ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗನ ಸನ್ನಿಧಿಯಲ್ಲೀಗ ‘ಧ್ವನಿ–ಬೆಳಕು’

Last Updated 29 ಏಪ್ರಿಲ್ 2015, 20:34 IST
ಅಕ್ಷರ ಗಾತ್ರ

ಮೈಸೂರು: ಮಂಡ್ಯ ಜಿಲ್ಲೆಯ ಪಾರಂಪರಿಕ ತಾಣವಾದ ಶ್ರೀರಂಗಪಟ್ಟಣದಲ್ಲಿ ಈಗ ಕತ್ತಲು ಆವರಿಸುತ್ತಿದ್ದಂತೆಯೇ ‘ಧ್ವನಿ–ಬೆಳಕಿನ’ ಕಾರುಬಾರು ಗರಿಗೆದರುತ್ತದೆ. ಐತಿಹಾಸಿಕ ಸ್ಥಳಗಳತ್ತ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರವಾಸೋ ದ್ಯಮ ಅಭಿವೃದ್ಧಿ ನಿಗಮ ₹ ೩.೨೫ ಕೋಟಿ ವೆಚ್ಚದಲ್ಲಿ ರೂಪಿಸಿರುವ ‘ಧ್ವನಿ ಮತ್ತು ಬೆಳಕಿ’ನ ಪ್ರದರ್ಶನದ ರೂಪಕ, ಸ್ಥಳೀಯ ಇತಿಹಾಸವನ್ನು ಸಮರ್ಥವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ.

ನಿಗಮದ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಬೆಂಗಳೂರಿನ ಇನ್ನೋವೇಟಿವ್ ಲೈಟಿಂಗ್ ಸಿಸ್ಟಮ್ಸ್ ಕಾರ್ಪೊರೇಷನ್ ಕಾರ್ಯರೂಪಕ್ಕೆ ಇಳಿಸಿದೆ. ಕಳೆದ ಐದು ತಿಂಗಳಿಂದ ಈ ಪ್ರದರ್ಶನ ನಡೆಯುತ್ತಿದೆ. ಪ್ರತಿದಿನ ರಾತ್ರಿ ೭.೨೦ಕ್ಕೆ ಆರಂಭವಾಗುವ ೪೦ ನಿಮಿಷಗಳ ಅವಧಿಯ ಈ ಪ್ರದರ್ಶನ ಶ್ರೀರಂಗಪಟ್ಟಣದ ಚರಿತ್ರೆಯ ಜತೆಗೆ ಹೆಜ್ಜೆ ಹಾಕಿದ ಅನುಭವವನ್ನು ನೀಡುತ್ತದೆ.

ಶ್ರೀರಂಗಪಟ್ಟಣದ ಕೋಟೆಯ ಒಳಗೆ ಮತ್ತು ಆಚೆ ಚದುರಿರುವ ಐತಿಹಾಸಿಕ ಮಹತ್ವದ ಪ್ರಮುಖ ಸ್ಮಾರಕಗಳು, ಕಟ್ಟಡಗಳ ಪ್ರತಿಕೃತಿಗಳನ್ನು ಒಗ್ಗೂಡಿಸಿ ಬೆಸೆದಿರುವುದು ಈ ತಾಣದ ವಿಶೇಷ. ಧ್ವನಿ–ಬೆಳಕು ಅಳವಡಿಸಿರುವ ದೇಶದ ಇತರೆಡೆಯ ತಾಣಗಳಲ್ಲಿ ಹೀಗೆ ಚದುರಿ ಹೋಗಿರುವ ಸ್ಮಾರಕಗಳು ಒಂದೆಡೆ ನಿಲುಕುವುದಿಲ್ಲ. ಹಾಗಾಗಿ, ದೇಶದಲ್ಲಿ ಪ್ರಥಮ ಪ್ರಯೋಗ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಜತೆಗೆ, ಇಲ್ಲಿನ ಶ್ರೀರಂಗನಾಥಸ್ವಾಮಿ ದೇಗುಲ, ಜುಮ್ಮಾ ಮಸೀದಿ, ಟಿಪ್ಪುವಿನ ಬೇಸಿಗೆ ಅರಮನೆ, ಕಮಾನುಗಳು, ಸ್ತಂಭಗಳು, ಹಸಿದ ಹೆಬ್ಬುಲಿಗಳಂತೆ ಕಾಣುವ ಫಿರಂಗಿಗಳು – ಹೀಗೆ ಎಲ್ಲವೂ ಒಂದೆಡೆ ಜಮಾವಣೆಗೊಂಡು ಧ್ವನಿ–ಬೆಳಕಿನಾಟದಲ್ಲಿ ಪ್ರಜ್ಞಲಿಸುತ್ತವೆ. ಸಮರ ಭೂಮಿಯ ಸನ್ನಿವೇಶವನ್ನು ಕಟ್ಟಿಕೊಟ್ಟು, ನೋಡುಗ ರನ್ನು ಚರಿತ್ರೆಯ ‘ಆ ದಿನ’ಗಳತ್ತ ಕರೆದೊಯ್ಯುತ್ತವೆ.

ಪ್ರಧಾನ ಭೂಮಿಕೆಯಲ್ಲಿ ಸಾಕಷ್ಟು ರಾಜರು, ಸೇನಾನಿಗಳು, ಬ್ರಿಟಿಷರು ಬಂದು ಹೋಗುತ್ತಾರೆ. ಶ್ರೀರಂಗಪಟ್ಟಣವನ್ನು ದ್ವೀಪವನ್ನಾಗಿಸಿರುವ ಜೀವನದಿ ಕಾವೇರಿ ಮಾತೆಯೇ ಈ ಕಥಾನಕದ ನಿರೂಪಕಿ. ಕಾವೇರಿ ಮಾತೆಯ ಅಂತರಾಳದ, ಆಂತರ್ಯದ ಕಥಾ ನಿರೂಪಣೆಗೆ ನಡುನಡುವೆ ಇಣುಕುವ ಲಾವಣಿ, ಕಥಾ ಹಂದರದ ಓಘಕ್ಕೆ ಸಾಣೆ ಹಿಡಿದಿದೆ. ಗತ ಘಟನಾವಳಿಗಳಿಗೆ ಮೌನ ಸಾಕ್ಷಿಯಾಗಿ
ರುವ ಕಾವೇರಿ, ಘಟನಾವಳಿಗಳನ್ನು ಮೆಲುಕು ಹಾಕುತ್ತಾ ಹೋಗುತ್ತಾಳೆ. ಹೀಗೆ ಶ್ರೀರಂಗಪಟ್ಟಣ ಇತಿಹಾಸದ ಎಲ್ಲ ಮಗ್ಗಲುಗಳನ್ನು ಕಾವೇರಿ ತನ್ನ ನಿರೂಪಣೆಯಲ್ಲಿ ನೇವರಿಸುತ್ತಾಳೆ.

ಇದರಿಂದ 40 ನಿಮಿಷ ಸರಿದು ಹೋಗಿದ್ದೇ ಗೊತ್ತಾಗುವುದಿಲ್ಲ. ರಂಗಭೂಮಿ, ಬೆಳ್ಳಿತೆರೆ, ಕಿರುತೆರೆಯ ಕಲಾವಿದರು ‘ಇಲ್ಲಿ ಬಂದು ಹೋಗುವ’ ಐತಿಹಾಸಿಕ ವ್ಯಕ್ತಿಗಳಿಗೆ ಧ್ವನಿಯಾಗಿದ್ದಾರೆ. ಕಣ್ಣು ಕೋರೈಸುವ ಬೆಳಕಿನಾಟಕ್ಕೆ ಸಮರ ಭೂಮಿಯ ಕಿವಿಗಡಚಿಕ್ಕುವ ಶಬ್ದ, ರಣಕಹಳೆಯು ಕೋಟೆ–ಕೊತ್ತಳದಲ್ಲಿ ಮಾರ್ದನಿಸುತ್ತದೆ.

ಕೋಟೆ ಆಚೆಗಿನ ಮತ್ತು ಒಳಗೆ ಹರಡಿರುವ ಸ್ಥಾವರಗಳ ಕಲಾಕೃತಿಗಳು ಒಂದೇ ನೋಟಕ್ಕೆ ದಕ್ಕುತ್ತವೆ. ಸಂದರ್ಭ, ಸನ್ನಿವೇಶಕ್ಕೆ ಅನುಗುಣವಾಗಿ ಬೆಳಕಿಗೆ ಒಡ್ಡಿಕೊಂಡು, ಸಂಭಾಷಿಸುತ್ತವೆ. ಆ ಮೂಲಕ ಮನದಾಳಕ್ಕೆ ಇಳಿದು, ಬ್ರಿಟಿಷರ ಉದ್ಧಟತನ, ಅಹಂಗೆ, ಬ್ರಿಟಿಷ್ ಅರ
ಸೊತ್ತಿಗೆಗೆ ನಿದ್ದೆಗೆಡಿಸಿದ್ದ ಹೈದರ್, ಟಿಪ್ಪು ಅವರ ಸಾಹಸಕ್ಕೆ, ಪಿತೂರಿಗಾರರ ದ್ರೋಹಕ್ಕೆ ಆ ಕಾಲಘಟ್ಟದಲ್ಲಿ ಸಾಕ್ಷಿಯಾಗಿ ನಿಂತ ಐತಿಹಾಸಿಕ ಕೋಟೆ, ಈಗಲೂ ಮೂಕಸಾಕ್ಷಿಯಾಗಿ ಕಾಡುತ್ತದೆ.

ಯೋಜನೆಯ ರೂವಾರಿಗಳು: ರಂಗಭೂಮಿ ಹಿನ್ನೆಲೆಯ ಟಿ.ಎಸ್. ನಾಗಾಭರಣ, ರಂಗಕರ್ಮಿಗಳಾದ ಸಿದ್ದಗಂಗಯ್ಯ ಕಂಬಾಳು, ಶಶಿಧರ್ ಬಾರಿಘಾಟ್‌ ಮತ್ತು ವಿ.ಎಂ. ನಾಗೇಶ್, ಉರ್ದು ಲೇಖಕ ಎ.ಆರ್. ಪಾಷಾ ಮತ್ತಿತರ ಕ್ರಿಯಾಶೀಲ ತಜ್ಞರ ತಂಡ ಈ ‘ದೃಶ್ಯ ಕಾವ್ಯ’ದ ರೂಪಕವನ್ನು ಕಟ್ಟಿಕೊಡುವಲ್ಲಿ ಶ್ರಮಿಸಿದೆ. ಮೂಲದಲ್ಲಿ 23 ಕರಡು ಪ್ರತಿಗಳನ್ನು ತಯಾರಿಸಿಕೊಂಡು, ಈ ಕಥಾ ಹಂದರವನ್ನು ಸಮರ್ಥವಾಗಿ ಹೆಣೆಯಲಾಗಿದೆ. 

ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆ ಅನುಷ್ಠಾನಕ್ಕೆ ಪ್ರವಾಸೋದ್ಯಮ ಖಾತೆ ಸಚಿವ ಆರ್.ವಿ. ದೇಶಪಾಂಡೆ ಅವರು ವಿಶೇಷ ಆಸಕ್ತಿ ತೋರಿದ್ದರು. ಹಾಗಾಗಿ, ಯೋಜನಾ ಅನುಷ್ಠಾನ ತಂಡದ ನಾಗಾಭರಣ ಮತ್ತು ಅವರ ಬಳಗದ ಜತೆಗೆ ಹಲವು ಬಾರಿ  ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು. ಮೂರು ಬಾರಿ ಶ್ರೀರಂಗಪಟ್ಟಣಕ್ಕೆ ಖುದ್ದು ಭೇಟಿ ನೀಡಿ, ಯೋಜನೆಯ ಪ್ರಗತಿಯನ್ನು ವೀಕ್ಷಿಸಿದ್ದರು. ಈ ಯೋಜನೆಗೆ ೨೦೧೪ರ ನವೆಂಬರ್‌ 11ರಂದು ಜಿಲ್ಲಾ ಉಸ್ತುವಾರಿ ಸಚಿವ   ಅಂಬರೀಷ್ ಉದ್ಘಾಟಿಸಿದರು. ಇದೀಗ ಯೋಜನೆಯ ಪ್ರದರ್ಶನ ಮತ್ತು ನಿರ್ವಹಣೆಯ ಹೊಣೆಯನ್ನು ಶ್ರೀರಂಗಪಟ್ಟಣ ಪುರಸಭೆ ವಹಿಸಿಕೊಂಡಿದೆ.
*
ಸದ್ಯ ಕನ್ನಡ ಭಾಷೆಯಲ್ಲಿ ಮಾತ್ರ ನಿರೂಪಣಾ ಲಹರಿ ನಡೆಯುತ್ತಿದ್ದು, ಮುಂದೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಅಳವಡಿಸುವ ಇರಾದೆ ಇದೆ.
– ಕೃಷ್ಣಕುಮಾರ್,
ಯೋಜನಾ ನಿರ್ದೇಶಕ
*

ವಾರದ ಎಲ್ಲ ದಿನವೂ ಸಾರ್ವಜನಿಕರಿಗೆ ಈ ಪ್ರದರ್ಶನ ಲಭ್ಯವಿದೆ. ₹ 50 ಪ್ರವೇಶ ದರ ನಿಗದಿಪಡಿಸಲಾಗಿದೆ. ಹಗಲಲ್ಲಿ ₹ 5 ಪ್ರವೇಶಧನ ನಿಗದಿಪಡಿಸಲಾಗಿದೆ.
– ಎಂ. ರಾಜಣ್ಣ ,
ಮುಖ್ಯಾಧಿಕಾರಿ, ಶ್ರೀರಂಗಪಟ್ಟಣ ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT