ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಸಮಯದಲ್ಲೇಕೆ ಕೇಜ್ರಿವಾಲ್‌ ಬಂಧನ? ಸುಪ್ರೀಂ ಕೋರ್ಟ್‌ ಪ್ರಶ್ನೆ

ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ: ವಿವರಣೆ ನೀಡಲು ಸೂಚನೆ
Published 1 ಮೇ 2024, 0:30 IST
Last Updated 1 ಮೇ 2024, 0:30 IST
ಅಕ್ಷರ ಗಾತ್ರ

ನವದೆಹಲಿ: ಸಾರ್ವತ್ರಿಕ ಚುನಾವಣೆಗೆ ಮುಂಚೆ ತಮ್ಮನ್ನು ಬಂಧಿಸಿರುವುದು ಏಕೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಎತ್ತಿರುವ ಪ್ರಶ್ನೆಗೆ ಉತ್ತರ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ. 

‘ಪ್ರತಿ ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಬದುಕು ಬಹು ಮುಖ್ಯ’ ಎಂದು ಹೇಳಿದ ಸುಪ್ರೀಂ ಕೋರ್ಟ್‌, ಮೇ 3ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಇ.ಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್‌.ವಿ.ರಾಜು ಅವರಿಗೆ ಸೂಚಿಸಿತು.

‘ಕೇಜ್ರಿವಾಲ್‌ ಅವರನ್ನು ಮಾರ್ಚ್‌ 21ರಂದು ಬಂಧಿಸಲಾಗಿದೆ. ವಿಶೇಷವಾಗಿ, ಕೇಜ್ರಿವಾಲ್‌ ಅವರನ್ನು ಬಂಧಿಸಿರುವ ಸಮಯ ಕುರಿತು ಅವರ ಪರ ವಕೀಲ ಅಭಿಷೇಕ್‌ ಸಿಂಘ್ವಿ ತಕರಾರು ಎತ್ತಿದ್ದಾರೆ. ಈ ಬಗ್ಗೆ ವಿವರಣೆ ನೀಡಿ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್‌.ವಿ.ರಾಜು ಅವರಿಗೆ ನ್ಯಾಯಪೀಠ ಸೂಚಿಸಿತು.

ದೆಹಲಿ ಅಬಕಾರಿ ನೀತಿ ಹಗರಣದ ಜತೆ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತಾ ಅವರಿದ್ದ ನ್ಯಾಯಪೀಠ ಮಂಗಳವಾರವೂ ಮುಂದುವರಿಸಿತು.

‘ಈ ಪ್ರಕರಣಕ್ಕೆ ಸಂಬಂಧಿಸಿ, ಜಪ್ತಿಯಂತಹ ಯಾವುದೇ ಕ್ರಮವನ್ನು ಈ ವರೆಗೆ ಕೈಗೊಂಡಿಲ್ಲ. ಒಂದು ವೇಳೆ ಅಂತಹ ಕ್ರಮವನ್ನು ಕೈಗೊಂಡಿದ್ದರೆ, ಅದರಲ್ಲಿ ಕೇಜ್ರಿವಾಲ್ ಅವರ ಪಾತ್ರ ಏನಿದೆ ಎಂಬುದನ್ನು ತೋರಿಸಿ’ ಎಂದೂ ಇ.ಡಿ ಯನ್ನು ನ್ಯಾಯಪೀಠ ಪ್ರಶ್ನಿಸಿತು.

‘ಮನೀಷ್‌ ಸಿಸೋಡಿಯಾ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಎರಡು ಭಾಗಗಳಾಗಿ ವಿಭಜಿಸಲಾಗಿತ್ತು. ಮೊದಲನೆದಾಗಿ, ಮನೀಷ್‌ ಸಿಸೋಡಿಯಾ ಪರವಾಗಿರುವ ಸಾಕ್ಷ್ಯಗಳು; ಎರಡನೆಯದಾಗಿ ಅವರ ವಿರುದ್ಧ ಪತ್ತೆ ಮಾಡಲಾಗಿರುವ ಅಂಶಗಳಿಗೆ ಸಂಬಂಧಿಸಿದ್ದು ಎಂಬ ಎರಡು ಭಾಗಗಳಿವೆ. ಹೀಗಾಗಿ ಈ ಪ್ರಕರಣವು (ಕೇಜ್ರಿವಾಲ್‌ ವಿರುದ್ಧದ ಆರೋಪ) ಈ ಎರಡರ ಪೈಕಿ ಯಾವ ತೀರ್ಪಿನ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ತಿಳಿಸಿ’ ಎಂದು ರಾಜು ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ 19ರ ಪ್ರಕಾರ, ತನ್ನ ಬಳಿ ಇರುವ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸುವ ಅಧಿಕಾರವನ್ನು ಇ.ಡಿ ಹೊಂದಿರುತ್ತದೆ. ಈ ಸೆಕ್ಷನ್‌ ಅನ್ವಯಿಸಿದಾಗ, ಆರೋಪವನ್ನು ಸಾಬೀತುಪಡಿಸುವ ಜವಾಬ್ದಾರಿ ಪ್ರಾಸಿಕ್ಯೂಷನ್‌ ಮೇಲೆಯೇ ಹೆಚ್ಚಾಗಿರುತ್ತದೆಯೇ ಹೊರತು ಆರೋಪಿ ಮೇಲೆ ಅಲ್ಲ’ ಎಂದು ಹೇಳಿದರು.

‘ಒಂದು ವೇಳೆ, ಆರೋಪಿಯು ಹಣ ಅಕ್ರಮ ವರ್ಗಾವಣೆ ಕಾಯ್ದೆಯ ಸೆಕ್ಷನ್‌ 45ರಡಿ ಜಾಮೀನಿಗೆ ಅರ್ಜಿ ಹಾಕಿದಲ್ಲಿ, ಆಗ, ಆರೋಪಿಯ ಜವಾಬ್ದಾರಿಯೇ ಹೆಚ್ಚುತ್ತದೆ’ ಎಂದು ವಿವರಿಸಿದರು.

‘ಈ ಪ್ರಕರಣವನ್ನು ಯಾವ ರೀತಿ ಅರ್ಥೈಸಬೇಕು? ಇ.ಡಿ ಮೇಲೆಯೇ ಹೆಚ್ಚಿನ ಜವಾಬ್ದಾರಿ ಹೊರಿಸಬೇಕೆ ಅಥವಾ ‘ಸಂಶಯದ ಲಾಭ’ ಎಂಬ ಅಂಶ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕೇ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

‘ಪಿಎಂಎಲ್‌ಎ ಕಾಯ್ದೆಯು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಗರಿಷ್ಠ 365 ದಿನಗಳ ಅವಕಾಶ ನೀಡುತ್ತದೆ. ಈ ಪ್ರಕರಣದಲ್ಲಿ, ದೂರುಗಳ ದಾಖಲು ಹಾಗೂ ಕ್ರಮ ಕೈಗೊಳ್ಳುವಿಕೆ ನಡುವಿನ ಸಮಯದ ಅಂತರ ನಮ್ಮನ್ನು ಯೋಚಿಸುವಂತೆ ಮಾಡಿದೆ’ ಎಂದೂ ಹೇಳಿತು.

ಬಂಧಿಸುವುದಕ್ಕೆ ಸಂಬಂಧಿಸಿ ಇ.ಡಿ ಹೊಂದಿರುವ ಅಧಿಕಾರ ಕುರಿತು ಪ್ರಮುಖ ಪ್ರಶ್ನೆಯೂ ಇದೆ. ಇದೇ ಕಾರಣಕ್ಕೆ ಕೇಜ್ರಿವಾಲ್‌ ಅವರು ತಮ್ಮ ಬಂಧನ ಪ್ರಶ್ನಿಸಿ ಪದೇಪದೇ ನ್ಯಾಯಾಲಯದ ಕದ ತಟ್ಟುತ್ತಿದ್ದಾರೆ
ಸಂಜೀವ್‌ ಖನ್ನಾ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT