ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಕಟ್ಟಡ ಉದ್ಘಾಟನೆ, ಶಿಲಾನ್ಯಾಸ

ಕೋಟ ಸಹಕಾರಿ ವ್ಯವಸಾಯಿಕ ಸಂಘಕ್ಕೆ ವಜ್ರಮಹೋತ್ಸವ ಸಂಭ್ರಮ
Last Updated 27 ಮೇ 2018, 10:56 IST
ಅಕ್ಷರ ಗಾತ್ರ

ಬ್ರಹ್ಮಾವರ: ಕೋಟ ಸಹಕಾರಿ ವ್ಯವಸಾಯಕ ಸಂಘ 60 ವರ್ಷಗಳನ್ನು ಪೂರೈಸಿ ಇದೀಗ ವಜ್ರಮಹೋತ್ಸವ ಸಂಭ್ರಮದಲ್ಲಿದೆ. ಈ ಪ್ರಯುಕ್ತ ಇದೇ 27ರಂದು ಬೆಳಿಗ್ಗೆ 10.30ಕ್ಕೆ ಬೇಳೂರು ಶಾಖೆಯ ನೂತನ ಕಟ್ಟಡ ಉದ್ಘಾಟನೆ, ಗುಂಡ್ಮಿ ಶಾಖಾ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯಲಿವೆ.

ನಡೆದು ಬಂದ ದಾರಿ: ಕೋಟ ಸಹಕಾರಿ ವ್ಯವಸಾಯಕ ಸಂಘವು ಅಂದಿನ ಮದ್ರಾಸು ಸರ್ಕಾರದ ಪೈಲಟ್ ಯೋಜನೆ ಅನ್ವಯ ಕೋಟ, ಹಂದಟ್ಟು, ಕಾರ್ಕಡ ಮತ್ತು ಬನ್ನಾಡಿ ಎಂಬ ನಾಲ್ಕು ಪತ್ತಿನ ಪ್ರಾಥಮಿಕ ಸಹಕಾರಿ ಸಂಘಗಳ ವಿಲೀನದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಲಯ ಮೇಲ್ವಿಚಾರಕ ಬಿ.ಸಿ.ಹೊಳ್ಳ ಅವರ ನೇತೃತ್ವದಲ್ಲಿ ಕೋಟ ಸಹಕಾರಿ ವ್ಯವಸಾಯಕ ಬ್ಯಾಂಕ್ ಎಂಬ ನಾಮಕರಣದೊಂದಿಗೆ ನ.30, 1958ರಲ್ಲಿ ಕಾರ್ಯಾರಂಭ ಮಾಡಿತು.

1962ರಲ್ಲಿ ಗಿಳಿಯಾರು ಗ್ರಾಮದಲ್ಲಿ 0.07 ಸೆಂಟ್ಸ್ ಸ್ಥಿರಾಸ್ತಿಯನ್ನು ದಿ.ಎಚ್.ಕೃಷ್ಣದೇವ ಐತಾಳ ಮತ್ತು ಸ್ಥಾಪಕ ಅಧ್ಯಕ್ಷ ದಿ.ಎಚ್.ನರಸಿಂಹ ಐತಾಳ ದೇಣಿಗೆ ರೂಪದಲ್ಲಿ ನೀಡಿದ ಈ ಸ್ಥಳದಲ್ಲಿ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಲು ಗೋದಾಮು ನಿರ್ಮಾಣ, 1966ರಲ್ಲಿ ಗಿಳಿಯಾರು ಗ್ರಾಮದಲ್ಲಿ 41.50 ಸೆಂಟ್ಸ್ ವಿಸ್ತೀರ್ಣದ ಭೂಮಿಯನ್ನು ಖರೀದಿಸಿ ಈಗಿನ ಪ್ರಧಾನ ಕಚೇರಿ ಇರುವ ಸ್ಥಳದಲ್ಲಿ ಸ್ವಂತ ಆಡಳಿತ ಕಚೇರಿ ಆರಂಭಿಸಲಾಯಿತು. 1969ರಲ್ಲಿ ಪಾರಂಪಳ್ಳಿ ಗ್ರಾಮದಲ್ಲಿ 0.20 ಸೆಂಟ್ಸ್ ಸ್ಥಿರಾಸ್ತಿಯನ್ನು ಸ್ಥಳೀಯರಾದ ದಿ.ಶಂಕರನಾರಾಯಣ ಮಧ್ಯಸ್ಥ ಅವರಿಂದ ಖರೀದಿಸಿ, ಸಂಘದ ಹಾಲಿ ಇರುವ ಶಾಖಾ ಕಟ್ಟಡ ನಿರ್ಮಾಣ ಮಾಡಲಾಯಿತು. 1973ರಲ್ಲಿ ಬನ್ನಾಡಿ ಗ್ರಾಮದ ಬಾಡಿಗೆ ಕಟ್ಟಡದಲ್ಲಿ ಪೂರ್ಣ ಪ್ರಮಾಣದ ಶಾಖೆ ಆರಂಭ, 1975ರಲ್ಲಿ ಕೋಟತಟ್ಟು ಗ್ರಾಮದಲ್ಲಿ ಸ್ಥಳೀಯರಾದ ದಿ.ಡಾ. ಹರಿಕೃಷ್ಣ ಐತಾಳರ ಮುತುವರ್ಜಿಯಲ್ಲಿ ಸ್ವಂತ ಸ್ಥಿರಾಸ್ತಿ ಖರೀದಿಸಿ ಕೋಟಪಡುಕರೆ ಶಾಖೆ ಆರಂಭಿಸಲಾಯಿತು.

1981ರಲ್ಲಿ ಬನ್ನಾಡಿ ಶಾಖೆಗೆ ರಾಜ್ಯ ಸರ್ಕಾರವು ನೀಡಿದ 0.15 ಸೆಂಟ್ಸ್ ಸ್ಥಿರಾಸ್ತಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣ, 1983ರಲ್ಲಿ ಬೇಳೂರು, 1986ರಲ್ಲಿ ಕೋಡಿ, 1999ರಲ್ಲಿ ಗುಂಡ್ಮಿ ಮತ್ತು ಮೂಡುಗಿಳಿಯಾರಿನಲ್ಲಿ ಪಡಿತರ ವಿತರಣಾ ಕೇಂದ್ರಗಳನ್ನು ತೆರೆದು, ಸದಸ್ಯರ ಮನೆ ಬಾಗಿಲಿಗೆ ಪಡಿತರ ವಿತರಣಾ ವ್ಯವಸ್ಥೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. 1994ರಲ್ಲಿ ಗುಂಡ್ಮಿ ಮತ್ತು ಚಿತ್ರಪಾಡಿ ಶಾಖೆ, 1996ರಲ್ಲಿ ಬೇಳೂರು ಶಾಖೆ, 1998ರಲ್ಲಿ ಕೋಡಿ ಶಾಖೆ, 2004ರಲ್ಲಿ ಮೂಡುಗಿಳಿಯಾರು ಶಾಖೆ, 2006ರಲ್ಲಿ ಕೋಡಿಬೇಂಗ್ರೆ ಶಾಖೆ, 2009ರಲ್ಲಿ ಕಾರ್ಕಡ ಮತ್ತು ಮಣೂರು ಶಾಖೆ ಹೀಗೆ ಒಟ್ಟು 12 ಪೂರ್ಣ ಪ್ರಮಾಣದ ಶಾಖೆಗಳನ್ನು ತೆರೆದು ಸದಸ್ಯರಿಗೆ ಸಂಘದೊಂದಿಗೆ ನಿಕಟ ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಯಿತು. 2015ರಲ್ಲಿ ಕುಂದಾಪುರ ತಾಲ್ಲೂಕು ಬೀಜಾಡಿ ಗ್ರಾಮದಲ್ಲಿ ಗೋಪಾಡಿ ಬೀಜಾಡಿ ಶಾಖೆಯನ್ನು ತೆರೆದು ಸಂಘದ ಕಾರ್ಯಕ್ಷೇತ್ರದ ಹೊರಗಿನವರಿಗೂ ಕೃಷಿಯೇತರ ವ್ಯವಹಾರಕ್ಕೆ ಅನುವು ಮಾಡಿ ಗ್ರಾಮಾಂತರ ಪ್ರದೇಶದ ಜನರಿಗೆ ಮತ್ತು ಕೃಷಿಕರಿಗೆ ಅನೇಕ ಸೌಲಭ್ಯಗಳನ್ನು ಸಿಗುವಂತೆ ಮಾಡಿದೆ.

ಬ್ಯಾಂಕ್‌ನ ಕಾರ್ಯವೈಖರಿ: ಪ್ರಾರಂಭದಲ್ಲಿ ₹15 ಸಾವಿರ ಪಾಲು ಬಂಡವಾಳ, ₹50 ಸಾವಿರ ಠೇವಣಿ ಹಾಗೂ ₹1.26 ಲಕ್ಷ ಸಾಲವನ್ನು ಹೊಂದಿದ್ದ ಸಂಘವು ಇಂದು ₹2 ಕೋಟಿಗೂ ಮಿಕ್ಕಿ ಪಾಲು ಬಂಡವಾಳ, ₹100 ಕೋಟಿಗೂ ಮಿಕ್ಕಿ ಠೇವಣಿ, ₹65 ಕೋಟಿಗೂ ಮಿಕ್ಕಿ ಸಾಲ, ಶೇ 93.36ರಷ್ಟು ವಸೂಲಾತಿ ಹಾಗೂ ₹109 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿ ಹೆಮ್ಮರವಾಗಿ ಬೆಳೆದು ಅಭಿವೃದ್ಧಿ ಪಥದಲ್ಲಿದೆ. ಸಂಘವು ನಿಬಡ್ಡಿ ಕೃಷಿ ಸಾಲ ಮತ್ತು ರಿಯಾಯಿತಿ ಬಡ್ಡಿದರದ ಕೃಷಿ ಪೂರಕ ಸಾಲ ಹಾಗೂ ಅತಿ ಕಡಿಮೆ ಬಡ್ಡಿದರದಲ್ಲಿ ವಿವಿಧ ಬಗೆಯ ಸಾಲ ನೀಡುತ್ತಿದೆ.

ಅಂದು ಕೇವಲ ಇಬ್ಬರು ಸಿಬ್ಬಂದಿಯಿಂದ ಕಾರ್ಯಾರಂಭ ಮಾಡಿದ ಈ ಸಂಸ್ಥೆಯು ಇಂದು 55 ಮಂದಿ ಸಿಬ್ಬಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಸದಸ್ಯರಿಗೆ ಕೆಲವೊಂದು ಸೌಲಭ್ಯ ದೊರಕಿಸಿಕೊಡುವಲ್ಲಿ ಸಂಸ್ಥೆ ಮುಂಚೂಣಿ ಯಲ್ಲಿದೆ. ಅಲ್ಲದೆ ಮರಣ ನಿಧಿಯಿಂದ ಮರಣ ಹೊಂದಿದ ಸದಸ್ಯರ ಉತ್ತರಾಧಿ ಕಾರಿಗಳಿಗೆ ಸೌಲಭ್ಯದ ಮೊತ್ತವನ್ನು ಕ್ಷಿಪ್ರಗತಿಯಲ್ಲಿ ನೀಡುತ್ತಿದೆ.

ಇದಲ್ಲದೇ ಸಂಘವು 350ಕ್ಕೂ ಮಿಕ್ಕಿ ನವೋದಯ ಸ್ವ-ಸಹಾಯ ಸಂಘಗಳನ್ನು ಸಂಘಟಿಸಿರುವುದು ಕೂಡ ಒಂದು ದಾಖಲೆಯ ಸಾಧನೆಯಾಗಿದೆ. ಕೋಟ ಸಿ.ಎ.ಬ್ಯಾಂಕ್ ನಿರ್ದೇಶಕರಾಗಿ 20 ವರ್ಷಗಳಿಂದ ದುಡಿದು ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ತಿಮ್ಮ ಪೂಜಾರಿ ಮತ್ತು ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಬ್ಯಾಂಕ್ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.

ಮಾಹಿತಿಗೆ: ಪ್ರಧಾನ ಕಚೇರಿ, ಉಗಮ ಕೋಟ, ಉಡುಪಿ ಜಿಲ್ಲೆ ದೂರವಾಣಿ: 0820– 2586020, 2564134.

ಪ್ರಶಸ್ತಿ, ಪುರಸ್ಕಾರಗಳು

1968–69ರಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯುತ್ತಮ ಮಾದರಿ ಸಹಕಾರಿ ಬ್ಯಾಂಕ್ ಪ್ರಶಸ್ತಿ ಹಾಗೂ ನಗದು ಬಹುಮಾನ, 1998ರಲ್ಲಿ ಉಡುಪಿ ತಾಲ್ಲೂಕಿನ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ, 1999ರಲ್ಲಿ ಅತ್ಯುತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿ, 2003ರಲ್ಲಿ ಉತ್ತಮ ಕಾರ್ಯನಿರ್ವಹಣಾಧಿಕಾರಿ ಪ್ರಶಸ್ತಿ, 2004ನೇ ಸಾಲಿಗೆ ರಾಜ್ಯದಲ್ಲಿ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ, 2005ನೇ ಸಾಲಿನಲ್ಲಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಿಗೆ ‘ಎಕ್ಸಲೆನ್ಸ್ ಇನ್ ಬ್ಯಾಂಕಿಂಗ್ ಟೆಕ್ನಾಲಜಿ 2004’ ಎನ್ನುವ ರಾಷ್ಟ್ರಮಟ್ಟದ ಪ್ರಶಸ್ತಿ, 2007–08ನೇ ಸಾಲಿನಲ್ಲಿ ಅತ್ಯುತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿ, 2015–16ರಲ್ಲಿ ಕರ್ನಾಟಕ ಸರ್ಕಾರ ಸಹಕಾರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿ, 2016–17ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಸಂಘದ ಉತ್ತಮ ಸಾಧನೆಗಾಗಿ ಪ್ರೋತ್ಸಾಹಕ ಬಹುಮಾನ, 2016–17ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಸಂಘದ ಸಾಧನೆಗಾಗಿ ವಿಶೇಷ ಪ್ರೋತ್ಸಾಹಕ ಬಹುಮಾನ ಹಾಗೂ ₹2 ಸಾವಿರ ಮೊತ್ತದ ಪಾಲುಪ್ರಮಾಣ ಪತ್ರ, 2017–18ರಲ್ಲಿ ಕರ್ನಾಟಕ ಸರ್ಕಾರವು 64ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅತ್ಯುತ್ತಮ ಸಾಧನಾ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳನ್ನು ಬ್ಯಾಂಕ್ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT