ ಕಾರಂಜಿಗೆ ಬರುತ್ತದೆ. ಇದರಿಂದ ನೀರಿನ ಅಪವ್ಯಯ ತಪ್ಪಲಿದೆ.

ವಾಟರ್‌ ಜಂಪಿಂಗ್‌ ಜೆಟ್‌ಗಳ ಸಂಯೋಜನೆಯಿಂದ ನೀರಿನ ಬಣ್ಣವನ್ನು ಪದೇಪದೇ ಬದಲಾಯಿಸಲು ಸಾಧ್ಯವಾಗುತ್ತದೆ. ಮಕ್ಕಳು ಓಡಾಡುವಾಗ ಕಾಲುಜಾರದಂತೆ; ಸಿಮೆಂಟ್‌ ಅಥವಾ ಗ್ರಾನೈಟ್‌ಗಳ ವಿಶೇಷ ವಿನ್ಯಾಸ ಮಾಡಲಾಗುವುದು ಎನ್ನುತ್ತಾರೆ ಇದರ ಗುತ್ತಿಗೆದಾರ ಅನಿಲಪ್ರಸಾದ್‌ ಪಾಂಡೆ.

ಬೆಂಗಳೂರಿನ ವಾಟರ್‌ ವರ್ಕ್ಸ್‌ ಕಂಪನಿಯು ಈ ಕಾರಂಜಿ ನಿರ್ಮಾಣದ ಹೊಣೆ ಹೊತ್ತಿದೆ. ನಿರಂತರವಾಗಿ ನೀರು ಪೂರೈಸಲು ಎರಡು ಬೋರ್‌ವೆಲ್‌ ಕೂಡ ಕೊರೆಸಲಾಗಿದೆ.

**
ಹತ್ತಿರದಲ್ಲೇ ವಿಜ್ಞಾನ ಕೇಂದ್ರ, ಶಾಲೆ– ಕಾಲೇಜು, ಪಾಲಿಕೆಯ ಉದ್ಯಾನಗಳು ಇವೆ. ಇಲ್ಲಿಗೆ ಬರುವ ಮಕ್ಕಳು, ವಯಸ್ಕರಿಗೆ ಈ ಒಣಕಾರಂಜಿ ಮನರಂಜನೆ ಕೊಡಲಿದೆ
- ಆರ್‌.ಪಿ.ಜಾಧವ್, ಪಾಲಿಕೆ ಉಪ ಆಯುಕ್ತ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT