ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ರೇವಣ್ಣ ಪ್ರಕರಣ: ಸಿಬಿಐ ತನಿಖೆ ಅನಗತ್ಯ–ಜಿ.ಪರಮೇಶ್ವರ

Published 8 ಮೇ 2024, 15:46 IST
Last Updated 8 ಮೇ 2024, 15:46 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದರು.

‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ್ದವರು. ಎಸ್‌ಐಟಿ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದು ಅವರಿಗೆ ಗೊತ್ತಿದೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ. ತನಿಖೆ ಯಾವ ರೀತಿ ಮುಂದುವರಿದೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಎಸ್‌ಐಟಿ ತನಿಖೆ ಸರಿಯಾದ ದಾರಿಯಲ್ಲೇ ಹೋಗುತ್ತಿದೆ. 2008ರಿಂದ 2013ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಯಾವುದೇ ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ. ಕೆಲವು ಪ್ರಕರಣಗಳಲ್ಲಿ ಸಿಬಿಐ ಕೊಟ್ಟ ವರದಿಯನ್ನು ಜನರು ಒಪ್ಪಿರಲಿಲ್ಲ. ಅಂತಹ ಪ್ರಕರಣಗಳಲ್ಲಿ ಸಿಬಿಐ ಕಾರ್ಯವೈಖರಿಯನ್ನು ಟೀಕಿಸಿರುವುದನ್ನೂ ನೋಡಿದ್ದೇವೆ. ಸಿಬಿಐ ಅಂದ ತಕ್ಷಣ ಏನೋ ಆಗಿ ಬಿಡುತ್ತದೆ ಎಂಬ ಕಲ್ಪನೆ ಬೇಡ’ ಎಂದೂ ಪರಮೇಶ್ವರ ತಿಳಿಸಿದರು.

‘ಪೆನ್‌ಡ್ರೈವ್ ಹಂಚಿಕೆ ಹಾಗೂ ಬಹಿರಂಗದ ಬಗ್ಗೆಯೂ ತನಿಖೆ ಆಗಲಿದೆ. ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಅವರನ್ನು ವಿಚಾರಣೆ ನಡೆಸುವ ನಿರ್ಧಾರವನ್ನು ಎಸ್‌ಐಟಿ ಮಾಡಲಿದೆ. ಪ್ರಕರಣದಲ್ಲಿ ಕೆಲವರನ್ನು ವಿಚಾರಣೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಯಾವಾಗ ವಿಚಾರಣೆ ನಡೆಸಬೇಕು, ಯಾವಾಗ ಬಂಧಿಸಬೇಕು ಎಂಬುದು ನಮ್ಮ ಕೈಯಲ್ಲಿ ಇಲ್ಲ. ಇವೆಲ್ಲವನ್ನು ಎಸ್‌ಐಟಿ ನಿರ್ಧರಿಸಲಿದೆ’ ಎಂದು ಅವರು ಹೇಳಿದರು.

‘ನಿಖರವಾದ ಸಾಕ್ಷ್ಯಗಳಿಲ್ಲದೇ ದೇವರಾಜೇಗೌಡ ಮತ್ತು ಕಾರ್ತಿಕ್ ಅವರನ್ನು ಬಂಧಿಸಲು ಸಾಧ್ಯವಾಗುವುದಿಲ್ಲ.  ಅವರ ಹೇಳಿಕೆಗಳನ್ನು ಎಸ್‌ಐಟಿ ದಾಖಲಿಸಿಕೊಂಡಿದೆ. ಹೇಳಿಕೆಯನ್ನು ಪುನರ್‌ಪರಿಶೀಲಿಸುತ್ತಾರೆ. ಈ ಪ್ರಕರಣದಲ್ಲಿ ಸಂತ್ರಸ್ತರನ್ನು ಹೊರತುಪಡಿಸಿ ಇಂತಹವರಿಗೆಲ್ಲ ರಕ್ಷಣೆ ಕೊಡುವುದಿಲ್ಲ. ಬಂಧಿಸಲು ಅಗತ್ಯವಿರುವ ಸಾಕ್ಷ್ಯಗಳು ಸಿಕ್ಕ ಕೂಡಲೇ ಬಂಧಿಸಲಾಗುವುದು’ ಎಂದು ಪರಮೇಶ್ವರ ವಿವರಿಸಿದರು.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಇಂಟರ್‌ಪೋಲ್ ನೋಟಿಸ್: ಏನು, ಎತ್ತ’ ಎಂಬ ಲೇಖನದ ಕುರಿತು ಪರಮೇಶ್ವರ ಸುದ್ದಿಗೋಷ್ಠಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಬೆನ್ನುಮೂಳೆ ಇರೋದಕ್ಕೆ ಅಧಿಕಾರ ನೀಡಿದ್ದಾರೆ’

‘ನನಗೆ ಬೆನ್ನುಮೂಳೆ ಇರುವುದರಿಂದಲೇ ರಾಜ್ಯದ ಜನ 135 ಕ್ಷೇತ್ರಗಳಲ್ಲಿ ಗೆಲ್ಲಿಸಿ ಅಧಿಕಾರ ನೀಡಿದ್ದಾರೆ’ ಎಂದ ಪರಮೇಶ್ವರ ಅವರು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು. ‘ಕುಮಾರಸ್ವಾಮಿ ಅವರಿಗೆ ತಾವೇ ಅಧಿಕಾರದಲ್ಲಿ ಕೂರಬೇಕು ಎಂಬ ಆಸೆ ಇತ್ತು. ಪಾಪ ಅದು ಅವರಿಗೆ ಆಗಲಿಲ್ಲ. ನಾವು ಅಧಿಕಾರದಲ್ಲಿದ್ದೀವಿ ಅಂತ ಕುಮಾರಸ್ವಾಮಿ ಸಂತೋಷ ಪಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT