ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರದಿಂದ ಸಾಗಿದೆ ಹಾರಂಗಿ ಅಣೆಕಟ್ಟೆ ದುರಸ್ತಿ

Last Updated 30 ಮೇ 2018, 12:18 IST
ಅಕ್ಷರ ಗಾತ್ರ

ಕುಶಾಲನಗರ: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಕೊಡಗಿನ ಹಾರಂಗಿ ಜಲಾಶಯ ಒಂದಾಗಿದ್ದು, ನೀರಾವರಿ ಇಲಾಖೆ ವತಿಯಿಂದ ಕೈಗೊಂಡಿರುವ ಅಣೆಕಟ್ಟೆ ದುರಸ್ತಿ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಗ್ರಾಮದಲ್ಲಿ 1982ರಲ್ಲಿ ಹಾರಂಗಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಲಾಗಿದ್ದು, ಇದೀಗ ಸುಮಾರು 36 ವರ್ಷಗಳ ಬಳಿಕ ಹಾರಂಗಿ ಅಣೆಕಟ್ಟೆಗೆ ಕಾಯಕಲ್ಪ ನೀಡಲಾಗುತ್ತಿದೆ.

ವಿಶ್ವ ಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ ₹10 ಕೋಟಿ ಅದಾಂಜು ವೆಚ್ಚದಲ್ಲಿ ಅಣೆಕಟ್ಟೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

ಎರಡು ವರ್ಷಗಳ ಹಿಂದೆ ಚನ್ನರಾಯಪಟ್ಟಣದ ಗುತ್ತಿಗೆದಾರ ಎಸ್.ನಾರಾಯಣ ರೆಡ್ಡಿ ಎಂಬುವವರು ಕಾಮಗಾರಿಯ ಗುತ್ತಿಗೆ ಪಡೆದಿದ್ದಾರೆ. ಇದೀಗ ದುರಸ್ತಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೇ 75ರಷ್ಟು ಕೆಲಸ ಮುಗಿದಿದೆ. ಶೇ 25ರಷ್ಟು ಕಾಮಗಾರಿ ಬಾಕಿ ಉಳಿದಿದೆ. ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಕಾರ್ಮಿಕರು ಶ್ರಮಿಸುತ್ತಿದ್ದಾರೆ.

ಚನ್ನರಾಯಪಟ್ಟಣ ಹಾಗೂ ಯಾದಗಿರಿಯಿಂದ 30 ಮಂದಿ ನುರಿತ ಕೆಲಸಗಾರರು ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನೀರು ಸೋರಿಕೆಯಾಗದಂತೆ ಅಣೆಕಟ್ಟೆಗೆ ಹಿಂದೆ ಹಾಕಿದ್ದ ಕಾಂಕ್ರಿಟ್ ಅನ್ನು ತೆಗೆದು ಹೊಸದಾಗಿ ಪ್ಲಾಸ್ಟಿಂಗ್ ಮಾಡಲಾಗುತ್ತಿದೆ. ಜೊತೆಗೆ ಗೇಟ್ ದುರಸ್ತಿ ಹಾಗೂ ಹಾನಿಯಾಗಿದ್ದ ನೀರು ಬೀಳುವ ಜಾಗವನ್ನು ಸರಿಮಾಡಿದ್ದಾರೆ. ಈವರೆಗೆ ಮುಗಿದಿರುವ ಕಾಮಗಾರಿಗೆ ₹7.40 ಕೋಟಿ ಹಣವು ಬಿಡುಗಡೆಯಾಗಿದ್ದು, ₹2.5 ಕೋಟಿ ಹಣ ಮಾತ್ರ ಬಾಕಿ ಇದೆ.

‘ಕಾಮಗಾರಿಯು ಪೂರ್ಣಗೊಂಡ ನಂತರ ಹಣ ಬಿಡುಗಡೆಯಾಗಲಿದೆ’ ಎಂದು ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜ್ ತಿಳಿಸಿದ್ದಾರೆ. ಅಣೆಕಟ್ಟೆ ದುರಸ್ತಿ ಉಸ್ತುವಾರಿಯನ್ನು ವಿಶ್ವಬ್ಯಾಂಕ್‌ನ ತಾಂತ್ರಿಕ ಅಧಿಕಾರಿಗಳ ತಂಡ ನಿರ್ವಹಿಸುತ್ತಿದೆ.

ಜೊತೆಗೆ ಕಾಮಗಾರಿ ಪೂರ್ಣಗೊಂಡ ನಂತರ ವಿದೇಶದಿಂದ ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಲಿದೆ ಎಂದು ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ನಾಗರಾಜು ತಿಳಿಸಿದರು.

ಹಾರಂಗಿ ಅಣೆಕಟ್ಟೆಯಿಂದ ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ , ಹುಣಸೂರು, ಕೆ.ಆರ್.ನಗರ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಸೇರಿದಂತೆ 1,34,895 ಎಕರೆ ಪ್ರದೇಶಕ್ಕೆ ನೀರು ಪೂರೈಸಲಾಗುತ್ತಿದೆ.

ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದ ಜಲಾಶಯ: ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 2859 ಇದ್ದು, ಇಂದು ಬೆಳಿಗ್ಗೆ 6 ಗಂಟೆ 2775.92ಕ್ಕೆ ತಲುಪಿದೆ. 0.37 ಟಿಎಂಸಿ ನೀರು ಸಂಗ್ರಹಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT