ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾಚಿತ್ರಗಳಲ್ಲಿ ಅಯೋಧ್ಯಾ ಬಿಂಬ

Last Updated 30 ಸೆಪ್ಟೆಂಬರ್ 2018, 19:31 IST
ಅಕ್ಷರ ಗಾತ್ರ

ಛಾಯಾಚಿತ್ರ ಪ್ರದರ್ಶನದ ಮೂಲಕ ಸಮಾಜದ ಸಮಸ್ಯೆಗಳ ಕುರಿತಂತೆ ಜನಪ್ರತಿನಿಧಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಛಾಯಾಗ್ರಾಹಕ ಸುಧೀರ್‌ ಶೆಟ್ಟಿ.

ಜನಮಾನಸದಲ್ಲಿ ಹೆಚ್ಚು ಚರ್ಚಿತವಾಗುವ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಛಾಯಾಚಿತ್ರ ಪ್ರದರ್ಶನದ ವಿಷಯ ಆಯ್ಕೆ ಮಾಡುವುದು ಇವರ ವಿಶೇಷ. ಆ ಮೂಲಕ ಸಮಸ್ಯೆಗಳಿಗೆ ಪರಿಹಾರ ಹಾಗೂ ಜನರ ಸಂಕಷ್ಟವನ್ನು ತೆರೆದಿಡುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಇದೀಗ ‘ಹೇ ಅಯೋಧ್ಯೆ‘– ನಿನ್ನ ಸತ್ಯಗಳು ಹೆಸರಿನಲ್ಲಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ. ಪ್ರಾಚೀನ ಕಾಲದ ಪ್ರಮುಖ ಆಡಳಿತ ಕೇಂದ್ರಗಳಲ್ಲಿ ಒಂದಾದ ಅಯೋಧ್ಯೆಯ ಈಗಿನ ನೈಜ ಸ್ಥಿತಿಗತಿಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಭಾನುವಾರ ಆರಂಭವಾಗಿದ್ದು, ಮಂಗಳವಾರದ ವರೆಗೂ ಇರಲಿದೆ. ಪ್ರದರ್ಶನ ಹಮ್ಮಿಕೊಂಡಿರುವುದಾಗಿ ಮಾಹಿತಿ ನೀಡುತ್ತಾರೆ.

‘1992ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ನಾಶಗೊಂಡ ಬಳಿಕ ಎರಡು ಧರ್ಮಗಳ ನಡುವೆ ಉಂಟಾದ ಕಂದಕ ಎಂಥದ್ದು, ನಡೆದ ಗಲಭೆಗಳು ಹಾಗೂ ಸ್ಥಳೀಯರಲ್ಲಿ ಬಾಂಧವ್ಯ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡುವುದೇ ಈ ಪ್ರದರ್ಶನದ ಮುಖ್ಯ ಉದ್ದೇಶ’ ಎಂಬುದು ಸುಧೀರ್‌ ಶೆಟ್ಟಿ ಅವರ ಅಭಿಪ್ರಾಯ.

‘ಇಲ್ಲಿರುವ ಎರಡು ಧರ್ಮೀಯರಿಗೂ ಹಿಂಸೆ ಬೇಕಿಲ್ಲ; ಮೂಲ ಸೌಕರ್ಯಗಳು ಅಭಿವೃದ್ಧಿಯಾಗಬೇಕಿದೆ. ಶಾಲಾ–ಕಾಲೇಜುಗಳ ನಿರ್ಮಾಣದ ಜೊತೆ ಜೊತೆಗೆ ಉತ್ತಮ ಆಸ್ಪತ್ರೆ ಬೇಕಿದೆ. ಅಲ್ಲದೇ ಇಡೀ ನಗರವನ್ನು ವಿಶ್ವ ಪಾರಂಪಾರಿಕ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಜನಸಾಮಾನ್ಯರಿಂದ ವ್ಯಕ್ತವಾದ ಅಭಿಪ್ರಾಯ ಎಂದು ಇಲ್ಲಿ ಓಡಾಡಿದ ವೇಳೆ ಕಂಡುಕೊಂಡೆ ಎಂದು ಸುಧೀರ್‌ ವಿವರಿಸುತ್ತಾರೆ. ಇದೇ ವಿಚಾರವನ್ನು ಛಾಯಾಚಿತ್ರ ಪ್ರದರ್ಶನದ ಮೂಲಕ ಜನರಿಗೂ ತಲುಪಿಸುವ ಆಲೋಚನೆ ಇವರದ್ದು.

ಬೆಂಗಳೂರು ಜನಜಾಗೃತಿ ಸಾಂಸ್ಕೃತಿಕ ಹಾಗೂ ಕಲಾವೇದಿಕೆ ಮೂಲಕ ಅವರು ಈ ರೀತಿಯ ಪ್ರದರ್ಶನ ಏರ್ಪಡಿಸಿಕೊಂಡು ಬಂದಿದ್ದಾರೆ. ಈ ಹಿಂದೆ ‘ಕುಮಾರಸ್ವಾಮಿ ಬೆಟ್ಟ’, ‘ಕಪ್ಪತ್ತಗುಡ್ಡದಲ್ಲಿನ ಗಣಿಗಾರಿಕೆ’, ‘ಎತ್ತಿನಹೊಳೆ ಯೋಜನೆ– ಪರಿಸರನಾಶ’, ‘ಬಂಡೀಪುರದ ರಾತ್ರಿ ಸಂಚಾರದ ಸಂಚಕಾರ’, ಕಳಸಾ ಬಂಡೂರಿ’, ‘ವರ್ತೂರು ಕೆರೆಯಲ್ಲಿ ನೀರು ಪೋಲು’, ವಿಚಾರವಾಗಿ ಇದೇ ರೀತಿಯ ಪ್ರದರ್ಶನ ಏರ್ಪಡಿಸಿದ್ದು ಇವರ ಹೆಗ್ಗಳಿಕೆ.

ಅದರಲ್ಲೂ ಕೆಲವು ವಿಚಾರಗಳು ಜನಪ್ರತಿನಿಧಿಗಳಲ್ಲಿ ಸಾಮಾಜಿಕ ಪ್ರಜ್ಞೆ, ಜನಪರ ಕಾಳಜಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ನೆನಪಿಸಿಕೊಳ್ಳುವ ಇವರು, ಈ ಪ್ರದರ್ಶನ ಏನಿದ್ದರೂ ಜನಜಾಗೃತಿಗೆ ಮಾತ್ರ ಸೀಮಿತ ಎಂದು ಹೇಳಲು ಮರೆಯುವುದಿಲ್ಲ.

ಪ್ರದರ್ಶನದ ಸಮಯ: ಬೆಳಿಗ್ಗೆ 11ಕ್ಕೆ ಛಾಯಾ ಗ್ಯಾಲರಿ, ರಂಗೋಲಿ ಕೇಂದ್ರ, ನಮ್ಮ ಮೆಟ್ರೊ, ಎಂ.ಜಿ.ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT