ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸವೆಂಬ ಸೊಬಗಿನ ಸೌರಭ

Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ನಾವು ಬಳಸುತ್ತಿರುವ ಅನೇಕ ಪದಗಳಲ್ಲಿ ಹೆಚ್ಚು ಚಲಾವಣೆಯಲ್ಲಿರುವ, ತನ್ನ ನಿಜಾರ್ಥವನ್ನು ಕಳೆದುಕೊಳ್ಳುತ್ತಿರುವ ಹಾಗೂ ಸವಕಲಾಗುತ್ತಿರುವ ಪದಗಳಲ್ಲಿ ‘ವಿಕಾಸ’ವೂ ಒಂದು. ಇಂದು ಎಲ್ಲ ಕ್ಷೇತ್ರಗಳಲ್ಲಿ ಜನರನ್ನು ಆಕರ್ಷಿಸಲು ‘ವಿಕಾಸ’ವನ್ನು ಬಳಸುತ್ತಿದ್ದಾರೆ. ಹರ್ಬಟ್ ಸ್ಪೆನ್ಸರ್, ‘ವಿಕಾಸವೆಂದರೆ ಭಿನ್ನತೆ ಮತ್ತು ಏಕೀಕರಣಗಳ ಮೂಲಕ – ಅಸ್ಪಷ್ಟ, ಅವ್ಯವಸ್ಥಿತ, ಏಕರೂಪತೆಯಿಂದ ಸ್ಟಷ್ಟ, ವ್ಯವಸ್ಥಿತ, ವಿವಿಧತೆಯತ್ತ ಆಗುವ ಬದಲಾವಣೆ’ ಎನ್ನುತ್ತಾನೆ. ಇದೊಂದು ಸಂಕೀರ್ಣ ಬೆಳವಣಿಗೆ.

ವಿಕಾಸವೆಂದರೆ ಅರಳುವಿಕೆ; ಅರ್ಥಾತ್ ಇದೊಂದು ಅಪ್ರಜ್ಞಾಪೂರ್ವಕ ಬದಲಾವಣೆ. ಪ್ರಕೃತಿಯ ಮುಂಜಾವಿನಷ್ಟೇ, ಹೂವಿನ ಅರಳುವಿಕೆಯಷ್ಟೇ ಸಹಜವಾದ ಕ್ರಿಯೆ ಇದು. ಅದರಲ್ಲಿಯೂ ಈ ಬೇಸಿಗೆಯ ರಜಾ ದಿನಗಳಲ್ಲಿ ನಮ್ಮ ಕಿವಿಗೆ ಪದೇ ಪದೇ ಬೀಳುವ ‘ವ್ಯಕ್ತಿತ್ವ ವಿಕಾಸ’ ಶಿಬಿರ, ‘ಮನೋವಿಕಾಸ’ ಸಂಕಿರಣ ಇತ್ಯಾದಿಗಳನ್ನು ಗಮನಿಸುವಾಗ, ವ್ಯಕ್ತಿಯನ್ನು, ವ್ಯಕ್ತಿತ್ವವನ್ನು ರೂಪಿಸುವುದು ಅಷ್ಟೊಂದು ಸುಲಭವೆ, ಸರಳವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ವ್ಯಕ್ತಿಯ ನಡೆವಳಿಕೆ, ಹಾವ-ಭಾವ, ನುಡಿ, ಭಾಷೆ – ಇವೆಲ್ಲ ವಿಶಿಷ್ಟ ಛಾಪನ್ನು ಹೊಂದಿರುತ್ತದೆ.

ಇವುಗಳನ್ನು ತಿದ್ದಿ, ತೀಡುವ ಪ್ರಯತ್ನ ಶಿಬಿರದ ತರಬೇತಿಗಳಲ್ಲಿ. ಆದರೆ ಅದೇ ವಿಕಾಸವಲ್ಲ. ವಿಕಾಸವೆಂದರೆ ಈ ಎಲ್ಲ ಹೊರ ಆವರಣದ ಪರಿಪಾಠದಿಂದ ಹದಗೊಳ್ಳುವ ಅಂತರಂಗದ ಹೂರಣ. ಕೇವಲ ವಾರ ಅಥವಾ ಹದಿನೈದು ದಿನಗಳಲ್ಲಿ ನಮ್ಮನ್ನು ಪೂರ್ಣವ್ಯಕ್ತಿಗಳನ್ನಾಗಿಸುವ, ಯಶಸ್ವೀ ವ್ಯಕ್ತಿಗಳಾಗಿಸುವ ಕಾರ್ಯಾಗಾರ ತರಬೇತಿಗಳಿವೆಯಂತೆ. ಮನುಷ್ಯನನ್ನು ಒಂದು ಅಚ್ಚಿನಲ್ಲಿ ಎರಕ ಹೊಯ್ಯಲು ಅವನೇನು ಸಕ್ಕರೆ ಗೊಂಬೆಯೆ? ಅಥವಾ ಒಬ್ಬರಂತೆ ಇನ್ನೊಬ್ಬರಾಗಲು ಜೀವನ ಜೆರಾಕ್ಸ್ ಯಂತ್ರವೆ?

ವಿಕಾಸ ಪ್ರಕ್ರಿಯೆಯ ಆರಂಭವೇ ಪ್ರಶ್ನೆಗಳಿಂದ ಆಗುವಂಥದ್ದು. ಆ ಪ್ರಶ್ನೆಗಳು ಉದ್ಭವಿಸುವುದು ‘ಪ್ರಜ್ಞೆ’ಯಿಂದ. ಮನುಷ್ಯನ ವಿಶೇಷತೆ ಇರುವುದೇ ಅವನಲ್ಲಿರುವ ಈ ಪ್ರಜ್ಞೆಯ ಅಸ್ತಿತ್ವದಿಂದ, ಅರ್ಥಾತ್ ‘ನಾನು ಬದುಕಿದ್ದೇನೆ’ ಎಂಬ ಪ್ರಜ್ಞಾಪೂರ್ವಕ ನಿಲುವು ಮನುಷ್ಯನನ್ನು ಇತರ ಪ್ರಾಣಿಗಳಿಗಿಂತ ಭಿನ್ನವಾಗಿಸುತ್ತದೆ. ಕೇವಲ ಬದುಕಿದ್ದೇನೆ ಎಂಬ ಭಾವ ಸಾಲದು. ಬದುಕಿನ ಅರ್ಥವೇನು? ಅದರ ಸಾರ್ಥಕತೆಯೇನು ಎಂಬ ಚಿಂತನೆ ನಡೆಯಬೇಕು.

ಈ ಚಿಂತನೆ ಸೂಕ್ಷ್ಮವಾದಷ್ಟೂ ವ್ಯಕ್ತಿಯ ವಿಕಾಸಪಥ ಸ್ಪಷ್ಟವಾಗುತ್ತ ಹೋಗುತ್ತದೆ. ಬುದ್ಧಿಬಲವು ಐಹಿಕ ಫಲಗಳಾಚೆ ಬೆಳೆದು ನಿಂತಾಗ ಒಳಗಿನೆಚ್ಚರ ಹೊಸದೊಂದು ವ್ಯಕ್ತಿತ್ವವನ್ನೇ ಕಡೆಯುತ್ತದೆ. ಬಾಹುಬಲಿಯು ಗೊಮ್ಮಟನಾಗುವುದು ಹೀಗೆ. ವಿಕಾಸವೆಂಬುದು ಹೃದಯಕ್ಕೆ ಹತ್ತಿರವಾದ ಸರಳವಾದ ಆಧ್ಯಾತ್ಮಕ ಸತ್ಯಗಳನ್ನು ಒಳಗೊಂಡಿರುತ್ತದೆ ಮತ್ತು ವಿಜ್ಞಾನದ ಹೆಸರಿನಲ್ಲಿ ಅದು ಬುದ್ಧಿಯ ಅನೂಹ್ಯ ಪ್ರಶ್ನೆಗಳನ್ನು ಹುಟ್ಟಿಹಾಕುತ್ತದೆ. ಹೀಗೆ ಬುದ್ಧಿ, ಹೃದಯಗಳು ಏಕಮುಖವಾಗಿ ಒಂದೇ ಪಥದಲ್ಲಿ ಸಾಗುವುದೇ ವಿಕಾಸ. ಉಳಿದೆಲ್ಲವೂ ಕೇವಲ ಬೆಳವಣಿಗೆಗಳು ಅಷ್ಟೆ.

ಬದುಕು ಬಚ್ಚಿಡುವ ಮೂಲ ಪ್ರಶ್ನೆಗಳಿಂದ ನಿದ್ರೆ ಬಾರದೆ ತೊಳಲಿದ ಸಿದ್ಧಾರ್ಥನು ನಿದ್ರಾಮನೆಯಿಂದಾಚೆ ನಡೆದು ಬುದ್ಧನಾದುದು ಹೀಗೆ; ಋಷಿಸಂತಾನರಾದ ಭಾರತೀಯರ ಸ್ಥಿತಿ ಕಂಡು ಮರುಗಿದ ನರೇಂದ್ರ ವಿವೇಕಾನಂದನಾದುದು ಹೀಗೆ. ಇದು ಮಹಾತ್ಮರಿಗೆ ಮಾತ್ರ ದೊರೆವ ಸೊತ್ತೆ, ಸಂಪತ್ತೆ? ಖಂಡಿತ ಅಲ್ಲ. ಮಳಲ ಕಣ ಒತ್ತಿದ ಪ್ರತಿ ಸಂಪಿಯೊಳಗೂ ಅದು ಮುತ್ತಾಗುವ ಸಾಧ್ಯತೆ ಇದೆ. ಆದರೆ ಕಾಯುವ, ಮಾಯುವ ತಾಳ್ಮೆ ನಮಗೆ ಇದೆಯೆ ಎಂಬುದೇ ಪ್ರಶ್ನೆ! ಜಗದ ಜರಡಿಯಲ್ಲಿ ಸೋಸಿಹೋಗುವ ಅನೇಕ ಸತ್ಯಗಳನ್ನು ಶೋಧಿಸಿ ನಮ್ಮದಾಗಿಸಿಕೊಳ್ಳುವ ಜಾಣ್ಮೆ ನಮಗಿದೆಯೆ? ವಿಕಾಸವೆಂದರೆ ಆ ಕಾಯುವ ತಾಳ್ಮೆ, ಶೋಧಿಸುವ ಜಾಣ್ಮೆ.

ಒಂದು ಕಥೆಯಿದೆ. ಒಬ್ಬ ಸಾಧಕನಿಗೆ ನದಿತೀರದಲ್ಲಿ ವಿಶೇಷವಾದ ಶಿಲೆಯೊಂದು ಇದೆ; ಅದು ಸವಾರ್ಥವನ್ನು ಸಿದ್ಧಿಸಿಕೊಡುವ ಶಿಲೆ ಎಂಬ ವಿಚಾರ ತಿಳಿಯಿತು. ಆದರೆ ಅದನ್ನು ಗುರುತಿಸುವ, ತನ್ನದಾಗಿಸಿಕೊಳ್ಳುವ ಬಗೆ ಹೇಗೆ? ಅವನು ತನ್ನ ಗುರುವನ್ನು ಪರಿಪರಿಯಿಂದ ಕಾಡಿ ಬೇಡಿದ. ಮೊದಲಿಗೆ ನಿರಾಕರಿಸಿದರೂ ಕೊನೆಗೆ ಗುರುಗಳು ಹೇಳಿದರು: ’ನೋಡು ತೀರದಲ್ಲಿ ಈ ಶಿಲೆಯನ್ನು ನೀನು ಕೈಗೆತ್ತಿಕೊಂಡಾಗ ಅದು ಬೇರೆಲ್ಲ ಕಲ್ಲುಗಳಿಗಿಂತ ಕೊಂಚ ಬಿಸಿಯಿರುತ್ತದೆ. ಅದೇ ಆ ಇಷ್ಟಾರ್ಥಗಳನ್ನು ಈಡೇರಿಸುವ ಕಲ್ಲಿನ ಗುಣ.’ ಯುವಸಾಧಕ ಖುಷಿಯಿಂದ ನದೀತೀರಕ್ಕೆ ನಡೆದು ನೋಡುತ್ತಾನೆ – ತೀರದ ತುಂಬೆಲ್ಲ ದುಂಡಗಿನ ಸಣ್ಣ ಶಿಲೆಗಳು. ಅವನು ಒಂದೊಂದನ್ನೇ ಎತ್ತಿಕೊಂಡು ಕೈಯಲ್ಲಿರಿಸಿ ನೋಡಿದ.

ಸಾಮಾನ್ಯ ಶಿಲೆಗಳವು, ತಣ್ಣಗಿದ್ದವು. ಅವು ಮತ್ತೆ ತೀರದಲ್ಲಿ ಉಳಿದರೆ ಗೊಂದಲವಾದೀತೆಂದು ಹೀಗೆ ಪರೀಕ್ಷೆಯಲ್ಲಿ ವಿಫಲವಾದ ಶಿಲೆಯನ್ನು ನದಿಗೆ ಎಸೆದು ಬಿಡುತ್ತಿದ್ದ. ಪ್ರತಿನಿತ್ಯ ಇದೇ ಅವನ ಕಾಯಕವಾಯಿತು. ಮೂರು ತಿಂಗಳಾಯಿತು, ಆರು ತಿಂಗಳಾಯಿತು; ವರ್ಷಗಳೇ ಉರುಳಿದವು. ಕಲ್ಲು ಕೈಗೆತ್ತಿಕೊಳ್ಳುವುದು, ನದಿಗೆ ಬೀಸಿ ಒಗೆಯುವುದು ಮುಂದುವರೆಯಿತು. ಕೊನೆಗೊಂದು ದಿನ ಅವನಿಗೆ ಒಂದು ಶಿಲೆ, ಮಣಿಯಂಥದ್ದು ಸಿಕ್ಕಿತು, ಕೈಯಲ್ಲಿ ಹಿಡಿದ, ಕೊಂಚ ಬಿಸಿಯೂ ಇತ್ತು. ಆದರೆ ಅಪ್ರಜ್ಞಾಪೂರ್ವಕವಾಗಿ ಅವನ ಕೈ ಬೀಸಿ ಅದನ್ನು ನದಿಯೊಳಕ್ಕೆ ಎಸೆದುಬಿಟ್ಟಿತು! ಅಭ್ಯಾಸ ಬಲ, ಸಿಕ್ಕಿದ್ದ ಪರುಷಮಣಿಯನ್ನು ಹೀಗೆ ಕಳೆದುಕೊಂಡ ಅವನು.

ವ್ಯಕ್ತಿಯ ವಿಕಾಸ ಎನ್ನುವುದು ಹಟದ ಸಾಧನೆಯಿಂದ ದೊರೆಯುವುದಕ್ಕಿಂತ ಹೆಚ್ಚಾಗಿ ಪ್ರಜ್ಞೆಯಿಂದ, ಎಚ್ಚರದ ನಡೆಯಿಂದ ದೊರೆಯುವಂತಹದ್ದು. ಈ ಮನುಷ್ಯಜನ್ಮದಲ್ಲಿ ವಿಕಾಸದ ಪೂರ್ಣ ಅವಕಾಶ ನಮಗಿದೆ. ನಾವದನ್ನು ಎಚ್ಚರದಿಂದ ಬಳಸಿಕೊಳ್ಳುತ್ತೇವೊ ಇಲ್ಲ ಎಚ್ಚರಗೇಡಿತನದಿಂದ ಕಾಲನದಿಯ ಪ್ರವಾಹದೊಳಕ್ಕೆ ಎಸೆದುಬಿಡುತ್ತೇವೊ ಎಂಬುದು ನಮಗೆ ಬಿಟ್ಟ ಆಯ್ಕೆ.

ನಮ್ಮ ವ್ಯಕ್ತಿತ್ವ ಸಮತೂಕದಲ್ಲಿ ಬೆಳೆಯದಂತೆ ತಡೆಯುವುದು ಅಂತರಂಗದ ವಾಸನೆ, ಕಾಮನೆಗಳ ಕೊರೆತ. ಹಾಗೇ ನಮಗೆ ಬೇಕಾದಂತೆ ಸ್ವಚ್ಛಂದವಾಗಿ ಬೆಳೆಯಹೊರಟಾಗ ಸುತ್ತಲಿನ ಒತ್ತಡಗಳ ಕತ್ತರಿ. ಎಲ್ಲೋ ಒಂದೊಂದು ಮರ, ಮುಕ್ತವಾಗಿ ಬೆಳೆದು ನಿಂತೇ ಬಿಡುತ್ತದೆ. ಹಾಗೇ ವ್ಯಕ್ತಿಗಳು ಅಲ್ಲೊಬ್ಬರು ಇಲ್ಲೊಬ್ಬರು ಬೃಹತ್ತಾಗಿ ಬೆಳೆದು ನಿಲ್ಲುತ್ತಾನೆ. ಅಚ್ಚರಿಯೆಂದರೆ ಹಾಗೆ ಬೆಳೆದಿದ್ದೇವೆಂಬ ಭಾವ ಅವರಲ್ಲಿರುವುದಿಲ್ಲ – ಅವರನ್ನು ಕಂಡವರು ನೋಡಿ, ಗುರುತಿಸಿ ಗೌರವಿಸುತ್ತಾರೆ. ಬೃಹತ್ತಾದ ಮರದ ನೆರಳಿನಲ್ಲಿ ಆಶ್ರಯ ಪಡೆದವರು ಒಮ್ಮೆ ಅದರ ಎತ್ತರ ವೈಶಾಲ್ಯಗಳನ್ನು ಕಂಡು ಕೈಮುಗಿವಂತೆ ಇಂತಹ ವ್ಯಕ್ತಿತ್ವಗಳಿಗೆ ನಾವು ಕೈ ಮುಗಿಯುತ್ತೇವೆ.

ನಿಜವಾದ ವಿಕಾಸವಾದಾಗ ಎಲ್ಲ ಸದ್ದುಗದ್ದಲವಡಗಿ ಮೌನ ನೆಲೆಸುತ್ತದೆ. ಬಾಹ್ಯ ವಿಕಾಸ ದೈಹಿಕ ಸಾಮರ್ಥ್ಯಗಳ ಚರಮ ಗುರಿ ತಲುಪಿಸಿದರೆ ಆಂತರಿಕ ವಿಕಾಸ ಮೌನದ, ಶಾಂತಿಯ ಮಹಾಮನೆಯನ್ನು ತಲುಪಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆ ರಮಣ-ರಾಮಕೃಷ್ಣರು. ಒಬ್ಬರದು ಮೌನಭಾಷ್ಯ, ಮತ್ತೊಬ್ಬರದು ಆನಂದನರ್ತನ. ರಮಣರದು ಮೌನ. ಮೌನವೆಂದರೆ ಮೂಕತನವಲ್ಲ. ಸಿಂಬಿ ಸುತ್ತಿ ಮಲಗಿದ ಮಾತಿನ ಸರ್ಪವಲ್ಲ.

ಅದು ಮನಸ್ಸು ಸತ್ತ ಮೌನ. ಅದು ಮೌನದ ಘನರೂಪ. ಎಲ್ಲ ಪ್ರಶ್ನೆಗಳು ಬತ್ತಿ ಹೋದ ಮನದ ಅಲೆಯ ಮೌನ. ಈ ಮೌನ ಬೇಗುದಿಯ ಮೌನವಲ್ಲ ಶಾಂತಿಯಲ್ಲಿ ನೆಲೆ ನಿಂತ ಮೌನ. ಇದು ವಿಕಾಸ. ಅರುಣಾಚಲ ಬೆಟ್ಟಕ್ಕೆ ಬಂದು ತಾನೊಂದು ಬೆಟ್ಟವೇ ಆಗಿ ನಿಂತ ಬೆರಗು ರಮಣ. ಇದು ಅಂತರಂಗದ ವಿಕಾಸ. ಬೆಳವಣಿಗೆಯ ಒಳ ದಾರಿ ಹಿಡಿದು ಗಮ್ಯವನ್ನು ತಲುಪಿದವರು ಶ್ರೀ ರಮಣರು. ಶ್ರೀ ರಾಮಕೃಷ್ಣರದು ಮತ್ತೊಂದು ದಾರಿ, ಅದು ಭಕ್ತಿಯ ಮಾರ್ಗ. ಮೃಣ್ಮಯ ಮೂರ್ತಿಯನ್ನು ಚಿನ್ಮಯ ದೇವಿಯನ್ನಾಗಿಸಿದ ಭಕ್ತಿ. ಅದರಿಂದ ದೊರೆತ ಆನಂದ–ತೃಪ್ತಿಗಳನ್ನು ಧರಿಸಿ ಸುತ್ತ ನೆರೆದವರಿಗೆ ಹಂಚಿದ ಆತ್ಮಸಂತೋಷ ಶ್ರೀ ರಾಮಕೃಷ್ಣರಿಗೆ.

ವಿಕಾಸ ಹೊಂದಿದ ಮಾದರಿಗಳು ನಮ್ಮ ಮುಂದಿವೆ ಎಂಬ ಮಾತ್ರಕ್ಕೆ ನಾವು ಅವರಂತೆಯೇ ಆಗಬೇಕೆ? ಎಂಬುದು ನಮ್ಮ ಮುಂದಿನ ಪ್ರಶ್ನೆ. ನಾವು ಯಾರಂತೆಯೋ ಆಗಬಯಸದೆ ನಮ್ಮತನವನ್ನು ಉಳಿಸಿಕೊಂಡು ನಮ್ಮ ವ್ಯಕ್ತಿತ್ವದ ಶಿಖರವನ್ನು ತಲುಪಬೇಕು. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಸಮವಾಗಿ ಸಾಗಿದಾಗ ವಿಕಾಸದ ಹಾದಿ ಸುಗಮ. ಮನುಷ್ಯನೆಂದರೆ ಈ ಮೂರು ಅಂಶಗಳ ಮಿಶ್ರಣ.

–ರಘು ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT