ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ; ಮೀಸಲಿನಲ್ಲಿ ಲೋಪ?

ಸಮಾಜ ಕಲ್ಯಾಣ ಇಲಾಖೆ ವಿರುದ್ಧ ಅವಕಾಶವಂಚಿತ ಅಭ್ಯರ್ಥಿಗಳ ಆರೋಪ
Published 1 ಮೇ 2024, 0:54 IST
Last Updated 1 ಮೇ 2024, 0:54 IST
ಅಕ್ಷರ ಗಾತ್ರ

ಮೈಸೂರು: ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಸಕ್ತರಿಗೆ ನೀಡುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮೀಸಲಾತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆ ಇಲಾಖೆಯು ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಯುಪಿಎಸ್‌ಸಿ, ಕೆಎಎಸ್‌ ಜೊತೆಗೆ ಗ್ರೂಪ್ ‘ಸಿ’, ಆರ್‌ಆರ್‌ಬಿ, ಬ್ಯಾಂಕಿಂಗ್‌, ಎಸ್‌ಎಸ್‌ಸಿ, ನ್ಯಾಯಾಂಗ ಸೇವೆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಪೂರ್ವಭಾವಿ ತರಬೇತಿ ನೀಡುತ್ತಿದೆ. ತರಬೇತಿಗೆ ಆಯ್ಕೆಯಾದವರು ತರಬೇತಿ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಮಂಗಳವಾರ (ಏ.30) ಕಡೆಯ ದಿನವಾಗಿತ್ತು.

ಈ ತರಬೇತಿಗೆ ಲಭ್ಯವಿರುವ ಒಟ್ಟು ಸೀಟುಗಳಲ್ಲಿ ಮೆರಿಟ್‌ ವರ್ಗಕ್ಕೆ ಶೇ 38ರಷ್ಟು, ಅಂಗವಿಕಲರಿಗೆ ಶೇ 4ರಷ್ಟು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಶೇ 10ರಷ್ಟು, ವಸತಿ ಶಾಲೆಗಳಿಗೆ ಶೇ 10ರಷ್ಟು, ಮಹಿಳಾ ಅಭ್ಯರ್ಥಿಗಳಿಗೆ ಶೇ 33ರಷ್ಟು, ಸೂಕ್ಷ್ಮ, ಅತಿಸೂಕ್ಞ್ಮ ಸಮುದಾಯಗಳು ಹಾಗೂ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಶೇ 5ರಷ್ಟು ಮೀಸಲಾತಿ ಇದೆ.

ಪಟ್ಟಿಯಲ್ಲಿ ಮೊದಲು ಶೇ 38ರಷ್ಟು ಸೀಟುಗಳಿಗೆ ಅಂಕಗಳ ಆಧಾರದ ಮೇಲೆ ಮೆರಿಟ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಉಳಿದಂತೆ ಅವರ ಅರ್ಹತೆ ಅನುಸಾರ ಉಳಿದ ಮೀಸಲಾತಿಗೆ ಪರಿಗಣಿಸುವುದು ವಾಡಿಕೆ. ಆದರೆ, 2023–23ನೇ ಸಾಲಿನ ಆಯ್ಕೆ ಪಟ್ಟಿಯಲ್ಲಿ ಈ ನಿಯಮಗಳನ್ನು ಪಾಲಿಸಿಲ್ಲ ಎನ್ನುವುದು ಆವಕಾಶ ವಂಚಿತರ ಆರೋಪವಾಗಿದೆ.

‌ಪರಿಗಣಿಸಿದ್ದು ಬೇರೆ:

ಉದಾಹರಣೆಗೆ, ಯುಪಿಎಸ್‌ಸಿ ಪರೀಕ್ಷೆ ಪೂರ್ವಭಾವಿ ತರಬೇತಿಗೆ ಆಯ್ಕೆಯಾಗಿರುವವರ ಪಟ್ಟಿಯಲ್ಲಿ ಒಬ್ಬ ಅಭ್ಯರ್ಥಿ 87 ‘ಸಿಇಟಿ ಅಂಕ’ಗಳೊಂದಿಗೆ ಮೊದಲ ಸ್ಥಾನದಲ್ಲಿ ಇದ್ದಾರೆ. ಈ ಅಭ್ಯರ್ಥಿಯು ಹಾಸ್ಟೆಲ್‌ ವಿದ್ಯಾರ್ಥಿ ಆಗಿರುವುದರಿಂದ ಅತಿ ಹೆಚ್ಚು ಅಂಕ ಪಡೆದಿದ್ದರೂ ಇವರನ್ನು ಸಾಮಾನ್ಯ ಅಭ್ಯರ್ಥಿ ಬದಲಿಗೆ ‘ಹಾಸ್ಟೆಲ್‌ ಅಭ್ಯರ್ಥಿ ಮೀಸಲಾತಿ ಕೋಟ’ ಅಡಿ ಪರಿಗಣಿಸಲಾಗಿದೆ.

ಲಭ್ಯ ಇರುವ ಒಟ್ಟು ಸೀಟುಗಳಲ್ಲಿ ಶೇ 10ರಷ್ಟು ಮೀಸಲಾತಿ ಪ್ರಕಾರ 75 ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಇವರ ಕಟ್‌ ಆಫ್‌ ಅಂಕ 68ಕ್ಕೆ ನಿಂತಿದೆ. ಆದರೆ, ಮೆರಿಟ್ ಕಟ್‌ ಆಫ್‌ ಅಂಕವೇ 66ಕ್ಕೆ ನಿಂತಿದೆ. ಮಹಿಳೆಯರು, ಅಂಗವಿಕಲರೂ ಸೇರಿದಂತೆ ಇತರೆ ವರ್ಗದವರನ್ನೂ ಹೀಗೆಯೇ ಪರಿಗಣಿಸಲಾಗಿದೆ. ಇದರಿಂದ ಪ್ರತಿಭಾವಂತರಿಗೆ ಅನ್ಯಾಯ ಆಗಿದೆ ಎನ್ನುವುದು ಅಭ್ಯರ್ಥಿಗಳ ದೂರು.

‘ಕಳೆದ 7–8 ವರ್ಷಗಳಿಂದ ಕೇಂದ್ರವು ತರಬೇತಿ ನೀಡುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿ ಸರ್ಕಾರದ ಸಾಮಾನ್ಯ ಮೀಸಲಾತಿ ನಿಯಮಗಳನ್ನೇ ಪಾಲಿಸುತ್ತ ಬರಲಾಗಿದೆ. ಆದರೆ, ಇದೇ ಮೊದಲ ಬಾರಿಗೆ ಇದನ್ನು ಬದಲಿಸಿದ್ದು, ನೂರಾರು ಮಂದಿ ಅವಕಾಶ ವಂಚಿತರಾಗಿದ್ದೇವೆ. ಅಧಿಕಾರಿಗಳು, ಸಹಾಯವಾಣಿಗೆ ಈ ಬಗ್ಗೆ ದೂರಿದ್ದರೂ ಪ್ರಯೋಜನ ಆಗಿಲ್ಲ’ ಎಂದು ಅಭ್ಯರ್ಥಿಗಳು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

ಹಿಂದಿನ ವರ್ಷಗಳಂತೆಯೇ ಮೀಸಲು ಮಾನದಂಡ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎನ್ನುವುದು ಅವಕಾಶ ವಂಚಿತರ ಆಗ್ರಹವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆಗೆ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಯಾವುದೇ ಪ್ರಕ್ರಿಯೆಯಲ್ಲಿ ಮೊದಲು ಮೆರಿಟ್‌ ಹಾಗೂ ನಂತರದಲ್ಲಿ ಇತರೆ ಮೀಸಲಾತಿಯನ್ನು ಪರಿಗಣಿಸುವ ನಿಯಮವಿದೆ. ಆದರೆ ಇಲ್ಲಿ ಇದು ತದ್ವಿರುದ್ದ ಆಗಿದ್ದು ನೂರಾರು ಮಂದಿ ಅವಕಾಶ ವಂಚಿತರಾಗಿದ್ದೇವೆ
ಆರ್‌.ಪಿ. ಮಧು ಅವಕಾಶ ವಂಚಿತ ಅಭ್ಯರ್ಥಿ
ಅಭ್ಯರ್ಥಿಗಳಿಗೆ ಮೀಸಲು ಪಟ್ಟಿಯಲ್ಲಿ ಬದಲಾವಣೆ ಆಗಿರುವ ಕುರಿತು ಗಮನಕ್ಕೆ ಬಂದಿಲ್ಲ. ಆ ರೀತಿ ಏನಾದರೂ ಲೋಪ ಆಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ
ಕೆ. ರಾಕೇಶ್‌ಕುಮಾರ್‌ ಆಯುಕ್ತ ಸಮಾಜ ಕಲ್ಯಾಣ ಇಲಾಖೆ

ಏನಿದು ತರಬೇತಿ?

ಸಮಾಜ ಕಲ್ಯಾಣ ಇಲಾಖೆಯು ಪರೀಕ್ಷಾ ತರಬೇತಿ ಕೇಂದ್ರದ ಮೂಲಕ ಯುಪಿಎಸ್‌ಸಿ ಸೇರಿದಂತೆ 7 ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಈ ತರಬೇತಿ ನೀಡುತ್ತಿದೆ. ಯುಪಿಎಸ್‌ಸಿ ಪರೀಕ್ಷೆ ಎದುರಿಸುವವರಿಗೆ 6 ತಿಂಗಳ ಪ್ರಿಲಿಮ್ಸ್ ಹಾಗೂ 3 ತಿಂಗಳ ಮೇನ್ಸ್‌ ತರಬೇತಿ ಹಾಗೂ ಕೆಎಎಸ್‌ಗೆ 7 ತಿಂಗಳ ತರಬೇತಿ ಉಳಿದ ಪರೀಕ್ಷೆಗಳಿಗೆ 3 ತಿಂಗಳ ತರಬೇತಿ ಇದೆ. ಅಭ್ಯರ್ಥಿಗಳು ಪರೀಕ್ಷೆ ತರಬೇತಿಗೆ ದೆಹಲಿ ಹೈದರಾಬಾದ್ ಬೆಂಗಳೂರು ನಗರಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಇದಕ್ಕೆ ತಕ್ಕಂತೆ ತಿಂಗಳಿಗೆ ₹6 ಸಾವಿರದಿಂದ 10 ಸಾವಿರದವರೆಗೆ ಶಿಷ್ಯವೇತನವೂ ಸಿಗಲಿದೆ. 2023–24ನೇ ಸಾಲಿಗೆ ಯುಪಿಎಸ್‌ಸಿ ಹಾಗೂ ಕೆಎಸ್‌ಎಸ್ ತರಬೇತಿಗೆ ತಲಾ 750 ಸೇರಿದಂತೆ ಒಟ್ಟು 3500 ಅಭ್ಯರ್ಥಿಗಳಿಗೆ ತರಬೇತಿಗಾಗಿ ಕಳೆದ ವರ್ಷ ನವೆಂಬರ್‌ನಲ್ಲಿ ಅರ್ಜಿ ಆಹ್ವಾನಿಸಿದ್ದು ಒಟ್ಟು 32541 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ನಂತರದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT