ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರದ ಪರಿಹಾರ ಕೇಂದ್ರದಲ್ಲಿ ಹಲ್ಲೆ ಪ್ರಕರಣ: 15 ಮಂದಿ ನಿರಾಶ್ರಿತರ ಬಂಧನ

Last Updated 21 ಸೆಪ್ಟೆಂಬರ್ 2018, 10:59 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದ ವಾಲ್ಮೀಕಿ ಭವನದ ಪರಿಹಾರ ಕೇಂದ್ರದಲ್ಲಿ ಸೋಮವಾರಪೇಟೆ ತಹಶೀಲ್ದಾರ್‌ ಮಹೇಶ್‌ ಮೇಲಿನ ಹಲ್ಲೆ ಪ್ರಕರಣ ಸಂಬಂಧ 15 ಮಂದಿ ನಿರಾಶ್ರಿತರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪಿ.ಟಿ. ಸಂಜೀವ್‌ (50), ಟಿ.ವಿ. ವಸಂತಕುಮಾರ (33), ಟಿ.ಸಿ. ಸಿದ್ದು (31), ಆರ್‌. ಅಣ್ಣಪ್ಪ (27), ಪಿ.ಕೆ. ಸಂಜು (30), ಪಿ.ಕೆ. ತಿಮ್ಮಪ್ಪ (33), ಪಿ.ಕೆ. ಮಂಜುನಾಥ್‌ (32), ಎಂ.ಎಂ. ಮೋಹನ್‌ (38), ಆನಂದ್ (28), ಪಿ.ವಿ. ರೋಷನ್‌ (24), ಸಿ.ಕೆ. ತೇಜಕುಮಾರ್‌ (28), ಆದೀಶ್‌ ಕುಮಾರ್‌ (22), ಪಿ.ಎಸ್‌. ಮಂಜುನಾಥ್‌ (18), ಚಿತ್ರಾ (30), ನಿಶಾ (25) ಅವರು ಬಂಧಿತರು.

ಬಂಧಿತರು ಭೂಕುಸಿತ ಸಂಭವಿಸಿದ ರಾಟೆಮನೆ ಕಾಲೊನಿ, ಕಡಗದಾಳು, ತಂತಿಬಾಣೆ ಪೈಸಾರಿಯ ನಿವಾಸಿಗಳು. ಬಂಧಿತರು 20 ದಿನಗಳಿಂದ ವಾಲ್ಮೀಕಿ ಭವನದಲ್ಲಿ ಆಶ್ರಯ ಪಡೆದಿದ್ದರು. ಅದಕ್ಕೂ ಮೊದಲು ಮಡಿಕೇರಿಯ ಸೇವಾ ಭಾರತಿ ಭವನದ ಪರಿಹಾರ ಕೇಂದ್ರದಲ್ಲಿ ತಂಗಿದ್ದರು.

‘ಆಗಸ್ಟ್‌ ನಲ್ಲಿ ಸುರಿದಿದ್ದ ಮಹಾಮಳೆಯಿಂದ ನೂರಾರು ಜನರು ಮನೆ ಕಳೆದುಕೊಂಡಿದ್ದರು. ಜಿಲ್ಲಾಡಳಿತ ತೆರೆದಿದ್ದ ಪರಿಹಾರ ಕೇಂದ್ರವಾದ ವಾಲ್ಮೀಕಿ ಭವನದಲ್ಲಿ 287 ಮಂದಿ ನಿರಾಶ್ರಿತರಿಗೆ ಊಟ, ವಸತಿ ನೀಡಲಾಗುತ್ತಿತ್ತು. ಸೆ. 18ರಂದು ಈ ಕೇಂದ್ರದಲ್ಲಿ ಪ್ರತಿಭಟನೆ ನಡೆದಿತ್ತು. ಜಿಲ್ಲಾಧಿಕಾರಿ ಸ್ಥಳಕ್ಕೆ ತೆರಳಿ ಸಂತ್ರಸ್ತರನ್ನು ಸಮಾಧಾನ ಪಡಿಸಿದ್ದರು. ಸರ್ಕಾರದ ಸೌಲಭ್ಯ ಪಡೆಯುವ ದುರುದ್ದೇಶದಿಂದ ಕೆಲವರು ಪರಿಹಾರ ಕೇಂದ್ರಕ್ಕೆ ಅನಧಿಕೃತವಾಗಿ ಸೇರಿಕೊಂಡ ಮಾಹಿತಿ ಮೇರೆಗೆ ಸೋಮವಾರಪೇಟೆ ತಹಶೀಲ್ದಾರ್‌ ಮಹೇಶ್‌ ಅವರು ಸಂತ್ರಸ್ತರ ಪೂರ್ವಪರ ಮಾಹಿತಿ ಕಲೆ ಹಾಕುತ್ತಿದ್ದರು. ಹಾಜರಾತಿ ಪಡೆಯುವ ವೇಳೆ ತಳ್ಳಾಟ ನಡೆದು ತಹಶೀಲ್ದಾರ್‌ ಹಲ್ಲೆ ನಡೆಸಲಾಗಿತ್ತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸುಮನಾ ಡಿ. ಪನ್ನೇಕರ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪ್ರಕರಣ ಸಂಬಂಧ ಎರಡು ವಿಡಿಯೊಗಳನ್ನು ಪರಿಶೀಲನೆ ನಡೆಸಲಾಗಿದೆ. ಗುಂಪು ಕಟ್ಟಿಕೊಂಡು ತಹಶೀಲ್ದಾರ್‌ ಮೇಲೆ ಹಲ್ಲೆ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ತಹಶೀಲ್ದಾರ್‌ ಆತ್ಮರಕ್ಷಣೆಗೆ ನಿರಾಶ್ರಿತರ ತಳ್ಳಿರುವುದು ವಿಡಿಯೊದಲ್ಲಿ ದಾಖಲಾಗಿದೆ. ನಿರಾಶ್ರಿತ ಮಹಿಳೆಯರೊಂದಿಗೆ ತಹಶೀಲ್ದಾರ್‌ ಅಸಭ್ಯವಾಗಿ ವರ್ತಿಸಿಲ್ಲ ಎಂಬುದು ಮಹಿಳಾ ಪೊಲೀಸರಿಂದ ವಿಚಾರಣೆ ವೇಳೆ ತಿಳಿದುಬಂದಿದೆ’ ಎಂದು ಸ್ಪಷ್ಟನೆ ನೀಡಿದರು.

‘ಕೇಂದ್ರದಲ್ಲಿದ್ದ ಕೆಲವರ ಬೆದರಿಕೆಗೆ ಬಗ್ಗದೇ ತಹಶೀಲ್ದಾರ್‌ ಹಾಜರಾತಿ ಪಡೆಯಲು ಮುಂದಾಗಿದ್ದೇ ಹಲ್ಲೆಗೆ ಕಾರಣ. ಹಲ್ಲೆ ನಡೆಸಿದ್ದು ನಿಜವಾದ ಸಂತ್ರಸ್ತರೇ ಅಥವಾ ಅನಧಿಕೃವಾಗಿ ಬಂದು ಸೇರಿಕೊಂಡವರೆ ಎಂಬುದುರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಎಸ್‌ಪಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT