ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿ ಸೂರ್ಯ ಸಮಾವೇಶದಲ್ಲಿ ಹಾಜರಾತಿ ಕಡ್ಡಾಯ: ವಿವಾದ ಹುಟ್ಟು ಹಾಕಿದ ಸಂದೇಶ

Published 4 ಏಪ್ರಿಲ್ 2024, 16:23 IST
Last Updated 4 ಏಪ್ರಿಲ್ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಗುರುವಾರ ನಾಮಪತ್ರ ಸಲ್ಲಿಸುವ ಮುನ್ನ ನಡೆಯುವ ಸಮಾವೇಶದಲ್ಲಿ ಕಡ್ಡಾಯವಾಗಿ ಹಾಜರಿಬೇಕು ಎಂದು ವಿ.ವಿ. ಪುರಂನ ಜೈನ್‌ ಕಾಲೇಜು ವಿದ್ಯಾರ್ಥಿಗಳಿಗೆ ಕಳುಹಿಸಿದ್ದ ಸಂದೇಶ ವಿವಾದದ ಸ್ವರೂಪ ಪಡೆದಿದೆ.

ಕಾಲೇಜಿನ ಇಂತಹ ನಡೆ ಖಂಡಿಸಿ ಎನ್‌ಎಸ್‌ಯುಐ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಹಾಲಿ ಸಂಸದರೂ ಆಗಿರುವ ತೇಜಸ್ವಿ ಸೂರ್ಯ ಅವರ ಸಮಾವೇಶದಲ್ಲಿ ಭಾಗವಹಿಸುವಂತೆ ಕಾಲೇಜಿನ ವಿದ್ಯಾರ್ಥಿಗಳ ತರಗತಿವಾರು ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಬುಧವಾರ ಸಂದೇಶ ಹಾಕಲಾಗಿತ್ತು. ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಂದಿನ ಹಾಜರಾತಿ ನೀಡುವ ಭರವಸೆಯನ್ನೂ ನೀಡಲಾಗಿತ್ತು. ಈ ಬಗ್ಗೆ ಹಲವು ವಿದ್ಯಾರ್ಥಿಗಳು ಸಾಮಾಜಿಕ ಜಾಲ ತಾಣಗಳಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಾಂಶುಪಾಲರನ್ನೂ ಪ್ರಶ್ನಿಸಿದ್ದರು.

‘ತೇಜಸ್ವಿ ಸೂರ್ಯ ಅವರು ಹಿಂದೆ ನಮ್ಮ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ. ಹಾಗಾಗಿ, ಅವರನ್ನು ಬೆಂಬಲಿಸಬೇಕು. ಎಲ್ಲ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆ 9ಕ್ಕೆ ಜಯನಗರದ ಹೋಟೆಲ್‌ ಬಳಿ ಸೇರಬೇಕು. ಸಮಯಕ್ಕೆ ಸರಿಯಾಗಿ ಬಂದವರಿಗೆ ಟೀ–ಶರ್ಟ್‌ಗಳನ್ನು ನೀಡಲಾಗುವುದು. ಯಾರೂ ಗೈರು ಹಾಜರಾಗಬಾರದು’ ಎಂದು ಸಂದೇಶ ನೀಡಲಾಗಿತ್ತು.   

ಈ ಸಂದೇಶಗಳನ್ನು ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿರುವ ಕೆಪಿಸಿಸಿ ಹಾಗೂ ಬೆಂಗಳೂರು ದಕ್ಷಿಣದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ, ಕಾಲೇಜು ಹಾಗೂ ತೇಜಸ್ವಿ ಸೂರ್ಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಲೇಜು ಆಡಳಿತ ಮಂಡಳಿ, ‘ವಾಟ್ಸ್‌ಆ್ಯಪ್‌ ಸಂದೇಶಗಳಿಗೂ ಕಾಲೇಜಿಗೂ ಯಾವ ಸಂಬಂಧವೂ ಇಲ್ಲ. ಕೆಲ ವಿದ್ಯಾರ್ಥಿಗಳು ಇಂತಹ ಸಂದೇಶ ಕಳುಹಿಸಿದ್ದಾರೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದೇವೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT