ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ ಎತ್ತರಕ್ಕೇರಿದ ಮನೆ ಬಾಡಿಗೆ ದರ

ಪಾಶ್ಚಿಮಾತ್ಯ ಕಮೋಡ್ ಇದ್ದರೆ ಬೇಡಿಕೆ lಮನೆ ಮಾಲೀಕರಿಗೆ ಹಣ ಮಾಡುವ ಉಮೇದು
Last Updated 21 ಡಿಸೆಂಬರ್ 2017, 20:00 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕಕ್ಕೆ ಒಂದೂವರೆ ತಿಂಗಳು ಇರುವಾಗಲೇ ಮಹಾಮಜ್ಜನ ನಡೆಯುವ ಸ್ಥಳದ ಸುತ್ತಮುತ್ತಲ ಪ್ರದೇಶಗಳ ಮನೆಗಳ ಬಾಡಿಗೆ ದರ ಬಾಹುಬಲಿಯಷ್ಟೇ ಎತ್ತರಕ್ಕೇರಿದೆ.

12 ವರ್ಷಕ್ಕೊಮ್ಮೆ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಭಕ್ತರು, ಪ್ರವಾಸಿಗರು, ಯಾತ್ರಾರ್ಥಿಗಳು ಬರುವುದರಿಂದ ಸಹಜವಾಗಿಯೇ ಮನೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮಾಲೀಕರು ಬಾಡಿಗೆ ದರವನ್ನು ಈಗ ಇರುವುದಕ್ಕಿಂತಲೂ ಹತ್ತು ಪಟ್ಟು ಹೆಚ್ಚಿಸಿದ್ದಾರೆ.

ಪಾಶ್ಚಿಮಾತ್ಯ ಮಾದರಿ ಶೌಚಾಲಯ (ಕಮೋಡ್) ಇರುವ ಮನೆಗಳಿಗೆ ಇತರೆ ಮನೆಗಳಿಗೆ ಹೋಲಿಸಿದರೆ ಹೆಚ್ಚು ಬೇಡಿಕೆ ಕಂಡುಬಂದಿದೆ. ಗೊಮ್ಮಟ ನಗರದ ಹಲವು ಮನೆಗಳ ಮುಂದೆ ‘ಬಾಡಿಗೆಗೆ ಮನೆ ದೊರೆಯುತ್ತದೆ’ ಎಂಬ ಫಲಕವನ್ನು ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಬರೆದು ಮೊಬೈಲ್ ಸಂಖ್ಯೆಯೊಂದಿಗೆ ಹಾಕಲಾಗಿದೆ.

ಅಲ್ಲದೇ ಮಠದ 3 ಕಿ.ಮೀ ವ್ಯಾಪ್ತಿಯಲ್ಲಿರುವ ನಾಗಯ್ಯನಕೊಪ್ಪಲು, ಹೊಸಹಳ್ಳಿ, ಸುಂಡಹಳ್ಳಿ, ಮಂಜುನಾಥಪುರ, ಅರುವನಹಳ್ಳಿ, ಕೊತ್ತನಘಟ್ಟ, ರಾಚೇನಹಳ್ಳಿ, ಕಾಂತರಾಜಪುರ ಗ್ರಾಮಗಳ ಮನೆ ಬಾಡಿಗೆ ₹ 700 ರಿಂದ ₹ 6 ಸಾವಿರಕ್ಕೇರಿದೆ. 12 ಕಿ.ಮೀ ದೂರದ ಚನ್ನರಾಯಪಟ್ಟಣದಲ್ಲೂ ‘ಮನೆ ಬಾಡಿಗೆಗೆ ದೊರೆಯುತ್ತದೆ’ ಎಂಬ ಫಲಕಗಳನ್ನು ವಿದ್ಯುತ್‌ ಕಂಬಗಳಲ್ಲಿ ನೋಡಬಹುದು.

ಹೆಂಚು, ಶೀಟ್‌, ತಾರಸಿ ಮನೆ ಹಾಗೂ ಎಲ್ಲ ಸೌಲಭ್ಯ ಹೊಂದಿರುವ ಮನೆಗಳಿಗೆ ಒಂದೊಂದು ದರ ಇದೆ. ಮಠದ ಸಮೀಪದ ಮನೆಯೊಂದರ ಬಾಡಿಗೆ ₹ 2 ಸಾವಿರ ಇದ್ದದ್ದು, ಮಹಾಮಸ್ತಕಾಭಿಷೇಕ ಅವಧಿಗೆ ₹ 75 ಸಾವಿರಕ್ಕೆ ನಿಗದಿಯಾಗಿದೆ.

ತಾತ್ಕಾಲಿಕ ಉಪನಗರಗಳ ಪಕ್ಕದ ಹೊಸಹಳ್ಳಿಯಲ್ಲಿ ಎರಡು ರೂಂ, ಟಿ.ವಿ, ಪೀಠೋಪಕರಣ, ವಾಹನ ನಿಲುಗಡೆ ವ್ಯವಸ್ಥೆ ಹೊಂದಿರುವ ಮನೆಯೊಂದನ್ನು ಹೊರ ರಾಜ್ಯದ ಪ್ರವಾಸಿಯೊಬ್ಬರು ತಿಂಗಳಿಗೆ ₹ 1.50 ಲಕ್ಷ ಬಾಡಿಗೆ ನೀಡಿ ಕಾಯ್ದಿರಿಸಿದ್ದಾರೆ. ಐದು ಜನರು ವಾಸಿಸುವ ಶೀಟ್‌ ಮನೆಗಳನ್ನು ₹ 35ರಿಂದ ₹ 45 ಸಾವಿರಕ್ಕೆ ಬಾಡಿಗೆಗೆ ನೀಡಲಾಗಿದೆ. ಪಟ್ಟಣದ ವಸತಿ ಗೃಹ ಹಾಗೂ ಹೋಟೆಲ್‌ಗಳಲ್ಲೂ ಈಗಾಗಲೇ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ಜೈನ ಕಾಶಿಯಲ್ಲಿ ಮಹೋತ್ಸವಕ್ಕೆ ಆರು ತಿಂಗಳು ಇರುವಾಗಲೇ ಮನೆ ಖಾಲಿ ಮಾಡಿ ಕೊಡಬೇಕೆಂಬ ಒಪ್ಪಂದ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಆಗಿರುತ್ತದೆ. ಬಾಡಿಗೆದಾರರು ಮನೆಯ ಸಾಮಾನುಗಳೊಂದಿಗೆ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ತಿಂಗಳ ಮಟ್ಟಿಗೆ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾರೆ.

‘ಮಹೋತ್ಸವ ನಡೆಯುವ ವೇಳೆ ಮನೆ ಬಾಡಿಗೆ ಹೆಚ್ಚಳ ಮಾಡುವುದಾಗಿ ಮೊದಲೇ ಮಾಲೀಕರು ಹೇಳಿದ್ದರು. ₹ 2 ಸಾವಿರ ಬಾಡಿಗೆ ನೀಡುತ್ತಿದ್ದೆ. ಈಗ ₹ 75 ಸಾವಿರಕ್ಕೆ ಹೆಚ್ಚಿಸಿದ್ದಾರೆ. ಅಷ್ಟು ಬಾಡಿಗೆ ಭರಿಸಲು ಆಗುವುದಿಲ್ಲ. ಮನೆ ಖಾಲಿ ಮಾಡಿ ಪಟ್ಟಣದ ಹೊರವಲಯದಲ್ಲಿ ₹ 5 ಸಾವಿರಕ್ಕೆ ಬಾಡಿಗೆ ಮನೆ ಪಡೆದಿದ್ದೇನೆ’ ಎಂದು ನಿವೃತ್ತ ಉದ್ಯೋಗಿ ಎಸ್.ಜೆ.ಉಪಾಧ್ಯೆ ಹೇಳಿದರು.

‘ಮನೆ ಮಾಲೀಕರಿಗೆ 12 ವರ್ಷಕ್ಕೊಮ್ಮೆ ಬಂಪರ್‌ ಬೆಲೆ. ಗ್ರಾನೈಟ್‌, ಪೀಠೋಪಕರಣ, ಟಿ.ವಿ, ಎರಡು, ಮೂರು ಕೊಠಡಿಯ ಮನೆಗಳ ಬಾಡಿಗೆ ₹ 1.50 ಲಕ್ಷ ದಿಂದ ₹ 2 ಲಕ್ಷ ಇದೆ. ಈಗಾಗಲೇ ಹೊರ ರಾಜ್ಯದ ಭಕ್ತರು ಮುಂಗಡ ಹಣ ನೀಡಿ ಕಾಯ್ದಿರಿಸಿದ್ದಾರೆ. ಮಂಡಿ, ಸೊಂಟ ನೋವು, ಇತರೆ ಆರೋಗ್ಯ ಸಮಸ್ಯೆ ಇರುವವರು, ವೃದ್ಧರು ಮತ್ತು ಅಂಗವಿಕಲರು ಬರುವುದರಿಂದ ಹೆಚ್ಚಾಗಿ ಪಾಶ್ಚಿಮಾತ್ಯ ಮಾದರಿ ಶೌಚಾಲಯ ವ್ಯವಸ್ಥೆ ಇರುವ ಮನೆಯನ್ನೇ ಕೇಳುತ್ತಾರೆ’ ಎಂದು ಮಧ್ಯವರ್ತಿಗಳಾದ ಜ್ಞಾನೇಶ್, ರಮೇಶ್ ವಿವರಿಸಿದರು.

ಬೇಡಿಕೆ ಹೆಚ್ಚಾದಾಗ ಮಾಲೀಕರು ತಾವು ವಾಸಿಸುವ ಮನೆಯ ಒಂದು ಕೊಠಡಿ ಉಳಿಸಿಕೊಂಡು ಇತರೆ ಭಾಗವನ್ನು ಬಾಡಿಗೆ ನೀಡುತ್ತಾರೆ. ಕೆಲವರು ಬೆಡ್ ರೂಂಗಳನ್ನು ದಿನಕ್ಕೆ ₹ 2ರಿಂದ 3 ಸಾವಿರದಂತೆ ಬಾಡಿಗೆಗೆ ನೀಡುತ್ತಾರೆ.

‘ಮಹೋತ್ಸವ ವೇಳೆ ಮಾಲೀಕರು ನಿಗದಿ ಪಡಿಸಿದ ಬಾಡಿಗೆಗೆ ಒಪ್ಪಿದರೆ ಬಾಡಿಗೆದಾರರು ಮುಂದುವರಿಯಬಹುದು. ಇಲ್ಲ ಖಾಲಿ ಮಾಡಲೇ ಬೇಕು ಎಂಬ ಷರತ್ತು ಹಾಕಿರುತ್ತೇವೆ. ನನ್ನ ಹೆಂಚಿನ ಮನೆಯನ್ನು ₹ 50 ಸಾವಿರಕ್ಕೆ ಬಾಡಿಗೆ ನೀಡಿದ್ದೇನೆ’ ಎನ್ನುತ್ತಾರೆ ಮನೆ ಮಾಲೀಕ ಕುಮಾರ್.
*
ಖಾಲಿ ನಿವೇಶನಕ್ಕೂ ಬೇಡಿಕೆ
ಮಹೋತ್ಸವದ ವೇಳೆ ಪಟ್ಟಣ ವ್ಯಾಪ್ತಿಯ ಖಾಲಿ ನಿವೇಶನಗಳಿಗೂ ಅದೃಷ್ಟ ಬಂದಿದೆ. ಹೋಟೆಲ್‌, ಚಪ್ಪಲಿ, ಬಟ್ಟೆ ವ್ಯಾಪಾರಿಗಳಿಗೆ ಮಾಲೀಕರು ನಿವೇಶನವನ್ನು ₹ 50 ಸಾವಿರದಿಂದ ₹ 1 ಲಕ್ಷದವರೆಗೆ ಬಾಡಿಗೆ ನೀಡುತ್ತಿದ್ದಾರೆ.

ವಿದೇಶಿ ಪತ್ರಕರ್ತರು ಈಗಾಗಲೇ ಫ್ರಾನ್ಸ್, ಇಸ್ರೇಲ್‌ ಇತರ ದೇಶದ ಮಾಧ್ಯಮ ಪ್ರತಿನಿಧಿಗಳು ಫೆ. 17ರಿಂದ 24ರವರೆಗೆ ರಘು ಹೋಟೆಲ್‌ನಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT