ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಾಗಿ ಸ್ಥಳೀಯರ ಜೊತೆ ಮಿಲಿಟರಿ ‘ಸಮರ’

ಮೋದಿ ಗಾರ್ಡನ್‌ಗೆ ಇಲ್ಲ ಸುಸಜ್ಜಿತ ರಸ್ತೆ ಸಂಪರ್ಕ
Last Updated 11 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಹೃದಯ ಭಾಗದಲ್ಲಿರುವ ಬಡಾವಣೆಯಿದು. ಆದರೂ ಇಲ್ಲಿಗೆ ತಲುಪಲು ಸುಸಜ್ಜಿತ ರಸ್ತೆ ಇಲ್ಲ. ಇದ್ದ ಒಂದು ಸಂಪರ್ಕ ರಸ್ತೆಯನ್ನು ರಕ್ಷಣಾ ಇಲಾಖೆ ಮುಚ್ಚಿದ ಬಳಿಕ ಮೋದಿ ಗಾರ್ಡನ್‌ ನಿವಾಸಿಗಳ ಪಾಡು ಅಷ್ಟಿಷ್ಟಲ್ಲ.

ಕಳೆದುಕೊಂಡ ರಸ್ತೆಯನ್ನು ಮರಳಿ ಪಡೆಯುವುದಕ್ಕಾಗಿ ಮೋದಿ ಗಾರ್ಡನ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಸತತ ಎರಡು ದಶಕಗಳಿಂದ ಹೋರಾಟ ನಡೆಯುತ್ತಿದೆ. ಆದರೂ ಸುಸಜ್ಜಿತ ರಸ್ತೆಯನ್ನು ಹೊಂದುವ ಇಲ್ಲಿನ ನಿವಾಸಿಗಳ ಕನಸು ಮರೀಚಿಕೆಯಾಗಿಯೇ ಉಳಿದಿದೆ. ಸ್ವತಃ ರಕ್ಷಣಾ ಸಚಿವರೇ ಆದೇಶ ಮಾಡಿದರೂ ರಸ್ತೆಯನ್ನು ಅಭಿವೃದ್ಧಿ ಪಡಿಸಲು ರಕ್ಷಣಾ ಇಲಾಖೆ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿರುವುದು ಇಲ್ಲಿನ ನಿವಾಸಿಗಳನ್ನು ದಿಕ್ಕೆಡಿಸಿದೆ.

ಜೆ.ಸಿ.ನಗರದ ಕಡೆಯಿಂದ (ದೂರದರ್ಶನ ಕೇಂದ್ರ) ಮೋದಿ ಗಾರ್ಡನ್‌ ಹಾಗೂ ಕಾವಲ್‌ ಭೈರಸಂದ್ರಕ್ಕೆ ದೇಸ್‌ರಾಜ್‌ ಅರಸು ರಸ್ತೆ ಸಂಪರ್ಕ ಕಲ್ಪಿಸುತ್ತಿತ್ತು. ಈ ರಸ್ತೆ ರಕ್ಷಣಾ ಇಲಾಖೆಯ ಪ್ಯಾರಾಚೂಟ್‌ ರೆಜಿಮೆಂಟ್‌ ಟ್ರೈನಿಂಗ್‌ ಸೆಂಟರ್‌ ಇರುವ ಜಾಗದ ಮೂಲಕ ಹಾಗೂ ಸವಾರ್‌ಲೈನ್‌ ಪ್ರದೇಶದ ಮೂಲಕ ಹಾದುಹೋಗುತ್ತದೆ. ಒಂದು ಕಾಲದಲ್ಲಿ ಇದರಲ್ಲಿ ಸಿಟಿಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಈಗ ಇಲ್ಲಿನ ನಿವಾಸಿಗಳು ದೇವೇಗೌಡ ರಸ್ತೆ, ದಿಣ್ಣೂರು ರಸ್ತೆ ಹಾಗೂ ಕಾವಲ್‌ಭೈರಸಂದ್ರ ರಸ್ತೆಯನ್ನು ಸುತ್ತಿಕೊಂಡು ಮನೆಗೆ ತಲುಪಬೇಕಾದ ಸ್ಥಿತಿ ಇದೆ.

‘ದುರಸ್ತಿ ಸಲುವಾಗಿ 1996ರಲ್ಲಿ ತಾತ್ಕಾಲಿಕವಾಗಿ ಈ ರಸ್ತೆಯನ್ನು ಮುಚ್ಚಲಾಯಿತು. ಮೂಲಕ ಮೋದಿ ಗಾರ್ಡನ್‌ ನಿವಾಸಿಗಳ ಸಂಪರ್ಕ ಸೌಲಭ್ಯವನ್ನು ಹಂತ ಹಂತವಾಗಿ ಕಸಿದುಕೊಂಡರು’ ಎಂದು ದೂರುತ್ತಾರೆ ಮೋದಿ ಗಾರ್ಡನ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಆರ್‌.ಸುರೇಶ್‌.

‘ನಾವು ಈ ರಸ್ತೆಯನ್ನು ಬಳಸುವಾಗ ಸೈನಿಕರು ತಡೆದು ನಮ್ಮಿಂದ ದಾಖಲೆಗಳನ್ನು ಕೇಳುತ್ತಿದ್ದರು. ಸುಮ್ಮನೆ ತಡೆಯುತ್ತಿದ್ದರು. ಇದರಿಂದ ಕಿರಿಕಿರಿ ಉಂಟಾಗುತ್ತಿತ್ತು. ಮೊದಲು ರಾತ್ರಿ 9ರ ಬಳಿಕ ಸಂಚಾರಕ್ಕೆ ಅವಕಾಶ ನೀಡಲಿಲ್ಲ. ನಂತರ ಸಂಜೆ 6ರವರೆಗೆ ಮಾತ್ರ ಅವಕಾಶ ನೀಡಿದರು. ಒಂದು ವರ್ಷದಿಂದ ಈ ರಸ್ತೆಯನ್ನು ಶಾಶ್ವತವಾಗಿ ಮುಚ್ಚಿದ್ದಾರೆ’ ಎಂದು ದೂರುತ್ತಾರೆ ಮೋದಿ ಗಾರ್ಡನ್‌ ನಿವಾಸಿ ಅಹಮದ್‌ ಹುಸೇನ್‌.

‘1996ರಿಂದ 2017ರ ನಡುವೆ ಅನೇಕ ಬಾರಿ ಈ ರಸ್ತೆಯನ್ನು ಮುಚ್ಚಲಾಗಿದೆ. ಕಾನೂನು ಹೋರಾಟದ ಮೂಲಕವೇ ನಾವು ನಮ್ಮ ಹಕ್ಕನ್ನು ಪಡೆದುಕೊಂಡಿದ್ದೆವು. ಈಗ ಕಾವಲ್‌ಭೈರಸಂದ್ರ ಕಡೆಯಿಂದ ರಸ್ತೆ ಕೊಟ್ಟಿದ್ದೇವೆ ಎಂದು ಹೈಕೋರ್ಟ್‌ಗೆ ರಕ್ಷಣಾ ಇಲಾಖೆ ತಪ್ಪು ಮಾಹಿತಿ ನೀಡಿದ್ದಾರೆ. ಇದನ್ನು ನಾವು ಪ್ರಶ್ನಿಸಿದ್ದು, ವಿಚಾರಣೆ ನಡೆಯುತ್ತಿದೆ. ಕಳೆದುಕೊಂಡ ರಸ್ತೆಯನ್ನು ಮತ್ತೆ ಪಡೆಯುತ್ತೇವೆ ಎಂಬ ವಿಶ್ವಾಸವಿದೆ’ ಎಂದು ಸುರೇಶ್ ತಿಳಿಸಿದರು.

ಮೋದಿ ಗಾರ್ಡನ್‌ ರಸ್ತೆ ಮುಚ್ಚಿದ ‘ಹಾದಿ’

* 1984ರಲ್ಲಿ ಸವಾರ್‌ ಲೈನ್‌ ರಸ್ತೆಯನ್ನು ಮೊದಲ ಬಾರಿ ಮುಚ್ಚಿದ ರಕ್ಷಣಾ ಇಲಾಖೆ

* ತಡೆಯಾಜ್ಞೆ ಬಳಿಕ ರಸ್ತೆ ಬಳಸಲು ಮತ್ತೆ ಅವಕಾಶ

* 1996ರಲ್ಲಿ ಮತ್ತೆ ದುರಸ್ತಿಗಾಗಿ ರಸ್ತೆ ಬಂದ್‌

* 1998 ರಕ್ಷಣಾ ಇಲಾಖೆ ಜಾಗದ ಪಕ್ಕದಲ್ಲಿಕಬೀರ್‌ ಆಶ್ರಮ ರಸ್ತೆ (ದೇವೇಗೌಡ ರಸ್ತೆ ಎಂಬ ಹೆಸರೂ ಇದೆ) ನಿರ್ಮಾಣ

* ಮೋದಿ ಗಾರ್ಡನ್‌ ನಿವಾಸಿಗಳಿಗೆ ಸವಾರ್‌ ಲೈನ್ ರಸ್ತೆ ಬಳಕೆಗೆ ಷರತ್ತುಬದ್ಧ ಅನುಮತಿ

* 2003ರಲ್ಲಿ ಮತ್ತೆ ಸಾರ್ವಜನಿಕರ ಸಂಚಾರ ನಿರ್ಬಂಧ

* ನಿರ್ಬಂಧ ತೆರವಿಗೆ ಒತ್ತಾಯಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ

* ಶಾಶ್ವತ ಪರ್ಯಾಯ ರಸ್ತೆ ಒದಗಿಸುವಂತೆ ಕೋರ್ಟ್‌ ಆದೇಶ

* ಪರ್ಯಾಯ ರಸ್ತೆ ನಿರ್ಮಿಸುವವರೆಗೆ ಸ್ಥಳೀಯರು ಸವಾರ ಲೈನ್‌ ರಸ್ತೆ ಬಳಸಲು ರಕ್ಷಣಾ ಇಲಾಖೆ ಒಪ್ಪಿಗೆ

* ಕಾವಲ್‌ ಭೈರಸಂದ್ರ ಕಡೆಯಿಂದ ಮೋದಿ ಗಾರ್ಡನ್‌ ನಿವಾಸಿಗಳಿಗೆ ಸಂಪರ್ಕ

* ದೇಸ್‌ರಾಜ್‌ ಅರಸ್‌ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವಂತೆ ಒತ್ತಾಯಿಸಿ 2010ರಲ್ಲಿ ಮತ್ತೆ ರಿಟ್‌ ಅರ್ಜಿ ಸಲ್ಲಿಕೆ

* 2010ರಲ್ಲಿ ಕಾವಲ್‌ ಭೈರಸಂದ್ರ ಕಡೆಯಿಂದ ಕಚ್ಛಾರಸ್ತೆ ನಿರ್ಮಾಣ

* 2017ರಲ್ಲಿ ರಸ್ತೆಯನ್ನು ಶಾಶ್ವತವಾಗಿ ಮುಚ್ಚಿದ ರಕ್ಷಣಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT