ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನಾದ ನಂತರ ಕರೀನಾ

Last Updated 31 ಮೇ 2018, 20:02 IST
ಅಕ್ಷರ ಗಾತ್ರ

ನೀರವ ರಾತ್ರಿ. ಹಂಸತೂಲಿಕಾ ತಲ್ಪದಂಥ ಮಂಚದ ಮೇಲೆ ಪವಡಿಸಿದ್ದರು ನಟಿ ಕರೀನಾ ಕಪೂರ್. ಹತ್ತಿರದಲ್ಲೇ ತೊಟ್ಟಿಲಲ್ಲಿ ಅವರ ಕಂದಮ್ಮ ತೈಮೂರ್. ಝೀರೊ ಸೈಜ್ ಎಂದೆಲ್ಲ ದೇಹಾಕಾರ ಬದಲಿಸಿಕೊಂಡು ಸದಾ ಸುದ್ದಿಯಲ್ಲಿದ್ದ ನಟೀಮಣಿಗೆ ಆಳು-ಕಾಳುಗಳಿಗೆ ಕೊರತೆಯಿಲ್ಲ. ಮಗುವಿನ ಲಾಲನೆ–ಪಾಲನೆಗೂ ಜನರೇನೋ ಇದ್ದರು. ಆದರೆ, ಆ ಮಗ ಕಿಲಾಡಿ. ಅವನಿಗೆ ನಡುರಾತ್ರಿಯಲ್ಲಿ ಅಮ್ಮನೇ ಆಗಬೇಕು. ಆಳು–ಕಾಳುಗಳ ಸಮಾಧಾನಕ್ಕೆ ಬಗ್ಗುತ್ತಿರಲಿಲ್ಲ. ಅಳಲು ಆರಂಭಿಸಿದನೆಂದರೆ ಕರೀನಾಗೆ ತನ್ನ ಗತವೈಭವವೆಲ್ಲ ಮರೆತುಹೋಗುತ್ತಿತ್ತು.

ಬೆಳಿಗ್ಗೆ ಎದ್ದಾಗ ಮೈಕೈ ನೋವು. ಹಿಂದಿನ ರಾತ್ರಿ ಮಗನನ್ನು ಮಲಗಿಸಲು ಪಟ್ಟ ಪಡಿಪಾಟಲನ್ನು ಕಥೆಯಂತೆ ಆಪ್ತೇಷ್ಟರಲ್ಲಿ ಹೇಳಿಕೊಳ್ಳುತ್ತಿದ್ದರು. ಆಗ ನಾದಿನಿ ಸೋಹಾ ಅಲಿ ಖಾನ್ ಯಾವುದೋ ಒಂದು ಪುಸ್ತಕವನ್ನು ಕೈಗಿತ್ತು ಓದುವಂತೆ ಹೇಳುತ್ತಿದ್ದುದು ಇನ್ನೂ ನೆನಪಿದೆ.

ಕರೀನಾ ಸಿನಿಮಾ ಕುಟುಂಬದ ಹುಡುಗಿ. ಅಪ್ಪ-ಅಮ್ಮನ ಗತವೈಭವ ಕಂಡು ಬೆಳೆದಿದ್ದ ಅವರು 12ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಅಕ್ಕ ಕರಿಷ್ಮಾ ಕಪೂರ್ ಸಿನಿಮಾ ಶೂಟಿಂಗ್ ನೋಡಲೆಂದು ಹೋಗಿದ್ದವರು. ಆಗಲೇ ಅವರಿಗೆ ನಟಿಯಾಗಬೇಕೆಂಬ ಬಯಕೆ ಹುಟ್ಟಿದ್ದು. ಅಕ್ಕನೂ ನಟಿಯಾಗಿ ನೆಲೆ ಕಂಡುಕೊಂಡಿದ್ದವರೇ.

ಮೊದಲಿನಿಂದಲೂ ಹಟದ ಹುಡುಗಿ. ಅಂದುಕೊಂಡಿದ್ದನ್ನು ಸಾಧಿಸಿಯೇ ತೀರಿದರು. ಪ್ರೇಮದ ವಿಷಯದಲ್ಲೂ ಅಷ್ಟೆ. ಸೈಫ್ ಅಲಿ ಖಾನ್ ಜತೆಗಿನ ಅವರ ಪ್ರೀತಿ ಗಟ್ಟಿಯಾಗಿತ್ತು. ತೈಮೂರ್ ಆ ಪ್ರೇಮದ ಸಂಕೇತ ಎಂದೇ ಭಾವಿಸಿದ ಅವರಿಗೆ ತಾಯ್ತನವು ಸುಖದ ಜತೆಗೆ ಹಲವು ಪರೀಕ್ಷೆಗಳನ್ನೂ ಒಡ್ಡಿತು. ಮಗುವಿಗೆ ಹಾಲುಣಿಸುವುದರಿಂದ ಹಿಡಿದು ಅದು ಅತ್ತಾಗ ಸಂಭಾಳಿಸುವವರೆಗೆ ಅವರಿಗೆ ಒಂದು ಡಜನ್ ಮಂದಿ ಸಹಾಯ ಮಾಡಿದ್ದಾರೆ. ಕೆಲವರು ಸಲಹೆಗಳನ್ನು ಕೊಟ್ಟರೆ, ಇನ್ನು ಕೆಲವರು ನೆರವಿಗೆ ಕೈಚಾಚಿದ್ದಾರೆ. ಸೈಫ್ ಕೂಡ ಆ ಕಷ್ಟ-ಸುಖಗಳ ಪಯಣದಲ್ಲಿ ಕೈ ಅದುಮಿದವರೇ.

ಹಿಂದೆಲ್ಲ ಐಹಿಕ ಸುಖದ ಬಗೆಗೇ ಹೆಚ್ಚಾಗಿ ಮಾತನಾಡುತ್ತಿದ್ದ ಈ ನಟಿ ತಾಯಿಯಾದ ನಂತರ ಅಮ್ಮಂದಿರ ಜಗತ್ತಿನ ಮೇಲೆ ಬೆಳಕು ಚೆಲ್ಲತೊಡಗಿದರು. ತನ್ನ ತಾಯಿ ಬಬಿತಾ ತೋರಿದ್ದ ಕಕ್ಕುಲತೆ, ಚಿರಯೌವನೆಯಂತೆ ಕಾಣುವ ಅತ್ತೆ ಶರ್ಮಿಳಾ ಟ್ಯಾಗೋರ್ ಖಡಕ್ ಮಾತು, ತನಗಿಂತ ಹೆಚ್ಚು ಕಷ್ಟ ಪಟ್ಟ ಅಕ್ಕ ಕರಿಷ್ಮಾ ಕಪೂರ್ ಎಲ್ಲರ ಬಗೆಗೆ ಮುಕ್ತಕಂಠದಿಂದ ಪ್ರಶಂಸೆಯ ಮಾತುಗಳನ್ನು ಅವರು ಆಡತೊಡಗಿದರು. ಹೆಚ್ಚು ಮೆಚ್ಚುಗೆ ಸೂಚಿಸಿದ್ದು ಮಾತ್ರ ನಾದಿನಿಗೆ. ಸೋಹಾ ಅಲಿ ಖಾನ್ ತಾವು ಕಂಡ ಅತಿ ಜಾಣ ಹೆಣ್ಣುಮಗಳು ಎಂದೇ ಅವರು ಹೇಳುತ್ತಿರುತ್ತಾರೆ.

‘ದಿ ಪೆರಿಲ್ಸ್ ಆಫ್ ಬೀಯಿಂಗ್ ಮಾಡರೇಟ್ಲಿ ಫೇಮಸ್’ ಎಂಬ ಕೃತಿಯನ್ನು ಸೋಹಾ ಬರೆದಿದ್ದಾರೆ. ಅದನ್ನು ಓದುವಷ್ಟು ಜಾಣೆ ತಾನಲ್ಲ ಎಂದು ತಮಗೆ ತಾವೇ ಗೇಲಿ ಮಾಡಿಕೊಂಡಿದ್ದವರು ಕರೀನಾ. ಆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತ್ರ ಕರೀನಾ ಮಾತುಗಳೇ ಹೈಲೈಟ್ ಆಗಿದ್ದವು. ಅದರ ಸಾರಾಂಶ ಹೀಗಿದೆ: ’ಸೋಹಾ ಬಳಸುವ ಎಷ್ಟೋ ಇಂಗ್ಲಿಷ್ ಶಬ್ದಗಳು ನನಗಷ್ಟೇ ಅಲ್ಲ, ಅವಳ ಗಂಡ ಕುನಾಲ್ ಖೇಮುವಿಗೂ ಅರ್ಥವಾಗುವುದಿಲ್ಲ. ಡಿನ್ನರ್ ಟೇಬಲ್‌ನಲ್ಲಿ ಸೈಫ್–ಸೋಹಾ ಚರ್ಚೆಗೆ ಶುರುವಿಟ್ಟುಕೊಂಡರೆ ನನಗೆ ಆತಂಕ ಶುರುವಾಗುತ್ತದೆ. ಯಾಕೆಂದರೆ, ಅವರಿಬ್ಬರ ವಾಗ್ವಾದ ಏನು ಎಂಬ ತಲೆಬುಡವೂ ನನಗೆ ಗೊತ್ತಾಗುವುದಿಲ್ಲ. ಸೋಹಾ ಸಲಹೆ ನೀಡುವುದರಲ್ಲಿ ನಿಸ್ಸೀಮಳು. ಅವಳನ್ನು ಕಂಡರೆ ನನಗೆ ಅಸೂಯೆ ಆಗುತ್ತದೆ. ಅವಳು ತನ್ನನ್ನು ಅರೆ ಸೆಲೆಬ್ರಿಟಿ ಎಂದು ಕರೆದುಕೊಳ್ಳುವುದರಲ್ಲೂ ಒಂದು ಜಾಣತನವಿದೆ’.

ಶಶಾಂಕ್ ಘೋಷ್ ನಿರ್ದೇಶನದ ‘ವೀರೆ ದೀ ವೆಡ್ಡಿಂಗ್’ ಸಿನಿಮಾದಲ್ಲಿ ಈಗ ಕರೀನಾ ಅಭಿನಯಿಸಿದ್ದಾರೆ. ಈಗ ತೈಮೂರ್ ಕಣ್ಣಲ್ಲಿ ಅವರಿಗೆ ಹೊಸ ಬೆಳಕು ಕಾಣುತ್ತಿದೆಯೇ ವಿನಾ ಮಗನ ಅಳು ನಿದ್ರೆ ಕಳೆದಿದ್ದ ರಾತ್ರಿಗಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT