ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣೆ ವ್ಯವಸ್ಥೆ

ದುಂಡು ಮೇಜಿನ ಸಭೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿದ್ದು ಪಿ. ಆಲಗೂರ ಭರವಸೆ
Last Updated 15 ಜೂನ್ 2018, 10:14 IST
ಅಕ್ಷರ ಗಾತ್ರ

ಬೆಳಗಾವಿ: ವಿದ್ಯಾರ್ಥಿಗಳ ಕುಂದುಕೊರತೆಗಳ ನಿವಾರಣೆಗಾಗಿ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗುವುದು. ಎಲ್ಲದಕ್ಕೂ ಬೆಳಗಾವಿಯಲ್ಲಿರುವ ಕೇಂದ್ರ ಕಚೇರಿಗೆ ಬರಬೇಕಾದ ಅನಿವಾರ್ಯವನ್ನು ತಪ್ಪಿಸಲಾಗುವುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿದ್ದು ಪಿ. ಆಲಗೂರ ಭರವಸೆ ನೀಡಿದರು.

ವಿಶ್ವವಿದ್ಯಾಲಯದ ಶಿಕ್ಷಣ, ಪರೀಕ್ಷಾ ವಿಧಾನ, ಪಠ್ಯಕ್ರಮ ಮತ್ತು ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕರ್ನಾಟಕ ಅಧ್ಯಾಪಕ ಪರಿಷತ್ತು ಇಲ್ಲಿನ ಲಿಂಗರಾಜ ಕಾಲೇಜು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ವ್ಯಕ್ತವಾದ ಸಲಹೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

‘ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತಿ ವಿದ್ಯಾರ್ಥಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ವ್ಯವಸ್ಥೆ ಇದೆ. ಈ ಸಂಖ್ಯೆಗೆ ವಿದ್ಯಾರ್ಥಿಯ ಎಲ್ಲ ವೈಯಕ್ತಿಕ ವಿವರವನ್ನೂ ಜೋಡಿಸಲು ಕ್ರಮ ಕೈಗೊಳ್ಳಲಾಗುವುದು. ಬೋಧಕರಿಗೂ ವಿಶೇಷ ಗುರುತಿನ ಸಂಖ್ಯೆ ನೀಡಲಾಗುವುದು. ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳ ನಡುವೆ ಸಂಪರ್ಕ ಸಾಧ್ಯವಾಗುವ ರೀತಿಯಲ್ಲಿ ಕುಂದುಕೊರತೆ ನಿವಾರಣೆಗೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ವಿವರ ಕಳುಹಿಸಲು ಸೂಚನೆ: ‘ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವುದಕ್ಕಾಗಿ ಬೋಧಕರ ವಿವರ ಕಳುಹಿಸುವಂತೆ ಪ್ರಾಂಶುಪಾಲರಿಗೆ ಹಲವು ಬಾರಿ ಸೂಚಿಸಲಾಗಿದೆ. ಆದರೆ, ಸಮರ್ಪಕವಾಗಿ ಮಾಹಿತಿ ಸಲ್ಲಿಕೆಯಾಗುತ್ತಿಲ್ಲ. ಒಬ್ಬ ಬೋಧಕರ ಹೆಸರು 3 ಕಾಲೇಜುಗಳಿಂದ ಬಂದಿರುವ ಉದಾಹರಣೆಯೂ ಇದೆ! ಪಟ್ಟಿ ಸಿದ್ಧಪಡಿಸುವುದಕ್ಕಾಗಿ ಸಮಿತಿ ರಚಿಸಲಾಗುವುದು. ನಿಯಮದಂತೆ, 3 ವರ್ಷಕ್ಕೊಮ್ಮೆ ಪಠ್ಯಕ್ರಮ ಪರಿಷ್ಕ
ರಣೆ ಮಾಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ಕುಲಪತಿ ಪ್ರೊ.ಶಿವಾನಂದ ಹೊಸಮನಿ ಮಾತನಾಡಿ, ‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 380 ಕಾಲೇಜುಗಳಿವೆ. ವ್ಯವಸ್ಥೆಯಲ್ಲಿ ಆಮೂ
ಲಾಗ್ರ ಬದಲಾವಣೆ ಹಾಗೂ ಸುಧಾರಣೆಗೆ ಮುಕ್ತ ಮನಸ್ಸಿನಿಂದ ಇದ್ದೇವೆ. ಬೋಧಕರು ತಮ್ಮ ಜವಾಬ್ದಾರಿಯನ್ನು ಸಮರ್ಪ‍ಕವಾಗಿ ನಿರ್ವಹಿಸಬೇಕು. ಸಮಾಜದಲ್ಲಿರುವ ಉನ್ನತ ಸ್ಥಾನ ಕಾಪಾಡಿಕೊಳ್ಳಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.

‘ಎಲ್ಲ ಸಮಸ್ಯೆಗಳಿಗೂ ನಾವೇ ಪರಿಹಾರ ಒದಗಿಸಲಾಗದು. ಸರ್ಕಾರ, ಯುಜಿಸಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಮ್ಮ ಚೌಕಟ್ಟಿನೊಳಗೆ ಅನುಕೂಲ ಮಾಡಿಕೊಡಲು ಯತ್ನಿಸಲಾಗುವುದು. ಉಳಿದುದನ್ನು ಸರ್ಕಾರಕ್ಕೆ ಬರೆಯಲಾಗುವುದು’ ಎಂದರು.

ನಾಮನಿರ್ದೇಶನ: ‘ವಿಶ್ವವಿದ್ಯಾಲಯದಲ್ಲಿ ಪ್ರಾಂಶುಪಾಲರ ಜೇಷ್ಠತಾ ಪಟ್ಟಿ ಸಿದ್ಧಪಡಿಸಲಾಗಿದೆ. ವಿವಿಯ ಜಾಲತಾಣದಲ್ಲೂ ಪ್ರಕಟಿಸಲಾಗಿದೆ. ಈ ಪಟ್ಟಿ ಆಧರಿಸಿ ಸಿಂಡಿಕೇಟ್‌, ವಿದ್ಯಾ ವಿಷಯಕ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಮೌಲ್ಯಮಾಪನವನ್ನು ಅಧಿಕಾರಿಗಳು ಮಾಡುವುದಿಲ್ಲ. ಬೋಧಕರೇ ಮಾಡುತ್ತೀರಿ. ಮರುಮೌಲ್ಯಮಾಪನದ ನಂತರ ವಿದ್ಯಾರ್ಥಿಗೆ ಹೆಚ್ಚಿನ ಅಂಕ ಬಂದರೆ ಮರುಮೌಲ್ಯಮಾಪನಕ್ಕೆ ಕಟ್ಟಿಸಿಕೊಂಡ ಶುಲ್ಕವನ್ನು ವಾಪಸ್‌ (ವಿದ್ಯಾರ್ಥಿ ತಪ್ಪಿರದಿದ್ದರೆ) ಮಾಡಲಾಗುವುದು‌’ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ.ರಂಗರಾಜ ವನದುರ್ಗ ಭರವಸೆ ನೀಡಿದರು.

ಪರಿಷತ್ ರಾಜ್ಯ ಅಧ್ಯಕ್ಷ ರಘು ಅಕ್ಮುಂಚಿ ಮಾತನಾಡಿ, ‘ಪ್ರವೇಶ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಬೇಕು. ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣೆಗೆ ಸ್ಪಂದಿಸುವ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ವಿಭಾಗದಿಂದ ಪ್ರಯೋಜನವೇನೂ ಆಗುತ್ತಿಲ್ಲ. ಪ್ರತಿ ವಿದ್ಯಾರ್ಥಿ ಹಾಗೂ ಕಾಯಂ ಉಪನ್ಯಾಸಕರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಬೇಕು. ಬೋಧಕರ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ, ವಿವಿಯ ಜಾಲತಾಣದಲ್ಲಿ ಪ್ರಕಟಿಸಬೇಕು. ಬೋಧಕರಿಗೆ ಕ್ಲರಿಕಲ್‌ ಕೆಲಸದ ಹೊರೆ ತಗ್ಗಿಸಬೇಕು. ಅನುದಾನರಹಿತ ಕಾಲೇಜುಗಳಲ್ಲಿನ ಉಪನ್ಯಾಸಕರಿಗೆ ಸಂಭಾವನೆ ನೀಡುವಾಗ ಹೆಚ್ಚಿನ ಕರುಣೆ ತೋರಿಸಬೇಕು. ಗೌರವಧನ ನೀಡುವಾಗ ತಾರತಮ್ಯ ಮಾಡಬಾರದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾದರಿ ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಪರಿಷತ್ತಿನಿಂದ ವಿವಿಧೆಡೆ ನಡೆಸಿದ ಸಭೆಯಲ್ಲಿ ವ್ಯಕ್ತವಾದ ಸಲಹೆಗಳ ಪಟ್ಟಿಯನ್ನು ಕುಲಪತಿಗೆ ಸಲ್ಲಿಸಲಾಯಿತು. ಹಣಕಾಸು ಅಧಿಕಾರಿ ಪರಶುರಾಮ ಜಿ., ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ ಇದ್ದರು.

ಸಲಹೆಗಳು

ಸರ್ಕಾರಿ ಕಾಲೇಜುಗಳ ಬೋಧಕರನ್ನು ನಿರ್ಲಕ್ಷ್ಯ ಮಾಡಬಾರದು. ಸಿಂಡಿಕೇಟ್‌, ಸ್ಕ್ವಾಡ್‌, ವಿದ್ಯಾ ವಿಷಯಕ ಪರಿಷತ್ತಿಗೆ ನಾಮನಿರ್ದೇಶನ ಮಾಡುವಾಗ ಆದ್ಯತೆ ನೀಡಬೇಕು.

ಪಠ್ಯಕ್ರಮ ಪರಿಷ್ಕರಿಸುವಾಗ ಸಂಬಂಧಿಸಿದ ಅಧ್ಯಾಪಕರೊಂದಿಗೆ ಚರ್ಚಿಸಬೇಕು.

ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಕೊರತೆಯಾಗದಂತೆ ನೋಡಿಕೊಳ್ಳಲು, ಹಿರಿಯ ಬೋಧಕರಿಂದ ಪಠ್ಯಗಳನ್ನು ಬರೆಸಿ ವಿಶ್ವವಿದ್ಯಾಲಯದಿಂದಲೇ ಪ್ರಕಟಿಸಬೇಕು. ಕಡಿಮೆ ದರದಲ್ಲಿ ದೊರೆಯುವಂತೆ ಮಾಡಬೇಕು.

 ಮೌಲ್ಯಮಾಪನದಲ್ಲಿ ತಪ್ಪೆಸಗುವವರ ವಿರುದ್ಧ ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT