ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಋಣ ಪರಿಹಾರ ಆಯೋಗ’ ರಚನೆಗೆ ತಯಾರಿ

Last Updated 29 ಮೇ 2019, 20:33 IST
ಅಕ್ಷರ ಗಾತ್ರ

ಬೆಂಗಳೂರು: ಸಾಲದ ಸುಳಿಗೆ ಸಿಲುಕುವ ರೈತರನ್ನು ಬ್ಯಾಂಕ್‌ಗಳ ಕಿರುಕುಳದಿಂದ ರಕ್ಷಿಸುವ ಸಲುವಾಗಿ ‘ರೈತರ ಋಣ ಪರಿಹಾರ ಆಯೋಗ’ ರಚನೆಗೆ ಸಹಕಾರ ಇಲಾಖೆ ಸಿದ್ಧತೆ ಆರಂಭಿಸಿದೆ.

ಸಾಲ ಮರುಪಾವತಿಸದ ರೈತರಿಗೆ ಬ್ಯಾಂಕ್‌ಗಳು ನೋಟಿಸ್ ನೀಡುತ್ತವೆ. ಇಂತಹ ಸಂದರ್ಭಗಳಲ್ಲಿ ಆತ್ಮಹತ್ಯೆಗೆ ಮುಂದಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರ ರಕ್ಷಣೆ ಸಲುವಾಗಿ ಆಯೋಗ ರಚನೆ ಮಾಡಲಾಗುತ್ತಿದೆ. ಇದೇ ಮಾದರಿಯ ಆಯೋಗ ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹಾಗೂ ಅಧಿಕಾರಿಗಳ ನೇತೃತ್ವದ ತಂಡ ಅಲ್ಲಿಗೆ ಭೇಟಿನೀಡಿ ಅಧ್ಯಯನ ನಡೆಸಿದೆ. ಲೋಕಸಭೆ ಚುನಾವಣೆಗೂ ಮುನ್ನ ಅಧ್ಯಯನ ಪೂರ್ಣಗೊಳಿಸಿದ್ದು, ರಾಜ್ಯದಲ್ಲೂ ಆಯೋಗ ಅಸ್ತಿತ್ವಕ್ಕೆ ತರಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.

ಬ್ಯಾಂಕ್ ನೋಟಿಸ್ ಕೊಟ್ಟು, ಕಿರುಕುಳ ನೀಡಿದ ತಕ್ಷಣ ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ. ತಕ್ಷಣ ಆಯೋಗಕ್ಕೆ ಮನವಿ ಸಲ್ಲಿಸಬಹುದು. ಒಮ್ಮೆ ಅರ್ಜಿ ಸಲ್ಲಿಸಿದರೆ, ಅವರ ವಿರುದ್ಧ ಬ್ಯಾಂಕ್ ಕ್ರಮ ಕೈಗೊಳ್ಳಲು ಬರುವುದಿಲ್ಲ. ಈ ಸಮಯದಲ್ಲಿ ಆಯೋಗವು ನೈತಿಕವಾಗಿ ಬೆಂಬಲಕ್ಕೆ ನಿಲ್ಲುತ್ತದೆ.ವಿಚಾರಣೆ ನಡೆದು ಆದೇಶ ಹೊರಬರುವವರೆಗೂ ನೆಮ್ಮದಿಯಿಂದ ಇರಬಹುದು. ಆಯೋಗದ ಆದೇಶವನ್ನು ಬೇರೆ ಕೋರ್ಟ್‌ನಲ್ಲೂ ಪ್ರಶ್ನಿಸಲು ಅವಕಾಶ ಇರುವುದಿಲ್ಲ ಎಂದು ಸಚಿವ ಕಾಶೆಂಪೂರ ತಿಳಿಸಿದರು.

ಪ್ರಸಕ್ತ ಮುಂಗಾರಿನಲ್ಲಿ ಜಾರಿ:ರೈತರು ಬೆಳೆದ ಬೆಳೆಗೆ ಬೆಲೆ ಕುಸಿದ ಸಮಯದಲ್ಲಿ ಯಾವುದೇ ಶುಲ್ಕ ಇಲ್ಲದೆ ಗೋದಾಮುಗಳಲ್ಲಿ ದಾಸ್ತಾನುಮಾಡುವ ಯೋಜನೆಯನ್ನು ಈ ಬಾರಿಯ ಮುಂಗಾರು ಬೆಳೆ ಬರುವ ವೇಳೆಗೆ ಆರಂಭಿಸಲಾಗುತ್ತಿದೆ ಎಂದುಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ರೈತರು ಬೆಳೆ ಬೆಳೆಯುವ ಸ್ಥಳದಿಂದ 5 ಕಿ.ಮೀ ನಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಗೋದಾಮು ವ್ಯವಸ್ಥೆ ಮಾಡಲಾಗುವುದು. ಸರ್ಕಾರದ ಗೋದಾಮು ಇಲ್ಲವಾದರೆ, ಖಾಸಗಿಯವರ ಜತೆಗೆ ಒಪ್ಪಂದ ಮಾಡಿಕೊಂಡು ಅವಕಾಶ ಕಲ್ಪಿಸಲಾಗುವುದು. ಬೆಳೆ ದಾಸ್ತಾನಿನ ಪ್ರಮಾಣ, ಅದರ ಮೌಲ್ಯ ನಮೂದಿಸಿದ ರಸೀದಿ ನೀಡಲಾಗುತ್ತದೆ. ಇದರ ಆಧಾರದ ಮೇಲೆ ಬ್ಯಾಂಕ್‌ಗಳಲ್ಲಿ ಸಾಲ ಪಡೆದುಕೊಳ್ಳಬಹುದು. ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದ ಸಮಯದಲ್ಲಿ ಮಾರಾಟ ಮಾಡಬಹುದು.8 ತಿಂಗಳ ಕಾಲ ಯಾವುದೇ ಶುಲ್ಕ ಇಲ್ಲದೆ ದಾಸ್ತಾನು ಮಾಡಬಹುದು ಎಂದು ವಿವರಿಸಿದರು.

ಬೆಳೆ ಬೆಳೆದ ಜಮೀನಿನಿಂದ ಗೋದಾಮಿಗೆ ಉಚಿತವಾಗಿ ಸಾಗಣೆ ಮಾಡಲೂ ವಾಹನ ವ್ಯವಸ್ಥೆ ಮಾಡಲಾಗುವುದು. ಈ ಸಂಬಂಧ ವೋಲಾ, ಊಬರ್ ಜತೆಗೂ ಮಾತುಕತೆ ನಡೆದಿದೆ. ಇದಕ್ಕಾಗಿ ಆ್ಯಪ್, ಕಾಲ್ ಸೆಂಟರ್ ರೂಪಿಸಲಾಗುತ್ತಿದೆ. ಬೆಳೆ ಸಾಗಣೆಗೆ ಕರೆ ಮಾಡಿ ತಿಳಿಸಿದ ನಂತರ ಸಮಯ ನೀಡಿ, ಸಾಗಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಅಪೆಕ್ಸ್ ಬ್ಯಾಂಕ್ ಅವ್ಯವಹಾರ ತನಿಖೆ

ಅಪೆಕ್ಸ್ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದು, ಕಾನೂನು ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಆದರೆ ಬ್ಯಾಂಕ್ ಸೂಪರ್‌ಸೀಡ್ ಮಾಡಿ, ಅಧ್ಯಕ್ಷರನ್ನು ಕೆಳಗಿಳಿಸುವ ಪ್ರಯತ್ನ ನಡೆದಿಲ್ಲ ಎಂದು ಸಚಿವಬಂಡೆಪ್ಪ ಕಾಶೆಂಪೂರ ಸ್ಪಷ್ಟಪಡಿಸಿದರು.

ಸಾಲ ಮನ್ನಾ: ಜುಲೈ 10ರ ಒಳಗೆ ಬಿಡುಗಡೆ

ರೈತರ ಸಾಲ ಮನ್ನಾದ ಹಣವನ್ನು ಹಂತಹಂತವಾಗಿ ಪಾವತಿ ಮಾಡಲಾಗುತ್ತಿದ್ದು, ಜುಲೈ 10ರ ಒಳಗೆ ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT