ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಕೊರಕಲು ಬಿದ್ದ ರಸ್ತೆ ಬದಿ

ಚಿಕ್ಕನಾಯಕನಹಳ್ಳಿ- ಹಾಗಲವಾಡಿ ಕೈಮರ ಜಿಲ್ಲಾ ಹೆದ್ದಾರಿ ಬದಿಯ ಅವ್ಯವಸ್ಥೆ; ಅಪಘಾತಗಳಿಗೆ ಆಹ್ವಾನ; ಸಂಚಾರ ದುಸ್ತರ
Last Updated 17 ಜೂನ್ 2018, 9:02 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಸತತವಾಗಿ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಮದನಿಂಗನ ಸುತ್ತು ಕಣಿವೆ ವ್ಯಾಪ್ತಿಯಲ್ಲಿ, ಚಿಕ್ಕನಾಯಕನಹಳ್ಳಿ- ಹಾಗಲವಾಡಿ ಕೈಮರ ಜಿಲ್ಲಾ ಹೆದ್ದಾರಿ ಬದಿಯು ಹಾಳಾಗಿ ಕೊರಕಲು ಉಂಟಾಗಿದ್ದು, ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ.

ತಾಲ್ಲೂಕು ಕೇಂದ್ರದಿಂದ ಕಣಿವೆ ಮಾರ್ಗವಾಗಿ ಗುಡ್ಡಟಗಾಡಿನ ಹಳ್ಳಿಗಳಾದ ಮದನಮಡು, ಜಾಣೆಹಾರು, ಅಜ್ಜಿಗುಡ್ಡೆ, ಕೆಂಪರಾಯನಹಟ್ಟಿ, ರಾಮನಹಳ್ಳಿ, ತೀರ್ಥಪುರ, ಬರಸಿಡ್ಲಹಳ್ಳಿ, ಕೊಟ್ಟಿಗೆಹಾಳ್, ಸಿಂಗದಹಳ್ಳಿ ಗ್ರಾಮಗಳ ನೂರಾರು ಜನರಿಗೆ ಚಿಕ್ಕನಾಯಕನಹಳ್ಳಿ ಹಾಗೂ ಗುಬ್ಬಿ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ ಇದಾಗಿದ್ದು, ಹಲವು ಕಡೆ ರಸ್ತೆ ಬದಿಯಲ್ಲಿ ಕೊರಕಲು ಬಿದ್ದಿದೆ. ಡಾಂಬರಿನ ರಸ್ತೆಗೆ ಸರಿಸಮವಾಗಿ ಎರಡೂ ಬದಿಗಳಲ್ಲಿ ಹಾಕಿದ್ದ ‘ಪಿಚ್ಚಿಂಗ್’ ಕೊಚ್ಚಿ ಹೋಗಿದೆ.

ಸುತ್ತು ಕಣಿವೆ ಆದ್ದರಿಂದ ಅಪಾಯಕಾರಿ ಕಡಿದಾದ ತಿರುವುಗಳಿದ್ದು ವಾಹನ ಸವಾರರು ಆಯತಪ್ಪಿ ರಸ್ತೆ ಬದಿ ಕೊರಕಲುಗಳಿಗೆ ಬೀಳುವ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ.

ಚಿಕ್ಕನಾಯಕನಹಳ್ಳಿ ಪಟ್ಟಣದ ಹಾಗಲವಾಡಿ ಗೇಟ್‌ನಿಂದ ತಾಲ್ಲೂಕು ಗಡಿ ಭಾಗ ಸಿಂಗದಹಳ್ಳಿವರೆಗೆ 30ಕ್ಕೂ ಹೆಚ್ಚು ತಿರುವುಗಳು ಬರುತ್ತವೆ. ಅದರಲ್ಲೂ ಭೂತಪ್ಪನ ಗುಡಿಯಿಂದ ಜಾಣೇಹಾರ್ ಹೊರಗೆ 6 ಕಡಿದಾದ ತಿರುವುಗಳಿದ್ದು, ಸ್ವಲ್ಪ ಆಯ ತಪ್ಪಿದರೂ ಸವಾರರು ಕಮರಿಯಲ್ಲಿ ಬೀಳುವ ಅಪಾಯ ಇದೆ. 8ನೇ ಮೈಲಿಕಲ್ಲು ಬಳಿ ರಸ್ತೆ ಬದಿಯಲ್ಲಿ ಕೊರಕಲು ಹೆಚ್ಚಾಗಿದ್ದು, ಅಪರಿಚಿತ ವಾಹನ ಸವಾರರು ಅಪಘಾತಕ್ಕೆ ಇಡಾಗುವ ಸಾಧ್ಯತೆ ಹೆಚ್ಚಾಗಿದೆ.

ಇದಲ್ಲದೆ ಸುತ್ತುಕಣಿವೆಯಲ್ಲಿ ರಸ್ತೆಯ ಉದ್ದಕ್ಕೂ ಹಾಕಿರುವ ತಡೆ ಕಂಭಗಳನ್ನು ಭದ್ರವಾಗಿ ಸಿಮೆಂಟ್ ಬೆಡ್ಡಿಂಗ್ ಮಾಡದೇ ಇರುವ ಕಾರಣ ಮುರಿದು ಬಿದ್ದಿದ್ದು ಅಪಾಯದ ಸಾಧ್ಯತೆಯನ್ನು ಇನ್ನೂ ಹೆಚ್ಚಿಸಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಚ್ಚರಿಕೆಯ ಫಲಕ ಹಾಕಿ

ಮಳೆಯ ಕಾರಣದಿಂದ ಮದನಿಂಗನ ಕಣಿವೆ ಹಸಿರಿನಿಂದ ಕಂಗೊಳಿಸುತ್ತಿದ್ದು, ಪರಿಸರ ಪ್ರಿಯರನ್ನು ಕೈ ಬೀಸಿ ಕರೆಯು ತ್ತಿದೆ. ತುಮಕೂರಿ ನಿಂದ ಹೊಸದುರ್ಗ, ಹಿರಿಯೂರು ಕಡೆ ಹೋಗುವ ಹಲವು ಖಾಸಗಿ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವುದನ್ನು ಬಿಟ್ಟು ಸುತ್ತು ಕಣಿವೆ ಮಾರ್ಗವಾಗಿ ಬರುತ್ತಿದ್ದಾರೆ. ಅದರಲ್ಲೂ ವಾರಾಂತ್ಯದಲ್ಲಿ ಜಾಲಿ ರೈಡ್ ಹೊರಡುವ ಬೈಕ್ ಸವಾರರು ಭಾನುವಾರ ತಂಡಗಳಲ್ಲಿ ಬರುತ್ತಿದ್ದಾರೆ. ಅಪರಿಚಿತ ಸವಾರರು ಹೆಚ್ಚುತ್ತಿರುವುದರಿಂದ ಅವಘಡಗಳೂ ಸಂಭವಿಸುತ್ತಿವೆ. ಆದಕಾರಣ ಎಚ್ಚರಿಕೆ ಫಲಕಗಳನ್ನು ಹಾಕಬೇಕು
– ಎನ್‌. ಇಂದಿರಮ್ಮ, ನಿವೃತ್ತ ಪ್ರಾಂಶುಪಾಲರು, ಚಿಕ್ಕನಾಯಕನಹಳ್ಳಿ

ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರು

ರಸ್ತೆ ಕೊರಕಲು ಹಾಗೂ ತಡೆ ಕಂಬಗಳು ಶಿಥಿಲವಾಗಿರುವುದರಿಂದ ರಸ್ತೆ ಬದಿ ಅಲ್ಲಲ್ಲಿ ಕುಸಿಯುತ್ತಿದೆ. ನಿತ್ಯ ಪಟ್ಟಣದ ಶಾಲೆ ಕಾಲೇಜುಗಳಿಗೆ ಹೋಗಲು ಬೆಳಿಗ್ಗೆ ಹಾಗೂ ಸಂಜೆ ನೂರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಬರುತ್ತಾರೆ. ವಿರಳವಾಗಿರುವ ಬಸ್ಸುಗಳು ಕಿಕ್ಕಿರಿದು ತುಂಬುತ್ತವೆ ಹಾಗೂ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಆಟೊಗಳು ಸಂಚರಿಸುತ್ತವೆ. ಅದರಲ್ಲೂ ಗುಡ್ಡಗಾಡು ಭಾಗದಲ್ಲಿ ಕುರಿಸಾಕಣೆಯೇ ಪ್ರಮುಖ ಕಸುಬು ಆಗಿರುವುದರಿಂದ ಪ್ರತಿ ಸೋಮವಾರ ಮರಿ ಸಂತೆಗೆ ಕುರಿ ಮೇಕೆಗಳನ್ನು ತುಂಬಿಕೊಂಡು ವಾಹನಗಳು ಬರುತ್ತಿದ್ದು ಸರಣಿ ಅಪಘಾತಗಳು ಸಂಭವಿಸುತ್ತಿವೆ
ಮೊಹಮದ್‌ ಹುಸೇನ್‌, ಲಘು ವಾಹನ ಚಾಲಕ, ಚಿಕ್ಕನಾಯಕನಹಳ್ಳಿ

- ಧನಂಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT