ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ವರದಿಗಳಿಗೆ ನಿರ್ಬಂಧ

ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ
Published 21 ಜುಲೈ 2023, 15:49 IST
Last Updated 21 ಜುಲೈ 2023, 15:49 IST
ಅಕ್ಷರ ಗಾತ್ರ

ಬೆಂಗಳೂರು: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಯಾವುದೇ ಮಾಧ್ಯಮದ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಮತ್ತು ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ ಹಾಕುವಂತೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

ಈ ಸಂಬಂಧ ವಾದಿಗಳಾದ ಶೀನಪ್ಪ ಮತ್ತಿತರರು ಸಲ್ಲಿಸಿರುವ ಅಸಲು ದಾವೆಯನ್ನು ಸಿಸಿಎಚ್‌–11ನೇ ನ್ಯಾಯಾಲಯ ವಿಚಾರಣೆ ನಡೆಸಿ ಇದೇ 19ರಂದು ಈ ಕುರಿತಂತೆ ಆದೇಶಿಸಿದೆ. 

‘ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ ಆ್ಯಪ್‌, ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌, ಯೂ–ಟ್ಯೂಬ್‌, ಟಿ.ವಿ.ಚಾನೆಲ್‌ ಹಾಗೂ ಇತರೆ ಯಾವುದೇ ರೀತಿಯ ಮಾಧ್ಯಮ ಪ್ರಕಾರಗಳಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ವರದಿ ಅಥವಾ ಮಾತನಾಡಬಾರದು‘ ಎಂದು ನಿರ್ಬಂಧಿಸಿ ಆದೇಶಿಸಿದೆ.

ಅಂತೆಯೇ, ‘ಈಗಾಗಲೇ ಈ ಸಂಬಂಧ ಪ್ರಕಟಿಸಲಾಗಿರುವ ವರದಿಗಳನ್ನ ಅಳಿಸಿ ಹಾಕಬೇಕು‘ ಎಂದು ಆದೇಶಿಸಿರುವ ನ್ಯಾಯಾಧೀಶರು, 61 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು ವಿಚಾರಣೆ ಮುಂದೂಡಿದ್ದಾರೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ರಾಜಶೇಖರ ಎಸ್‌.ಹಿಲ್ಯಾರು ಮತ್ತು ಮಂಗಳೂರಿನ ಮಯೂರ ಕೀರ್ತಿ ವಾದ ಮಂಡಿಸಿದರು.

ಅರ್ಜಿಯಲ್ಲಿ ಏನಿದೆ?: ‘ಬೆಳ್ತಂಗಡಿ ತಾಲ್ಲೂಕು ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿ 2012ರಲ್ಲಿ ನಡೆದಿದ್ದ ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರಾದ ಮಹೇಶ್‌ ಶೆಟ್ಟಿ ತಿಮರೋಡಿ, ಜಗದೀಶ್‌, ಪ್ರಭಾ ಬೆಳಹೊಂಗಲ, ಸೋಮನಾಥ್‌ ನಾಯಕ್‌, ಬಿ.ಎಂ.ಭಟ್‌, ವಿಠ್ಠಲ ಗೌಡ ಅವರೆಲ್ಲ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಸ್ಥರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಸಂಬಂಧ ಕೆಲ ಮಾಧ್ಯಮಗಳು ಕ್ಷೇತ್ರದ ವಿರುದ್ಧ ಮತ್ತು ಕ್ಷೇತ್ರಾಧಿಕಾರಿ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಅವಹೇಳನಕಾರಿಯಾಗಿ ವರದಿ ಮಾಡುತ್ತಿವೆ‘ ಎಂದು ದಾವೆದಾರರು ಅರ್ಜಿಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT