ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಈ ವರ್ಷದ (2022ರ) ಕೊನೆಯ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿಯವರ ಮಾಸಿಕ ರೇಡಿಯೋ ಕಾರ್ಯಕ್ರಮವಾದ ‘ಮನ್ ಕಿ ಬಾತ್’ನ 96ನೇ ಆವೃತ್ತಿ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.
ಮುಂಬರುವ ‘ಮನ್ ಕಿ ಬಾತ್’ ಕಾರ್ಯಕ್ರಮದ ಸಂಚಿಕೆಗಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಡಿ.13ರಂದು ಪ್ರಧಾನಿ ಮೋದಿ ಜನರನ್ನು ಆಹ್ವಾನಿಸಿದ್ದರು.
ನಮೋ ಆ್ಯಪ್ ಮತ್ತು ಮೈಗೌ (MyGov) ಆ್ಯಪ್‌ನಲ್ಲಿ ಬರೆಯಲು ಅಥವಾ 1800-11-7800 ಸಂಖ್ಯೆಗೆ ತಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡುವಂತೆ ಮೋದಿ ಸೂಚಿಸಿದ್ದರು.
ನ.30ರಂದು ನಡೆದಿದ್ದ ‘ಮನ್ ಕಿ ಬಾತ್’ನ 95ನೇ ಆವೃತ್ತಿಯಲ್ಲಿ ಮಾತನಾಡಿದ್ದ ಮೋದಿ, ‘ನಮ್ಮ ದೇಶವು ವಿಶ್ವದ ಅತ್ಯಂತ ಹಳೆಯ ಸಂಪ್ರದಾಯಗಳಿಗೆ ನೆಲೆಯಾಗಿದೆ ಎಂದು ಹೇಳಿದ್ದರು. ಆದ್ದರಿಂದ ನಮ್ಮ ಸಂಪ್ರದಾಯಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದಿದ್ದರು.