ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಮರು ನಿರ್ಮಾಣ: 15 ದಿನಗಳಲ್ಲಿ ‘ಮಾದರಿ ಮನೆ’ ಸಿದ್ಧ

ನಿರಾಶ್ರಿತರ ಪುನರ್ವಸತಿಗೆ 110 ಎಕರೆ ಜಾಗ ಗುರುತು
Last Updated 25 ಸೆಪ್ಟೆಂಬರ್ 2018, 13:56 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಮೂರು ಮಾದರಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ ಒಂದು ಮನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ತಾಲ್ಲೂಕಿನ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ಆರ್‌ಟಿಒ ಕಚೇರಿ ಬಳಿ ‘ಕಾಂಪೋಸಿಟ್‌ ಟೆಕ್ನಾಲಜಿಸ್‌ ಸಂಸ್ಥೆ’ ನಿರ್ಮಿಸುತ್ತಿರುವ ಮಾದರಿ ಮನೆಗೆ ಕಾರ್ಮಿಕರು ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಕೊಡಗಿನಲ್ಲಿ ಪುನರ್ವಸತಿ ಕಾರ್ಯ ಚುರುಕಾಗಿದ್ದು ನಿವೇಶನ ಗುರುತಿಸಿದ ಸ್ಥಳದಲ್ಲಿ ಬಡಾವಣೆ ನಿರ್ಮಾಣಕ್ಕೂ ಜಿಲ್ಲಾಡಳಿತ ಮುಂದಾಗಿದೆ. ಪುನರ್ವಸತಿಗೆ 110 ಎಕರೆ ಜಾಗ ಗುರುತಿಸಿದ್ದು ಅಲ್ಲಿ ಚರಂಡಿ, ಉದ್ಯಾನ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲೂ ಯೋಜನೆ ರೂಪಿಸಲಾಗಿದೆ.

ನಿರಾಶ್ರಿತರಿಗೆ ಅನುಕೂಲವಾಗುವ ಸ್ಥಳದಲ್ಲಿ ಮನೆ ನಿರ್ಮಿಸಿಕೊಡಲು ನಿರ್ಧರಿಸಲಾಗಿದ್ದು, ಅವರು ಆಯ್ಕೆ ಮಾಡಿದ ಮಾದರಿ ಮನೆಯನ್ನೇ ಅಂತಿಮವಾಗಿ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಹೇಗಿದೆ ಮನೆ?: ಕೊಡಗು ಜಿಲ್ಲೆಯ ಮಳೆ, ಗಾಳಿ, ಗುಡ್ಡಗಾಡಿನ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ ಈ ಮನೆಗಿದೆ. ದೀರ್ಘಕಾಲ ಬಾಳಿಕೆ ಬರುವ ಸಾಮಗ್ರಿ ಬಳಸಿ ನಿರ್ಮಿಸಲಾಗುತ್ತಿದೆ ಎಂದು ಸಿವಿಲ್ ಎಂಜಿನಿಯರ್‌ ಒಬ್ಬರು ತಿಳಿಸಿದರು.

ಅಂದಾಜು ₹ 6 ಲಕ್ಷ ವೆಚ್ಚದಲ್ಲಿ ‘ಕಾಂಪೋಸಿಟ್‌ ಟೆಕ್ನಾಲಜಿಸ್‌ ಸಂಸ್ಥೆ’ಯು ಮಾದರಿ ಮನೆ ನಿರ್ಮಿಸುತ್ತಿದ್ದು ಅದರಲ್ಲಿ ಪ್ರವೇಶ ದ್ವಾರ, ಒಂದು ಮಲಗುವ ಕೋಣೆ, ಅಡುಗೆ ಕೋಣೆ, ಪ್ರತ್ಯೇಕ ಶೌಚಾಲಯ ಹಾಗೂ ಸ್ನಾನಗೃಹದ ವ್ಯವಸ್ಥೆಯಿದೆ. ಟೈಲ್ಸ್‌, ವಿದ್ಯುತ್‌ ಸಂಪರ್ಕ, ಸುಣ್ಣ–ಬಣ್ಣ ಬಳಿಯುವ ಕಾರ್ಯ ಮಾತ್ರ ಬಾಕಿ ಉಳಿದಿದೆ.

ಮತ್ತೊಂದು ಮಾದರಿ ಮನೆಯನ್ನು ‘ರಾಜೀವ್‌ ಗಾಂಧಿ ಹೌಸಿಂಗ್‌ ಕಾರ್ಪೊರೇಷನ್‌’ ನಿರ್ಮಾಣ ಮಾಡುತ್ತಿದ್ದು ಅದರ ಕಾಮಗಾರಿ ಶೇ 70ರಷ್ಟು ಪೂರ್ಣಗೊಂಡಿದೆ. ಮನೆಯಲ್ಲಿ ಒಂದು ಕುಟುಂಬಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳು ಇರಲಿವೆ. ಈ ಮನೆಗೆ ಅಂದಾಜು ₹ 6.50 ಲಕ್ಷ ವೆಚ್ಚವಾಗಲಿದೆ. ಇನ್ನೊಂದು ಕೊಠಡಿ ವಿಸ್ತರಣೆ, ಭವಿಷ್ಯದಲ್ಲಿ ಮೇಲಂತಸ್ತು ನಿರ್ಮಿಸಲು ಸಾಧ್ಯವಿದೆ. ಈ ಮಾದರಿಯ ಕಾಮಗಾರಿ ಒಂದು ವಾರದಲ್ಲಿ‍ಪೂರ್ಣಗೊಳ್ಳಲಿದೆ’ ಎಂದು ಪ್ರಾಜೆಕ್ಟ್‌ ಎಂಜಿನಿಯರ್‌ ಹರ್ಷ ಹೇಳಿದರು.

ಎರಡು ಮಲಗುವ ಕೋಣೆಯ ವ್ಯವಸ್ಥೆಯುಳ್ಳ ಮನೆಯನ್ನು ‘ಆರ್‌.ವಿ. ಟೈಫಿಕ್‌’ ಎಂಬ ಸಂಸ್ಥೆಯು ಅದೇ ಸ್ಥಳದಲ್ಲಿ ನಿರ್ಮಿಸುತ್ತಿದೆ. ಆ ಮನೆಗೆ ₹ 9ರಿಂದ ₹ 10 ಲಕ್ಷ ವೆಚ್ಚವಾಗಲಿದೆ. ಆದರೆ, ಸರ್ಕಾರ ಪ್ರತಿ ಮನೆಗೆ ₹ 7 ಲಕ್ಷ ವೆಚ್ಚ ನಿಗದಿಪಡಿಸಿದ್ದು ಮನೆಯ ಆಯ್ಕೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.

ಆಧುನಿಕ ತಂತ್ರಜ್ಞಾನ ಬಳಸಿ ಒಂದು ಮನೆಯನ್ನು ಕೇವಲ 15 ದಿನಗಳಲ್ಲಿ ನಿರ್ಮಿಸಲಾಗಿದ್ದು, ಸೂರಿನ ಕನಸಿನಲ್ಲಿರುವ ನಿರಾಶ್ರಿತರಲ್ಲಿ ಹೊಸ ಭರವಸೆ ಮೂಡಿಸಿದೆ. ಸೆ. 11ಕ್ಕೆ ಅಡಿಪಾಯ ಕೆಲಸ ಆರಂಭಿಸಲಾಗಿತ್ತು.

‘ಪ್ರಥಮ ಹಂತದಲ್ಲಿ 900 ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮನೆ ಆಯ್ಕೆ ಅಂತಿಮವಾಗಲಿದೆ’ ಎಂದು ವಿಶೇಷ ಜಿಲ್ಲಾಧಿಕಾರಿ ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT