ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶ ಸಲ್ಲದು

ವಿಶ್ವ ಪರಿಸರ ದಿನಾಚರಣೆಯಲ್ಲಿ ಜಿಲ್ಲಾ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಅಭಿಮತ
Last Updated 6 ಜೂನ್ 2018, 12:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಸ್ವಾರ್ಥ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಮನುಷ್ಯರು ಅರಣ್ಯ ಪ್ರದೇಶ, ಪ್ರಾಣಿ, ಪಕ್ಷಿ ಸಂಕುಲ ನಾಶಕ್ಕೆ ಮುಂದಾಗುತ್ತಿದ್ದು, ಇದರಿಂದ ತೀವ್ರತರವಾಗಿ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಆತಂಕ ವ್ಯಕ್ತಪಡಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಪ್ರಕೃತಿಯಲ್ಲಿನ 82 ಸಾವಿರ ಜೀವರಾ ಶಿಗಳಲ್ಲಿ ಮನುಷ್ಯ ಜಾತಿಯೂ ಒಂದು. ಎಲ್ಲ ಜೀವಿಗಳಿಗಿಂತಲೂ ಮನುಷ್ಯರ ಸಂಖ್ಯೆ ಮಾತ್ರ ಹೆಚ್ಚಾಗಿದೆ. ಇದಕ್ಕೆ ಕಾರಣ ಪ್ರಕೃತಿಯ ದುರ್ಬಳಕೆ. ಇದರಿಂದಾಗಿಯೇ ಪ್ರಾಣಿ, ಪಕ್ಷಿಗಳ ಸಂಕುಲ ಅವನತಿಯತ್ತ ಸಾಗಿದೆ’ ಎಂದು ವಿಷಾದಿಸಿದರು.

‘ಪ್ರಸ್ತುತ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಅರಣ್ಯ ಪ್ರದೇಶ ಗಳಲ್ಲಿ ಪ್ಲಾಸ್ಟಿಕ್ ಉಪಯೋಗಿಸಿ ಬಿಸಾಡುವುದರಿಂದ ಬಾಯಾರಿಕೆಯಾಗಿ ಪ್ಲಾಸ್ಟಿಕ್ ತಿನ್ನಲು ಪ್ರಯತ್ನಿಸಿ, ಅಲ್ಲಿರುವಂಥ ಪ್ರಾಣಿಗಳು ಪ್ರಾಣವನ್ನೆ ಕಳೆದುಕೊಳ್ಳುವ ಹಂತಕ್ಕೆ ತಲುಪಬಹುದು. ಆದ್ದರಿಂದ ಪ್ರಾಣಿ, ಪಕ್ಷಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಹಾಗೂ ಪ್ಲಾಸ್ಟಿಕ್ ಬಳಕೆ ಕೈಬಿಡಿ’ ಎಂದು ಸಲಹೆ ನೀಡಿದರು.

‘ಅದಿರು, ಮರಳು, ಕಲ್ಲು ಗಣಿಗಾರಿಕೆ ಹೀಗೆ ವಿವಿಧ ರೀತಿಯ ಗಣಿಗಾರಿಕೆಯಿಂದ ಭೂಮಿಯ ಫಲವತ್ತತೆ ನಶಿಸಿ ಹೋಗುತ್ತಿದ್ದು, ಇದರಿಂದ ಬರುವಂಥ ಲಾಭ ನಮಗೆ ಮುಖ್ಯವಾಗಬಾರದು. ನಾವುಗಳೆಲ್ಲರೂ ಜೀವಿಸಲು ಕಾರಣವಾಗಿರುವ ಪರಿಸರ ಸಂರಕ್ಷಣೆಯಾಗಿ, ದೇಶದ ಸಂಪತ್ತು ಉಳಿಯಬೇಕು. ಅದಕ್ಕಾಗಿ ಈ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಹೇಳಿದರು.

‘ಈ ವರ್ಷ ಪ್ಲಾಸ್ಟಿಕ್ ಮಾಲಿನ್ಯ ತೊಲಗಿಸೋಣ ಎಂಬ ಘೋಷಣೆಯಡಿ ಆಚರಣೆ ಮಾಡುತ್ತಿದ್ದೇವೆ. ಅದರ ಅಂಗವಾಗಿ ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್‌ ನಿಂದಾಗುವ ದುಷ್ಪರಿ ಣಾಮಗಳ ಕುರಿತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಸಮಾರಂಭ ಆಯೋಜಿಸಿ ಬಹುಮಾನ ನೀಡಲಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ‘ಈ ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಸರ ದಿನಾಚರಣೆ ವಿಶೇಷವಾಗಿ ಆಚರಿಸಿ, ಜಾಗೃತಿ ಮೂಡಿಸುವಲ್ಲಿ ನಮ್ಮ ದೇಶವೂ ಮುಂದಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ’ ಎಂದು ಅವರು ಹೇಳಿದರು.

ನ್ಯಾಯಾಧೀಶರಾದ ಬಸವರಾಜ ಎಸ್.ಚೇಗರೆಡ್ಡಿ, ಟಿ.ವೀರಣ್ಣ, ಎಸ್.ಆರ್.ದಿಂಡಾಲಕೊಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ್, ಕಾರ್ಯದರ್ಶಿ ಸಿ. ಶಿವುಯಾದವ್, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಮಳವಳ್ಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಮತೋಲನಕ್ಕೆ ಪ್ರಾಣಿ, ಪಕ್ಷಿ ಅಗತ್ಯ: ವಸ್ತ್ರಮಠ

‘ಪೂರ್ವಜರು ನಮಗೆ ಬಿಟ್ಟು ಹೋದ ಪರಿಸರವನ್ನು ಉಳಿಸಿ, ಬೆಳೆಸುವ ಮೂಲಕ ಮುಂದಿನ ಪೀಳಿಗೆಯೂ ಈ ಮಾರ್ಗವನ್ನು ಅನುಸರಿಸುವಂತೆ ಮಾಡಬೇಕು. ಪ್ರಕೃತಿ ಸಮತೋಲನವಾಗಿರಲು ಸಕಲ ಜೀವರಾಶಿಗಳ ಅಗತ್ಯವಿದೆ. ಅಲ್ಲದೆ, ಅರಣ್ಯ ಪ್ರದೇಶದ ಮರಗಳನ್ನು ಕಡಿಯದೇ ಅವುಗಳ ರಕ್ಷಣೆಗೂ ನಾವು ಮುಂದಾಗಬೇಕು ಎಂದು ವಸ್ತ್ರಮಠ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT