ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಮಾರಿ ಶೌಚಾಲಯ ನಿರ್ಮಿಸಿದ ಅಕ್ಕಮ್ಮ !

6 ತಿಂಗಳಲ್ಲಿ 130 ಶೌಚಾಲಯ ನಿರ್ಮಾಣ
Last Updated 14 ಜೂನ್ 2016, 4:10 IST
ಅಕ್ಷರ ಗಾತ್ರ

ಕಲಬುರ್ಗಿ: ತಮ್ಮ ಹಾಗೂ ಪುತ್ರಿಯ ಬಂಗಾರದ ಆಭರಣಗಳನ್ನು ಮಾರಾಟ ಮಾಡಿದ್ದರಿಂದ ದೊರೆತ ₹96 ಸಾವಿರವನ್ನು ಗ್ರಾಮದ ಜನರಿಗೆ ಶೌಚಾಲಯ ನಿರ್ಮಿಸಿಕೊಡಲು ವಿನಿಯೋಗಿಸಿದ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ಅಕ್ಕಮ್ಮ ಹರವಾಳ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇವರು ಮೊದಲು ತಮ್ಮ ಹಣದಿಂದ ಫಲಾನುಭವಿಗಳಿಗೆ ಶೌಚಾಲಯವನ್ನು ನಿರ್ಮಿಸಿಕೊಡುತ್ತಾರೆ. ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಿದ ನಂತರ ಅದನ್ನು ವಾಪಸು ಪಡೆಯುತ್ತಾರೆ. ಇದೇ ರೀತಿ ಮಾಡಿ ಆರು ತಿಂಗಳಲ್ಲಿ  130 ಶೌಚಾಲಯಗಳನ್ನು  ನಿರ್ಮಿಸಿಕೊಟ್ಟಿದ್ದಾರೆ.  ಇದರ ಜೊತೆಗೆ ಹೊಸದಾಗಿ ನೂರಕ್ಕೂ  ಹೆಚ್ಚು ಜನರಿಗೆ ಶೌಚಾಲಯ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ಕೆಲವು ತಿಂಗಳ ಹಿಂದೆ ಸ್ವಸಹಾಯ ಸಂಘಗಳ ಸದಸ್ಯರಿಗೆ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಅರಿವು
ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರಲ್ಲಿ ಅಕ್ಕಮ್ಮ ಪಾಲ್ಗೊಂಡಿದ್ದರು. ಅಲ್ಲಿ ಶೌಚಾಲಯ ನಿರ್ಮಾಣದ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಂಡು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

‘ಹೊಟ್ಟಿಗೆ ಇಲ್ಲ, ಸಂಡಾಸ್‌ ಮನಿ ಯಾಕವ್ವ ಎನ್ನುವ ಜನರ ಮನವೊಲಿಸುವುದು ಅಷ್ಟು  ಸುಲಭದ ಕೆಲಸವಾಗಿರಲಿಲ್ಲ’ ಎನ್ನುತ್ತಾರೆ ಅಕ್ಕಮ್ಮ.

‘ಹರವಾಳ ಗ್ರಾಮದಲ್ಲಿ ಸುಮಾರು 20 ಸ್ವಸಹಾಯ ಮಹಿಳಾ ಗುಂಪುಗಳಿವೆ. ಅಲ್ಲಿನ ಮಹಿಳೆಯರೆಲ್ಲರನ್ನೂ  ಒಂದೆಡೆ ಸೇರಿಸಿ ಶೌಚಾಲಯ ಮಹತ್ವದ ಬಗ್ಗೆ ವಿವರಿಸಲಾಗಿತ್ತು. ಅಷ್ಟೂ ಸಂಘಗಳ ಸದಸ್ಯರ ಪೈಕಿ ಅಕ್ಕಮ್ಮ ಮುಂದೆ ಬಂದು ಶೌಚಾಲಯ ನಿರ್ಮಿಸಿಕೊಳ್ಳುವುದರ ಜೊತೆಗೆ ನೆರೆಹೊರೆಯವರು ಹಾಗೂ ಊರಿನ ವಿವಿಧ ಸಮುದಾಯಗಳ ಜನರ ಮನವೊಲಿಸಿ, ಶೌಚಾಲಯ ನಿರ್ಮಿಸಿ ಕೊಡುವ ಮಹತ್ತರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ’ ಎನ್ನುತ್ತಾರೆ ಹರವಾಳದ ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ ಹರವಾಳ.

ಶೌಚಾಲಯ ನಿರ್ಮಾಣಕ್ಕೆ ಅಕ್ಕಮ್ಮ ಗೌಂಡಿಗಳು ಹಾಗೂ ಮೇಸ್ತ್ರಿಗಳನ್ನು ಗೊತ್ತುಪಡಿಸಿಕೊಂಡಿದ್ದಾರೆ. ಒಮ್ಮೆಗೆ 30–40 ಶೌಚಾಲಯ ನಿರ್ಮಾಣಕ್ಕೆ ಬೇಕಾದ ವಿವಿಧ ಸಾಮಗ್ರಿಗಳನ್ನು ಒಟ್ಟಿಗೆ ಖರೀದಿಸುತ್ತಾರೆ.  ‘ಸಂಡಾಸ್‌ ಕಟ್ಟಾಕ್‌ ಬೇಕಾದ ಸಾಮಾನ್‌ಗಳನ್ನು ಒಂದೇ ಅಂಗಡಿಯಲ್ಲಿ ತಗೋಳದ್ರಿಂದ, ರೇಟು ಕಮ್ಮಿ ಸಿಕ್ತೇತಿ. ಉದ್ರಿನೂ ಕೊಡ್ತಾರ’ ಎನ್ನುತ್ತಾರೆ ಅಕ್ಕಮ್ಮ.

‘ಹರವಾಳ ಗ್ರಾಮದಲ್ಲಿ 700ಕ್ಕೂ ಹೆಚ್ಚು ಕುಟುಂಬಗಳಿವೆ. ಈ ಎಲ್ಲ ಕುಟುಂಬಗಳಿಗೂ ಶೌಚಾಲಯ ನಿರ್ಮಿಸಿಕೊಡುವುದು ನಮ್ಮ ಗುರಿ ಮತ್ತು ಕರ್ತವ್ಯ. ಸದ್ಯ ನಾವು ಮಾಡಬೇಕಾದ ಕೆಲಸವನ್ನು ಅಕ್ಕಮ್ಮ ಮಾಡುತ್ತಿದ್ದಾರೆ.  ಈ ಮೂಲಕ ನಮ್ಮ ಪಂಚಾಯಿತಿಯ ಗೌರವವನ್ನು ಅವರು ಹೆಚ್ಚಿಸಿದ್ದಾರೆ. ಅವರ ಬದ್ಧತೆಯನ್ನು ಪರಿಗಣಿಸಿ ಹರವಾಳ ಗ್ರಾಮ ಪಂಚಾಯಿತಿಯ ಸ್ವಚ್ಛತಾ ರಾಯಭಾರಿಯನ್ನಾಗಿ ಅವರನ್ನು ನೇಮಕ ಮಾಡಲಾಗಿದೆ’ ಎನ್ನುತ್ತಾರೆ ಹರವಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪವನ ಕುಲಕರ್ಣಿ.

* ಮಂದಿ ಬಂಗಾರ್‌ ಹಾಕೋತಾರ್ರೀ. ಆದ್ರ ತಂಬಿಗೆ ಹಿಡ್ಕೊಂಡು ಹೋಗ್ತಾರ. ಒಂದ್‌ ಸಂಡಾಸ್‌ ಮನಿ ಕಟ್ಸಿದ್ರ ನನಗೆ ಸರ್ಕಾರ ₹150 ಪ್ರೋತ್ಸಾಹಧನ ಕೊಡ್ತಾದ್ರಿ.

ಅಕ್ಕಮ್ಮ ಹರವಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT