ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಸ್ತಕಾಭಿಷೇಕ ಪ್ಲಾಸ್ಟಿಕ್‌ ಮುಕ್ತ

ಆದಾಯ ಗಳಿಕೆಗೂ ನಿರ್ಧಾರ
Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಪ್ಲಾಸ್ಟಿಕ್‌ ಮುಕ್ತ ಸನ್ನಿವೇಶ ನಿರ್ಮಿಸಲು ಜಿಲ್ಲಾ ಆಡಳಿತ ಪಣತೊಟ್ಟಿದೆ. ಜತೆಗೆ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಮೂಲಕ ಆದಾಯ ಗಳಿಸಲು ಮುಂದಾಗಿದೆ.

ಫೆ. 2ರಿಂದ 25ರ ವರೆಗೆ ನಡೆಯಲಿರುವ ಮಹೋತ್ಸವದ ವೇಳೆ ದೇಶ, ವಿದೇಶಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಈ ವೇಳೆ ಬಿಸಿಲು ತೀವ್ರವಾಗಿರುವ ಕಾರಣ ಕುಡಿಯುವ ನೀರಿನ ಬಾಟಲಿಯನ್ನು ಹೆಚ್ಚು ಬಳಸುತ್ತಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಾಟಲ್‌ ಬಿಸಾಡಿದರೆ ಜೈನ ಕಾಶಿ ಪ್ಲಾಸ್ಟಿಕ್‌ಮಯವಾಗುತ್ತದೆ ಎಂಬ ಆತಂಕ ಕಾಡುತ್ತಿದೆ.

ಅಂದಾಜಿನ ಪ್ರಕಾರ ದಿನಕ್ಕೆ 8ರಿಂದ 10 ಸಾವಿರ ಪ್ಲಾಸ್ಟಿಕ್‌ ಬಾಟಲ್‌ ಶ್ರವಣಬೆಳಗೊಳ ಹಾಗೂ ಉಪನಗರದಲ್ಲಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದನ್ನು ಒಂದೆಡೆ ಸಂಗ್ರಹಿಸಿ ಅತ್ಯಾಧುನಿಕ ಯಂತ್ರಗಳಿಂದ ಕರಗಿಸಿ, ಬ್ಲಾಕ್‌ಗಳಾಗಿ ಪರಿವರ್ತಿಸಿ ಕಂಪೆನಿಗಳಿಗೆ ಮಾರಾಟ ಮಾಡುವುದು ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ಕಂಡುಕೊಂಡ ಮಾರ್ಗವಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ರೂಪುರೇಷೆ ಸಿದ್ಧಪಡಿಸಿದೆ. ಪ್ಲಾಸ್ಟಿಕ್‌ ಮಾರಾಟದಿಂದ ಬರುವ ಹಣವನ್ನು ಸ್ಥಳೀಯ ಪಂಚಾಯಿತಿಗೆ ನೀಡಲು ಉದ್ದೇಶಿಸಲಾಗಿದೆ.

ಮಹೋತ್ಸವದ ವೇಳೆ ತಿಂಡಿ, ಊಟಕ್ಕಾಗಿ ಪ್ರತಿ ದಿನ 20 ಸಾವಿರಕ್ಕೂ ಹೆಚ್ಚು ಅಡಿಕೆಹಾಳೆಯ ತಟ್ಟೆಗಳನ್ನು ಬಳಸಲಾಗುತ್ತದೆ. ಬಳಸಿದ ತಟ್ಟೆಗಳನ್ನು ಒಂದೆಡೆ ಸಂಗ್ರಹಿಸಿ ಹುಡಿ ಮಾಡಿ ಸಾವಯವ ಗೊಬ್ಬರ ಮಾಡಲಾಗುತ್ತದೆ. ಇದಕ್ಕಾಗಿ ಸಮೀಪದ ಕೋರೇನಹಳ್ಳಿ ಬಳಿ 10 ಎಕರೆ ಜಾಗ ಗುರುತಿಸಲಾಗಿದೆ.

ಹೂಳು ಹಾಗೂ ತ್ಯಾಜ್ಯದಿಂದ ತುಂಬಿರುವ ರಾಚೇನಹಳ್ಳಿ ಕೆರೆ ನೀರನ್ನು ಜರ್ಮನ್ ತಂತ್ರಜ್ಞಾನದ ಮೂಲಕ ಹೊರ ಹಾಕಲಾಗುತ್ತಿದೆ. ಹೂಳು ತೆಗೆದ ಬಳಿಕ ಶುದ್ಧೀಕರಿಸಿದ ನೀರನ್ನು ಕೆರೆಗೆ ಹರಿಸುವ ಕಾರ್ಯ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.

‘ಮಹೋತ್ಸವಕ್ಕೆ ವಿವಿಧ ಗಣ್ಯರು ಬರುತ್ತಿರುವುದರಿಂದ ಪ್ಲಾಸ್ಟಿಕ್ ಬಳಸದಂತೆ ವರ್ತಕರು, ತರಕಾರಿ ವ್ಯಾಪಾರಿಗಳು, ಹೋಟೆಲ್‌ ಮಾಲೀಕರು, ಬೀದಿ ಬದಿ ವ್ಯಾಪಾರಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಗ್ರಾಮ ಪಂಚಾಯಿತಿಯಿಂದ ಎರಡು ಬಕೆಟ್‌ಗಳನ್ನು ನೀಡಲಾಗುತ್ತದೆ. ವಾರದಲ್ಲಿ ಎರಡು ದಿನ ಒಣ ಕಸ ಹಾಗೂ ಐದು ದಿನ ಹಸಿಕಸವನ್ನು ಸಂಗ್ರಹಿಸಿ ಕೋರೇನಹಳ್ಳಿ ಬಳಿಯ ಪ್ರದೇಶದಲ್ಲಿ ಸಾವಯವ ಗೊಬ್ಬರವನ್ನಾಗಿ ಮಾಡಿ ರೈತರಿಗೆ ಮಾರಾಟ ಮಾಡಲಾಗುವುದು. ಇದರಿಂದ ಗ್ರಾಮ ಪಂಚಾಯಿತಿಗೆ ಲಾಭ ಬರುವುದರ ಜೊತೆಗೆ ಶ್ರವಣಬೆಳಗೊಳ ಸ್ವಚ್ಛ, ಸುಂದರ ಪಟ್ಟಣವಾಗುತ್ತದೆ’ ಎಂದು ಮಹಾಮಸ್ತಕಾಭಿಷೇಕ ಮಹೋತ್ಸವದ ವಿಶೇಷಾಧಿಕಾರಿ ಬಿ.ಎನ್‌.ವರಪ್ರಸಾದ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತ್ಯಾಜ್ಯ ಮುಕ್ತಗೊಳಿಸಿ, ಶುಚಿತ್ವ ಕಾಪಾಡಲು ಸಹಕರಿಸುವಂತೆ ವೆಬ್‌ಸೈಟ್‌ ಮೂಲಕವೂ ಜಾಗೃತಿ ಮೂಡಿಸಲಾಗುವುದು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT