ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯೂ ಇದೆ, ಸಾಧಿಸಬೇಕಾದದ್ದೂ ಇದೆ

ನಾಲ್ಕು ವರ್ಷದ ಸ್ಥಿರ ಆಡಳಿತ ಬಳಿಕವೂ ಕರ್ನಾಟಕ ಅಭಿವೃದ್ಧಿ ಮಾದರಿ ಯಾಕೆ ರೂಪುಗೊಂಡಿಲ್ಲ?
ಅಕ್ಷರ ಗಾತ್ರ

ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಪ್ರಮುಖ ಸೂಚಕಗಳಲ್ಲಿ ಕರ್ನಾಟಕ ಸದಾ ರಾಷ್ಟ್ರೀಯ ‘ಸರಾಸರಿಗಿಂತ ಮೇಲೆ’ಯೇ ಇದೆ. ತಲಾ ಆದಾಯದಲ್ಲಿ ಎಂಟು, ಮಾನವ ಅಭಿವೃದ್ಧಿಯಲ್ಲಿ ಎಂಟು, ನಗರೀಕರಣದಲ್ಲಿ ಏಳು... ಇವು ಕೆಲವು ಪ್ರಮುಖ ಸೂಚಕಗಳಲ್ಲಿ ರಾಜ್ಯದ ಸ್ಥಾನ. ಸರ್ಕಾರಗಳ ಕಾರ್ಯಕ್ಷಮತೆಯ ಮೌಲ್ಯಮಾಪನ ನಡೆಸುವಾಗ ನಾವು ಕೇಳಿಕೊಳ್ಳಬೇಕಿರುವ ಮೊದಲ ಪ್ರಶ್ನೆ ಏನೆಂದರೆ, ಈ ಮಹತ್ವದ ಸೂಚಕಗಳಲ್ಲಿ ಮೊದಲ ಸ್ಥಾನಕ್ಕೆ ಬರುವುದಕ್ಕೆ ಅಡ್ಡಿ ಆಗಿರುವ ಅಂಶಗಳು ಯಾವುವು? ಆಡಳಿತದ ಪ್ರಮುಖ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ತಂದು ನಿಲ್ಲಿಸಲು ನಾಲ್ಕು ವರ್ಷ ಪೂರ್ಣಗೊಳಿಸಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೈಗೊಂಡ ಕ್ರಮಗಳು ಏನು?

ಮೊದಲಿಗೆ ಕೆಲವು ಸಕಾರಾತ್ಮಕ ಅಂಶಗಳನ್ನು ಗಮನಿಸೋಣ. 2016ರಲ್ಲಿ ಹೂಡಿಕೆ ಪ್ರಸ್ತಾವಗಳಲ್ಲಿ ಗುಜರಾತನ್ನು ಹಿಂದಿಕ್ಕಿ ಕರ್ನಾಟಕವು ಮುನ್ನೆಲೆ ರಾಜ್ಯವಾಗಿ ಹೊರಹೊಮ್ಮಿದೆ. ಹಿಂದಿನ ಹೂಡಿಕೆಗಳಿಗೆ ಸಮರ್ಥನೆಯಾಗಿ ಸಾಫ್ಟ್‌ವೇರ್ ಮತ್ತು ಸೇವೆ ರಫ್ತಿನಲ್ಲಿ ರಾಜ್ಯ ಅಗ್ರಸ್ಥಾನ ಪಡೆದುಕೊಂಡಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಸುಧಾರಣೆಯಲ್ಲಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಹಿಂದಿನ ಬಿಜೆಪಿ ಸರ್ಕಾರ ನೇಮಿಸಿದ್ದ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಕೆಲವು ವಸ್ತುಗಳಿಗೆ ಏಕೀಕೃತ ಮಾರುಕಟ್ಟೆ ವ್ಯವಸ್ಥೆಯನ್ನು 2014ರಲ್ಲಿ ಜಾರಿಗೆ ತಂದಿತು. ಈ ಮೂಲಕ ರಾಜ್ಯದಲ್ಲಿ ಕೃಷಿ ಮಾರುಕಟ್ಟೆಗಳು ಎದುರಿಸುತ್ತಿದ್ದ ಕೆಲವು ಸಮಸ್ಯೆಗಳನ್ನು ಪರಿಹರಿಸುವುದು ಸಾಧ್ಯವಾಯಿತು. ಕಳೆದ ಮೂರು ಬಜೆಟ್‌ಗಳನ್ನು ವಿಶ್ಲೇಷಿಸಿದರೆ ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣ, ನೀರಾವರಿ ಮತ್ತು ಕೃಷಿಗೆ ಆದ್ಯತೆಯಲ್ಲಿ ಹಣ ವ್ಯಯ ಮಾಡಿರುವುದು ಕಂಡು ಬರುತ್ತದೆ.

ಸರ್ಕಾರ ಇನ್ನೂ ಉತ್ತಮವಾಗಿ ಎಲ್ಲಿ ಕೆಲಸ ಮಾಡಬೇಕಿತ್ತು? ಸರ್ಕಾರ ಮೆಚ್ಚುಗೆ ಗಳಿಸಲು ವಿಫಲವಾದ ನಾಲ್ಕು ಕ್ಷೇತ್ರಗಳಿವೆ ಎಂಬುದು ನನ್ನ ಅಭಿಪ್ರಾಯ.

ಒಂದು, ನಗರೀಕರಣದಲ್ಲಿ ರಾಜ್ಯದ ಸಾಧನೆ ಉತ್ತಮವಾಗಿಲ್ಲ. ಉತ್ಪಾದಕತೆ ಮತ್ತು ಪ್ರಗತಿಯು ನಗರೀಕರಣದ ಜತೆ ಬಲವಾದ ಸಂಬಂಧ ಹೊಂದಿದೆ ಎಂಬುದನ್ನು ಜಾಗತಿಕ ಮತ್ತು ಭಾರತದ ಅನುಭವಗಳು ಮತ್ತೆ ಮತ್ತೆ ತೋರಿಸಿಕೊಟ್ಟಿವೆ. ಆದರೆ ಕರ್ನಾಟಕದ ನಗರೀಕರಣ ಕಥನದಲ್ಲಿ ಬೆಂಗಳೂರು ಮಾತ್ರ ಹೀರೊ. ರಾಜ್ಯದ ನಗರಗಳಲ್ಲಿ ವಾಸಿಸುತ್ತಿರುವ ಜನರ ಪೈಕಿ ಶೇ 35ರಷ್ಟು ಭಾಗ ಇಲ್ಲಿಯೇ ಇದ್ದಾರೆ (2011ರ ಗಣತಿ). ಹುಬ್ಬಳ್ಳಿ-ಧಾರವಾಡ, ಮೈಸೂರು ಮತ್ತು ಬೆಳಗಾವಿ ರಾಜ್ಯದ ಇತರ ಮೂರು ಮುಖ್ಯ ನಗರ ವಲಯಗಳು. ಆದರೆ ಈ ಪ್ರತಿ ನಗರ ಬೆಂಗಳೂರಿನ ಹತ್ತನೇ ಒಂದು ಭಾಗದಷ್ಟು ಮಾತ್ರ ಇದೆ.   ನೆರೆಯ ತಮಿಳುನಾಡನ್ನು ಗಮನಿಸಿದರೆ ಪ್ರಗತಿ ಚೆನ್ನೈಯಿಂದ ಕೊಯಮತ್ತೂರು, ಸೇಲಂ, ಮದುರೆ, ತಿರುಚ್ಚಿ ಮತ್ತು ತಿರುಪ್ಪೂರುಗಳಿಗೆ ವರ್ಗವಾಗಿದೆ. ಕೈಗಾರಿಕಾ ಬೆಳವಣಿಗೆ ಈ ನಗರಗಳಿಗೆ ವ್ಯಾಪಿಸಿರುವುದರಿಂದ ಈ ಒಂದೊಂದು ನಗರದ ಜನಸಂಖ್ಯೆ ಹತ್ತು ಲಕ್ಷವನ್ನು ದಾಟಿದೆ. ತಮಿಳುನಾಡಿನ ಈ ನಗರೀಕರಣ ಮಾದರಿಯನ್ನು ಇಲ್ಲಿ ಅಳವಡಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂಬುದು  ಬೇಸರದ ಸಂಗತಿ. ಕೋಲಾರದಲ್ಲಿ ಹೊಸ ಯೋಜಿತ ನಗರ ಸ್ಥಾಪನೆ ಮಾಡಲಾಗುವುದು ಎಂದು ಈ ವರ್ಷದ ಆರಂಭದಲ್ಲಿ ಘೋಷಿಸಿರುವುದು ಮಾತ್ರ ಈ ನಿಟ್ಟಿನಲ್ಲಿ ಕೈಗೊಂಡಿರುವ ಒಂದೇ ಒಂದು ದಿಟ್ಟ ಕ್ರಮ.

ಎರಡು, ಪ್ರಗತಿಯ ಸಾಧ್ಯತೆಗಳಿಗೆ ಮೂಲಸೌಕರ್ಯಗಳ ಕೊರತೆ ತೊಡಕಾಗಿರುವುದು ಮುಂದುವರಿದಿದೆ. ರಾಜ್ಯದ ಬಹುಭಾಗಗಳಲ್ಲಿ ವಿದ್ಯುತ್ ಕೊರತೆ ಇದೆ. ಸಿದ್ದರಾಮಯ್ಯ ಅವರು 2016-17ನೇ ಸಾಲಿನ ಬಜೆಟ್ ಮಂಡಿಸುವಾಗ ವಿದ್ಯುತ್ ಕೈಕೊಟ್ಟು ಮೊಬೈಲ್ ಟಾರ್ಚ್‌ ಬೆಳಕಿನಲ್ಲಿ ಮಂಡನೆ ಮುಂದುವರಿಸಿದ್ದು ವಿದ್ಯುತ್ ಕ್ಷೇತ್ರದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಕರ್ನಾಟಕದ ರೈಲು ಜಾಲದ ಪ್ರಮಾಣ ದಕ್ಷಿಣದ ರಾಜ್ಯಗಳಲ್ಲಿಯೇ ಅತ್ಯಂತ ಕಡಿಮೆ. ಪಶ್ಚಿಮ ಘಟ್ಟಗಳ ಮೂಲಕ ರಸ್ತೆ ಸಂಪರ್ಕ ಕಳಪೆಯಾಗಿರುವುದು ಕರಾವಳಿ ಪ್ರದೇಶದ ಪ್ರಗತಿಗೆ ಹಿನ್ನಡೆ ಉಂಟು ಮಾಡಿದೆ. 2016-17ರ ಕರ್ನಾಟಕ ಆರ್ಥಿಕ ಸಮೀಕ್ಷೆಯ ಪ್ರಕಾರ,  ಬಂಡವಾಳ ವೆಚ್ಚವು ರಾಜ್ಯದ  ಒಟ್ಟು ಆಂತರಿಕ ಉತ್ಪನ್ನದ  (ಜಿಎಸ್‌ಡಿಪಿ) ಶೇಕಡ ಪ್ರಮಾಣ  2009-10ರಲ್ಲಿ  ಶೇ 4.15ರಷ್ಟಿತ್ತು. 2015-16ರ ಪರಿಷ್ಕೃತ ಅಂದಾಜಿನಲ್ಲಿ  ಇದು ಶೇ 2.87ಕ್ಕೆ ಇಳಿದಿದೆ. 2016-17ರ ಬಜೆಟ್‌ನಲ್ಲಿ ಈ ಪ್ರಮಾಣ ಶೇ2.12ಕ್ಕೆ ಕುಸಿದಿದೆ. ಇದು ಆತಂಕಕಾರಿ.

ಮೂರು, ವಿಕೇಂದ್ರೀಕರಣಕ್ಕೆ ಸಂಬಂಧಿಸಿ ಗಂಭೀರ ಪ್ರಯತ್ನ ನಡೆದೇ ಇಲ್ಲ. ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಎಷ್ಟು ಅಧಿಕಾರ ನೀಡಬಹುದು ಮತ್ತು ಯಾವೆಲ್ಲ ಹೊಣೆಗಳನ್ನು ವಹಿಸಬಹುದು ಎಂಬುದು ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಸಂವಿಧಾನ ಹೇಳುತ್ತದೆ.

ಕೇಂದ್ರ ಸರ್ಕಾರ ತಮಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಎಲ್ಲ ರಾಜ್ಯಗಳೂ ಪ್ರತಿಪಾದಿಸುತ್ತಿವೆ. ಆದರೆ ಇದೇ ಹೊತ್ತಿಗೆ, ನಗರ ಮತ್ತು ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹೆಚ್ಚಿನ ಹೊಣೆಗಾರಿಕೆ ಮತ್ತು ಆದಾಯ ಸೃಷ್ಟಿ ಮತ್ತು ಸಂಗ್ರಹ ಅಧಿಕಾರವನ್ನು ನೀಡಲು ಮನಸು ಮಾಡುತ್ತಿಲ್ಲ. ಕರ್ನಾಟಕವೂ ಹಾಗೆಯೇ. ಉದಾಹರಣೆಗೆ, ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಬಜೆಟ್ ಭಾಷಣದಲ್ಲಿ ಈ ವಿಚಾರಗಳ ಬಗ್ಗೆ ಮಾತನಾಡಿದ್ದರು: ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ, ಉಡುಪಿಯಲ್ಲಿ ಈಜುಕೊಳ, ಬಳ್ಳಾರಿಯಲ್ಲಿ ಸಿಂಥೆಟಿಕ್ ಫುಟ್‍ಬಾಲ್ ಮೈದಾನ ನಿರ್ಮಾಣ, ಛತ್ರಪತಿ ಶಿವಾಜಿಯ ತಂದೆಯ ಸಮಾಧಿ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿ ಅನುದಾನ ಮತ್ತು ಬೆಂಗಳೂರಿನಲ್ಲಿ ಮಕ್ಕಳಸ್ನೇಹಿ ವಿಶೇಷ ನ್ಯಾಯಾಲಯ ನಿರ್ಮಾಣಕ್ಕೆ ನಾಲ್ಕು ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಹೇಳಿದ್ದರು. ಆದರೆ, ಇಂತಹ ಸ್ಥಳೀಯ ವಿಚಾರಗಳನ್ನು ಅಲ್ಲಿನ ಮೇಯರ್‌ಗಳು, ಕಾರ್ಪೊರೇಟರ್‌ಗಳು, ಪಂಚಾಯಿತಿ ಮುಖ್ಯಸ್ಥರಿಗೆ ಬಿಟ್ಟುಕೊಟ್ಟು ಮಾಡಬೇಕಿರುವ ದೊಡ್ಡ ಕೆಲಸಗಳಿಗೆ ಗಮನ ಕೇಂದ್ರೀಕರಿಸಬಹುದಲ್ಲವೇ?

ಇನ್ನೊಂದು ಉದಾಹರಣೆ ನೋಡೋಣ: ಗ್ರಾಮೀಣ ಮತ್ತು ನಗರ ಸ್ಥಳೀಯ  ಆಡಳಿತ ಸಂಸ್ಥೆಗಳಿಗೆ ರಾಜ್ಯದ ಬೊಕ್ಕಸದಿಂದ ಅನುದಾನ ನೀಡಿಕೆಗೆ ಮಾದರಿಯೊಂದನ್ನು ಸಿದ್ಧಪಡಿಸಲು 2014ರಲ್ಲಿ ನಾಲ್ಕನೇ ರಾಜ್ಯ ಹಣಕಾಸು ಆಯೋಗವನ್ನು ರಚಿಸಲಾಯಿತು. ಇದು 2016ರ ಮಾರ್ಚ್‌ನಲ್ಲಿ ವರದಿ ಸಲ್ಲಿಸಬೇಕಿತ್ತು. ಗಡುವು ಕಳೆದು ಒಂದು ವರ್ಷದ ಮೇಲಾಯಿತು. ವರದಿ ಸಲ್ಲಿಕೆಯ ಲಕ್ಷಣಗಳೇ ಕಾಣಿಸುತ್ತಿಲ್ಲ.

ನಾಲ್ಕು, ದೀರ್ಘಾವಧಿ ಪ್ರಗತಿಗೆ ನಿರ್ಣಾಯಕವಾಗಿರುವ ಎರಡು ಮಹತ್ವದ ಅಂಶಗಳು ಈಗಲೂ ನಿರ್ಲಕ್ಷ್ಯಕ್ಕೆ ಒಳಗಾಗಿಯೇ ಇವೆ- ಅವುಗಳೆಂದರೆ, ಆರೋಗ್ಯ ಮತ್ತು ಶಿಕ್ಷಣ. ಯೋಜನೇತರ ವೆಚ್ಚದ ಪ್ರಮಾಣವನ್ನು ಹೆಚ್ಚಿಸಲು ಅನುಮತಿ ನೀಡುವ ಮೂಲಕ 14ನೇ ಹಣಕಾಸು ಆಯೋಗವು ಕರ್ನಾಟಕದಂತಹ ರಾಜ್ಯಗಳಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡಲು ಸುವರ್ಣ ಅವಕಾಶ ಒದಗಿಸಿತ್ತು. ದೆಹಲಿಯಲ್ಲಿ ಸಿದ್ಧವಾದ ಯೋಜನೆಗಳನ್ನು ಮೀರಿ ತಮ್ಮದೇ ಆದ್ಯತೆಗಳಿಗೆ ಅನುಗುಣವಾಗಿ ಯೋಜನೆ ರೂಪಿಸಲು ಇದು ರಾಜ್ಯಗಳಿಗೆ ಅವಕಾಶ ನೀಡಿತ್ತು. ಈ ಶಿಫಾರಸು ಜಾರಿಗೆ ಬಂದ ನಂತರ ಮೂರು ಬಜೆಟ್‌ಗಳು ಮಂಡನೆ ಆಗಿವೆ. ಆದರೆ ಈ ಹೆಚ್ಚುವರಿ ಹಣ ಬಳಕೆಯ ಸಾಧ್ಯತೆಯನ್ನು ಉಪಯೋಗಿಸಿಕೊಂಡು ಆರೋಗ್ಯ ಅಥವಾ ಶಿಕ್ಷಣ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ಮಾಡಬಲ್ಲ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.

ಕುಡಿತದ ಸಮಸ್ಯೆ ಪರಿಹಾರಕ್ಕೆ ಪಾನನಿಷೇಧದಂತಹ ಪ್ರತಿಗಾಮಿ ನೀತಿಗಳನ್ನು ಕೆಲವು ರಾಜ್ಯಗಳು ಜಾರಿಗೆ ತಂದಿವೆ. ದನದ ಮಾಂಸ ತಿನ್ನುತ್ತಾರೆ ಎಂಬ ಕಾರಣಕ್ಕೆ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ಸಹಿಸಿಕೊಂಡಿವೆ. ಈ ನಿಟ್ಟಿನಲ್ಲಿ ಕರ್ನಾಟಕದ ನೀತಿ ಉತ್ತಮವಾಗಿದ್ದು ಅಭಿನಂದನಾರ್ಹವಾಗಿದೆ. ಆದರೆ ಭಾರತದ ಅತ್ಯುತ್ತಮ ರಾಜ್ಯ ಎನಿಸಿಕೊಳ್ಳಲು ಮಾಡಬೇಕಿರುವುದು ಇನ್ನೂ ಬಹಳಷ್ಟಿದೆ. ಒಂದು ಪ್ರಶ್ನೆಯನ್ನು ನಾವು ಕೇಳಿಕೊಳ್ಳಲೇಬೇಕಿದೆ- ನಾಲ್ಕು ವರ್ಷದ ಸ್ಥಿರ ಸರ್ಕಾರದ ಬಳಿಕವೂ ಗುಜರಾತ್ ಅಥವಾ ಕೇರಳ ಅಭಿವೃದ್ಧಿ ಮಾದರಿಗೆ ಸವಾಲೊಡ್ಡುವ ರೀತಿಯ ಕರ್ನಾಟಕ ಆಡಳಿತ ಮಾದರಿಯೊಂದು ಯಾಕೆ ರೂಪುಗೊಂಡಿಲ್ಲ?

(ಲೇಖಕ ಸಾರ್ವಜನಿಕ ನೀತಿ ಸಂಶೋಧನೆ ಮತ್ತು ಶಿಕ್ಷಣದಲ್ಲಿ ಕೆಲಸ ಮಾಡುವ ಬೆಂಗಳೂರಿನ ತಕ್ಷಶಿಲಾ ಸಂಸ್ಥೆಯಲ್ಲಿ ಸಂಶೋಧಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT