ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ

ಹತ್ತಿಮರಡಿಯ ಶಾಲೆಯಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ವಿನೂತನ ಪ್ರಯೋಗ
Last Updated 5 ಜೂನ್ 2018, 7:26 IST
ಅಕ್ಷರ ಗಾತ್ರ

ಚಿಕ್ಕೋಡಿ: ಇಲ್ಲಿನ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯೊಂದರಲ್ಲಿ ದಾನಿಗಳ ಸಹಕಾರದೊಂದಿಗೆ, ಖಾಸಗಿ ಶಾಲೆಗಳ ಮಾದರಿಯಲ್ಲಿಯೇ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವ ವಿನೂತನ ಪ್ರಯೋಗ ಮಾಡಲಾಗಿದೆ.

ತಾಲ್ಲೂಕಿನ ಹಿರೇಕೋಡಿಯ ಹತ್ತಿಮರಡಿಯಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ (ಎಲ್‌ಕೆಜಿ ಹಾಗೂ ಯುಕೆಜಿ) ತರಗತಿಗಳನ್ನು ಆರಂಭಿಸಲಾಗಿದೆ. ಪಾಲಕರು ಮಕ್ಕಳನ್ನು ಈ ಶಾಲೆಗೆ ಪೂರ್ವ ಪ್ರಾಥಮಿಕ ತರಗತಿಗಳಿಗೆ ಸೇರಿಸುತ್ತಿದ್ದಾರೆ.

ಹೆಚ್ಚುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವದ ಪರಿಣಾಮವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಹಿಂದೇಟು ಹಾಕುತ್ತಿರುವುದರಿಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಹತ್ತಾರು ಮಂದಿ ಸಮಾನಮನಸ್ಕ ಶಿಕ್ಷಣ ಪ್ರೇಮಿಗಳು ಮತ್ತು ಶಿಕ್ಷಕರು ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಿದ್ದಾರೆ.

ದಾನಿಗಳ ನೆರವು: ಇಲ್ಲಿ 1ರಿಂದ 7ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಕ್ಷೀಣಿಸುತ್ತಿರುವುದನ್ನು ಮನಗಂಡು ಆರಂಭಿಸಿರುವ ಪೂರ್ವ ಪ್ರಾಥಮಿಕ ತರಗತಿಗಳಿಗೆ ದಾಖಲಾಗುವ ಮಕ್ಕಳಿಗೆ ದಾನಿಗಳ ನೀಡುವ ಆರ್ಥಿಕ ನೆರವಿನೊಂದಿಗೆ ಉಚಿತವಾಗಿ ಸಮವಸ್ತ್ರ, ಶೂ ಹಾಗೂ ಎರಡು ಜೊತೆ ಸಾಕ್ಸ್‌ ವಿತರಿಸಲು ನಿರ್ಧರಿಸಲಾಗಿದೆ. ಹಾಗೂ ಶಿಕ್ಷಕರನ್ನೂ ನೇಮಕ ಮಾಡಲಾಗಿದೆ.

ಪೂರ್ವ ಪ್ರಾಥಮಿಕ ತರಗತಿಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ದಿಸೆಯಲ್ಲಿ ದಾನಿಗಳಾದ ಲಕ್ಷ್ಮಣ ನಿಂಗಾಗೋಳ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸಲಾಗಿದೆ. ಅರವಿಂದ ಬಾಳಿಕಾಯಿ, ಮಹೇಂದ್ರ (ಗುಬ್ಬು) ಬಾಳಿಕಾಯಿ, ಋಷಭ ಬಾಳಿಕಾಯಿ, ಅನ್ನಪ್ಪ ದ್ರಾಕ್ಷೆ, ಮಲ್ಲಪ್ಪ ಚೌಗಲಾ, ಸುರೇಶ ಕುಪ್ಪಾನಟ್ಟೆ, ರಾವಸಾಹೇಬ ಬಡಿಗೇರ, ಸತ್ಯಪ್ಪ ನಾವಿ ಮತ್ತು ರಾಮು ಕೋಳಿ ಸದಸ್ಯರಾಗಿದ್ದಾರೆ. ಇವರು ತರಗತಿಗಳನ್ನು ನಡೆಸಲು ಆರ್ಥಿಕ ನೆರವು ಒದಗಿಸಲಿದ್ದಾರೆ.

‘ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 90 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ದಾನಿಗಳ ಸಹಕಾರದೊಂದಿಗೆ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಿದ್ದೇವೆ’ ಎನ್ನುತ್ತಾರೆ ಶಿಕ್ಷಕ ಆರ್‌.ಡಿ. ಬಾಕಳೆ.

‘ಶಿಕ್ಷಣ ಸೇವೆಯೇ ದೇವರ ಸೇವೆ. ಬಡ ಮಕ್ಕಳಿಗೆ ಕಾನ್ವೆಂಟ್‌ ಮಾದರಿಯಲ್ಲಿ ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಣ ನೀಡುವ ಉದ್ದೇಶದಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗಿದೆ. ಇದರಿಂದಾಗಿ ಸರ್ಕಾರಿ ಶಾಲೆಗೆ ಅನುಕೂಲವಾಗಲಿ ಎನ್ನುವುದು ನಮ್ಮ ಉದ್ದೇಶ’ ಎಂದು ಸಲಹಾ ಸಮಿತಿ ಅಧ್ಯಕ್ಷ ಲಕ್ಷ್ಮಣ ನಿಂಗಾಗೋಳ ಹೇಳುತ್ತಾರೆ.

**
ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಿದ್ದು, 20ಕ್ಕೂ ಹೆಚ್ಚು ಮಕ್ಕಳು ತರಗತಿಗಳಿಗೆ ಪ್ರವೇಶ ಪಡೆಯುವ ನಿರೀಕ್ಷೆ ಇದೆ
ಆರ್‌.ಡಿ. ಬಾಕಳೆ, ಶಿಕ್ಷಕ

ಸುಧಾಕರ ತಳವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT