ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಪವಾಗಿ ಪರಿಣಮಿಸಿದ ಕೊರೊನಾ ಸೋಂಕು: ಶೆಡ್‍ ಖಾಲಿ ಮಾಡಿ ಹೋದ ಕೂಲಿ ಕಾರ್ಮಿಕರು

ನಿರಾಶ್ರಿತರಿಗೆ ದೊರೆಯುತ್ತಿಲ್ಲ ಸರ್ಕಾರದ ಸವಲತ್ತು
Last Updated 17 ಏಪ್ರಿಲ್ 2020, 2:08 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಕೂಲಿ ಮಾಡಿ ಹೊಟ್ಟೆ ಹೊರೆಯಲು ನಗರಕ್ಕೆ ಬಂದ ಕೂಲಿ ಕಾರ್ಮಿಕರಿಗೆ ಕೊರೊನಾ ಸೋಂಕು ಶಾಪವಾಗಿ ಪರಿಣಮಿಸಿದೆ. ಇತ್ತ ತಮ್ಮ ಊರಿಗೂ ಮರಳಲು ಆಗದೇ ಅತ್ತ ಗುಡಿಸಲುಗಳಲ್ಲೂ ವಾಸಿಸಲು ಸಾಧ್ಯವಾಗದೇ ಕೂಲಿ ಕಾರ್ಮಿಕರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಕೊನೆಗೂ ದೇವರ ಮೇಲೆ ಭಾರ ಹಾಕಿ ಅನೇಕ ಕಾರ್ಮಿಕರು ನಗರದಿಂದ ಗುಳೆ ಹೋಗಿದ್ದಾರೆ.

ಸುಂಕದಕಟ್ಟೆಯ ಹೊಯ್ಸಳ ನಗರದಲ್ಲಿ ರಸ್ತೆ ಪಕ್ಕದಲ್ಲಿ 25ಕ್ಕೂ ಹೆಚ್ಚು ಶೆಡ್‌ಗಳಲ್ಲಿ ಕಾರ್ಮಿಕರು ನೆಲೆಸಿದ್ದರು. ಐದು ದಿನಗಳ ಹಿಂದಿನವರೆಗೂ ಇಲ್ಲಿ ನೆಲೆಸಿದ್ದ ಹೆಚ್ಚಿನ ಕುಟುಂಬಗಳು ಜಾಗ ಖಾಲಿ ಮಾಡಿವೆ. ಈಗ ಇಲ್ಲಿ ಮೂರು ಶೆಡ್‌ಗಳಲ್ಲಿ ಮಾತ್ರ ಕಾರ್ಮಿಕರು ಉಳಿದುಕೊಂಡಿದ್ದಾರೆ.

ಕೂಲಿ ಕಾರ್ಮಿಕರಿಗೆ ದಿನಸಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದುಸರ್ಕಾರ ಹೇಳುತ್ತಿದೆ.ಸಂಘ ಸಂಸ್ಥೆಗಳು ಆಹಾರ ವಿತರಿಸುವ ಕುರಿತವರದಿಗಳುಪತ್ರಿಕೆಗಳಲ್ಲಿ ಟಿವಿ ಸುದ್ದಿವಾಹಿನಿಗಳಲ್ಲಿ ಪ್ರಕಟವಾಗುತ್ತಲೇ ಇವೆ. ಆದರೆ, ‘ನಮಗೆ ಯಾವುದೇ ಸವಲತ್ತುಗಳೂ ಸಿಗುತ್ತಿಲ್ಲ. ಕುಡಿಯಲು ಒಂದು ಬಿಂದಿಗೆ ನೀರು ಕೊಡಲೂ ಅಕ್ಕಪಕ್ಕದ ನಿವಾಸಿಗಳು ಮನಸ್ಸು ಮಾಡುತ್ತಿಲ್ಲ. ಅವರನ್ನು ಕಾಡಿ ಬೇಡಿ ನೀರು ಪಡೆಯುವಷ್ಟರಲ್ಲಿ ಹೈರಾಣಾಗುತ್ತಿದ್ದೇವೆ’ ಎಂದು ಇಲ್ಲಿ ಉಳಿದುಕೊಂಡಿರುವ ಕಾರ್ಮಿಕರು ಅಳಲು ತೋಡಿಕೊಂಡರು.

‘ಲಾಕ್‌ಡೌನ್‌ ಘೋಷಣೆ ಆದ ಮೊದಲ ವಾರ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸ್‌ ಅಧಿಕಾರಿಗಳಾದ ವಿ.ಹನುಮಂತರಾಜು ಮತ್ತು ಪ್ರಕಾಶ್‍ ನಾಯ್ಕ ಅವರು ಹೋಟೆಲ್‍ನಿಂದ ಆಹಾರ ಪೊಟ್ಟಣ ತರಿಸಿ ನೀಡಿದ್ದರು. ಸಮೃದ್ಧಿ ಹೋಟೆಲ್ ಮಾಲೀಕರು ಒಂದಷ್ಟು ಮಂದಿಗೆ ಉಚಿತ ಆಹಾರ ನೀಡುತ್ತಿದ್ದಾರೆ. ಆದರೆ, ನಮ್ಮ ಹಸಿವು ನೀಗಿಸಲು ಅದು ಸಾಕಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಕೊನೆಯಾಗಿಲ್ಲ. ಈ ಕಾರಣದಿಂದಲೇ ಅಕ್ಕ ಪಕ್ಕದ ಶೆಡ್‌ಗಳಲ್ಲಿದ್ದ ಕಾರ್ಮಿಕರು ರಾತ್ರೋ ರಾತ್ರಿ ಜಾಗ ಖಾಲಿ ಮಾಡಿದ್ದಾರೆ’ ಎಂದು ಕಾರ್ಮಿಕರೊಬ್ಬರು ತಿಳಿಸಿದರು.

‘ಇದ್ದ ಹಣವನ್ನೆಲ್ಲಾ ಖಾಲಿ ಮಾಡಿಕೊಂಡಿರುವ ನಾವುಗಳು ಊರಿಗೂ ಮರಳಲಾಗದ ಪರಿಸ್ಥಿತಿಗೆ ತಲುಪಿದ್ದೇವೆ. ಇಲ್ಲೇ ಇದ್ದು ಹೇಗಾದರೂ ಜೀವ ಉಳಿಸಿಕೊಳ್ಳೋಣ ಎಂದರೆ ಕೊರೊನಾ ಸೋಂಕಿನ ಭಯದಿಂದಾಗಿ ಅಕ್ಕಪಕ್ಕದ ನಿವಾಸಿಗಳು ನಮ್ಮನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ’ ಎಂದು ಯಾದಗಿರಿಯಿಂದ ವಲಸೆ ಬಂದಿದ್ದ ಕೂಲಿಕಾರ್ಮಿಕ ತಿಪ್ಪಣ್ಣ ನೋವು ತೋಡಿಕೊಂಡರು.

ಸ್ಥಳೀಯ ನಿವಾಸಿ ಹನುಮಂತರಾಜು, ‘ಸರ್ಕಾರದಿಂದ ಉಚಿತವಾಗಿ ವಿತರಿಸುವ ಹಾಲು, ಆಹಾರದ ಪೊಟ್ಟಣ, ದಿನಸಿ ಪದಾರ್ಥಗಳ ಕಿಟ್‍ಗಳನ್ನುಜನನಾಯಕರು, ಸಂಘ ಸಂಸ್ಥೆಗಳು, ಅಧಿಕಾರಿಗಳು ತಮಗೆ ಬೇಕಾದವರಿಗೆ ಮಾತ್ರ ಹಂಚುತ್ತಿದ್ದಾರೆ. ಕೂಲಿ ಕಾರ್ಮಿಕರನ್ನು ಗುರುತಿಸಿ ಅವರಿಗೂ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಬೇಕು’ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT