ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಮ್ಮನ ಕೊಂದು ಕಾಲುವೆಗೆ ಶವ ಎಸೆದ!

ಅಕ್ರಮ ಸಂಬಂಧದ ವಿವಾದಕ್ಕೆ ಮಗು ಬಲಿ * ಡ್ರಮ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಆರೋಪಿ
Last Updated 9 ಅಕ್ಟೋಬರ್ 2018, 20:17 IST
ಅಕ್ಷರ ಗಾತ್ರ

ಬೆಂಗಳೂರು: ನೆರೆ ಮನೆಯ ವ್ಯಕ್ತಿ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರಿಂದ ಕುಪಿತಗೊಂಡ ಆರ್ಮುಗಂ (37) ಎಂಬಾತ, ಆ ಮನೆಯ ಎರಡೂವರೆ ವರ್ಷದ ಕಂದಮ್ಮನನ್ನು ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಂದಿದ್ದಾನೆ.

ಈ ಹೃದಯವಿದ್ರಾವಕ ಘಟನೆ ನಡೆದಿರುವುದು ಶಾಂತಿನಗರದ ಅಕ್ಕಿತಿಮ್ಮನಹಳ್ಳಿಯಲ್ಲಿ. ಸೆ.30ರಂದು ಮಗುವನ್ನು ಕೊಂದ ಆರ್ಮುಗಂ, ನಂತರ ಶವವನ್ನು ಚೀಲದಲ್ಲಿ ತುಂಬಿ ಬಿಳೇಕಹಳ್ಳಿ ರಾಜಕಾಲುವೆಗೆ ಎಸೆದು ಬಂದಿದ್ದ. ಸಿ.ಸಿ ಟಿ.ವಿ ಕ್ಯಾಮೆರಾದ ಸುಳಿವು ಆಧರಿಸಿ ಆಶೋಕನಗರ ಪೊಲೀಸರು ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ.

ಕೊಲೆಯಾದ ಶ್ಯಾಮವೇಲು, ತಮಿಳುನಾಡಿನ ಕುಮಾರಸನ್ ಹಾಗೂ ಅಭಿರಾಮಿ ದಂಪತಿಯ ಮಗು.‌ ವರ್ಷದ ಹಿಂದೆ ಪತಿಯನ್ನು ತೊರೆದು ಇಬ್ಬರು ಮಕ್ಕಳೊಂದಿಗೆ ನಗರಕ್ಕೆ ಬಂದ ಅಭಿರಾಮಿ, ಅಕ್ಕಿತಿಮ್ಮನಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಬಳಿ ಕಾರು ಚಾಲಕನಾಗಿದ್ದ ಆರೋಪಿ ಆರ್ಮುಗಂ, ಪತ್ನಿ–ಮಕ್ಕಳೊಂದಿಗೆ ಅದೇ ರಸ್ತೆಯಲ್ಲಿ ನೆಲೆಸಿದ್ದ.

ಈ ನಡುವೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದ ಅಭಿರಾಮಿ ಅವರ ತಮ್ಮ ಮಣಿಪಾಲ್, ಕೆಲ ದಿನಗಳವರೆಗೆ ಅಕ್ಕನ ಮನೆಯಲ್ಲೇ ಉಳಿದುಕೊಂಡಿದ್ದ. ಆಗ ಆತನಿಗೆ ಆರೋಪಿಯ ಪತ್ನಿ ಜತೆ ಸಲುಗೆ ಬೆಳೆದಿತ್ತು. ಈ ವಿಚಾರ ಆರ್ಮುಗಂಗೆ ಗೊತ್ತಾಗಿ, ಎರಡೂ ಕುಟುಂಬಗಳ ನಡುವೆ ಜೋರು ಗಲಾಟೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಒಟ್ಟಿಗೇ ಸಿಕ್ಕಿಬಿದ್ದರು: ಪತ್ನಿ ಮೇಲೆ ನಿಗಾ ಇಡಲಾರಂಭಿಸಿದ ಆರ್ಮುಗಂ, ಕೆಲಸದ ನಿಮಿತ್ತ ತಮಿಳುನಾಡಿಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿ 15 ದಿನಗಳ ಹಿಂದೆ ಮನೆಯಿಂದ ಹೊರ ಹೋಗಿದ್ದ.

ಆರ್ಮುಗಂ ಊರಿನಲ್ಲಿಲ್ಲ ಎಂದುಕೊಂಡ ಮಣಿಪಾಲ್, ಅದೇ ದಿನ ಮಧ್ಯಾಹ್ನ ಪುನಃ ಆತನ ಮನೆಗೆ ಹೋಗಿದ್ದ. ಆಗಾಗ್ಗೆ ತನ್ನ ಮನೆ ಬಳಿ ಬಂದು ನೋಡಿಕೊಂಡು ಹೋಗುತ್ತಿದ್ದ ಆರೋಪಿಗೆ, ಪತ್ನಿ–ಪ್ರಿಯಕರ ಸೇರಿರುವ ವಿಚಾರ ಗೊತ್ತಾಗಿತ್ತು. ಕೂಡಲೇ ಒಳನುಗ್ಗಿ ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದ. ಈ ಘಟನೆ ಬಳಿಕ ಅಭಿರಾಮಿ ಅವರು ತಮ್ಮನನ್ನು ಊರಿಗೆ ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಂಟಿಯಾದ ಆರ್ಮುಗಂ: ಪತಿ ಸ್ಥಳೀಯರೆದುರು ಅವಮಾನ ಮಾಡಿದರೆಂದು ಆರ್ಮುಗಂನ ಪತ್ನಿ ಕೂಡ ಮಕ್ಕಳನ್ನು ಕರೆದುಕೊಂಡು ತವರಿಗೆ ಮರಳಿದ್ದರು. ಇದರಿಂದ ಒಬ್ಬಂಟಿಯಾದ ಆತ, ‘ಮಣಿಪಾಲ್‌ನಿಂದ ನನ್ನ ಸಂಸಾರ ಹಾಳಾಯಿತು. ಮೊದಲ ಸಲ ವಿಷಯ ಗೊತ್ತಾದಾಗಲೇ ಅಭಿರಾಮಿ ಆತನಿಗೆ ಬುದ್ಧಿ ಹೇಳಬಹುದಿತ್ತು. ಅದನ್ನು ಬಿಟ್ಟು ತಮ್ಮನನ್ನೇ ಸಮರ್ಥಿಸಿಕೊಂಡು ಮಾತನಾಡಿದಳು. ಇಂದಿನ ಸ್ಥಿತಿಗೆ ಆಕೆಯೂ ಕಾರಣ. ಏನಾದರೂ ಮಾಡಿ ಆಕೆಗೆ ಬುದ್ಧಿ ಕಲಿಸಬೇಕು’ ಎಂಬ ನಿರ್ಧಾರಕ್ಕೆ ಬಂದಿದ್ದ.

ಸೆ.30ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ಯಾಮವೇಲು ಮನೆ ಮುಂದೆ ಆಟವಾಡುತ್ತಿದ್ದ. ಆಗ ಮಗುವನ್ನು ಎತ್ತಿಕೊಂಡು ಮನೆಯೊಳಗೆ ಓಡಿ ಹೋಗಿದ್ದ ಆರ್ಮುಗಂ, ನೀರು ತುಂಬಿದ್ದ ಡ್ರಮ್‌ನಲ್ಲಿ ಮುಳುಗಿಸಿ ಸಾಯಿಸಿದ್ದ. ಬಳಿಕ ಶವವನ್ನು ಡ್ರಮ್‌ನಲ್ಲೇ ಬಿಟ್ಟು, ಕಾರು ಮಾಲೀಕರ ಮನೆಗೆ ತೆರಳಿದ್ದ. ‘ತುರ್ತು ಕೆಲಸವಿದೆ. ಸ್ಕೂಟರ್ ಬೇಕಿತ್ತು’ ಎಂದು ಸುಳ್ಳು ಹೇಳಿ ಅವರ ಮನೆಯಿಂದ ಸ್ಕೂಟರ್ ತಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ನಂತರ ಶವವನ್ನು ಚೀಲದಲ್ಲಿ ತುಂಬಿದ್ದ ಆತ, ಮಧ್ಯಾಹ್ನ 12.45ರ ಸುಮಾರಿಗೆ ಸ್ಕೂಟರ್‌ನಲ್ಲಿ ಆ ಚೀಲ ಇಟ್ಟುಕೊಂಡು ಬಿಳೇಕಹಳ್ಳಿ ಕಡೆಗೆ ತೆರಳಿದ್ದ. ಅಲ್ಲಿನ ರಾಜಕಾಲುವೆಯಲ್ಲಿ ನೀರು ಹರಿಯುತ್ತಿದ್ದರಿಂದ ಅಲ್ಲೇ ಚೀಲ ಎಸೆದು 1.45ರ ಸುಮಾರಿಗೆ ಮನೆಗೆ ಮರಳಿದ್ದ.

ಹುಟುಕಾಟದ ನಾಟಕ: 2.15ರ ಸುಮಾರಿಗೆ ಅಭಿರಾಮಿ ಮಗು ಕಾಣಿಸುತ್ತಿಲ್ಲ ಎಂದು ರೋದಿಸುತ್ತಿದ್ದರು. ಆಗ ಸ್ಥಳೀಯರ ಜತೆ ಸೇರಿ ಆರ್ಮುಗಂ ಸಹ ಮಗುವನ್ನು ಹುಡುಕುವ ನಾಟಕವಾಡಿದ್ದ. ಎಲ್ಲೂ ಪತ್ತೆಯಾಗದಿದ್ದಾಗ ಅಭಿರಾಮಿ, 3.30ರ ಸುಮಾರಿಗೆ ಅಶೋಕನಗರ ಠಾಣೆಗೆ ತೆರಳಿ ದೂರು ಕೊಟ್ಟಿದ್ದರು. ಪೊಲೀಸರು ಸ್ಥಳೀಯರನ್ನು ವಿಚಾರಣೆ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮಗುವಿನ ಸುಳಿವು ಸಿಕ್ಕರೆ ಠಾಣೆಗೆ ಮಾಹಿತಿ ನೀಡುವಂತೆ ಭಾವಚಿತ್ರ ಸಮೇತ ಭಿತ್ತಿಪತ್ರ ತಯಾರಿಸಿ, ಸುತ್ತಮುತ್ತಲ ಪ್ರದೇಶಗಳಲ್ಲಿ ಹಂಚುವ ಕೆಲಸವೂ ನಡೆದಿತ್ತು.

ಸಿಕ್ಕಿತು ಸುಳಿವು: ಹಣಕ್ಕಾಗಿ ಯಾರಾದರೂ ಮಗುವನ್ನು ಅಪಹರಿಸಿದ್ದರೆ, ಅವರಿಂದ ಕರೆ ಬರಬೇಕಿತ್ತು. ನಾಲ್ಕು ದಿನ ಕಳೆದರೂ ಅಂತಹ ಯಾವುದೇ ಕರೆ ಬಂದಿರಲಿಲ್ಲ. ಹೀಗಾಗಿ, ಪರಿಚಿತರೇ ಯಾರೋ ಅಪಹರಿಸಿರಬಹುದು ಎಂಬ ಸಂಶಯ ಮೂಡಿತು. ಆ ಪ್ರದೇಶದ ಸುತ್ತಮುತ್ತಲ ಎಲ್ಲ ಸಿ.ಸಿ ಟಿ.ವಿ ಕ್ಯಾಮೆರಾಗಳ ಡಿವಿಆರ್‌ಗಳನ್ನು ಪರಿಶೀಲಿಸಿದಾಗ, ಆ ದಿನ 12.55ರ ಸುಮಾರಿಗೆ ಆರ್ಮುಗಂ ಸ್ಕೂಟರ್‌ನಲ್ಲಿ ತೆರಳುತ್ತಿರುವ ದೃಶ್ಯ ಕೆ.ಎಚ್.ರಸ್ತೆಯ ಕ್ಯಾಮೆರಾವೊಂದರಲ್ಲಿ ಸೆರೆಯಾಗಿತ್ತು. ಕಾಲಿನ ಬಳಿ ಚೀಲವೂ ಇದ್ದುದ್ದರಿಂದ ಆತನೇ ಹಂತಕ ಎಂಬುದು ಖಚಿತವಾಯಿತು ಎಂದು ಪೊಲೀಸರು ಹೇಳಿದರು.

ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತನಗೇನು ಗೊತ್ತಿಲ್ಲ ಎಂದೇ ಹೇಳುತ್ತಿದ್ದ. ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯ ತೋರಿಸಿದಾಗ, ‘ಮಂಡಿಯಿಂದ ತರಕಾರಿ ತರುತ್ತಿದ್ದೆ’ ಎಂದು ಹೇಳಿದ. ಸ್ಕೂಟರ್ ಮಾಲೀಕರನ್ನು ವಿಚಾರಿಸಿದಾಗ, ‘ತುರ್ತು ಕೆಲಸ ಇರುವುದಾಗಿ ಹೇಳಿ ಸ್ಕೂಟರ್ ತೆಗೆದುಕೊಂಡು ಹೋಗಿದ್ದ’ ಎಂದರು. ಆ ನಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ ಎಂದು ಪೊಲೀಸರು ಮಾಹಿತಿ ನೀಡಿದರು.

ಶವ ಕೊಚ್ಚಿ ಹೋಗಿದೆ:‘ಶವವನ್ನು ರಾಜಕಾಲುವೆಗೆ ಎಸೆದು ಹತ್ತು ದಿನಗಳಾಗಿವೆ. ಆ ನಂತರ ನಾಲ್ಕೈದು ದಿನ ನಿರಂತರವಾಗಿ ಮಳೆ ಸುರಿದಿರುವುದರಿಂದ ನೀರಿನ ಹರಿವು ಹೆಚ್ಚಾಗಿ ದೇಹ ಕೊಚ್ಚಿ ಹೋಗಿದೆ. ಬಿಬಿಎಂಪಿ ಸಿಬ್ಬಂದಿ ಹಾಗೂ ನಮ್ಮ ಸಿಬ್ಬಂದಿ ಶವ ಹುಡುಕುತ್ತಿದ್ದಾರೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ಹೇಳಿದರು.

‘ದುಪ್ಪಟ್ಟು ನೋವು ಕೊಡಬೇಕಿತ್ತು’

‘ನಾನು ಅನುಭವಿಸಿದ ನೋವಿಗೆ ದುಪ್ಪಟ್ಟು ನೋವನ್ನು ಅಭಿರಾಮಿ ಕುಟುಂಬಕ್ಕೆ ನೀಡಬೇಕು ಎಂಬ ಹಠಕ್ಕೆ ಬಿದ್ದಿದ್ದೆ. ಮಗಳು ಶಾಲಿನಿಗಿಂತ ಕಿರಿಯ ಮಗ ಶ್ಯಾಮವೇಲುನನ್ನು ಕಂಡರೆ ಅಭಿರಾಮಿಗೆ ಹೆಚ್ಚು ಪ್ರೀತಿ ಇತ್ತು. ಹೀಗಾಗಿ, ಆ ಮಗುವನ್ನೇ ಕೊಂದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

‘ನಾಳೆಯೊಳಗೆ ಸಿಗುತ್ತಾನಂತೆ..’

ಮಗ ಸತ್ತು ಹೋಗಿರುವ ವಿಚಾರ ಮಂಗಳವಾರ ಸಂಜೆವರೆಗೂ ಅಭಿರಾಮಿ ಅವರಿಗೆ ಗೊತ್ತಿರಲಿಲ್ಲ. ‘ಶ್ಯಾಮುನನ್ನು ಆರ್ಮುಗಂ ಎತ್ತಿಕೊಂಡು ಹೋಗಿದ್ದಾನಂತೆ. ಹೀಗಾಗಿ, ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸುತ್ತಿದ್ದಾರೆ. ಆತ ಯಾರ ಮನೆಯಲ್ಲಿ ಅಡಗಿಸಿಟ್ಟಿದ್ದಾನೋ ಗೊತ್ತಿಲ್ಲ. ಆದರೆ, ಮಗ ಸುರಕ್ಷಿತವಾಗಿದೆ ಎಂಬ ಮಾಹಿತಿಯಂತೂ ಸಿಕ್ಕಿದೆ. ನಾಳೆ (ಬುಧವಾರ) ಬೆಳಿಗ್ಗೆಯೊಳಗೆ ಶ್ಯಾಮು ಮನೆಗೆ ಬರುತ್ತಾನೆ ಎಂದು ಪೊಲೀಸರೂ ಹೇಳಿದ್ದಾರೆ. ಅದೇ ವಿಶ್ವಾಸದಲ್ಲಿ ಕಾಯುತ್ತಿದ್ದೇನೆ’ ಎಂದು ಅಭಿರಾಮಿ ಸಂಜೆ ಹೇಳಿದ್ದರು.

ಅವರು ಹೀಗೆ ಹೇಳಿದ ಸ್ವಲ್ಪ ಸಮಯದಲ್ಲೇ ಸುದ್ದಿ ವಾಹಿನಿಗಳಲ್ಲಿ ಮಗುವಿನ ಸಾವಿನ ಸುದ್ದಿ ಪ್ರಸಾರವಾಗಿದೆ. ಅದನ್ನು ನಂಬದ ಅಭಿರಾಮಿ, ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ತಾಯಿ ದುಃಖವನ್ನು ಅರಿತ ಪೊಲೀಸರು, ‘ಇಲ್ಲಮ್ಮ.. ಯಾರು ಹೇಳಿದ್ದು? ಮಗ ಚೆನ್ನಾಗಿಯೇ ಇದ್ದಾನೆ’ ಎಂದು ಮತ್ತೆ ಸುಳ್ಳು ಹೇಳಿದ್ದಾರೆ. ಕೊನೆಗೆ, ಮಹಿಳಾ ಸಿಬ್ಬಂದಿ ಮನೆ ಹತ್ತಿರ ಹೋಗಿ ಮಗು ಸತ್ತಿರುವ ವಿಚಾರ ತಿಳಿಸಿ ಅಭಿರಾಮಿಗೆ ಸಾಂತ್ವನ ಹೇಳಿ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT