ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧುಮ್ಮಿಕ್ಕುವ ಜಲಧಾರೆ; ಪ್ರವಾಸಿಗರ ಲಗ್ಗೆ

ಭರಚುಕ್ಕಿ, ಗಗನ ಚುಕ್ಕಿ ಜಲಪಾತಗಳಿಗೆ ಜೀವಕಳೆ; ಭೋರ್ಗೆರೆಯುತ್ತಿದೆ ಜಲಮೂಲ
Last Updated 18 ಜೂನ್ 2018, 10:26 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಮುಂಗಾರು ಬಿರುಸು ಪಡೆಯುತ್ತಿದ್ದಂತೆಯೇ ತಾಲ್ಲೂಕಿನ ಶಿವನಸಮುದ್ರದಲ್ಲಿರುವ ಪ್ರಸಿದ್ಧ ಭರಚುಕ್ಕಿ ಮತ್ತು ಗಗನ ಚುಕ್ಕಿ ಜಲಪಾತಗಳಿಗೆ ಜೀವಕಳೆ ಬಂದಿದೆ.

ಹಚ್ಚ ಹಸುರಿನ ಗಿರಿ ಕಂದರದ ನಡುವೆ ನೊರೆ ಹಾಲಿನಂತೆ ಧುಮ್ಮಿಕ್ಕುತ್ತಿರುವ ಜಲಧಾರೆಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ದಾಂಗುಡಿ ಇಡುತ್ತಿದೆ. ಅದರಲ್ಲೂ ಭರಚುಕ್ಕಿ ಜಲಪಾತವಂತೂ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಸತ್ತೇಗಾಲ ಸಮೀಪ ಇರುವ ಜಲಪಾತ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದ ಕಬಿನಿ ಮತ್ತು ಕಾವೇರಿ ಅಣೆಕಟ್ಟುಗಳು ತುಂಬಿದ್ದು, ಅಲ್ಲಿಂದ ನೀರು ಹೊರ ಬಿಟ್ಟಿರುವುದರಿಂದ ಭರಚುಕ್ಕಿ ಜಲಪಾತ ಮೈದುಂಬಿಕೊಂಡು ವಿಸ್ತಾರವಾಗಿ ಹರಡಿಕೊಂಡು ಭೋರ್ಗರೆಯುತ್ತಿದೆ.

ವಾರದಿಂದ ಇಲ್ಲಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳ ಪ್ರವಾಸಿಗರು ಇಲ್ಲಿಗೆ ಲಗ್ಗೆ ಇಡುತ್ತಿದ್ದಾರೆ.

ಐದು ಪ್ರವಾಸಿ ತಾಣ: ಪ್ರವಾಸಿಗರು ಭರಚುಕ್ಕಿಗೆ ಮಾತ್ರವಲ್ಲ, ಸಮೀಪದ ಗಗನಚುಕ್ಕಿ ಜಲಪಾತ, ಮುಸ್ಲಿಂ ದರ್ಗಾ, ಸುಪ್ರಸಿದ್ಧ ಶಿವನಸಮುದ್ರ ದೇವಸ್ಥಾನ, ಮಧ್ಯರಂಗ ದೇವಾಲಯ ಹಾಗೂ ಮುತ್ತತ್ತಿಗೂ (ಕಾವೇರಿ ನದಿ ಹರಿಯುವ ಸ್ಥಳ) ಭೇಟಿ ನೀಡುತ್ತಿದ್ದಾರೆ. ಭಾನುವಾರದಂದು ಸಾವಿರಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಬಂದಿದ್ದರು.

ಸ್ವಚ್ಛತೆ ಮರೀಚಿಕೆ

ಜಲಪಾತ ನೋಡಲು ಬರುವ ಸಾವಿರಾರು ಪ್ರವಾಸಿಗರು ಮನೆಯಿಂದ ತರುವ ಊಟ ಹಾಗೂ ಕುರುಕಲು ತಿಂಡಿ ತಿನಿಸುಗಳನ್ನು ತಿಂದು ಉಳಿಕೆ ಆಹಾರ ಮತ್ತು ಪ್ಲಾಸ್ಟಿಕ್ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು, ಸ್ವಚ್ಛತೆಗೆ ತೊಡಕಾಗಿದೆ. ಪ್ಲಾಸ್ಟಿಕ್‌ಮುಕ್ತ ಪ್ರವಾಸಿಗರ ತಾಣ ಎಂದು ನಾಮಫಲಕದಲ್ಲಿ ಬರೆಯಲಾಗಿದ್ದರೂ, ಪ್ರವಾಸಿಗರು ರಾಜಾರೋಷವಾಗಿ ಪ್ಲಾಸ್ಟಿಕ್ ಅನ್ನು ಬಳಸುತ್ತಿದ್ದಾರೆ. ಶೌಚಾಲಯದ ವ್ಯವಸ್ಥೆ ಇದ್ದರೂ ಕೆಲ ಪ್ರವಾಸಿಗರು ಅದನ್ನು ಬಳಸುತ್ತಿಲ್ಲ.

ನಾವು ಪ್ರತಿ ವರ್ಷ ಜಲಪಾತ ನೋಡಲು ಬರುತ್ತೇವೆ. ಇಂತಹ ಹಚ್ಚಹಸಿರ ನಡುವೆ ಭೋರ್ಗರೆದು ಧುಮ್ಮಿಕ್ಕುವ ಜಲಪಾತವನ್ನೂ ನೋಡುವುದೇ ಕಣ್ಣಿಗೆ ಹಬ್ಬ. ಅದರ ಮಜಾನೇ ಬೇರೆ
ಲಿಯಾ ಜಾಸ್ಮಿನ್‌,  ಮೈಸೂರು 

ಅವಿನ್ ಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT