ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿತೆರೆ ಮೇಲೆ ಮಾಂತ್ರಿಕತೆ ಸೃಷ್ಟಿಸಿದ ಮೂರ್ತಿ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ವಿ.ಕೆ. ಮೂರ್ತಿ ಅವರು ಇನ್ನಿಲ್ಲ. ಅಗಾಧ ಸಾಧನೆ ಮಾಡಿದರೂ ಸದ್ದಿ­ಲ್ಲದೆ ಶಾಂತರಾಗಿ ಬದುಕಿದ ಮೂರ್ತಿ­ಯವರು, ಹಾಗೇ ಶಾಂತರಾಗಿ ಸದ್ದಿಲ್ಲದೆ ಇಂದು ಬೆಳಿಗ್ಗೆ ಚಿರನಿದ್ರೆಗೆ ಜಾರಿ ಹೋದರು.

ನೆರಳು ಬೆಳಕುಗಳಿಂದ ಬೆಳ್ಳಿ ತೆರೆ ಮೇಲೆ ಮಾಂತ್ರಿಕ ಜಗತ್ತನ್ನು ಸೃಷ್ಟಿಸಿದ ಮೂರ್ತಿಯವರನ್ನು ಮೊದಲು ಕಂಡಿದ್ದು ನಾನು ೧೪ ವರ್ಷದವ­ಳಾಗಿದ್ದಾಗ ಮುಂಬೈ ನೋಡಲು ಹೋಗಿದ್ದಾಗ. ಆಗ ನಾವಿದ್ದ ನಮ್ಮ ಸೋದರತ್ತೆ ಭವಾನಿ ಮನೆಯ ಪಕ್ಕದಲ್ಲೇ ಇದ್ದು ಅವರಿಗೆ ಆಪ್ತರಾಗಿದ್ದ ‘ಕುಟ್ಟಿ’ ನಮ್ಮನ್ನು ಶೂಟಿಂಗ್ ತೋರಿ­ಸಲು ಕರೆದುಕೊಂಡು ಹೋಗಿದ್ದರು. ಅವರು ಮನೆಯವರಿಗೆ, ಗೆಳೆಯ ಗೆಳತಿಯರಿಗೆ, ಮೈಸೂರು ಅಸೋಸಿಯೇ­ಷನ್ನಿನ­ವರಿಗೆಲ್ಲಾ ಕುಟ್ಟಿ. ಸಿನಿಮಾ ವಲಯದವರಿಗೆ ಮೂರ್ತಿಸಾಬ್. ಶೂಟಿಂಗ್ ತೋರಿಸಿದ ಅವರು  ಅಂದು ನಮಗೆ ದೇವರೇ ಆಗಿಬಿಟ್ಟಿದ್ದರು. ಅದರಲ್ಲಿ ವೈಜಯಂತಿ ಮಾಲಾ ಬೇರೆ ನಟಿಸಿದ್ದಳೆಂದು ನೆನಪು.

ಮತ್ತೆ ಅವರನ್ನು ಭೇಟಿಯಾದದ್ದು ಮುಂಬೈ ಮಾತುಂಗಾದ ಮೈಸೂರು ಅಸೋಸಿಯೇಷನ್ನಿನಲ್ಲಿ. 70ರ ದಶ­ಕದ ಮೊದಲ ಭಾಗ. ಮೂರ್ತಿ ಅವರು ಕೀರ್ತಿಯ ಉತ್ತುಂಗದ­ಲ್ಲಿದ್ದ ಸಮಯ. ಅಂದು ಅಸೋಸಿಯೇಷನ್ನಿನಲ್ಲಿ ಅವರೇ ನಿರ್ದೇಶಿಸಿದ ಹಾಸ್ಯ ನಾಟಕ. ಕಟ್ಟಡದ ಮುಂದಿದ್ದ ಲಾನ್‌ನಲ್ಲಿ ಬೆತ್ತದ ಕುರ್ಚಿ ಮೇಲೆ ಸಿಗರೇಟು ಸೇದುತ್ತಾ ಸಂಧ್ಯಾ ಜೊತೆ  ಕುಳಿತಿ­ದ್ದರು. ಬಿಳೀ ಶರಟು, ಬಿಳೀ ಪ್ಯಾಂಟು ತೆಳ್ಳನೆಯ ವ್ಯಕ್ತಿತ್ವ. ಅವರ ಗೆಳೆಯರೊಬ್ಬರು ಜೋಕ್ ಮಾಡುತ್ತಿದ್ದಂತೆ– ಕುಟ್ಟಿ ಮುಂಬೈ ಮಳೆಯಲ್ಲೂ ಕೊಡೆ ತೆಗೆದು­ಕೊಂದು ಹೋಗು­ವುದಿಲ್ಲ, ಏಕೆ ಗೊತ್ತಾ? ಅವನು 2 ಹನಿಗಳ ನಡುವೆ ತೂರಿಕೊಂಡು ನಡೀ­ತಾನೆ ಎಂದು. ಕೊನೆ ವರೆಗೂ ಅವರು ಹಾಗೇ ಇದ್ದಿದ್ದು ಅವರ ವೈಶಿಷ್ಟ್ಯ. ಬ್ಯಾಂಕ್ ಕ್ಲರ್ಕಿನಂತೆ ಕಾಣು­ತ್ತಿದ್ದ ಈ ಮನುಷ್ಯನೇ ಪ್ರಖ್ಯಾತ ಸಿನೆಮಾಟೊಗ್ರಾಫರ್ ಮೂರ್ತಿ­ಯವರೇ?

ಭವಾನಿ ನನ್ನನ್ನು ಅವರಿಗೆ ಪರಿಚಯ ಮಾಡಿಸಿದರು. ನಂತರ ಮಾತುಕತೆ ಶುರುವಾಯಿತು. ಅವರು ವರ್ಷಗಳಿಂದ ಪರಿಚಿತರೇನೋ ಅನ್ನಿಸಿಬಿಟ್ಟಿತು. ಅಂಥಾ ಸಹಜ, ಸರಳ ಜೀವಿ. ಮುಂಬೈ ಚಿತ್ರೋದ್ಯಮದಲ್ಲಿ ಇಂಥವರು ಇರುತ್ತಾರೆಯೇ? ಅವತ್ತು ಅವರು ಮಾಡಿಸಿದ್ದು ಹಾಸ್ಯ ನಾಟಕ. ನಕ್ಕು ನಕ್ಕು ಸಾಕಾಗಿತ್ತು. ಅವರಿಗೆ ನಾಟಕದ ಹುಚ್ಚು ಎಷ್ಟಿತ್ತೆಂದರೆ ‘ನೋಡಮ್ಮ ಉಮಾ, ಆಗೇನಾದರೂ ಯಾರಾದರೂ ಒಂದು ೧೦,೦೦೦ ರೂಪಾಯಿ ಸಂಬಳ ಕೊಡ್ತೀನಿ, ನಾಟಕ ಮಾಡಿಸಿಕೊಂಡಿರು ಅಂದಿದ್ರೆ, ಹಾಯಾಗಿದ್ದು ಬಿಡ್ತಿದ್ದೆ ’ ಎಂದು ಬಿಸಿಲು ಕೋಲು ಬರೆಯುತ್ತಿದ್ದಾಗ ಹೇಳಿದ್ದರು.

ನಂತರ ನಾವು ಹೊಸರೀತಿಯ ನಾಟಕಗಳನ್ನು ಆಡಿಸುತ್ತಿದ್ದ ಟಾಮ್ ಆಲ್ಟರ್, ಬೆಂಜಮಿನ್ ಗಿಲಾನಿ, ಅಮೋಲ್ ಪಾಲೆಕರ್, ನಾಸೀರುದ್ದೀನ್ ಷಾ ಅವರುಗಳನ್ನು ನೋಡಲು ಯಾವಾಗ ದಾದರಿನ  ಛಬಿಲ್ ದಾಸ್ ಸ್ಕೂಲಿನ ಆಡಿಟೋರಿಯಂಗೆ ಹೋದರೂ, ಅಥವಾ ಶಬಾನಾ ಆಜ್ಮಿ, ಸ್ಮಿತಾ ಪಾಟೀಲ್, ಸತ್ಯದೇವ್ ದುಬೇ ಮುಂತಾದವರ ನಾಟಕಗಳನ್ನು  ನೋಡಲು ಪೃಥ್ವಿ ಥಿಯೇಟರಿಗೆ ಹೋದರೂ ಅಲ್ಲಿ ಕುಟ್ಟಿ  ಹಾಜರಿರುತ್ತಿದ್ದರು. ಅದೇ ಬಿಳೀ ಪ್ಯಾಂಟು, ಬಿಳೀ ಶರಟು, ಕೈಯ್ಯಲ್ಲಿ ಸಿಗರೇಟಿನ ನಗುಮುಖದ  ಮನುಷ್ಯ.

೯೦ರ ದಶಕದಲ್ಲಿ ಅವರು ಬೆಂಗಳೂರಿಗೆ ಬಂದಿದ್ದರು. ನಾವು ಕೆಲವು ವರ್ಷಗಳ ನಂತರ ಇಲ್ಲಿಗೆ ಬಂದೆವು. ಭೇಟಿಯಾದಾಗ ‘ತುಂಬಾ ಖುಷಿಯಾಯ್ತು ನೀವು ಬಂದದ್ದು. ಇಲ್ಲಿ ಜನ ಸ್ವಲ್ಪ ರಿಸರ್ವ್ಡ್. ಮುಂಬೈನವ­ರಂತಲ್ಲ’ ಎಂದು ನಕ್ಕರು. ಏನೂ ಕೆಲಸ ಇಲ್ಲದೆ ಕೂಡೊದೂ ಬೇಜಾರು ಎಂದು ನೊಂದು ಕೊಂಡರು. ನಾನು ನಾಣಿ, ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಜನರನ್ನ ಸೇರಿಸಿ ನಾಟಕ ಮಾಡಬಹುದೂಂತ ನೋಟೀಸ್ ಹಾಕಿದರೆ ಒಂದು ಹೆಸರೂ ಬರಬೇಡವೇ?! ಜನಕ್ಕೆ ಉತ್ಸಾಹವೇ ಇಲ್ಲ ಎಂದು ಆಶ್ಚರ್ಯ ಪಟ್ಟರು. ಕನ್ನಡ ಚಿತ್ರಗಳಿಂದಲೂ ಕರೆ ಬಂದಿಲ್ಲ ಎಂದು ಅವರಿಗೆ ಸ್ವಲ್ಪ ಬೇಸರವಿದ್ದಂತಿತ್ತು.

ಒಂದು ಪತ್ರಿಕೆಯಲ್ಲಿ ಬಂದ ಅವರ ಸಂದರ್ಶನದಲ್ಲಿ ಮಾತನಾಡುತ್ತ ಸಂದರ್ಶಕಿ ‘ನೀವು ಇಷ್ಟೆಲ್ಲ ಸಾಧನೆ ಮಾಡಿದೀರಾ. ಆದರೆ, ನಿಮ್ಮ ಆತ್ಮ ಚರಿತ್ರೆ ಯಾಕೆ ಬರೆದಿಲ್ಲ?’ ಇಟ್ ವಿಲ್ ಬಿ ಸೋ ಇಂಟರೆಸ್ಟಿಂಗ್! ಎಂದು ಕೇಳಿದಾಗ ‘ಐ ಆಮ್ ನಾಟ್ ಅ ರೈಟರ್, ಐ ಕ್ಯಾನ್ ಓನ್ಲಿ ಮೇಕ್ ಫಿಲಿಂಸ್‌’ ಎಂದಿದ್ದರು. ಅಗ ನನ್ನ ಟ್ಯೂಬ್ ಲೈಟ್ ಆನ್ ಆಗಿತ್ತು. ಲೇಖಕಿಯಾಗಿ, ಅವರನ್ನು ಅಷ್ಟು ಚೆನ್ನಾಗಿ ಬಲ್ಲ ನಾನು ಏನು ಮಾಡುತ್ತಿದ್ದೇನೆ? ಮಾರನೆಯ ದಿನವೇ ಅವರ ಮನೆಗೆ ಹೋಗಿ ಕೇಳಿದ್ದೆ. ನಾನಂಥಾದ್ದು ಏನು ಸಾಧಿಸಿದ್ದೇನೆ  ಎಂದು ಸಂಕೋಚದಿಂದ  ಮೊದಲು ಅನುಮಾನಿಸಿದ ಅವರು ನಂತರ ಒಪ್ಪಿದ್ದರು.

ಹಾಗೆ ಜನ್ಮ ತಾಳಿದ ಬಿಸಿಲುಕೋಲು ಮೂಲಕ ಈ ಅದ್ಭುತ ವ್ಯಕ್ತಿಯ ಬದುಕಿನ ನಿಕಟ ಪರಿಚಯ­ವಾಯಿತು. ಆ ಪುಟ್ಟ ಹುಡುಗನ ಕಡುಬಡತನ, ಯಾವಾಗಲೂ ಕಾಡುತ್ತಿದ್ದ ಹಸಿವು, ಮೂಕಿ ಚಿತ್ರ ನೋಡುತ್ತ ಮರೆಯುತ್ತಿದ್ದ ತಾಯಿ­ ಇಲ್ಲದ ಮನೆ, ಸಿನಿಮಾ ಹುಚ್ಚಿನಲ್ಲಿ  ಊರು ಬಿಟ್ಟು ಮುಂಬೈಗೆ ಓಡಿ ಹೋದವನ ಕೆಚ್ಚು, ನಂತರದ ಯಶಸ್ಸು, ಎಂದೂ ಬದಲಾಗದ  ಸಹಜ ಸರಳ ಸ್ವಭಾವ, ತಾವೇ ಮಾಡಿಕೊಡು­ತ್ತಿದ್ದ ಗಮ್ಮೆನ್ನುವ ಕಾಫಿ.. ಎಲ್ಲವೂ ನನ್ನೊಳಗೆ ಅಳಿಸದಂತೆ ಹೊಕ್ಕಿತು.

ಅವರು ಚಿತ್ರರಂಗದಲ್ಲಿ ಸಾಧಿಸಿದ್ದು ಇತಿಹಾಸ. ಅಷ್ಟು ಕಡಿಮೆ ತಂತ್ರಜ್ಞಾನ ಉಪಯೋಗಿಸಿ ಅಂಥಾ ಅದ್ಭುತ ಫ್ರೇಮ್‌ಗಳನ್ನು ನಮ್ಮ ಮುಂದಿಟ್ಟ ಅವರ ಕೈಚಳಕಕ್ಕೆ ಜಗತ್ತೇ ಬೆರಗಾಗಿತ್ತು. ಸಿನಿಮಾ­ಟೊಗ್ರಫಿ ಕ್ಷೇತ್ರದಲ್ಲಿ ಮೂರ್ತಿಸಾಬ್ ಅಂಥಾ ಪರ್ಫೆಕ್ಷನಿಸ್ಟ್ ಇಲ್ಲ ಎಂದು ಪ್ರತೀತಿ. ಅವರ ಶಿಷ್ಯರ­ಲ್ಲೊಬ್ಬರಾದ ಶಿರೀಶ್ ದೇಸಾಯಿ ನೆನಪಿಸಿಕೊಳ್ಳುವ ಒಂದು ಘಟನೆ ಹೀಗಿದೆ. ಮೂರ್ತಿ ಸಾಬ್, ಬಾಯಲ್ಲಿ ಏನೂ ಹೇಳದೆಯೇ ಕ್ಯಾಮರಾಮನ್‌ಗೆ ಕಲಿಯಬೇಕಾದ ಎಲ್ಲವನ್ನೂ ಕಲಿಸಿದ್ದರು.

‘ಮೂರ್ತಿ ಸಾಬ್ ಮತ್ತು ಶಮ್ಮಿ ಕಪೂರ್ ತುಂಬಾ ಅತ್ಮೀಯ ಗೆಳೆಯರು. ಶಮ್ಮಿ ಕಪೂರ್ ಬಹಳ ಸೂಕ್ಷ್ಮ ಮನಸ್ಸಿನ ವ್ಯಕ್ತಿ. ಒಂದು ಸಲ ಅವರೊಡನೆ ಶೂಟ್ ಮಾಡುತ್ತಿದ್ದೆ. ಶಾಟ್ ನಡುವೆ ಶಮ್ಮಿ ಕಪೂರ್ ಆ ಪಾತ್ರದ ಲುಕ್ ತಪ್ಪು ಎಂದು ಕಾಮೆಂಟ್ ಮಾಡಿದರು. ನಾನು ಸರಿ ಇದೆ ಎಂದೆ. ದೊಡ್ಡ ವಾಗ್ವಾದವೇ ಆಗಿ ಹೋಯಿತು. ಆದರೆ ನಾನು ಬಿಟ್ಟು­ಕೊಡಲಿಲ್ಲ. ಕೊನೆಗೆ ಶಮ್ಮಿ ನಿನಗೆ ಟ್ರೇನಿಂಗ್ ಕೊಟ್ಟವರು ಯಾರು? ಎಂದು ಜೋರಾಗಿ ಕೇಳಿದರು.  ನಾನು ವಿ.ಕೆ. ಮೂರ್ತಿಸಾಬೆಂದೆ. ಶಮ್ಮಿ ಕಪೂರ್ ನಗಲು ಶುರು ಮಾಡಿದರು. ‘ಅದಕ್ಕೆ ನಿನಗೆ ಇಂಥಾ ಆಟಿಟ್ಯೂಡ್ ಇದೆ, ಅಶ್ಚರ್ಯವೇನಿಲ್ಲ’ ಎಂದರು. ನಾವು ತೆಗೆದು ಕೊಂಡ ನಿಲುವು ಸರಿ ಎಂದು ನಮಗೆ ಖಾತ್ರಿಯಾಗಿದ್ದಲ್ಲಿ ಎಂದೂ ಬಗ್ಗ ಬಾರದೆಂದು ಮೂರ್ತಿಸಾಬ್ ನಮಗೆ ಹೇಳಿಕೊಟ್ಟಿದ್ದರು.’

ಅವರು ತಮ್ಮ ಶಿಷ್ಯರಿಗೆ ಹೇಳಿದ್ದು ಯಾವಾಗಲೂ ಮನಸ್ಸಿನಲ್ಲಿ ಕಾಡುತ್ತಿರುತ್ತದೆ. ಬೆಳಕನ್ನೂ ಒಬ್ಬ ನಟನೆಂದು ತಿಳಿಯಿರಿ. ಇದು ರಾತ್ರಿಯೇ, ಬೆಳಗೇ ಎಂಬುದನ್ನು ಬೆಳಕು ಹೇಳುತ್ತದೆ. ಇಲ್ಲಿ ಭಯ ಸುತ್ತುವರಿದಿದೆಯೇ, ಪ್ರೇಮ ಸಲ್ಲಾಪದ ಪರಿಸರವಿದೆಯೇ, ದುಃಖದ ಛಾಯೆ ಇದೆಯೇ ಎಂದು ಸುತ್ತಲಿನ ಬೆಳಕು ಹೇಳುತ್ತದೆ. ನೀವು ಬೆಳಕನ್ನು ಒಬ್ಬ ನಟ ಎಂದುಕೊಂಡರೆ ಸರಿಯಾದ ಮೂಡ್ ಸೃಷ್ಟಿಸಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT