ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಫಾ ಸೋಂಕು.. ಮಕ್ಕಳ ಅಪಹರಣದ ಭೀತಿ...

ಫೋನ್‌ಇನ್ ಕಾರ್ಯಕ್ರಮದಲ್ಲಿ ದೂರುಗಳ ಸುರಿಮಳೆ * 60 ನಿಮಿಷಕ್ಕೆ 32 ದೂರುಗಳು ಸ್ವೀಕಾರ
Last Updated 27 ಮೇ 2018, 12:25 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಶನಿವಾರ ನಡೆಸಿದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ದೂರುಗಳನ್ನು ದಾಖಲಿಸಿದರು. ಬಾವಲಿ ಹಾಗೂ ಮಕ್ಕಳ ಕಳ್ಳರ ಭೀತಿ, ಅಕ್ರಮ ಮದ್ಯ ಮಾರಾಟ, ಕೆರೆ ಒತ್ತುವರಿ, ಮಂದಗತಿ ಕಾಮಗಾರಿ, ಸೊಳ್ಳೆ ಸಮಸ್ಯೆ ಸೇರಿದಂತೆ ಹಲವು ದೂರುಗಳು ಪ್ರತಿಧ್ವನಿಸಿದವು.

ಅಟ್ಟುಗೂಳೀಪುರದಿಂದ ಕರೆ ಮಾಡಿದ ಸ್ಥಳೀಯರೊಬ್ಬರು ಗ್ರಾಮದಲ್ಲಿ ಬಾವಲಿಗಳ ಸಂಖ್ಯೆ ಹೆಚ್ಚಿದೆ. ‘ನಿಫಾ’ ಸೋಂಕು ಭೀತಿ ಮೂಡಿದೆ ಎಂದು ದೂರಿದರು. ಜತೆಗೆ, ಮಕ್ಕಳ ಅಪಹರಣ ಕುರಿತ ವದಂತಿ ಆತಂಕ ತಂದೊಡ್ಡಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಎಲ್ಲಾ ಬಾವಲಿಗಳಿಂದ ಸೋಂಕು ಹರಡುತ್ತದೆ ಎಂಬ ಅತಂಕ ಬೇಡ. ರೋಗ ಸಂಬಂಧ ಆರೋಗ್ಯ ಇಲಾಖೆಯಿಂದ ನಿಮ್ಮ ಗ್ರಾಮದಲ್ಲಿ ಜಾಗೃತಿ ಹಾಗೂ ತಿಳಿವಳಿಕೆ ಮೂಡಿಸಲು ಸೂಚನೆ ನೀಡಲಾಗಿದೆ. ಎಲ್ಲೋ ರೋಗ ಇದೆ ಎಂದು ಬಾವಲಿಗಳನ್ನು ಕೊಲ್ಲುವುದು ಸರಿಯಲ್ಲ’ ಎಂದರು.

ಮಕ್ಕಳ ಅಪಹರಣ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ‘ಮಕ್ಕಳ ಅಪಹರಣ ಕುರಿತು ಯಾವುದೇ ವರದಿಯಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವಿಚಾರದಲ್ಲಿ ಸತ್ಯಾಂಶವಿಲ್ಲ. ವದಂತಿಗಳನ್ನು ನಂಬಬಾರದು. ಈಗಾಗಲೇ ಮಾಧ್ಯಮಗಳಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ದೂರವಾಣಿ ಸಂಖ್ಯೆ ನೀಡಲಾಗಿದ್ದು, ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಮಾಹಿತಿ ನೀಡಬಹುದು’ ಎಂದರು.

ಯಳಂದೂರು ಪಟ್ಟಣದಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ. ತ್ಯಾಜ್ಯ ಹಾಕಲು ಬುಟ್ಟಿಗಳನ್ನು ಇಡಬೇಕು. ಕಂದಹಳ್ಳಿಯಲ್ಲಿ ಚರಂಡಿ ತುಂಬಿಹೋಗಿದ್ದು, ಕಸ ಕಡ್ಡಿಗಳನ್ನು ತೆಗೆದುಹಾಕಿಲ್ಲ. ಕೂಡಲೇ ಇದನ್ನು ತೆರವುಗೊಳಿಸಬೇಕೆಂದು ಸ್ಥಳೀಯರೊಬ್ಬರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನೈರ್ಮಲ್ಯ ಕಾಪಾಡಲು ಸೂಚಿಸುವುದಾಗಿ ತಿಳಿಸಿದರು.

ಕೊಳ್ಳೇಗಾಲ ತಾಲ್ಲೂಕು ಗುಂಡೇಗಾಲ ಗ್ರಾಮದಿಂದ ಅಂಗವಿಕಲರೊಬ್ಬರು, ತಮಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಅಗತ್ಯ ನೆರವು ನೀಡುವಂತೆ ಅಂಗವಿಕಲ ಕಲ್ಯಾಣಾಧಿಕಾರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ನಗರದಲ್ಲಿ ಪರವಾನಗಿ ಪಡೆಯದೆ ಟ್ಯುಟೋರಿಯಲ್‍ಗಳನ್ನು ನಡೆಸಲಾಗುತ್ತಿದೆ. ಸಂಬಂಧಪಟ್ಟ ಶಿಕ್ಷಣ ಇಲಾಖೆಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲವೆಂದು ಸ್ಥಳೀಯರೊಬ್ಬರು ಗಮನ ಸೆಳೆದರು. ಚಾಮರಾಜನಗರ ತಾಲ್ಲೂಕು ಸಿದ್ದಯ್ಯನಪುರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯಬೇಕು ಎಂದು ಗ್ರಾಮಸ್ಥರೊಬ್ಬರು ಕೋರಿದರು. ಬೆಳೆ ವಿಮೆ ಪರಿಹಾರ, ಕುಡಿಯುವ ನೀರು, ಚರಂಡಿ ಶುಚಿತ್ವ, ಖಾಸಗಿ ಆಟೋಗಳಿಂದ ಬಸ್ ಮಾಲೀಕರಿಗೆ ಆಗುತ್ತಿರುವ ನಷ್ಟ, ಕೆರೆ ನೈರ್ಮಲ್ಯ ಸೇರಿದಂತೆ ಹಲವು ಸಮಸ್ಯೆಗಳು ಫೋನ್-ಇನ್ ಕಾರ್ಯಕ್ರಮದಲ್ಲಿ ಕೇಳಿಬಂದವು. ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕೇಳಿ ಬಂದ ಇತರ ದೂರುಗಳು

*ಹನೂರಿನ 10ನೇ ವಾರ್ಡಿನಲ್ಲಿ ಸೊಳ್ಳೆ ಕಾಟ

*ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಕುಡಿಯುವ ನೀರಿಲ್ಲ

*ಬಿಳಿಗಿರಿರಂಗನಬೆಟ್ಟದ ರಥದ ನಿರ್ಮಾಣ ಕಾರ್ಯ ಬೇಗ ಮುಗಿಸಿ

*ಕುದೇರು ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ

*ರಾಮಾ‍ಪುರದ ಸ್ಮಶಾನಕ್ಕೆ ತಡೆಗೋಡೆ ಇಲ್ಲ

*ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಮರು ಚಾಲನೆ ನೀಡಬೇಕು

*ಬೆಳೆ ಪರಿಹಾರ ಇನ್ನೂ ಸಿಕ್ಕಿಲ್ಲ

ಹೆಸರು ಹೇಳಲು ಹಿಂಜರಿಕೆ

ಫೋನ್‌–ಇನ್ ಕಾರ್ಯಕ್ರಮದಲ್ಲಿ ದೂರು ನೀಡಿದ ಹಲವು ಸಾರ್ವಜನಿಕರು ತಮ್ಮ ಹೆಸರು ಹಾಗೂ ಊರನ್ನು ಬಹಿರಂಗಪಡಿಸಲು ಇಚ್ಛಿಸಲಿಲ್ಲ. ಬಹುತೇಕ ಮಂದಿ ಹೆಸರು ಬೇಡ, ಊರು ಬೇಡ ಎಂದೇ ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಅಧಿಕಾರಿಗಳು ಎಷ್ಟೇ ಕೇಳಿದರೂ ತಮ್ಮ ಹೆಸರನ್ನು ಹೇಳುತ್ತಿರಲಿಲ್ಲ. ಜತೆಗೆ, ಮೊಬೈಲ್ ಸಂಖ್ಯೆಗಳನ್ನು ನೀಡುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT