ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತುವಾರಿ ಸಚಿವರಿಗೆ ಕಚೇರಿಯೇ ಇಲ್ಲ!

ಸಮಸ್ಯೆ ಕೇಳುವ ಸಚಿವರ ವಿಳಾಸ ಜನರಿಗೆ ಗೊತ್ತಿಲ್ಲ
Last Updated 17 ಜೂನ್ 2018, 6:50 IST
ಅಕ್ಷರ ಗಾತ್ರ

ಬೆಳಗಾವಿ: 14 ತಾಲ್ಲೂಕುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿ ಎರಡನೇ ಅತಿದೊಡ್ಡ ಜಿಲ್ಲೆಯಾಗಿದೆ. ಅಂದಾಜು 50 ಲಕ್ಷ ಜನಸಂಖ್ಯೆ ಹೊಂದಿದ್ದು, ಬೆಂಗಳೂರಿನ ನಂತರದ ಸ್ಥಾನ ಪಡೆದುಕೊಂಡಿದೆ. ಇಷ್ಟೊಂದು ದೊಡ್ಡ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಜಿಲ್ಲಾ ಕೇಂದ್ರ ಬೆಳಗಾವಿಯಲ್ಲಿ ಕಚೇರಿಯೇ ಇಲ್ಲ!

ಸಚಿವರನ್ನು ಭೇಟಿಯಾಗಲು ಹಾಗೂ ಸರ್ಕಾರದ ಮಟ್ಟಕ್ಕೆ ತಮ್ಮ ಸಮಸ್ಯೆಗಳನ್ನು ತಲುಪಿಸಲು ಜನರು ಪರದಾಡುವಂತಾಗಿದೆ. ಸಚಿವರು ಎಲ್ಲಿ ಸಿಗುತ್ತಾರೆ? ಯಾವ ಸಮಯದಲ್ಲಿ ಸಿಗುತ್ತಾರೆ? ಯಾವ ದಿನ ಭೇಟಿಯಾಗಬಹುದು ಎನ್ನುವುದು ತಿಳಿಯದೇ ಜನರು ಒದ್ದಾಡುತ್ತಿದ್ದಾರೆ. ಸಚಿವರು ವಾಸವಾಗಿರುವ ಗೋಕಾಕ ಪಟ್ಟಣಕ್ಕೆ ತೆರಳಬೇಕಾದ ಪರಿಸ್ಥಿತಿ ಬಂದೊದಗಿದೆ.

ಹಿಂದೆಯೂ ಇರಲಿಲ್ಲ: ಹಿಂದಿನ ಸರ್ಕಾರದಲ್ಲಿ ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆ ಸಂದರ್ಭದಲ್ಲಿಯೂ ಅವರು ಕಚೇರಿಯನ್ನು ಹೊಂದಿರಲಿಲ್ಲ. ಇಲ್ಲಿಗೆ ಭೇಟಿ ನೀಡಿದಾಗ, ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣ ಹಾಗೂ ಲೋಕೋಪಯೋಗಿ ಇಲಾಖೆಯ ಸರ್ಕಿಟ್‌ ಹೌಸ್‌ನಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಕಾಮಗಾರಿಗಳ ಪರಿಶೀಲನೆ ನಡೆಸಿ ಹೊರಟುಹೋಗುತ್ತಿದ್ದರು.

ಸಚಿವರು ಯಾವ ದಿನ ಬೆಳಗಾವಿಗೆ ಬರುತ್ತಾರೆ ಎನ್ನುವುದನ್ನು ಪತ್ರಿಕೆಗಳ ಮೂಲಕ ತಿಳಿದುಕೊಂಡು ಜನರು ಇಲ್ಲಿನ ಸರ್ಕಿಟ್‌ ಹೌಸ್‌ಗೆ ಬಂದು ಮನವಿ ನೀಡುತ್ತಿದ್ದರು. ತಮ್ಮ ದುಖ ದುಮ್ಮಾನಗಳನ್ನು ಹೇಳಿಕೊಳ್ಳುತ್ತಿದ್ದರು. ಸಂಘಟನೆಗಳ ಮುಖ್ಯಸ್ಥರು, ಪಕ್ಷದ ಮುಖಂಡರು, ಶಾಸಕರು, ಜನಪ್ರತಿನಿಧಿಗಳು ಕೂಡ ಇಲ್ಲಿಗೆ ತೆರಳಿ ಸಚಿವರನ್ನು ಮುಖಾಮುಖಿ ಭೇಟಿಯಾಗುತ್ತಿದ್ದರು. ಸರ್ಕಿಟ್‌ ಹೌಸ್‌ ಒಂದು ರೀತಿಯಲ್ಲಿ ಸಚಿವರ ಕಚೇರಿಯಂತಿತ್ತು!

ದೂರದ ಊರಿನವರಿಗೆ ತೊಂದರೆ: ಜಿಲ್ಲೆಯ ವಿಸ್ತೀರ್ಣ 13,415 ಚದರ ಕಿ.ಮೀ. ಇದ್ದು, ಜಿಲ್ಲಾ ಕೇಂದ್ರ ಸ್ಥಾನವಾದ ಬೆಳಗಾವಿಯು ಹಲವು ಊರುಗಳಿಗೆ ಸಾಕಷ್ಟು ದೂರವಾಗುತ್ತದೆ. ಅಥಣಿಯು 150 ಕಿ.ಮೀ, ರಾಮದುರ್ಗ 95 ಕಿ.ಮೀ ರಾಯಬಾಗ 90 ಕಿ.ಮೀ, ಸವದತ್ತಿ 90 ಕಿ.ಮೀ ಹಾಗೂ ಚಿಕ್ಕೋಡಿ 80 ಕಿ.ಮೀ ದೂರದಲ್ಲಿವೆ. ಇಲ್ಲಿನ ಜನರು ಸಚಿವರನ್ನು ಭೇಟಿಯಾಗಲು ಸಾಕಷ್ಟು ತೊಂದರೆ ಎದುರಿಸಬೇಕಾಗಿದೆ.‌ ಇಲ್ಲಿಗೆ ಬಂದು ಹೋಗುವುದಕ್ಕಾಗಿ ದಿನವಿಡೀ ಬಸ್‌ ಪ್ರಯಾಣದಲ್ಲಿಯೇ ಸಮಯ ಕಳೆಯಬೇಕಾಗಿದೆ. ಅಷ್ಟು ದೂರದ ಊರುಗಳಿಂದ ಬಂದ ಮೇಲೆ ಸಚಿವರು ಸಿಗಲಿಲ್ಲವೆಂದರೆ ಇಡೀ ದಿನದ ಶ್ರಮ ವ್ಯರ್ಥವಾಗಿ ಹೋಗುತ್ತದೆ. ಆರ್ಥಿಕವಾಗಿಯೂ ಅವರಿಗೆ ಹೊರೆಯಾಗುತ್ತದೆ.

‘ಈಗ ಮಳೆ ಆರಂಭವಾಗಿದೆ. ಕೃಷಿ ಚಟುವಟಿಕೆ ಶುರುವಾಗಿದೆ. ಬೆಳೆ ವಿಮೆ ಪರಿಹಾರ ಹಾಗೂ ಬೆಳೆ ಹಾನಿ ಸೇರಿದಂತೆ ಹಲವು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮನವಿಗಳು ಸರ್ಕಾರಕ್ಕೆ ತಲುಪಿದರೆ ಪರಿಹಾರಗಳು ತಕ್ಷಣಕ್ಕೆ ಸಿಗುತ್ತವೆ. ಆದರೆ, ಇಲ್ಲಿ ಸಚಿವರನ್ನು ಹಿಡಿಯುವುದೇ ದೊಡ್ಡ ಸವಾಲಿನ ಕೆಲಸವಾಗಿದೆ’ ಎಂದು ರಾಯಬಾಗ ತಾಲ್ಲೂಕಿನ ಕುಡಚಿಯ ರೈತ ಸಂಗಪ್ಪ ಗೌಡರ ನೊಂದು ನುಡಿದರು.

‘ಮೊನ್ನೆ ಸುರಿದ ಮಳೆಯಲ್ಲಿ ಕೆಲವು ಕಡೆ ಮನೆಗಳಿಗೆ ಹಾನಿ ಉಂಟಾಗಿದೆ. ಇವುಗಳಿಗೆ ತಕ್ಷಣ ಪರಿಹಾರ ದೊರಕಿಸಿಕೊಡುವಂತೆ ಕೇಳಬೇಕಾಗಿದೆ. ವೈದ್ಯಕೀಯ ಪರಿಹಾರ ಕೇಳಬೇಕಾಗಿದೆ. ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ ತಕ್ಷಣಕ್ಕೆ ಕೆಲಸ ಆಗುವುದಿಲ್ಲ. ಅವರಿಲ್ಲ, ಇವರಿಲ್ಲ ಎಂದು ಎಡತಾಕಿಸುತ್ತಾರೆ. ಸಚಿವರ ಗಮನಕ್ಕೆ ತರೋಣವೆಂದರೆ ಅವರು ಕೈಗೆ ಸಿಗುತ್ತಿಲ್ಲ. ಯಾರಿಗೆ ಹೇಳೋಣ ನಮ್ಮ ಕಷ್ಟ’ ಎಂದರು.

ಪ್ರತಿಕ್ರಿಯೆಗೆ ಸಚಿವ ರಮೇಶ ಜಾರಕಿಹೊಳಿ ಲಭ್ಯವಾಗಲಿಲ್ಲ.

ಆಪ್ತ ಸಹಾಯಕರೂ ಇಲ್ಲ

ಸಾಮಾನ್ಯವಾಗಿ ಶಾಸಕರಿಗೆ ಹಾಗೂ ಸಚಿವರಿಗೆ ಸರ್ಕಾರಿ ಅಧಿಕಾರಿಯೊಬ್ಬರು ಆಪ್ತ ಸಹಾಯಕರಾಗಿರುತ್ತಾರೆ. ಇವರು ಜಿಲ್ಲೆಯ ಜನರ ಅಹವಾಲುಗಳನ್ನು ಸಚಿವರ ಮೂಲಕ ಸರ್ಕಾರದ ಗಮನಕ್ಕೆ ತರುತ್ತಾರೆ. ಪತ್ರ ವ್ಯವಹಾರ ನಡೆಸುತ್ತಾರೆ. ಬೆಂಗಳೂರಿನಲ್ಲಿರುವ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು, ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ಕೊಡಿಸುತ್ತಾರೆ. ಇಂತಹ ಜವಾಬ್ದಾರಿಯನ್ನು ನಿಭಾಯಿಸುವ ಆಪ್ತ ಸಹಾಯಕರು ಕೂಡ ಇಲ್ಲಿಲ್ಲ.

ರಮೇಶ ಇದುವರೆಗೆ ಸರ್ಕಾರಿ ಆಪ್ತ ಸಹಾಯಕರನ್ನು ನೇಮಿಸಿಕೊಂಡಿಲ್ಲ. ಹೀಗಾಗಿ ಜನರಿಗೆ ಸಚಿವರನ್ನು ಭೇಟಿಯಾಗದೆ ಬೇರೆ ದಾರಿಯೇ ಇಲ್ಲದಂತಾಗಿದೆ. ಆಪ್ತ ಸಹಾಯಕರ ನೇಮಕವಾಗಿದ್ದಾರೆ ಕನಿಷ್ಠ ಪಕ್ಷ ಅವರ ಮೂಲಕವಾದರೂ ಮನವಿಗಳನ್ನು ಸಚಿವರಿಗೆ ತಲುಪಿಸಬಹುದಾಗಿತ್ತು ಎನ್ನುವ ಆಶಯ ಜನರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT