ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಮನೆ: ಸಹಸ್ರ ವಿಘ್ನೇಶ್ವರ

ಐದು ವರ್ಷದಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ
Last Updated 4 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ತುಮಕೂರು: ಗಣೇಶ ಚತುರ್ಥಿ ಎಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಖುಷಿ, ಸಂಭ್ರಮ. ಕೆಲವರು ವಿಘ್ನ ನಿವಾರಿಸಲೆಂದು ಹರಕೆ ಹೊತ್ತು ಪೂಜೆ ಮಾಡಿದರೆ, ಮತ್ತೆ ಕೆಲವರು ಮನೆಯಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪಿಸುವುದು ಹೆಮ್ಮೆ ಮತ್ತು ಆತನಿಗೆ ಸಲ್ಲಿಸುವ ಗೌರವ ಎಂದು ಭಾವಿಸುತ್ತಾರೆ.

ತುಮಕೂರಿನ ವಿದ್ಯಾನಗರ ನಿವಾಸಿ ಕೆ.ಎಸ್. ವನಿತಾರಾಣಿ ಶ್ರೀಧರಬಾಬು ದಂಪತಿ ತಮ್ಮ ಮನೆಯಲ್ಲಿ ಐದು ವರ್ಷದಿಂದ ಗಣೇಶನ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಎಲ್ಲರಂತೆ ಇವರೂ ಗಣೇಶನ ಪೂಜೆ ಮಾಡಿದರೆ ವಿಶೇಷ ಇರುತ್ತಿರಲಿಲ್ಲ. ಆದರೆ, ಈ ದಂಪತಿ ಮಾಡುತ್ತಿರುವ ಪೂಜೆ ಇತರರಿಗಿಂತ ವಿಭಿನ್ನವಾಗಿದೆ.

ಮನೆಯಲ್ಲಿ ಸಾಮಾನ್ಯವಾಗಿ ಒಂದು ಅಥವಾ ಜೋಡಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವುದು ನೋಡಿದ್ದೇವೆ. ಆದರೆ, ಈ ಮನೆಯಲ್ಲಿ ಬರೊಬ್ಬರಿ 1111 ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದ್ದಾರೆ.

500 ಗಣಪನ ಮೂರ್ತಿ ಪ್ರತಿಷ್ಠಾಪನೆಯಿಂದ ಆರಂಭಿಸಿ ಈಗ 1111 ಕ್ಕೆ ಬಂದು ನಿಂತಿದೆ. ವರ್ಷದಿಂದ ವರ್ಷಕ್ಕೆ ಗಣಪನ ಮೂರ್ತಿಗಳ ಸಂಖ್ಯೆ ಹೆಚ್ಚಿಸುತ್ತಿದ್ದಾರೆ. ಗಣೇಶ ಚತುರ್ಥಿ ಇನ್ನೂ ಒಂದು ವಾರ ಇರುವಾಗಲೇ ಈ ಮನೆಯಲ್ಲಿ ಗಣೇಶನ ಗಲಾಟೆ ಶುರುವಾಗುತ್ತದೆ.

ಮನೆಗೆ ಸುಣ್ಣ ಬಣ್ಣ ಹಚ್ಚುವುದು. ವೇದಿಕೆ ಅಲಂಕಾರ ಮಾಡುವುದು, ಮಾರುಕಟ್ಟೆಯಲ್ಲಿರುವ ಹೊಸ ಹೊಸ ಮೂರ್ತಿಗಳನ್ನು ಗುರುತಿಸಿ ಖರೀದಿಸುವ ಕೆಲಸ ಆರಂಭಗೊಳ್ಳುತ್ತದೆ.

ವಿಭಿನ್ನ ಆಕಾರ: ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪನ ಮೂರ್ತಿಗಳು ಒಂದು ಮತ್ತೊಂದಕ್ಕೆ ಹೋಲಿಕೆ ಆಗುವುದಿಲ್ಲ. 1111 ಗಣೇಶನ ಮೂರ್ತಿಗಳು ವಿಭಿನ್ನವಾಗಿವೆ. ಒಂದೇ ಆಕಾರದ ಗಣಪ ಕೂಡಿಸುವುದಿಲ್ಲ.

ಒಂದು ಮತ್ತೊಂದಕ್ಕಿಂತ ಭಿನ್ನವಾಗಿರುವುದು ಇಲ್ಲಿನ ಮತ್ತೊಂದು ವಿಶೇಷ. ಇತಿಹಾಸ ಮತ್ತು ಪುರಾಣ ಕಥೆಗಳಲ್ಲಿ ಬರುವ ಗಣೇಶನ ವಿವಿಧ ಅವತಾರ ಮತ್ತು ವೇಷಭೂಷಣದಲ್ಲಿರುವ ಗಣಪ ಇಲ್ಲಿ ಇಡಲಾಗಿದೆ.

ಮನೆಯ ಮುಂಬಾಗಿಲಿನಿಂದ ಹಿಡಿದು ಅಡುಗೆ ಮನೆಯವರೆಗೆ ಎಲ್ಲಿ ಸ್ಥಳ ಇರುತ್ತೊ ಅಲ್ಲೆಲ್ಲ ವಿಗ್ರಹಗಳು ಕಣ್ಣಿಗೆ ಕಾಣುತ್ತವೆ. ಪಿರಮಿಡ್ ಆಕಾರದಲ್ಲಿ ಸಿದ್ಧಪಡಿಸಿರುವ ಟೇಬಲಿನ ನಾಲ್ಕು ಮಗ್ಗುಲಲ್ಲಿ ಅಚ್ಚು ಕಟ್ಟಾಗಿ ಗಣಪನ ಮೂರ್ತಿ ಇಟ್ಟಿರುವುದು ಗಮನ ಸೆಳೆಯುತ್ತದೆ.

ಮನೆಯಲ್ಲಿ ಹಿರಿಯರು ಒಂದೆರಡು ಗಣಪನ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದರು. ದೈವಭಕ್ತರಾಗಿರುವ ಈ ದಂಪತಿ  ಐದು ವರ್ಷದಿಂದ ಮೂರ್ತಿಗಳ ಸಂಖ್ಯೆ ಹೆಚ್ಚಿಸಿಕೊಂಡು ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT