ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನವಾದ ಮಗ್ಗಗಳು ಕೈಸೋತ ನೇಕಾರರು

Last Updated 2 ಜೂನ್ 2018, 19:30 IST
ಅಕ್ಷರ ಗಾತ್ರ

ಕೈಮಗ್ಗದ ಬಟ್ಟೆಗಳಿಂದ ಹಿಡಿದು ಕೈಯಲ್ಲಿ ಹೆಣೆದ ತರಹೇವಾರಿ ಬುಟ್ಟಿಗಳವರೆಗೆ ವಿವಿಧ ಬಗೆಯ ಕೈಉತ್ಪನ್ನಗಳ ಬೆಂಗಳೂರಿನ ವಾರದ ಸಂತೆ ‘ರಾಗಿ ಕಣ’ಕ್ಕೆ ಮೊನ್ನೆ ಮೊದಲ ವಾರ್ಷಿಕೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಒಡಿಶಾದ ಕೈಮಗ್ಗಗಳು ಮತ್ತು ಸಮೃದ್ಧ ನೇಕಾರಿಕೆ ಕಲೆ ಬಗ್ಗೆ ಖ್ಯಾತ ವಿನ್ಯಾಸಕಿ ಗುಂಜನ್ ಜೈನ್ ತಮ್ಮ ಅನುಭವ ಹಂಚಿಕೊಂಡರು.

ಒಡಿಶಾದ ನಿಯಾಮಗಿರಿ ಪರ್ವತ ಶ್ರೇಣಿಯು ತನ್ನೊಳಗೆ ದಟ್ಟ ಕಾನನವನ್ನು ಮಾತ್ರವಲ್ಲ, ಅಪಾರ ಖನಿಜ ಸಂಪತ್ತನ್ನೂ ಹುದುಗಿಸಿಕೊಂಡಿದೆ. ಬೆಟ್ಟದ ತಪ್ಪಲಿನ ಸುಮಾರು ನೂರು ಹಳ್ಳಿಗಳಲ್ಲಿ ಕಾಡಿನೊಂದಿಗೆ ಶತಮಾನಗಳಿಂದ ಸಹಬಾಳ್ವೆ ನಡೆಸುತ್ತಿರುವ ಪ್ರಮುಖ ಆದಿವಾಸಿ ಜನಾಂಗ ಡೋಂಗರಿಯಾ ಕೋಂಡ್.

ಅರಣ್ಯ ಉತ್ಪನ್ನ ಮತ್ತು ಕೃಷಿ ಅವಲಂಬಿಸಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದ ಈ ಆದಿವಾಸಿಗಳ ನೆಮ್ಮದಿಯನ್ನು ಚಿಂದಿ ಉಡಾಯಿಸಿದ್ದು ವೇದಾಂತ ಕಂಪನಿ. ಒಡಿಶಾ ಸರ್ಕಾರ 2003ರಲ್ಲಿ ಕಾಲಹಂಡಿಯ ಲಂಜಿಘರ್‌ನಲ್ಲಿ ಅಲ್ಯುಮಿನಿಯಂ ರಿಫೈನರಿ ನಿರ್ಮಿಸಲು ವೇದಾಂತದೊಂದಿಗೆ ಒಪ್ಪಂದ ಮಾಡಿಕೊಂಡಿತು. ಈ ಶ್ರೇಣಿಯ ಅತ್ಯಂತ ಎತ್ತರ ಪರ್ವತ ನಿಯಾಮ್ ಡೋಂಗರ್. ಸರ್ಕಾರ ಮತ್ತು ವೇದಾಂತ ಕಂಪನಿಯ ಕಣ್ಣಿಗೆ ಈ ಬೆಟ್ಟವೆಂದರೆ ಅಲ್ಯುಮಿನಿಯಂ ಅದಿರು ಬಾಕ್ಸೈಟ್‍ ಖನಿಜ ಸಂಪತ್ತಿನ ಆಗರ ಮಾತ್ರ.

ಆದರೆ,  ಡೋಂಗರಿಯಾ ಜನರಿಗೆ ಅತ್ಯಂತ ಪವಿತ್ರವಾದ ಬೆಟ್ಟ. ಅವರ ದೇವರು ನಿಯಾಮ ರಾಜನ ನೆಲೆ. ತಪ್ಪಲಿನಲ್ಲಿ ಅವರು ಸ್ಥಳಾಂತರ ಮಾಡುತ್ತ ನಡೆಸುವ ಬೇಸಾಯ ಚಟುವಟಿಕೆಗೆ, ಬದುಕಿಗೆ ಆಧಾರವಾದ ನೀರು ಈ ಪರ್ವತ ಶ್ರೇಣಿಯ ಹಲವಾರು ಹಳ್ಳಗಳಿಂದ ದೊರೆಯುತ್ತದೆ. ಎಂಟು ಸಾವಿರದಷ್ಟಿರುವ ಈ ಆದಿವಾಸಿಗಳ ಬದುಕಿನ ಬೇರನ್ನೇ ಬುಡಮೇಲು ಮಾಡಿ, ನಿಯಾಮ್ ಡೋಂಗರ್ ಬೆಟ್ಟದ ಒಡಲನ್ನು ಬಗೆದು ಹಾಕಿ, ಬಾಕ್ಸೈಟ್ ಗಣಿ ತೋಡಲು ವೇದಾಂತ ಕಂಪನಿ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು.

ಕಂಪನಿಯ ಹಣಬಲ, ತೋಳ್ಬಲ, ಪ್ರಭಾವಿ ವಲಯ, ಬೆನ್ನಹಿಂದಿದ್ದ ರಾಜ್ಯ ಸರ್ಕಾರ ಎಲ್ಲದಕ್ಕೆ ಸಡ್ಡುಹೊಡೆದು ನಿಂತರು ಡೋಂಗರಿಯಾ ಆದಿವಾಸಿಗಳು. ಕೊನೆಗೂ ದಶಕದ ಕಾಲ ನಡೆದ ಸತತ ಪ್ರತಿಭಟನೆ, ಹರತಾಳ, ವಿವಿಧ ನೆಲೆಯ ಹೋರಾಟ ಎಲ್ಲದಕ್ಕೆ ಜಯ ಸಿಕ್ಕಿತು. ಡೋಂಗರಿಯಾ ಆದಿವಾಸಿಗಳಿಗೆ ಅವರ ಪವಿತ್ರ ಬೆಟ್ಟವನ್ನು ಪೂಜಿಸುವ ಹಕ್ಕನ್ನು ರಕ್ಷಿಸಿ, ಉಳಿಸಬೇಕೆಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಕೊಟ್ಟಿತು.


ಮಂಜರಿ

ವೇದಾಂತ ಕಂಪನಿ ಕೊನೆಗೆ ಅಲ್ಲಿಂದ ಕಾಲು ಕೀಳಬೇಕಾಯಿತು. ಆದಿವಾಸಿಗಳ ಬದುಕುವ ಹಕ್ಕನ್ನು ಉಳಿಸುವುದು ಎಂದರೆ ಕಾಡು, ಸುತ್ತಲಿನ ಜೀವಜಾಲ ಮತ್ರವಲ್ಲ, ನೆಲಮೂಲದ ಒಂದು ಸಮೃದ್ಧ ಸಂಸ್ಕೃತಿಯನ್ನು ಉಳಿಸಿ, ಸಂರಕ್ಷಿಸುವುದು ಎಂದು.

ಡೋಂಗರಿಯಾ ಜನರು ವಿಶಿಷ್ಟ ಕಲೆಯೊಂದಕ್ಕೂ ಹೆಸರಾಗಿದ್ದಾರೆ. ಈ ಆದಿವಾಸಿ ಹೆಣ್ಣುಮಕ್ಕಳು ಹತ್ತಿಯ ಶಾಲಿನ ಮೇಲೆ ಕೈಕಸೂತಿ ಮಾಡುತ್ತಾರೆ. ಬಿಳಿ ಅಥವಾ ಕೆನೆಬಣ್ಣದ ಶಾಲಿನ ಮೇಲೆ ಗಾಢ ವರ್ಣದಲ್ಲಿ ಬೆಟ್ಟಗಳನ್ನು ಹೋಲುವ ವಿವಿಧ ವಿನ್ಯಾಸದ ಕಸೂತಿ ನೇಯ್ಗೆ ಇರುತ್ತದೆ. ಹೆಚ್ಚಿನ ವೇಳೆ ಈ ಶಾಲುಗಳನ್ನು ಅವರು ಹೊರಗೆ ಮಾರುವುದಿಲ್ಲ. ಈ ಅಪರೂಪದ ಕೈಕಸೂತಿ ಕಣ್ಮರೆಯಾಗದಂತೆ ಕಾಪಾಡಬೇಕಿದೆ ಎನ್ನುತ್ತಾರೆ ಅವರೊಂದಿಗೆ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಖ್ಯಾತ ವಸ್ತ್ರ ವಿನ್ಯಾಸಕಾರ್ತಿ ಗುಂಜನ್ ಜೈನ್.

ಒಡಿಶಾದಲ್ಲಿ ಡೋಂಗರಿಯಾ ಜನರಂತೆ ಅನನ್ಯವಾದ ಕೈಮಗ್ಗದ ಕಲೆಯನ್ನು ಉಸಿರಾಗಿಸಿಕೊಂಡಿದ್ದ ಹಲವಾರು ಸಮುದಾಯಗಳಿವೆ. ಆದರೆ, ಆಧುನಿಕತೆ ಮತ್ತು ಜಾಗತೀಕರಣದ ಅಬ್ಬರದಲ್ಲಿ ಮಾರುಕಟ್ಟೆಯೇ ಇಲ್ಲದೆ ತತ್ತರಿಸಿದ ಸಾವಿರಾರು ನೇಕಾರರು ಜೀವನೋಪಾಯಕ್ಕೆ ದಿನಗೂಲಿಯನ್ನು ಅವಲಂಬಿಸಿ ನಗರದತ್ತ ವಲಸೆ ಹೋಗಿದ್ದಾರೆ. ಇಂದು ಒಡಿಶಾದಲ್ಲಿ ಹೆಚ್ಚೆಂದರೆ ನಲ್ವತ್ತು ಸಾವಿರ ಕೈಮಗ್ಗಗಳು ಮತ್ತು ಒಂದು ಲಕ್ಷ ನೇಕಾರರು ಉಳಿದಿರಬಹುದು. ಅದರಲ್ಲಿಯೂ ವಿಶಿಷ್ಟ ಕೈಮಗ್ಗದ ನೇಯ್ಗೆಗಳಾದ ಧಾಲ ಪತ್ಥರ್, ಕಲಾ ಪತ್ಥರ್, ಸಿಮಿನೊಯಿ, ಹಬಸ್ಪುರಿ, ಕುಸುಮಿ, ಬೋಮ್‌ಕೈ ಇತ್ಯಾದಿ ನಿಧಾನಕ್ಕೆ ಕೊನೆಯುಸಿರು ಎಳೆಯುತ್ತಿವೆ.

ಪವರ್‌ಲೂಮ್‍ಗಳು ಒಡ್ಡುವ ಬೆಲೆ ಪೈಪೋಟಿ, ಗ್ರಾಹಕರ ನಿರ್ಲಕ್ಷ್ಯ, ಸರ್ಕಾರದ ತೆರಿಗೆ ನೀತಿಗಳು, ಕಚ್ಚಾವಸ್ತುಗಳ ಬೆಲೆಯೇರಿಕೆ, ನೇಕಾರರಿಗೆ ಅತಿಕಡಿಮೆ ವೇತನ ಹೀಗೆ ಹತ್ತು ಹಲವು ಸಮಸ್ಯೆಗಳು ಸೇರಿ ಕೈಮಗ್ಗ ನಂಬಿದವರು ಬೀದಿಗೆ ಬಂದು ನಿಂತಿದ್ದಾರೆ ಎಂದು ಗುಂಜನ್‌ ಖೇದದಿಂದ ಹೇಳುತ್ತಾರೆ.

ಒಡಿಶಾದ ಅತ್ಯಪರೂಪದ ಬೋಮ್‌ಕೈ ನೇಯ್ಗೆಯನ್ನು ಮಾಡುವ ಮೂಲ ನೇಕಾರರು ಕೇವಲ ನಾಲ್ಕು ಜನರು ಇಂದು ಗಂಜಾಂ ಜಿಲ್ಲೆಯ ಬೋಮಕಯಿ ಹಳ್ಳಿಯಲ್ಲಿ ಉಳಿದಿದ್ದಾರೆ. ಉಳಿದವರು ಒಂದೋ ನೇಕಾರಿಕೆಯನ್ನೇ ಬಿಟ್ಟಿದ್ದಾರೆ ಅಥವಾ ತಮಿಳುನಾಡು, ಸೂರತ್ ಇತರ ಕಡೆ ಪವರ್‌ಲೂಮ್‌ಗಳಲ್ಲಿ ಕೆಲಸ ಹುಡುಕಿಕೊಂಡು ಹೋಗಿದ್ದಾರೆ. ‘ಅಲ್ಲೆಲ್ಲೊ ಕಲ್ಲುಬಂಡೆಯಲ್ಲಿ ಕಲ್ಲು ಒಡೆಯುವುದಕ್ಕಿಂತ ನನ್ನ ಮನೆಯಲ್ಲಿ ಕೂತು ನೇಯುವುದು ಹೆಚ್ಚು ನೆಮ್ಮದಿ ಕೊಡುತ್ತೆ. ನಾನು ನೇಯ್ದಿದ್ದಕ್ಕೆ ಬೆಲೆ ಕೊಟ್ಟರೆ ಸಾಕು, ಹೆಚ್ಚೇನೂ ಬೇಡ’ ಎನ್ನುವ ಕಬಿರಾಜ್ ನಾಯಕ್ ತಲೆಮಾರಿನಿಂದ ಬಂದ ಬೋಮ್‌ಕೈ ಕಲಾತ್ಮಕ ನೇಕಾರಿಕೆಯನ್ನು ಹಠ ತೊಟ್ಟು ಉಳಿಸಿಕೊಂಡಿದ್ದಾರೆ.

ಸಿದ್ಧಉಡುಪು ರಫ್ತು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ವಿನ್ಯಾಸಕಾರ್ತಿ ಗುಂಜನ್ ಜೈನ್ ಮೊದಲು ಒಡಿಶಾದ ಕೆಲವು ನೇಕಾರರೊಂದಿಗೆ ವಿನ್ಯಾಸದ ಯೋಜನೆಯೊಂದರಲ್ಲಿ ತೊಡಗಿದ್ದರು. ‘ನಿಮ್ಮ ಯೋಜನೆಯೇನೋ ಮುಗಿಯಿತು. ಆದರೆ, ಈ ಉತ್ಪನ್ನಗಳನ್ನು ಏನು ಮಾಡುವುದು, ಯಾರು ಕೊಳ್ಳುತ್ತಾರೆ. ನಾವೇನು ಮಾಡುವುದು’ ಎಂದಾಗ ಗುಂಜನ್‍ಗೆ ಅರಿವಾಯಿತು. ನೇಕಾರರೊಂದಿಗೆ ತೊಡಗಿಸಿಕೊಳ್ಳುವುದು ಎಂದರೆ ಬರಿಯ ಒಂದು ಕಿರುಯೋಜನೆ ಅಲ್ಲ ಎಂದು. ಅಲ್ಲಿಯವರೆಗೆ ದೆಹಲಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಪ್ರತಿನಿತ್ಯ ಹಾಕಿಕೊಳ್ಳುವ, ಚರ್ಮಕ್ಕೆ ಅತ್ಯಾಪ್ತವಾದ ಬಟ್ಟೆಯನ್ನು ಯಾಂತ್ರೀಕೃತ ಫ್ಯಾಕ್ಟರಿಯಲ್ಲಿ ಇಷ್ಟು ಬೃಹತ್ ಆಗಿ ಉತ್ಪಾದಿಸಬೇಕೆ ಎನ್ನಿಸಲಾರಂಬಿಸಿತು.

ವಿನ್ಯಾಸದ ಆಚೆಗಿನ ಸಂಗತಿಗಳತ್ತ, ಕೈಮಗ್ಗದ ಬಟ್ಟೆಗಳಿಗೆ ಸ್ಥಳೀಯ ಮತ್ತು ಹೊರಗಿನ ಮಾರುಕಟ್ಟೆಯನ್ನು ಕಲ್ಪಿಸುವತ್ತ ಕೆಲಸ ಮಾಡಬೇಕಿದೆ ಎಂದುಕೊಂಡ ಗುಂಜನ್ ಆಯ್ಕೆ ಮಾಡಿಕೊಂಡಿದ್ದು ಶತಮಾನಗಳ ಕೈಮಗ್ಗದ ನೇಕಾರಿಕೆಯ ಪರಂಪರೆ ಇರುವ ಒಡಿಶಾ ರಾಜ್ಯವನ್ನು. ಹೀಗೆ ಹುಟ್ಟಿದ್ದು ವೃಕ್ಷ್ ಎಂಬ ಡಿಸೈನ್ ಸ್ಟುಡಿಯೊ. ದೆಹಲಿ ಮತ್ತು ಭುವನೇಶ್ವರದದಲ್ಲಿ ಪುಟ್ಟ ಕಚೇರಿ ಇರುವ ವೃಕ್ಷ್ ಈಗ ಒಡಿಶಾದ ಹಲವಾರು ಜಿಲ್ಲೆಗಳಲ್ಲಿರುವ ನಲ್ವತ್ತೈದು ನೇಕಾರರೊಂದಿಗೆ ನೇರವಾಗಿ ಕೆಲಸ ಮಾಡುತ್ತಿದೆ. ಸಮಕಾಲೀನ ವಿನ್ಯಾಸಗಳು, ಸಂಶೋಧನೆ, ಅಡ್ವಕಸಿ, ಮಾರುಕಟ್ಟೆ ಪರಿಹಾರಗಳನ್ನು ಒದಗಿಸುವತ್ತ ವೃಕ್ಷ್ ಕಳೆದ ಹತ್ತು ವರ್ಷಗಳಿಂದ ಸಕ್ರಿಯವಾಗಿದೆ. ‘ನಮ್ಮದು ಮಹಿಳೆಯರೇ ಇರುವ ಪುಟ್ಟ ಕಚೇರಿ’ ಎನ್ನುತ್ತ ಗುಂಜನ್ ನಗುತ್ತಾರೆ.

ದೆಹಲಿ ಮೂಲದ ಗುಂಜನ್‌ಗೆ ಮೊದಲು ಎದುರಾಗಿದ್ದ ಭಾಷೆಯ ಸಮಸ್ಯೆ. ಸ್ಥಳೀಯರೊಂದಿಗೆ ಒಡನಾಡಲು ಒಡಿಶಾ ಭಾಷೆ ಕಲಿಯಬೇಕಿತ್ತು. ಹೊರಗಿನವರಾದ ಗುಂಜನ್‍ಗೆ ಸ್ಥಳೀಯ ನೇಕಾರರ ವಿಶ್ವಾಸಗಳಿಸಿಕೊಳ್ಳುವುದು ಸುಲಭ ಸಾಧ್ಯವಿರಲಿಲ್ಲ. ಆದರೆ, ಕಣ್ಣೆದುರು ಬದುಕಿನ ವಿನ್ಯಾಸವಿತ್ತು. ಇನ್ನೂ ಉಳಿದಿರುವ ನೇಕಾರಿಕೆಯ ಸಮೃದ್ಧ ಕಲೆಯನ್ನು ಉಳಿಸಿ, ಬೆಳೆಸುವತ್ತ ಕೊಡುಗೆ ಸಲ್ಲಿಸಬೇಕೆಂಬ ಅದಮ್ಯ ತುಡಿತವಿತ್ತು. ನಿಧಾನವಾಗಿ ಭಾಷೆ ಕಲಿತರು. ನೇಕಾರರ ಜೊತೆ ಕುಳಿತು ಕಷ್ಟ, ಸುಖ ಆಲಿಸಿದರು. ನೇಕಾರರಿಗೆ ಕಲಾತ್ಮಕ ವಿನ್ಯಾಸಗಳನ್ನು ರೂಪಿಸುವಂತೆ ಪ್ರೋತ್ಸಾಹಿಸಿದರು. ಮಾರುಕಟ್ಟೆ ಹುಟ್ಟುಹಾಕಲು ಪ್ರಯತ್ನಿಸತೊಡಗಿದರು.

‘ನನಗೆ ಪ್ಯಾರಾಚ್ಯೂಟ್ ಡಿಸೈನಿಂಗ್ ಅಂದರೆ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಕೆಲಸ ಮಾಡುವುದು ಇಷ್ಟವಿಲ್ಲ. ಏನಾದರೂ ಪರಿಣಾಮ, ಫಲಿತಾಂಶ ಕಾಣಬೇಕು ಎಂದಾದರೆ ನೆಲೆಯೂರಿ ಕೆಲಸ ಮಾಡಬೇಕು’ ಎನ್ನುವ ಗುಂಜನ್ ಸಾವಿನ ಅಂಚಿಗೆ ಸರಿಯುತ್ತಿದ್ದ ಬೋಮ್‌ಕೈ, ಜಾಲಾ, ಇಕತ್ ಇನ್ನಿತರ ಕಲಾತ್ಮಕ ನೇಯ್ಗೆಯ ನೇಕಾರರ ಹಳ್ಳಿಗೆ ಹೋಗಿ, ಅವರನ್ನು ಪ್ರೋತ್ಸಾಹಿಸಿದರು. ಈಗ ಬೋಮ್‌ಕೈ ಹಳ್ಳಿಯಲ್ಲಿ ಬೇರೆ ಜೀವನೋಪಾಯ ಹುಡುಕಿಕೊಂಡು ಊರು ಬಿಟ್ಟಿದ್ದ ನಾಲ್ವರು ಮರಳಿ ಬೋಮ್‌ಕೈ ನೇಯ್ಗೆಯಲ್ಲಿ ಮತ್ತೆ ತೊಡಗಿದ್ದಾರೆ. ಜಾಜ್‍ಪುರ್ ಜಿಲ್ಲೆಯಲ್ಲಿ ಸೂರತ್ ಇನ್ನಿತರ ಕಡೆ ಪವರ್‌ಲೂಮ್‌ಗಳಲ್ಲಿ ಕೆಲಸ ಮಾಡಲು ಹೋಗಿದ್ದ 150 ನೇಕಾರರು ಮರಳಿ ಬಂದಿದ್ದಾರೆ. ಅವರೀಗ ಕೈಮಗ್ಗದಲ್ಲಿ ಟಸ್ಸರ್ ರೇಷ್ಮೆ ಬಟ್ಟೆ ನೇಯಲಾರಂಭಿಸಿದ್ದಾರೆ.

‘ಕೈಮಗ್ಗದ ಬಟ್ಟೆಗಳು ಹಳೇ ಪ್ಯಾಷನ್ ವಿನ್ಯಾಸಗಳು, ಜನ ಇಷ್ಟಪಡೋದಿಲ್ಲ ಹಾಗೆ ಹೀಗೆ ಎಂದೆಲ್ಲ ಹೇಳ್ತಾರಲ್ಲ... ಅದು ನಿಜ ಅಲ್ಲ. ಈಗ ಪವರ್‌ಲೂಮ್‌ನವರು ಇಕತ್ ಪ್ರಿಂಟ್‍ಗಳನ್ನು ನಕಲು ಮಾಡ್ತಿದ್ದಾರೆ. ಕೈಮಗ್ಗದಲ್ಲಿ ನೇಯ್ದ ತುಂಬ ಒಳ್ಳೆಯ ಇಕತ್ ಸೀರೆ ಆರು ಸಾವಿರ ಇದ್ರೆ ಈ ಪವರ್‌ಲೂಮ್‌ನ ಸೀರೆ ಸಾವಿರಕ್ಕೆ ಸಿಗಬಹುದು. ಜನ ದರ ಅಗ್ಗ ಎಂದು ನೋಡುತ್ತಾರೆಯೇ ವಿನಾ ನಕಲಿ ಉತ್ಪನ್ನ ಅಂತ ನೋಡೋದಿಲ್ಲ. ಯಂತ್ರದಿಂದ ತಯಾರಿಸಿದ್ದಕ್ಕೆ, ಕೈಯಿಂದ ಶ್ರಮವಹಿಸಿ ಮಾಡಿದ್ದಕ್ಕೆ ವ್ಯತ್ಯಾಸವಿದೆ ಅಲ್ಲವಾ. ಹೀಗಾಗಿ ದರದಲ್ಲಿ ವ್ಯತ್ಯಾಸವಿರುತ್ತೆ.  ಕೈಮಗ್ಗಕ್ಕೆ ಪವರ್‌ಲೂಮ್‌ನಿಂದ ಸಂಚಕಾರ ಇರುವುದು ನಿಜ. ಪವರ್‌ಲೂಮ್‌ನ ಬಟ್ಟೆಗಳು ಕೈಮಗ್ಗ ಎಂಬ ಹಣೆಪಟ್ಟಿ ಹೊತ್ತು ಬರುತ್ತಿವೆ. ಕೈಮಗ್ಗದ ಉತ್ಪನ್ನಗಳ ನಡುವೆ ಈ ನಕಲಿ ಉತ್ಪನ್ನಗಳು ತೂರಿಕೊಂಡುಬಿಟ್ಟಿವೆ. ಇದು ಮೊದಲು ನಿಲ್ಲಬೇಕು. ಕೈಮಗ್ಗ ಮತ್ತು ಪವರ್ ಲೂಮ್ ಬಟ್ಟೆ ಎರಡನ್ನೂ ಪ್ರತ್ಯೇಕ ಉದ್ಯಮ ಎಂದೇ ನೋಡಬೇಕು’ ಎನ್ನುತ್ತಾರೆ ಗುಂಜನ್.


ಡೋಂಗರಿಯಾ ಸೀರೆಯ ನೋಟ

ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್ ಇನ್ನಿತರ ದೊಡ್ಡ ನಗರಗಳಲ್ಲಿ ಆಗೀಗ ಮಾರಾಟ ಪ್ರದರ್ಶನ ಏರ್ಪಡಿಸುವ ಮೂಲಕ ಮಾರುಕಟ್ಟೆ ಒದಗಿಸಲು ಪ್ರಯತ್ನಿಸುತ್ತಿದ್ದಾರೆ. ಇವರೊಂದಿಗೆ ಕೆಲಸ ಮಾಡುತ್ತಿದ್ದ ಸುಮಾರು ಹತ್ತಕ್ಕೂ ಹೆಚ್ಚು ನೇಕಾರರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹ್ಯಾಂಡ್‍ಲೂಮ್ ಸಂಸ್ಥೆಯಿಂದ ವಿನ್ಯಾಸಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಹೀಗೆ ಪ್ರಶಸ್ತಿ ಪಡೆದ ನೇಕಾರರಿಗೆ ಸಿಗುವ ಗೌರವ, ಸ್ಥಾನಮಾನಗಳನ್ನು ಕಂಡು ಉಳಿದ ನೇಕಾರರು ಕೂಡ ಪ್ರೋತ್ಸಾಹಗೊಂಡಿದ್ದಾರೆ. ಜೊತೆಗೆ ಕಟಕ್ ಜಿಲ್ಲೆಯ ನೇಕಾರರೊಂದಿಗೆ ಮಂಜಿಷ್ಟ್, ಅರಗು, ಹಲಸು ಇನ್ನಿತರ ಮರಗಳಿಂದ ಸಹಜ ಬಣ್ಣದ ತಯಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಒಡಿಶಾ ಟಸ್ಸರ್ ರೇಷ್ಮೆಗೂ ಹೆಸರುವಾಸಿ. ಕಾಡಿನಲ್ಲಿ ಬೆಳೆಯುವ ನಾಲ್ಕಾರು ವಿಧದ ಮರದ ಮೇಲೆ ರೇಷ್ಮೆಹುಳುಗಳು ಗೂಡು ಕಟ್ಟುತ್ತವೆ. ಇವು ಹಿಪ್ಪುನೇರಳೆ ರೇಷ್ಮೆ ಹುಳುವಿನ ಇನ್ನೊಂದು ಜಾತಿ ಎನ್ನಬಹುದು. ಆದಿವಾಸಿಗಳು ಕಾಡಿನಿಂದ ಈ ಗೂಡುಗಳನ್ನು ಸಂಗ್ರಹಿಸಿ, ಹತ್ತಿರದ ನೇಕಾರಿಕೆ ಇರುವ ಹಳ್ಳಿಗಳಲ್ಲಿ ಮಾರುತ್ತಾರೆ.

ಕೈಮಗ್ಗದ ನೇಕಾರರಲ್ಲಿ ಸೃಜನಶೀಲತೆ ಕಡಿಮೆ. ಅವೇ ಅವೇ ವಿನ್ಯಾಸಗಳನ್ನು ನೇಯುತ್ತಾರೆ ಎಂದು ವರ್ಷಗಟ್ಟಲೆಯಿಂದ ನಾವು ಹೇಳ್ತಾ, ಅವರಲ್ಲಿ ಕೀಳರಿಮೆ ಬೆಳೆಸಿಬಿಟ್ಟಿದ್ದೀವಿ. ಆದರೆ, ಅವರಲ್ಲಿ ನಿಜಕ್ಕೂ ಕೌಶಲ, ಸೃಜನಶೀಲತೆ ಇದೆ ಎನ್ನುವ ಗುಂಜನ್ ತಮ್ಮದೇ ಅನುಭವವನ್ನು ತೆರೆದಿಡುತ್ತಾರೆ. ಜಾಲಾ ನೇಯ್ಗೆಯಲ್ಲಿ ಪಳಗಿರುವ  ಜಾಜ್‍ಪುರ ಜಿಲ್ಲೆಯ ಗೋವಿಂದನಿಂದ ಒಂದು ದಿನ ಗುಂಜನ್‍ಗೆ ಫೋನು.

‘ನಾನು ಟಸ್ಸರ್‌ ರೇಷ್ಮೆಯಲ್ಲಿ ಇಕತ್ ನೇಯ್ಗೆ ವಿನ್ಯಾಸ ಮಾಡ್ತೀನಿ’ ಅಂತ. ಗುಂಜನ್‍ ಕಕ್ಕಾಬಿಕ್ಕಿ. ‘ಅಲ್ಲಾ ಗೋವಿಂದ್,  ನಿಮ್ಮ ಕೈ ಜಾಲಾದಲ್ಲಿ ಪಳಗಿದೆ. ಅದೇನು ವಿನ್ಯಾಸ ಮಾಡಬೇಕು ಅಂತಿದ್ದೀರಿ ಅದನ್ನು ಜಾಲಾದಲ್ಲಿಯೇ ಮಾಡಬಹುದಲ್ಲ’ ಗುಂಜನ್ ಕಕ್ಕಾಬಿಕ್ಕಿಯಾಗಲು ಕಾರಣವಿತ್ತು. ಟಸ್ಸರ್‌ ರೇಷ್ಮೆಯಲ್ಲಿ ಇಕತ್ ವಿನ್ಯಾಸ ಮಾಡುವುದು ಕಷ್ಟ. ಆವರೆಗೆ ಯಾರೂ ಮಾಡಿರಲಿಲ್ಲ. ಗೋವಿಂದ ಮೆಲ್ಲಗೆ ವಿವರಿಸಿದ. ಆ ಸಂಜೆ ಹಳ್ಳಿಯಾಚೆಗಿನ ನದಿಯಲ್ಲಿ ಸ್ನಾನಕ್ಕೆ ಹೋದ ಗೋವಿಂದನಿಗೆ ಅದೇ ಮುಳುಗುತ್ತಿದ್ದ ಸೂರ್ಯನ ಹಿನ್ನೆಲೆಯಲ್ಲಿ ಆಕಾಶದಲ್ಲಿ ಹತ್ತು ಹಲವು ವರ್ಣವೈವಿಧ್ಯದಲ್ಲಿ ಸಾಗುತ್ತಿದ್ದ ಮೋಡಗಳು ಮತ್ತು ಆ ಮೋಡಗಳ ಪ್ರತಿಬಿಂಬ ನೀರಿನಲ್ಲಿ ಕಾಣಿಸಿದೆ. ಅದರಿಂದ ಆತ ಎಷ್ಟು ಸ್ಫೂರ್ತಿಗೊಂಡಿದ್ದ ಎಂದರೆ ಆ ಮೋಡಗಳ ವರ್ಣವೈವಿಧ್ಯವನ್ನು ಇಕತ್‍ ನೇಯ್ಗೆ ವಿನ್ಯಾಸದಲ್ಲಿ ಸೆರೆಹಿಡಿಯಲು ತೀವ್ರವಾಗಿ ಹಂಬಲಿಸಿದ್ದ. ಹಾಗೆ ಮೈತಳೆದಿದ್ದು ‘ಬಾದಲ್’ ಶ್ರೇಣಿಯ ಇಕತ್ ಟಸ್ಸರ್ ಸೀರೆಗಳು. 

ಬೇರೆ ಎಲ್ಲ ರಾಜ್ಯಗಳಂತೆ ಒಡಿಶಾ ರಾಜ್ಯವೂ ನೇಕಾರರು ಸೇರಿದಂತೆ ಕೈಉತ್ಪನ್ನಗಳ ತಯಾರಕರ ಬಗ್ಗೆ ಬಾಯಿಮಾತಿನ ಕಾಳಜಿಯನ್ನಷ್ಟೇ ತೋರುತ್ತಿದೆ. ಕೈಉತ್ಪನ್ನಗಳಿಗೆ ಜಿ.ಎಸ್‍.ಟಿ ವಿಧಿಸಬೇಡಿ ಎಂದು ಆ ರಾಜ್ಯದ ಮುಖ್ಯಮಂತ್ರಿ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಎನ್ನುವುದನ್ನು ಬಿಟ್ಟರೆ ಬೇರೆ ಏನಿಲ್ಲ.

‘ಸಮಾಧಾನದ ಸಂಗತಿ ಎಂದರೆ ಒಡಿಶಾದಲ್ಲಿ ಅಲ್ಲಲ್ಲಿ ಈ ಬಗೆಯ ಕೈಉತ್ಪನ್ನಗಳ ವಾರದ ಸಂತೆಗಳು ನಡೆಯುತ್ತವೆ. ಬಾಲಿ ಜೋಡಿ ಹಾತ್ ಅಂತಹದೊಂದು ಸಂತೆ. ಅಲ್ಲಿ ಹತ್ತಿ ಎಳೆಗಳಿಂದ ಹಿಡಿದು ಶಾಲು, ಸೀರೆ, ಲುಂಗಿ ಇತ್ಯಾದಿ ವರೆಗೆ ಎಲ್ಲವೂ ಮಾರಾಟಕ್ಕೆ ಇರುತ್ತದೆ. ಯಾರಾದರೂ ಬಂದು ಮಾರಬಹುದು. ಒಂದೇ ಕರಾರು ಎಂದರೆ ಕೈಉತ್ಪನ್ನವಾಗಿರಬೇಕು. ನೇಕಾರರು ನೇಯ್ದ ಬಟ್ಟೆಗಳನ್ನು ಮಾರುವುದಷ್ಟೇ ಅಲ್ಲ. ನೇಕಾರಿಕೆಗೆ ಬೇಕಾದ ಕಚ್ಚಾಸಾಮಗ್ರಿಗಳನ್ನು ಕೊಳ್ಳಲು ಬರುತ್ತಾರೆ. ಇಲ್ಲಿ ಒಂದು ದಿನದ ವಹಿವಾಟು ಎರಡು ಕೋಟಿಯನ್ನೂ ದಾಟಿರುತ್ತದೆ’. ಎನ್ನುತ್ತಾರೆ ಗುಂಜನ್‍.

ನಿಜ, ಕೈಮಗ್ಗ ಮತ್ತು ಕೈಉತ್ಪನ್ನಗಳಿಗೆ ಆನ್‍ಲೈನ್ ಹಾಗೂ ಹೊರಗಿನ ಮಾರುಕಟ್ಟೆಗಳನ್ನು ಹುಡುಕುವ ಜೊತೆಗೆ ಸ್ಥಳೀಯ ಮಾರುಕಟ್ಟೆಯನ್ನು ಬೆಳೆಸಿ, ವಿಸ್ತರಿಸಬೇಕಿದೆ. ಸುಸ್ಥಿರ ಪರಿಸರ ಮತ್ತು ಬದುಕಿಗೆ ಮರಳುವುದಕ್ಕೆ ಇರುವ ಒಂದು ದಾರಿ ಎಂದರೆ ಸಾಧ್ಯವಿದ್ದೆಡೆಗಳಲ್ಲಿ ಕೈಉತ್ಪನ್ನಗಳ ಬಳಕೆಯತ್ತ ಮನಸ್ಸು ಮಾಡುವುದು. ಆಗ ಮಾತ್ರ ಬೃಹತ್ ಪ್ರಮಾಣದಲ್ಲಿ ತಯಾರಾಗಿ ಮಾರುಕಟ್ಟೆಗೆ ದಾಂಗುಡಿಯಿಡುವ ಯಾಂತ್ರೀಕೃತ ಉತ್ಪನ್ನಗಳ ಮಧ್ಯೆಯೂ ಕೈಉತ್ಪನ್ನಗಳು, ಕೈಮಗ್ಗಗಳು ಮತ್ತು ಅವನ್ನು ನಂಬಿಕೊಂಡ ಬದುಕುಗಳು ತುಸುವಾದರೂ ಉಸಿರಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT